YouVersion Logo
Search Icon

ಜೆಕರ್ಯ 11

11
ಬಲಿಷ್ಠರ ಪತನ
1ಲೆಬನೋನೇ, ನಿನ್ನ ಬಾಗಿಲುಗಳನ್ನು ತೆರೆ,
ಬೆಂಕಿಯು ನಿನ್ನ ದೇವದಾರುಗಳನ್ನು ನುಂಗಲಿ!
2ತುರಾಯಿ ಮರವೇ, ಗೋಳಾಡು!
ದೇವದಾರು ಬಿದ್ದಿದೆ, ಶ್ರೇಷ್ಠವೃಕ್ಷಗಳು#11.2 ಮೂಲ: ಶ್ರೇಷ್ಠವಾದವುಗಳು. ನಾಶವಾಗಿವೆ.
ಬಾಷಾನಿನ ಅಲ್ಲೋನ್ ಮರಗಳೇ, ಕಿರಚಿರಿ!
ನುಗ್ಗಲಾಗದ ವನವು ಉರುಳಿದೆ.
3ಆಹಾ, ಕುರುಬರು ಗೋಳಾಡುತ್ತಾರೆ!
ಅವರ ಅತಿಶಯದ#11.3 ಮೂಲ: ಅತಿಶಯವು. ಕಾವಲು ಹಾಳಾಗಿದೆ.
ಇಗೋ, ಪ್ರಾಯದ ಸಿಂಹಗಳು ಗರ್ಜಿಸುತ್ತವೆ!
ಯೊರ್ದನಿನ ದಟ್ಟಡವಿಯು ಪಾಳಾಗಿದೆ.
ಒಳ್ಳೆಯ ಕುರುಬನು, ಅವನಿಗಾಗುವ ತಿರಸ್ಕಾರ
4ನನ್ನ ದೇವರಾದ ಯೆಹೋವನು ಹೀಗೆ ಅಪ್ಪಣೆಕೊಟ್ಟನು - ಕೊಯ್ಗುರಿಗಳ ಮಂದೆಯನ್ನು ಕಾಯಿ; 5ಕೊಂಡುಕೊಳ್ಳುವವರು ಅವುಗಳನ್ನು ಕೊಯ್ದರೂ ನಿರ್ದೋಷಿಗಳೆನಿಸಿಕೊಳ್ಳುವರು; ಮಾರುವವರು - ಯೆಹೋವನಿಗೆ ಸ್ತೋತ್ರವಾಗಲಿ, ಧನವಂತರಾದೆವು ಅಂದುಕೊಳ್ಳುವರು; ಆ ಮಂದೆಯ ಕುರುಬರಾದರೂ ಅವುಗಳನ್ನು ಕರುಣಿಸರಲ್ಲಾ. 6(ಯೆಹೋವನು ಇಂತೆನ್ನುತ್ತಾನೆ - ನಾನು ಲೋಕನಿವಾಸಿಗಳನ್ನು ಇನ್ನು ಕರುಣಿಸೆನು; ಇಗೋ, ಪ್ರತಿಯೊಬ್ಬನನ್ನು ತನ್ನ ತನ್ನ ನೆರೆಯವನ ಕೈಗೂ ಅರಸನ ಕೈಗೂ ಒಪ್ಪಿಸುವೆನು; ಆ ಬಲಿಷ್ಠರು ಲೋಕವನ್ನು#11.6 ಅಥವಾ: ದೇಶನಿವಾಸಿಗಳನ್ನು…ದೇಶವನ್ನು. ಪುಡಿಪುಡಿಮಾಡುವರು; ಅವರ ಕೈಗೆ ಸಿಕ್ಕಿದವರನ್ನು ಉದ್ಧರಿಸೆನು). 7ಆಗ ನಾನು ದೀನಾವಸ್ಥೆಯಲ್ಲಿದ್ದ ಆ ಕೊಯ್ಗುರಿಗಳ ಮಂದೆಯನ್ನು ಮೇಯಿಸಿದೆನು. ಎರಡು ಕೋಲುಗಳನ್ನು ತೆಗೆದುಕೊಂಡು ಒಂದಕ್ಕೆ ಕನಿಕರವೆಂತಲೂ ಇನ್ನೊಂದಕ್ಕೆ ಒಗ್ಗಟ್ಟೆಂತಲೂ ಹೆಸರಿಟ್ಟು ಅವುಗಳಿಂದ ಮಂದೆಯನ್ನು ಮೇಯಿಸಿದೆನು. 8ಒಂದೇ ತಿಂಗಳೊಳಗೆ ಮೂವರು ಕುರುಬರನ್ನು ಅಡಗಿಸಿಬಿಟ್ಟೆನು; ಅನಂತರ ನನಗೆ ಕುರಿಗಳ ವಿಷಯವಾಗಿ ತಾಳ್ಮೆತಪ್ಪಿತು; ಅವೂ ನನಗೆ ಬೇಸರಗೊಂಡವು. 9ಆಗ ನಾನು - ನಿಮ್ಮನ್ನು ಮೇಯಿಸೆನು; ಸಾಯುವದು ಸಾಯಲಿ, ಹಾಳಾಗುವದು ಹಾಳಾಗಲಿ, ಉಳಿದವುಗಳು ಒಂದರ ಮಾಂಸವನ್ನೊಂದು ತಿನ್ನಲಿ ಅಂದುಕೊಂಡು 10ನಾನು ಎಲ್ಲಾ ಜನಾಂಗಗಳೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಭಂಗಪಡಿಸಬೇಕೆಂದು ಕನಿಕರವೆಂಬ ನನ್ನ ಕೋಲನ್ನು ತೆಗೆದು ಕತ್ತರಿಸಿಬಿಟ್ಟೆನು. 11ಆಗಲೇ ಮುರಿದುಹೋಯಿತು; ಇದರಿಂದ ಆ ದೀನವಾದ ಮಂದೆಯಲ್ಲಿ ನನ್ನನ್ನು ಲಕ್ಷಿಸುತ್ತಿದ್ದ ಕುರಿಗಳು ಇದು ಯೆಹೋವನ ನುಡಿ ಎಂದು ತಿಳುಕೊಂಡವು. 12ಅನಂತರ ನಾನು - ನಿಮಗೆ ಸರಿಯಾಗಿ ತೋರಿದರೆ ನನಗೆ ಸಂಬಳವನ್ನು ಕೊಡಿರಿ, ಇಲ್ಲವಾದರೆ ಬಿಡಿರಿ ಅನ್ನಲು ಅವರು ಮೂವತ್ತು ತೊಲ ಬೆಳ್ಳಿಯನ್ನು ತೂಗಿ ನನ್ನ ಸಂಬಳಕ್ಕಾಗಿ ಕೊಟ್ಟರು. 13ಅವರು ಇವನ ಯೋಗ್ಯತೆ ಇಷ್ಟೇ ಎಂದುಕೊಂಡು ನನಗೆ ಕೊಟ್ಟ ಆ ಭಾರೀ ಸಂಬಳವನ್ನು ಯೆಹೋವನು ನೋಡಿ ಅದನ್ನು ಡಬ್ಬಿಗೆ#11.13 ಪಾಠಾಂತರ: ಕುಂಬಾರನಿಗೆ ಎಸೆ…ಆಲಯದಲ್ಲಿ ಕುಂಬಾರನಿಗೆ ಎಸೆದೆನು. ಹಾಕು ಎಂದು ಅಪ್ಪಣೆಮಾಡಿದಾಗ ನಾನು ಆ ಮೂವತ್ತು ತೊಲ ಬೆಳ್ಳಿಯನ್ನು ತೆಗೆದು ಯೆಹೋವನ ಆಲಯದ ಡಬ್ಬಿಗೆ ಹಾಕಿದೆನು. 14ಕೂಡಲೆ ಯೆಹೂದಕ್ಕೂ ಇಸ್ರಾಯೇಲಿಗೂ ಇದ್ದ ಸಹೋದರಭಾವವನ್ನು ಭಂಗಪಡಿಸಬೇಕೆಂದು ಒಗ್ಗಟ್ಟೆಂಬ ನನ್ನ ಎರಡನೆಯ ಕೋಲನ್ನು ಕತ್ತರಿಸಿಬಿಟ್ಟೆನು.
ಮೂರ್ಖನಾದ ಕುರುಬನು
15ಆಮೇಲೆ ಯೆಹೋವನು ನನಗೆ ಹೀಗೆ ಅಪ್ಪಣೆಮಾಡಿದನು - ನೀನು ಮತ್ತೊಮ್ಮೆ ತಕ್ಕ ಸಲಕರಣೆಗಳನ್ನು ತೆಗೆದುಕೊಂಡು ಮುಕ್ಕಕುರುಬನಂತೆ ನಟಿಸು. 16ಇಗೋ, ದೇಶದಲ್ಲಿ ನಾನು ಒಬ್ಬ ಕುರುಬನನ್ನು ಏರ್ಪಡಿಸುವೆನು; ಅವನು ಹಾಳಾಗುತ್ತಿರುವ ಕುರಿಗಳನ್ನು ನೋಡಿಕೊಳ್ಳನು, ಚದರಿದವುಗಳನ್ನು ಹುಡುಕನು, ಊನವಾದವುಗಳನ್ನು ಗುಣಪಡಿಸನು, ನೆಟ್ಟಗಿರುವವುಗಳನ್ನು ಸಾಕನು; ಕೊಬ್ಬಿದವುಗಳ ಮಾಂಸವನ್ನು ತಿನ್ನುವನು, ಕುರಿಗಳ ಗೊರಸುಗಳನ್ನು ಚೂರುಚೂರುಮಾಡುವನು. 17ಮಂದೆಯನ್ನು ಕಾಯದೆ ಬಿಟ್ಟುಬಿಟ್ಟ ತರವಲ್ಲದ ಕುರುಬನ ಗತಿಯನ್ನು ಏನುಹೇಳಲಿ! ಖಡ್ಗವು ಅವನ ತೋಳಿಗೂ ಬಲಗಣ್ಣಿಗೂ ತಾಕುವದು; ಅವನ ತೋಳು ತೀರಾ ಒಣಗಿಹೋಗುವದು, ಅವನ ಬಲಗಣ್ಣು ಪೂರಾ ಮೊಬ್ಬಾಗುವದು.

Highlight

Share

Copy

None

Want to have your highlights saved across all your devices? Sign up or sign in

Video for ಜೆಕರ್ಯ 11