YouVersion Logo
Search Icon

ಕೀರ್ತನೆಗಳು 59

59
ಹಿಂಸೆಗೊಳಗಾದ ನಿರಪರಾಧಿಯ ಪ್ರಾರ್ಥನೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಅಲ್ತಷ್ಖೇತೆಂಬ ರಾಗ; ಸೌಲನು ಕಳುಹಿಸಿದವರು ದಾವೀದನ ಜೀವತೆಗೆಯಬೇಕೆಂದು ಅವನ ಮನೆಯ ಸುತ್ತಲೂ ಹೊಂಚುಹಾಕುತ್ತಿದ್ದಾಗ ಅವನು ರಚಿಸಿದ ಕಾವ್ಯ
(ಕೀರ್ತ. 57; 1 ಸಮು. 19.11)
1ನನ್ನ ದೇವರೇ, ಶತ್ರುಗಳ ಕೈಯಿಂದ ನನ್ನನ್ನು ಬಿಡಿಸು;
ನನಗೆ ವಿರೋಧವಾಗಿ ಎದ್ದಿರುವವರಿಗೆ ನನ್ನನ್ನು ತಪ್ಪಿಸಿ ಭದ್ರಸ್ಥಳದಲ್ಲಿರಿಸು.
2ಕೆಡುಕರಿಂದ ಬಿಡಿಸು;
ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
3ಇಗೋ, ನನ್ನ ಜೀವಕ್ಕೆ ಹೊಂಚುಹಾಕುತ್ತಾರೆ;
ಬಲಿಷ್ಠರು ನನಗೆ ವಿರೋಧವಾಗಿ ಗುಂಪು ಕೂಡಿದ್ದಾರೆ.
ಯೆಹೋವನೇ, ನಾನು ನಿರ್ದೋಷಿಯೂ ನಿರಪರಾಧಿಯೂ ಅಲ್ಲವೇ!
4ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಓಡಿಬಂದು ನಿಂತಿದ್ದಾರೆ;
ಎದ್ದು ಬಂದು ಪರಾಂಬರಿಸಿ ನನಗೆ ಸಹಾಯ ಮಾಡು.
5ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲ್ಯರ ದೇವರೇ,
ನೀನು ಎಚ್ಚರವಾಗಿ ಎಲ್ಲಾ ಅನ್ಯಜನಾಂಗಗಳನ್ನು ದಂಡಿಸು.
ದುಷ್ಟದ್ರೋಹಿಗಳಲ್ಲಿ ಒಬ್ಬನಿಗೂ ದಯೆತೋರಿಸಬೇಡ. ಸೆಲಾ.
6ಅವರು ಪ್ರತಿಸಾಯಂಕಾಲವೂ ಬಂದು ಬಂದು
ನಾಯಿಗಳಂತೆ ಗುರುಗುಟ್ಟುತ್ತಾ ಪಟ್ಟಣವನ್ನೆಲ್ಲಾ ಸುತ್ತುತ್ತಾರೆ.
7ಇಗೋ, ಅವರ ಬಾಯಿಗಳು ಎಷ್ಟೋ ಮಾತುಗಳನ್ನು ಕಕ್ಕುತ್ತವೆ; ಅವೆಲ್ಲಾ ಕತ್ತಿಗಳೇ.
ನಮ್ಮನ್ನು ಕೇಳುವವರು ಯಾರು ಅಂದುಕೊಳ್ಳುತ್ತಾರೆ.
8ಯೆಹೋವನೇ, ನೀನಾದರೋ ನೋಡಿ ನಗುವಿ;
ಎಲ್ಲಾ ಅನ್ಯಜನಾಂಗಗಳನ್ನು ಪರಿಹಾಸ್ಯಮಾಡುವಿ.
9ನನ್ನ ಬಲವೇ, ನಿನ್ನನ್ನು ನಿರೀಕ್ಷಿಸುತ್ತಿದ್ದೇನೆ.
ನನ್ನ ಆಶ್ರಯದುರ್ಗವು ದೇವರೇ.
10ನನ್ನ ದೇವರು ಪ್ರಸನ್ನನಾಗಿ ನನಗೆ ಸಹಾಯಮಾಡುವನು;
ನನ್ನ ವಿರೋಧಿಗಳಿಗುಂಟಾದ ಶಿಕ್ಷೆಯನ್ನು ನಾನು ನೋಡುವಂತೆ ಮಾಡುವನು.
11ಕರ್ತನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಸಂಹರಿಸಬೇಡ;
ನನ್ನ ಜನರು ಮರೆತುಬಿಡದ ಹಾಗೆ ಅವರು ಉಳಿಯಲಿ.
ನಿನ್ನ ಸೇನಾಬಲದಿಂದ ಚದರಿಸಿ ಭ್ರಾಂತಿಯಿಂದ ಅಲೆದಾಡಿಸಿ ಅವರನ್ನು ಕೆಡವಿಬಿಡು.
12ಅವರ ಬಾಯಿಂದ ಬರುವದೆಲ್ಲಾ ಪಾಪವೇ.
ಅವರ ಅಹಂಕಾರದಿಂದಲೇ ಅವರು ಸಿಕ್ಕಿ ಬೀಳಲಿ.
13ಅವರು ನುಡಿಯುವ ಶಾಪಕ್ಕಾಗಿಯೂ ಸುಳ್ಳಿಗಾಗಿಯೂ ಅವರನ್ನು ರೌದ್ರದಿಂದ ಸಂಹರಿಸಿ ನಿರ್ನಾಮಗೊಳಿಸು.
ಯಾಕೋಬನ ವಂಶದವರನ್ನು ಆಳುವವನು ದೇವರೇ ಎಂಬದು ಭೂಲೋಕದಲ್ಲೆಲ್ಲಾ ಗೊತ್ತಾಗಲಿ. ಸೆಲಾ.
14ಅವರು ಪ್ರತಿಸಾಯಂಕಾಲವೂ ಬಂದು ಬಂದು
ನಾಯಿಗಳಂತೆ ಗುರುಗುಟ್ಟುತ್ತಾ ಪಟ್ಟಣವನ್ನೆಲ್ಲಾ ಸುತ್ತುತ್ತಾರೆ.
15ಆಹಾರಕ್ಕಾಗಿ ಅತ್ತಿತ್ತ ತಿರುಗುತ್ತಾರೆ;
ಹೊಟ್ಟೆಗಿಲ್ಲದಿದ್ದರೆ ಬೊಗಳುತ್ತಾರೆ.
16ನಾನಾದರೋ, ಇಕ್ಕಟ್ಟಿನ ಕಾಲದಲ್ಲಿ ಆಶ್ರಯವೂ ದುರ್ಗವೂ ಆಗಿರುವ ನಿನ್ನ ಬಲವನ್ನು ಹಾಡಿ ಹೊಗಳುವೆನು;
ಪ್ರಾತಃಕಾಲದಲ್ಲಿ ನಿನ್ನ ಪ್ರೇಮವನ್ನು ಉಲ್ಲಾಸದಿಂದ ಕೊಂಡಾಡುವೆನು.
17ನನ್ನ ಬಲವೇ, ನಿನ್ನನ್ನು ಹಾಡಿಹರಸುವೆನು.
ನನ್ನ ಆಶ್ರಯದುರ್ಗವೂ ಕೃಪಾನಿಧಿಯೂ ದೇವರೇ.

Highlight

Share

Copy

None

Want to have your highlights saved across all your devices? Sign up or sign in

Videos for ಕೀರ್ತನೆಗಳು 59