YouVersion Logo
Search Icon

ಕೀರ್ತನೆಗಳು 41

41
ಶತ್ರುಬಾಧಿತನ ಮೊರೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ
1ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು;
ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
2ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು;
ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು;
ಯೆಹೋವನೇ, ಅವನನ್ನು ಶತ್ರುಗಳ ಅಧೀನಕ್ಕೆ ಕೊಡಬೇಡ!
3ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು;
ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದಿಯಲ್ಲಾ, ಸ್ವಾಮೀ.
4ನಾನಂತೂ - ಯೆಹೋವನೇ, ನಿನ್ನ ಆಜ್ಞೆಯನ್ನು ಮೀರಿ ಪಾಪಮಾಡಿದ್ದೇನೆ;
ನನ್ನನ್ನು ಕರುಣಿಸಿ ಸ್ವಸ್ಥಮಾಡು ಅಂದೆನು.
5ನನ್ನ ಹಾನಿಯನ್ನು ಅಪೇಕ್ಷಿಸುವ ಶತ್ರುಗಳು - ಅವನು ಯಾವಾಗ ಸತ್ತಾನು?
ಅವನ ಹೆಸರು ಯಾವಾಗ ಇಲ್ಲದೆಹೋದೀತು ಎಂದು ಹೇಳಿಕೊಳ್ಳುತ್ತಾರೆ.
6ಅವರಲ್ಲೊಬ್ಬನು ನನ್ನನ್ನು ನೋಡುವದಕ್ಕೆ ಬಂದರೆ ಕಪಟದ ಮಾತನ್ನಾಡುವನು;
ಮನಸ್ಸಿನಲ್ಲಿ ಅಶುಭಗಳನ್ನು ಸಂಗ್ರಹಿಸಿಕೊಂಡು ಹೋಗಿ ಹೊರಗೆ ಪ್ರಕಟಿಸುತ್ತಾನೆ.
7ನನ್ನ ಹಗೆಯವರೆಲ್ಲರು ನನಗೆ ವಿರೋಧವಾಗಿ ಕಿವಿಗಳಲ್ಲಿ ಗುಜುಗುಜು ಮಾತಾಡಿಕೊಳ್ಳುತ್ತಾರೆ;
ನನಗೆ ಕೇಡನ್ನು ಕಲ್ಪಿಸುತ್ತಾರೆ.
8ಅವನನ್ನು ಅಸಾಧ್ಯರೋಗ ಹಿಡಿದದೆ;
ಅವನು ಹಾಸಿಗೆಯನ್ನು ಬಿಟ್ಟು ತಿರಿಗಿ ಏಳುವದೇ ಇಲ್ಲವೆಂದು ಹೇಳಿಕೊಳ್ಳುತ್ತಾರೆ.
9ನಾನು ಯಾವನನ್ನು ನಂಬಿದ್ದೆನೋ ಯಾವನು ನನ್ನ ಮನೆಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡನೋ
ಅಂಥ ಆಪ್ತಸ್ನೇಹಿತನು ನನಗೆ ಕಾಲನ್ನು ಅಡ್ಡಗೊಟ್ಟಿದ್ದಾನೆ.
10ಯೆಹೋವನೇ, ನೀನಾದರೋ ಕರುಣಿಸಿ ನನ್ನನ್ನು ಏಳಮಾಡು;
ಆಗ ನಾನು ಅವರಿಗೆ ಮುಯ್ಯಿತೀರಿಸುವೆನು.
11ಶತ್ರುಗಳ ಜಯಧ್ವನಿ ಇಲ್ಲದ್ದರಿಂದಲೇ ನಿನ್ನ ಒಲುಮೆ ನನಗುಂಟೆಂದು ತಿಳಿದುಕೊಳ್ಳುವೆನು.
12ನಿರ್ದೋಷಿಯಾದ ನನ್ನನ್ನಾದರೋ ನೀನು ಉದ್ಧಾರಮಾಡಿ
ನಿನ್ನ ಸನ್ನಿಧಿಯಲ್ಲಿ ಶಾಶ್ವತವಾಗಿ ನಿಲ್ಲಿಸುವಿ.
13ಇಸ್ರಾಯೇಲ್ಯರ ದೇವರಾದ ಯೆಹೋವನಿಗೆ
ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ.
ಆಮೆನ್. ಆಮೆನ್.

Highlight

Share

Copy

None

Want to have your highlights saved across all your devices? Sign up or sign in

Videos for ಕೀರ್ತನೆಗಳು 41