YouVersion Logo
Search Icon

ಕೀರ್ತನೆಗಳು 40

40
ವಿಶೇಷರಕ್ಷಣೆಗಾಗಿ ಯೆಹೋವನನ್ನು ಸ್ತುತಿಸುವದೂ ಶತ್ರುಗಳಿಂದ ರಕ್ಷಿಸಬೇಕೆಂದು ಪ್ರಾರ್ಥಿಸುವದೂ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನ ಕೀರ್ತನೆ
1ನಾನು ಯೆಹೋವನಿಗೋಸ್ಕರ ನಿರೀಕ್ಷಿಸಿಯೇ ನಿರೀಕ್ಷಿಸಿದೆನು;
ಆತನು ನನ್ನ ಮೊರೆಗೆ ಕಿವಿಗೊಟ್ಟು ಲಕ್ಷಿಸಿದನು.
2ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು;
ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ
ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.
3ಆತನು ನನ್ನ ಬಾಯಲ್ಲಿ ನೂತನಕೀರ್ತನೆಯನ್ನು ಹುಟ್ಟಿಸಿದ್ದಾನೆ;
ಅದು ನಮ್ಮ ದೇವರ ಸ್ತೋತ್ರವೇ.
ಆತನ ಮಹತ್ಕಾರ್ಯಗಳನ್ನು ನೋಡಿದ ಅನೇಕರು
ಭಯಭಕ್ತಿಯುಳ್ಳವರಾಗಿ ಯೆಹೋವನಲ್ಲಿ ನಂಬಿಕೆಯಿಡುವರು.
4ಯಾವನು ಅಹಂಕಾರಿಗಳಲ್ಲಿಯೂ ಸುಳ್ಳನ್ನು ಹಿಂಬಾಲಿಸುವವರಲ್ಲಿಯೂ ಸೇರದೆ
ಯೆಹೋವನನ್ನೇ ನಂಬುತ್ತಾನೋ ಅವನೇ ಧನ್ಯನು.
5ಯೆಹೋವನೇ, ನನ್ನ ದೇವರೇ, ನಿನಗೆ ಸಮಾನನಾದ ದೇವರು ಯಾರು?
ನಮ್ಮ ಹಿತಕ್ಕಾಗಿ ನೀನು ಮಾಡಿದ ಆಲೋಚನೆಗಳೂ ಅದ್ಭುತಕಾರ್ಯಗಳೂ ಎಷ್ಟೋ ವಿಶೇಷವಾಗಿವೆ;
ಅವುಗಳನ್ನು ವಿವರಿಸಿ ಹೇಳೋಣವೆಂದರೆ ಅಸಾಧ್ಯವು; ಅವು ಅಸಂಖ್ಯಾತವಾಗಿವೆ.
6ಯಜ್ಞನೈವೇದ್ಯಗಳು ನಿನಗೆ ಇಷ್ಟವಲ್ಲ;
ಸರ್ವಾಂಗಹೋಮಗಳನ್ನಾಗಲಿ ದೋಷಪರಿಹಾರಕ ಯಜ್ಞಗಳನ್ನಾಗಲಿ ನೀನು ಅಪೇಕ್ಷಿಸಲಿಲ್ಲ.
ಆದರೆ ಶ್ರವಣಶಕ್ತಿಯನ್ನು ನನಗೆ ಅನುಗ್ರಹಿಸಿದಿ.
7ಆಗ ನಾನು - ಇಗೋ ಇದ್ದೇನೆ; ನನ್ನ ಕರ್ತವ್ಯವು ಗ್ರಂಥದ ಸುರಳಿಯಲ್ಲಿ ಬರೆದದೆ.
8ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವದೇ ನನ್ನ ಸಂತೋಷವು;
ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ ಅಂದೆನು.
9ನೀನು ನೀತಿಯನ್ನು ಸಾಧಿಸಿದ ಶುಭಸಮಾಚಾರವನ್ನು ಧಾರಾಳವಾಗಿ ಮಹಾಸಭೆಯಲ್ಲಿ ಪ್ರಕಟಿಸಿದೆನು;
ಯೆಹೋವನೇ, ನೀನೇ ಬಲ್ಲೆ.
10ನಿನ್ನ ನೀತಿಸಾಧನೆಯನ್ನು ಮರೆಮಾಜಲಿಲ್ಲ;
ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ಪ್ರಸಿದ್ಧಪಡಿಸಿದೆನು;
ನಿನ್ನ ಕೃಪಾಸತ್ಯತೆಗಳನ್ನು ಮಹಾಸಮುದಾಯದಲ್ಲಿ ತಿಳಿಸದೆ ಇರಲಿಲ್ಲ.
11ಯೆಹೋವನೇ, ನೀನಂತೂ ನಿನ್ನ ಕರುಣೆಯನ್ನು ನನ್ನಿಂದ ಅಗಲಿಸಬೇಡ;
ನಿನ್ನ ಕೃಪಾಸತ್ಯತೆಗಳು ನನ್ನನ್ನು ಯಾವಾಗಲೂ ಕಾಪಾಡಲಿ.
12ಯಾಕಂದರೆ ಲೆಕ್ಕವಿಲ್ಲದ ಆಪತ್ತುಗಳು ನನ್ನನ್ನು ಸುತ್ತಿಕೊಂಡಿವೆ;
ನನ್ನ ಪಾಪಗಳು ನನ್ನನ್ನು ಹಿಂದಟ್ಟಿ ಹಿಡಿದಿರುತ್ತವೆ, ನನಗೆ ದಿಕ್ಕೇ ತೋರುವದಿಲ್ಲ.
ಅವು ನನ್ನ ತಲೇ ಕೂದಲುಗಳಿಗಿಂತಲೂ ಹೆಚ್ಚಾಗಿವೆ, ನಾನು ಎದೆಗುಂದಿ ಹೋದೆನು.
13ಯೆಹೋವನೇ, ದಯವಿಟ್ಟು ನನ್ನನ್ನು ರಕ್ಷಿಸು;
ಯೆಹೋವನೇ, ಬೇಗ ಬಂದು ಸಹಾಯಮಾಡು.
14ನನ್ನ ಪ್ರಾಣವನ್ನು ತೆಗೆಯುವದಕ್ಕೆ ಸಮಯ ನೋಡುವವರು
ಆಶಾಭಂಗಪಟ್ಟು ಅವಮಾನಹೊಂದಲಿ;
ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಮಾನಭಂಗದಿಂದ ಹಿಂದಿರುಗಿ ಓಡಲಿ.
15ಆಹಾ, ಆಹಾ ಎಂದು ನನ್ನನ್ನು ಪರಿಹಾಸ್ಯ ಮಾಡುವವರು
ತಮಗೆ ಆಗುವ ಅವಮಾನದಿಂದ ವಿಸ್ಮಯಗೊಳ್ಳಲಿ.
16ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ;
ನಿನ್ನ ಜಯದಲ್ಲಿ ಆನಂದಿಸುವವರು
ಯೆಹೋವನಿಗೆ ಸ್ತೋತ್ರವೆಂದು ಯಾವಾಗಲೂ ಹೇಳುವವರಾಗಲಿ.
17ನಾನಾದರೋ ಕುಗ್ಗಿದವನೂ ದಿಕ್ಕಿಲ್ಲದವನೂ ಆಗಿದ್ದೇನೆ;
ಕರ್ತನೇ ನನ್ನ ಹಿತಚಿಂತಕನು.
ನನ್ನ ದೇವರೇ, ನೀನೇ ನನಗೆ ಸಹಾಯಕನೂ ರಕ್ಷಕನೂ ಆಗಿದ್ದೀ;
ತಡಮಾಡಬೇಡ.

Highlight

Share

Copy

None

Want to have your highlights saved across all your devices? Sign up or sign in

Videos for ಕೀರ್ತನೆಗಳು 40