YouVersion Logo
Search Icon

ಕೀರ್ತನೆಗಳು 36

36
ದುಷ್ಟರ ದುರ್ಲಕ್ಷಣ, ದೇವರ ಮಹಾಪ್ರೀತಿ ಇವುಗಳನ್ನು ವಿವರಿಸುವ ಕೀರ್ತನೆ ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಯೆಹೋವನ ಸೇವಕನಾದ ದಾವೀದನ ಕೀರ್ತನೆ
1ಪಾಪವು ದುಷ್ಟನ ಮನಸ್ಸಿನೊಳಗೆ ನುಡಿಯುತ್ತಿರುವದರಿಂದ
ಅವನ ಕಣ್ಣೆದುರಿಗೆ ದೇವರ ಭಯವೇ ಇಲ್ಲ.
2ಅದು ಅವನನ್ನು ವಂಚಿಸಿ - ನಿನ್ನ ತಪ್ಪು ಬೈಲಿಗೆ ಬರುವದಿಲ್ಲ.
ಹೇಯವಾಗುವದಿಲ್ಲ ಎಂದು ಊದಿಬಿಡುತ್ತದೆ.
3ಅವನ ಬಾಯಿಂದ ಕೆಡುಕೂ ವಂಚನೆಯೂ ಬರುತ್ತವೆ;
ವಿವೇಕಮಾರ್ಗವನ್ನೂ ಪರಹಿತವನ್ನೂ ಬಿಟ್ಟೇ ಬಿಟ್ಟಿದ್ದಾನೆ.
4ಹಾಸಿಗೆಯ ಮೇಲೆ ಇರುವಾಗಲೂ ಕೆಡುಕನ್ನೇ ಯೋಚಿಸುತ್ತಿರುವನು;
ಅಲ್ಲದ ದಾರಿಯಲ್ಲಿ ನಿಂತುಕೊಂಡಿದ್ದಾನೆ; ಎಂಥ ದುಷ್ಕೃತ್ಯಕ್ಕೂ ಹೇಸುವದಿಲ್ಲ.
5ಯೆಹೋವನೇ, ನಿನ್ನ ಪ್ರೀತಿಯು ಆಕಾಶದಷ್ಟು ಉನ್ನತವಾಗಿದೆ;
ನಿನ್ನ ನಂಬಿಗಸ್ತಿಕೆಯು ಮೇಘಮಾರ್ಗವನ್ನು ಮುಟ್ಟುತ್ತದೆ.
6ನಿನ್ನ ನೀತಿಯು ದಿವ್ಯಪರ್ವತಗಳಂತೆಯೂ
ನಿನ್ನ ನ್ಯಾಯವು ಮಹಾಸಾಗರದಂತೆಯೂ ಇವೆ;
ಯೆಹೋವನೇ, ನೀನು ಮನುಷ್ಯರನ್ನೂ ಮೃಗಗಳನ್ನೂ ಸಂರಕ್ಷಿಸುತ್ತೀ.
7ದೇವರೇ, ನಿನ್ನ ಪ್ರೀತಿ ಎಷ್ಟೋ ಅಮೂಲ್ಯವಾದದ್ದು;
ಮಾನವರು ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುತ್ತಾರೆ.
8ನಿನ್ನ ಮಂದಿರದ ಸಮೃದ್ಧಿಯಿಂದ ಅವರನ್ನು ಸಂತೃಪ್ತಿಪಡಿಸುತ್ತೀ;
ನಿನ್ನ ಸಂಭ್ರಮಪ್ರವಾಹದಲ್ಲಿ ಅವರಿಗೆ ಪಾನಮಾಡಿಸುತ್ತೀ.
9ನಿನ್ನ ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ;
ನಿನ್ನ ತೇಜಸ್ಸು ನಮಗೆ ಬೆಳಕು ಕೊಡುತ್ತದೆ.
10ನಿನ್ನನ್ನು ಅರಿತವರಿಗೆ ನಿನ್ನ ಪ್ರೀತಿಯನ್ನು ಯಾವಾಗಲೂ ದಯಪಾಲಿಸು;
ಯಥಾರ್ಥಚಿತ್ತರಿಗೆ ನಿನ್ನ ನ್ಯಾಯವನ್ನು ನಿರಂತರವೂ ಅನುಗ್ರಹಿಸು.
11ಗರ್ವಿಷ್ಠರ ಕಾಲಕೆಳಗೆ ನಮ್ಮನ್ನು ಬೀಳಲೀಸಬೇಡ;
ದುರ್ಜನರಿಂದ ನಾವು ಭ್ರಷ್ಟರಾಗದಂತೆ ಮಾಡು.
12ಇಗೋ, ಕೆಡುಕರು ಕೆಡವಲ್ಪಟ್ಟು ಏಳಲಾರದೆ ಬಿದ್ದಿದ್ದಾರೆ.

Highlight

Share

Copy

None

Want to have your highlights saved across all your devices? Sign up or sign in

Videos for ಕೀರ್ತನೆಗಳು 36