YouVersion Logo
Search Icon

ಕೀರ್ತನೆಗಳು 35

35
ಅಕಾರಣ ವೈರಿಗಳಿಂದ ಬಿಡಿಸಬೇಕೆಂಬದು
(ಕೀರ್ತ. 7)
ದಾವೀದನ ಕೀರ್ತನೆ
1ಯೆಹೋವನೇ, ನನ್ನ ಸಂಗಡ ವ್ಯಾಜ್ಯವಾಡುವವರೊಡನೆ ವ್ಯಾಜ್ಯವಾಡು;
ನನ್ನ ಮೇಲೆ ಯುದ್ಧಮಾಡುವವರ ಸಂಗಡ ಯುದ್ಧಮಾಡು.
2ಖೇಡ್ಯಗುರಾಣಿಗಳನ್ನು ಹಿಡಿದುಕೊಂಡು ನನಗೆ ಸಹಾಯಕನಾಗಿ ನಿಲ್ಲು.
3ನೀನು ಭಲ್ಲೆಯನ್ನೂ ಯುದ್ಧದ ಕೊಡಲಿಯನ್ನೂ ಹಿಡಿದು ನನ್ನನ್ನು ಹಿಂದಟ್ಟುವ ವೈರಿಗಳನ್ನು ಪ್ರತಿಭಟಿಸು;
ನಾನೇ ನಿನ್ನನ್ನು ರಕ್ಷಿಸುವೆನೆಂದು ಅಭಯಕೊಡು.
4ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವವರು ಆಶಾಭಂಗಪಟ್ಟು ಅವಮಾನಹೊಂದಲಿ;
ನನಗೆ ಕೇಡನ್ನು ಯೋಚಿಸುವವರು ಮಾನಭಂಗದಿಂದ ಹಿಂದಿರುಗಿ ಓಡಲಿ.
5ಅವರು ಗಾಳಿ ಹಾರಿಸುವ ಹೊಟ್ಟಿನಂತಾಗಲಿ;
ಯೆಹೋವನ ದೂತನು ಅವರನ್ನು ನೂಕಿಬಿಡಲಿ.
6ಕತ್ತಲೆಯೂ ಜಾರಿಕೆಯೂ ಇರುವ ದಾರಿಯಲ್ಲಿ
ಯೆಹೋವನ ದೂತನು ಅವರನ್ನು ಹಿಂದಟ್ಟಲಿ.
7ಅವರು ನಿಷ್ಕಾರಣವಾಗಿ ನನಗೆ ಬಲೆಯೊಡ್ಡಿದ್ದಾರೆ;
ಅಕಾರಣವಾಗಿ ನನ್ನ ಪ್ರಾಣವನ್ನು ತೆಗೆಯಬೇಕೆಂದು ಗುಂಡಿಯನ್ನು ತೋಡಿದ್ದಾರೆ.
8ಅವನಿಗೆ ನಾಶನವು ಅಕಸ್ಮಾತ್ತಾಗಿ ಬರಲಿ;
ತಾನು ಒಡ್ಡಿದ ಬಲೆಯಲ್ಲಿ ತಾನೇ ಸಿಕ್ಕಿಬೀಳಲಿ.
ತಾನೇ ತೋಡಿದ ಕುಣಿಯಲ್ಲಿ ತಾನೇ ಬಿದ್ದುಹೋಗಲಿ.
9ಆಗ ನನ್ನ ಮನಸ್ಸಿಗೆ ಯೆಹೋವನ ದೆಸೆಯಿಂದ ಹರ್ಷವುಂಟಾಗುವದು;
ಆತನಿಂದಾದ ರಕ್ಷಣೆಯ ನಿವಿುತ್ತ ಆನಂದಪಡುವೆನು.
10ಯೆಹೋವನೇ, ಕುಗ್ಗಿದವನನ್ನು ಬಲಾತ್ಕಾರಿಯಿಂದಲೂ
ದಿಕ್ಕಿಲ್ಲದ ಬಡವನನ್ನು ಸೂರೆಮಾಡುವವನಿಂದಲೂ ತಪ್ಪಿಸಿ ರಕ್ಷಿಸುವಾತನೇ,
ನಿನಗೆ ಸಮಾನರು ಯಾರಿದ್ದಾರೆಂದು ನನ್ನ ಎಲುಬುಗಳೆಲ್ಲಾ ಹೇಳುವವು.
11ನ್ಯಾಯವಿರುದ್ಧಸಾಕ್ಷಿಗಳು ನನಗೆ ವಿರೋಧವಾಗಿ ಎದ್ದಿದ್ದಾರೆ;
ನಾನರಿಯದ ಸಂಗತಿಗಳ ವಿಷಯದಲ್ಲಿ ನನ್ನನ್ನು ವಿಚಾರಿಸುತ್ತಾರೆ.
12ಅವರು ಉಪಕಾರಕ್ಕೆ ಅಪಕಾರವನ್ನೇ ಮಾಡುತ್ತಾರೆ;
ನಾನು ದಿಕ್ಕಿಲ್ಲದವನಾದೆನು.
13ನಾನಾದರೋ ಅವರ ಅಸ್ವಸ್ಥಕಾಲದಲ್ಲಿ ಗೋಣಿತಟ್ಟನ್ನೇ ಕಟ್ಟಿಕೊಂಡಿದ್ದೆನು;
ಉಪವಾಸದಿಂದ ನನ್ನ ಆತ್ಮವನ್ನು ನೋಯಿಸಿದೆನು.
ನನ್ನ ಪ್ರಾರ್ಥನೆಯು ನನ್ನ ಎದೆಗೆ ತಿರುಗಿತು.
14ಅಸ್ವಸ್ಥನಾದವನನ್ನು ಸ್ನೇಹಿತನೂ ಅಣ್ಣನೂ ಎಂದು ಭಾವಿಸಿ ನಡೆದುಕೊಂಡೆನು;
ತಾಯಿ ಸತ್ತದ್ದಕ್ಕಾಗಿ ದುಃಖಿಸುವವನಂತೆ ನಾನು ತಲೆಬಾಗಿ ಅಳುತ್ತಿದ್ದೆನು.
15ಆದರೂ ನನಗೆ ಆಪತ್ತು ಬಂದಾಗ ಅವರು ಸಂತೋಷಿಸುತ್ತಾ ಕೂಡಿಕೊಂಡರು;
ಅಕಾರಣವಾಗಿ ಈ ಭ್ರಷ್ಟರು ನನಗೆ ವಿರೋಧವಾಗಿ ಕೂಡಿಕೊಂಡು ಸೂರೆಮಾಡುವದನ್ನು ಬಿಡಲೇ ಇಲ್ಲ.
16ದೋಸೆಗೋಸ್ಕರ ಗೇಲಿಮಾಡುವ ಮೂರ್ಖರ ಸಂಗಡ ನನ್ನ ಮೇಲೆ ಹಲ್ಲುಕಡಿಯುತ್ತಾರೆ.
17ಕರ್ತನೇ, ಇನ್ನೆಷ್ಟರವರೆಗೆ ಸುಮ್ಮನೆ ನೋಡುತ್ತಾ ಇರುವಿ? ಅವರ ಅಪಾಯದಿಂದ ನನ್ನ ಪ್ರಾಣವನ್ನು ಬಿಡಿಸು;
ನನ್ನ ಪರಮಪ್ರಿಯಪ್ರಾಣವನ್ನು ಆ ಸಿಂಹಗಳ ಬಾಯಿಗೆ ಸಿಕ್ಕದಂತೆ ತಪ್ಪಿಸು.
18ಆಗ ನಾನು ಮಹಾಸಭೆಯಲ್ಲಿ ನಿನ್ನನ್ನು ಕೊಂಡಾಡುವೆನು;
ಬಹುಜನರ ಮುಂದೆ ಸ್ತುತಿಸುವೆನು.
19ನಿರ್ನಿವಿುತ್ತ ವಿರೋಧಿಗಳು ನನ್ನ ವಿಷಯದಲ್ಲಿ ಹಿಗ್ಗುವದಕ್ಕೆ ಅವಕಾಶಕೊಡಬೇಡ;
ನಿಷ್ಕಾರಣವೈರಿಗಳ ಕಣ್ಣುಸನ್ನೆಗೆ ಆಸ್ಪದ ಕೊಡಬೇಡ.
20ಅವರ ಮಾತುಗಳು ಸಮಾಧಾನಕರವಾದವುಗಳಲ್ಲ;
ದೇಶದ ಸಾಧುಜನರನ್ನು ಕೆಡಿಸುವದಕ್ಕೆ ಮೋಸವನ್ನು ಕಲ್ಪಿಸುತ್ತಾರೆ.
21ಅವರು ನನ್ನನ್ನು ನೋಡಿ ಬಾಯಿಕಿಸಿದು -
ಆಹಾ, ಆಹಾ, ನಮ್ಮ ಕಣ್ಣು ಕಂಡಿತಲ್ಲಾ ಅನ್ನುತ್ತಾರೆ.
22ಯೆಹೋವನೇ, ನೀನೇ ನೋಡಿದಿಯಲ್ಲವೇ? ಸುಮ್ಮನಿರಬೇಡ;
ನನ್ನ ಒಡೆಯನೇ, ನನಗೆ ದೂರವಾಗಿರುವದೇಕೆ?
23ನನ್ನ ದೇವರೇ, ಎದ್ದು ನನಗಾಗಿ ನ್ಯಾಯವನ್ನು ನಿರ್ಣಯಿಸು;
ನನ್ನ ಕರ್ತನೇ, ಎಚ್ಚತ್ತು ನನ್ನ ವಿವಾದವನ್ನು ವಿಚಾರಿಸು.
24ಯೆಹೋವನೇ, ನನ್ನ ದೇವರೇ, ನಿನ್ನ ನೀತಿಗನುಸಾರವಾಗಿ ನನಗೆ ತೀರ್ಪುಕೊಡು;
ನನ್ನ ವಿಷಯದಲ್ಲಿ ಹಿಗ್ಗುವದಕ್ಕೆ ಶತ್ರುಗಳಿಗೆ ಆಸ್ಪದವಿರಬಾರದು.
25ಆಹಾ, ನಮ್ಮ ಆಶೆ ನೆರವೇರಿತು ಅಂದುಕೊಳ್ಳುವದಕ್ಕೆ ಅವರಿಗೆ ಅವಕಾಶವಿರಬಾರದು;
ಅವನನ್ನು ನುಂಗಿಬಿಟ್ಟಿದ್ದೇವೆಂದು ಅವರು ಕೊಚ್ಚಿಕೊಳ್ಳಬಾರದು.
26ನನ್ನ ಕೇಡಿನಲ್ಲಿ ಹಿಗ್ಗುವವರೆಲ್ಲರು ಆಶಾಭಂಗಪಟ್ಟು ಅವಮಾನಹೊಂದಲಿ;
ನನ್ನನ್ನು ಹೀಯಾಳಿಸಿ ಆತ್ಮಸ್ತುತಿಮಾಡಿಕೊಳ್ಳುವವರು ಮಾನಭಂಗವನ್ನೂ ದುಷ್ಕೀರ್ತಿಯನ್ನೂ ಹೊದ್ದುಕೊಳ್ಳಲಿ.
27ನನ್ನ ನ್ಯಾಯಸ್ಥಾಪನೆಯನ್ನು ಬಯಸುವವರು ಆನಂದದೊಡನೆ ಜಯಧ್ವನಿ ಮಾಡಲಿ;
ತನ್ನ ಸೇವಕನ ಹಿತವನ್ನು ಕೋರುವ ಯೆಹೋವನಿಗೆ ಸ್ತೋತ್ರ ಎಂದು ಯಾವಾಗಲೂ ಹೇಳುವವರಾಗಲಿ.
28ನನ್ನ ನಾಲಿಗೆಯು ನಿನ್ನ ನೀತಿಯನ್ನೂ ಮಹಿಮೆಯನ್ನೂ ದಿನವೆಲ್ಲಾ ವರ್ಣಿಸುವದು.

Highlight

Share

Copy

None

Want to have your highlights saved across all your devices? Sign up or sign in

Videos for ಕೀರ್ತನೆಗಳು 35