ಮಾರ್ಕ 1
1
ಸ್ನಾನಿಕನಾದ ಯೋಹಾನನ ವಿಷಯ
(ಮತ್ತಾ. 3.1-12; ಲೂಕ. 3.1-18; ಯೋಹಾ. 1.19-28)
1ದೇವಕುಮಾರನಾದ#1.1 ಕೆಲವು ಪ್ರತಿಗಳಲ್ಲಿ ದೇವಕುಮಾರನಾದ ಎಂಬ ಪದವು ಇಲ್ಲ. ಯೇಸು ಕ್ರಿಸ್ತನ ವಿಷಯವಾದ ಸುವಾರ್ತೆಯ ಪ್ರಾರಂಭವು.
2ಇಗೋ, ನಾನು ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ;
ನೀನು ಹೋಗುವ ದಾರಿಯನ್ನು ಅವನು ಸರಿಮಾಡುವನೆಂತಲೂ
3ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂತಲೂ
4ಪ್ರವಾದಿಯಾದ#1.4 ಕೆಲವು ಪ್ರತಿಗಳಲ್ಲಿ - ಪ್ರವಾದಿಗಳ ಎಂದು ಬರೆದದೆ. ಯೆಶಾಯನ ಗ್ರಂಥದಲ್ಲಿ ಬರೆದಿರುವ ಪ್ರಕಾರ ಯೋಹಾನನು ಬಂದು ಜನರಿಗೆ - ನೀವು ಪಾಪಪರಿಹಾರಕ್ಕಾಗಿ ದೇವರ ಕಡೆಗೆ ತಿರುಗಿಕೊಂಡು ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಸಾರಿಹೇಳುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು. 5ಆಗ ಯೂದಾಯ ಸೀಮೆಯೆಲ್ಲವೂ ಯೆರೂಸಲೇವಿುನವರೆಲ್ಲರೂ ಅವನ ಬಳಿಗೆ ಹೊರಟುಹೋಗಿ ತಮ್ಮತಮ್ಮ ಪಾಪಗಳನ್ನು ಹೇಳಿಕೊಂಡು ಯೊರ್ದನ್‍ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು. 6ಈ ಯೋಹಾನನು ಒಂಟೆಯ ಕೂದಲಿನ ಹೊದಿಕೆಯನ್ನು ಹೊದ್ದುಕೊಂಡು ಸೊಂಟಕ್ಕೆ ತೊಗಲಿನ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಅವನು ವಿುಡಿತೆಯನ್ನೂ ಕಾಡುಜೇನನ್ನೂ ಆಹಾರ ಮಾಡುತ್ತಿದ್ದನು. 7ಅವನು - ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಬಾರನ್ನು ಬೊಗ್ಗಿಕೊಂಡು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ. 8ನಾನು ನಿಮಗೆ ನೀರಿನ ಸ್ನಾನ ಮಾಡಿಸಿದೆನು; ಆತನಾದರೋ ನಿಮಗೆ ಪವಿತ್ರಾತ್ಮದ ಸ್ನಾನಮಾಡಿಸುವನು ಎಂದು ಸಾರಿಹೇಳಿದನು.
ಯೇಸು ಪ್ರತಿಷ್ಠೆಯನ್ನು ಹೊಂದಿ ತನ್ನ ಉದ್ಯೋಗವನ್ನು ಪ್ರಾರಂಭಿಸಿದ್ದು
(ಮತ್ತಾ. 3.13—4.17; ಲೂಕ. 3.21, 22, 4.1-15; ಯೋಹಾ. 1.31-33)
9ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ಸ್ನಾನಮಾಡಿಸಿಕೊಂಡನು. 10ಮಾಡಿಸಿಕೊಂಡ ಕೂಡಲೆ ಆತನು ನೀರಿನೊಳಗಿಂದ ಮೇಲಕ್ಕೆ ಬರಲು ಆಕಾಶವೊಡೆದು ದೇವರಾತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿಯುವದನ್ನು ಕಂಡನು. 11ಆಗ - ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು.
12ಕೂಡಲೆ ಯೇಸು ದೇವರಾತ್ಮಪ್ರೇರಿತನಾಗಿ ಅಡವಿಗೆ ಹೋದನು. 13ಆತನು ನಾಲ್ವತ್ತು ದಿವಸ ಅಡವಿಯಲ್ಲಿ ಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಡುವವನಾದನು; ಮತ್ತು ದೇವದೂತರು ಆತನಿಗೆ ಉಪಚಾರಮಾಡಿದರು.
14ಯೋಹಾನನು ಸೆರೆಗೆ ಬಿದ್ದ ಮೇಲೆ ಯೇಸು ಗಲಿಲಾಯ ಸೀಮೆಗೆ ಬಂದು - 15ಕಾಲ ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು, ದೇವರ ಕಡೆಗೆ ತಿರುಗಿಕೊಂಡು ಸುವಾರ್ತೆಯನ್ನು ನಂಬಿರಿ ಎಂದು ದೇವರ ಸುವಾರ್ತೆಯನ್ನು ಸಾರಿಹೇಳಿದನು.
ಯೇಸು ಪ್ರಥಮ ಶಿಷ್ಯರನ್ನು ಮಾಡಿಕೊಂಡದ್ದು
(ಮತ್ತಾ. 4.18-22; ಲೂಕ. 5.1-11)
16ಹೀಗಿರುವಲ್ಲಿ ಆತನು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನೂ ಸೀಮೋನನ ತಮ್ಮನಾದ ಅಂದ್ರೆಯನೂ ಸಮುದ್ರದಲ್ಲಿ ಬಲೆಬೀಸುವದನ್ನು ಕಂಡನು. ಅವರು ಬೆಸ್ತರು. 17ಯೇಸು ಅವರಿಗೆ - ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು ಎಂದು ಹೇಳುತ್ತಲೇ 18ಅವರು ತಮ್ಮ ಬಲೆಗಳನ್ನು ಬಿಟ್ಟು ಆತನ ಹಿಂದೆ ಹೋದರು. 19ಇನ್ನೂ ಸ್ವಲ್ಪ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು. 20ಇವರು ದೋಣಿಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು. ಕೂಡಲೆ ಇವರನ್ನೂ ಕರೆದನು. ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನ ಹಿಂದೆ ಹೋದರು.
ಯೇಸು ಉಪದೇಶ ಮಾಡಿ ದೆವ್ವಗಳನ್ನು ಬಿಡಿಸಿ ರೋಗಿಗಳನ್ನು ಸ್ವಸ್ಥಮಾಡಿ ಹೆಸರುಗೊಂಡದ್ದು
(ಮತ್ತಾ. 8.14-16; ಲೂಕ. 4.31-41)
21ಬಳಿಕ ಅವರು ಕಪೆರ್ನೌಮೆಂಬ ಊರಿಗೆ ಸೇರಿದರು. ಕೂಡಲೆ ಸಬ್ಬತ್‍ದಿನದಲ್ಲಿ ಯೇಸು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡಿದನು. 22ಜನರು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟರು; ಯಾಕಂದರೆ ಆತನು ಶಾಸ್ತ್ರಿಗಳಂತೆ ಉಪದೇಶಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶ ಮಾಡುತ್ತಿದ್ದನು. 23ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು. 24ಆ ದೆವ್ವವು - ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕೆ ಬಂದೆಯಾ? ನಿನ್ನನ್ನು ಬಲ್ಲೆನು; ನೀನು ದೇವರು ಪ್ರತಿಷ್ಠಿಸಿದವನೇ ಎಂದು ಕೂಗಿ ಹೇಳಿತು. 25ಯೇಸು ಅದನ್ನು ಗದರಿಸಿ - ಸುಮ್ಮನಿರು, ಇವನನ್ನು ಬಿಟ್ಟು ಹೋಗು ಎನ್ನಲಾಗಿ 26ಆ ದೆವ್ವವು ಅವನನ್ನು ಒದ್ದಾಡಿಸಿ ಅಬ್ಬರಿಸಿಕೂಗಿ ಬಿಟ್ಟು ಹೋಯಿತು. 27ಅದಕ್ಕೆ ಎಲ್ಲರು ಬೆರಗಾಗಿ - ಇದೇನಿರಬಹುದು? ಇದು ಹೊಸ ಉಪದೇಶ. ಈತನು ಅಧಿಕಾರದಿಂದ ದೆವ್ವಗಳಿಗೂ ಅಪ್ಪಣೆಕೊಡುತ್ತಾನೆ; ಅವು ಆತನ ಮಾತನ್ನು ಕೇಳುತ್ತವೆ ಎಂದು ತಮ್ಮ ತಮ್ಮೊಳಗೆ ವಿಚಾರಮಾಡಿಕೊಂಡರು. 28ಕೂಡಲೆ ಆತನ ಸುದ್ದಿಯು ಗಲಿಲಾಯ ಸೀಮೆಯಲ್ಲಿ ಎಲ್ಲೆಲ್ಲಿಯೂ ಹಬ್ಬಿತು. 29ಆಮೇಲೆ#1.29 ಪಾಠಾಂತರ ಆಮೇಲೆ ಆತನು … ಬಂದನು. ಅವರು ಸಭಾಮಂದಿರದಿಂದ ಹೊರಟು ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಗೆ ಬಂದರು. 30ಅಲ್ಲಿ ಸೀಮೋನನ ಅತ್ತೆ ಜ್ವರ ಬಂದು ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು. 31ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು.
32ಸಂಜೆಯಾಗಿ ಹೊತ್ತು ಮುಣುಗಿದ ಮೇಲೆ ಜನರು ಮೈಯಲ್ಲಿ ನೆಟ್ಟಗಿಲ್ಲದವರೆಲ್ಲರನ್ನೂ ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು. 33ಊರೆಲ್ಲಾ ಬಾಗಲಿನ ಮುಂದೆ ಒಟ್ಟುಗೂಡಿತ್ತು. 34ಆಗ ಆತನು ತರತರವಾದ ರೋಗಗಳಿಂದ ಮೈಯಲ್ಲಿ ನೆಟ್ಟಗಿಲ್ಲದ ಬಹು ಜನರನ್ನು ವಾಸಿಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಮತ್ತು ತಾನು ಇಂಥವನೆಂದು#1.34 ಕೆಲವು ಪ್ರತಿಗಳಲ್ಲಿ ಕ್ರಿಸ್ತನೆಂದು ಬರೆದದೆ. ಅವುಗಳಿಗೆ ತಿಳಿದದ್ದರಿಂದ ಆತನು ಅವುಗಳನ್ನು ಮಾತಾಡಗೊಡಿಸಲಿಲ್ಲ.
ಯೇಸು ಸುವಾರ್ತೆಯನ್ನು ಸಾರುತ್ತಾ ಗಲಿಲಾಯದಲ್ಲಿ ಸಂಚರಿಸಿದ್ದು
(ಲೂಕ. 4.42-44)
35ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ಹೊರಟು ಅಡವಿಯ ಸ್ಥಳಕ್ಕೆ ಹೋಗಿ ದೇವರನ್ನು ಪ್ರಾರ್ಥಿಸುತ್ತಿದ್ದನು. 36ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹಿಂದಟ್ಟಿ ಕಂಡು - 37ಎಲ್ಲರು ನಿನ್ನನ್ನು ಹುಡುಕುತ್ತಾರೆ ಅನ್ನಲಾಗಿ ಆತನು ಅವರಿಗೆ - 38ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು. 39ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.
ಕುಷ್ಠರೋಗಿಯನ್ನು ಸ್ವಸ್ಥಮಾಡಿದ್ದು
(ಮತ್ತಾ. 8.2-4; ಲೂಕ. 5.12-16)
40ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು - ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ ಎಂದು ಬೇಡಿಕೊಳ್ಳಲು ಆತನು ಕನಿಕರಪಟ್ಟು ಕೈನೀಡಿ ಅವನನ್ನು ಮುಟ್ಟಿ - 41ನನಗೆ ಮನಸ್ಸುಂಟು; ಶುದ್ಧವಾಗು ಅಂದನು. 42-44ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧವಾದನು. ಆಗ ಯೇಸು ಅವನಿಗೆ - ಯಾರಿಗೂ ಏನೂ ಹೇಳಬೇಡ ನೋಡು; ಆದರೆ ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ಮೋಶೆಯು ನೇಮಕಮಾಡಿರುವದನ್ನು ಅರ್ಪಿಸಿ ನಿನ್ನ ಶುದ್ಧಾಚಾರವನ್ನು ನೆರವೇರಿಸು, ಅದು ಜನರಿಗೆ ಸಾಕ್ಷಿಯಾಗಲಿ ಎಂದು ಖಂಡಿತವಾಗಿ ಹೇಳಿ ಅವನನ್ನು ಕಳುಹಿಸಿಬಿಟ್ಟನು. 45ಆದರೆ ಅವನು ಹೊರಟುಹೋಗಿ ಆ ಸಂಗತಿಯನ್ನು ಬಹಳವಾಗಿ ಸಾರಿ ಹಬ್ಬಿಸಿದ್ದರಿಂದ ಯೇಸು ಬಹಿರಂಗವಾಗಿ ಇನ್ನು ಯಾವ ಊರೊಳಕ್ಕೂ ಹೋಗಲಾರದೆ ಹೊರಗೆ ಅಡವಿಯ ಸ್ಥಳಗಳಲ್ಲಿ ಇದ್ದನು. ಮತ್ತು ಜನರು ನಾಲ್ಕು ಕಡೆಯಿಂದಲೂ ಆತನ ಬಳಿಗೆ ಬರುತ್ತಿದ್ದರು.
Currently Selected:
ಮಾರ್ಕ 1: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.