YouVersion Logo
Search Icon

ಮತ್ತಾಯ 28

28
ಯೇಸುವಿನ ಪುನರುತ್ಥಾನವು
(ಮಾರ್ಕ. 16.1-10; ಲೂಕ. 24.1-10; ಯೋಹಾ. 20.1-18)
1ಸಬ್ಬತ್‍ದಿನ ಆದ ಮೇಲೆ ವಾರದ ಮೊದಲನೆಯ ದಿವಸ ಬೆಳಗಾಗುವಾಗ#28.1 ಅಥವಾ ; ಪ್ರಾರಂಭವಾಗುವದಕ್ಕೆ ಸ್ವಲ್ಪ ಹೊತ್ತು ಮಾತ್ರ ಇದ್ದಾಗ. ಮಗ್ದಲದ ಮರಿಯಳೂ ಆ ಬೇರೆ ಮರಿಯಳೂ ಸಮಾಧಿಯನ್ನು ನೋಡುವದಕ್ಕೆ ಬಂದರು. 2ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಆಕಾಶದಿಂದ ಇಳಿದು ಬಂದು ಆ ಕಲ್ಲನ್ನು ಬಾಗಿಲಿನಿಂದ ಉರುಳಿಸಿ ಅದರ ಮೇಲೆ ಕೂತುಕೊಂಡನು. 3ಅವನ ಮುಖಭಾವವು ವಿುಂಚಿನಂತೆ ಇತ್ತು, ಅವನ ಉಡುಪು ಹಿಮದಂತೆ ಬೆಳ್ಳಗಿತ್ತು; 4ಕಾವಲುಗಾರರು ಅವನಿಗೆ ಹೆದರಿ ನಡುಗಿ ಸತ್ತವರ ಹಾಗಾದರು. 5ಆಗ ದೂತನು ಆ ಹೆಂಗಸರಿಗೆ - ನೀವು ಹೆದರಬೇಡಿರಿ; ಶಿಲುಬೆಗೆ ಹಾಕಲ್ಪಟ್ಟಿದ್ದ ಯೇಸುವನ್ನು ಹುಡುಕುತ್ತೀರೆಂದು ಬಲ್ಲೆನು; ಆತನು ಇಲ್ಲಿ ಇಲ್ಲ; 6ತಾನು ಹೇಳಿದಂತೆ ಎದ್ದಿದ್ದಾನೆ; ಬನ್ನಿ, ಆತನು#28.6 ಕೆಲವು ಪ್ರತಿಗಳಲ್ಲಿ - ಕರ್ತನು ಎಂದು ಬರೆದದೆ. ಮಲಗಿದ್ದ ಸ್ಥಳವನ್ನು ನೋಡಿರಿ; 7ಮತ್ತು ಬೇಗ ಹೋಗಿ ಆತನ ಶಿಷ್ಯರಿಗೆ - ಸತ್ತವನು ಬದುಕಿದ್ದಾನೆ, ಆತನು ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ; ನಾನು ನಿಮಗೆ ಹೇಳಿದ್ದೇನೆ, ನೋಡಿರಿ ಎಂದು ಹೇಳಿದನು. 8ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಬೇಗ ಸಮಾಧಿಯ ಬಳಿಯಿಂದ ಹೊರಟು ಆತನ ಶಿಷ್ಯರಿಗೆ ತಿಳಿಸುವದಕ್ಕೆ ಓಡಿಹೋದರು. 9ಆಗ ಯೇಸು ಅವರ ಎದುರಿಗೆ ಬಂದು - ನಿಮಗೆ ಶುಭವಾಗಲಿ ಅಂದನು. ಅವರು ಹತ್ತರಕ್ಕೆ ಬಂದು ಆತನ ಪಾದಗಳನ್ನು ಹಿಡಿದು ಆತನಿಗೆ ನಮಸ್ಕಾರಮಾಡಿದರು. 10ಯೇಸು ಅವರಿಗೆ - ಹೆದರಬೇಡಿರಿ; ನನ್ನ ಸಹೋದರರ ಬಳಿಗೆ ಹೋಗಿ ಅವರು ಗಲಿಲಾಯಕ್ಕೆ ಹೋಗಬೇಕೆಂದು ಹೇಳಿರಿ; ಅಲ್ಲಿ ನನ್ನನ್ನು ನೋಡುವರು ಎಂದು ಹೇಳಿದನು.
11ಅವರು ಹೋಗುತ್ತಿರುವಾಗ ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ನಡೆದ ಸಂಗತಿಗಳನ್ನೆಲ್ಲಾ ಮಹಾಯಾಜಕರಿಗೆ ತಿಳಿಸಿದರು. 12ಇವರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು - 13ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿರುವಾಗ ಅವನನ್ನು ಕದ್ದುಕೊಂಡು ಹೋದರು ಎಂದು ಹೇಳಿರಿ; 14ಈ ಸುದ್ದಿ ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ಭಯವಿಲ್ಲದ ಹಾಗೆ ಮಾಡುತ್ತೇವೆ ಅಂದರು. 15ಇವರು ಆ ಹಣವನ್ನು ತೆಗೆದುಕೊಂಡು ತಮಗೆ ಹೇಳಿಕೊಟ್ಟ ಹಾಗೆ ಮಾಡಿದರು. ಈ ಮಾತು ಇಂದಿನವರೆಗೂ ಯೆಹೂದ್ಯರಲ್ಲಿ ಹಬ್ಬಿ ಅದೆ.
ಯೇಸುವಿನ ಕಡೆಯ ಮಾತುಗಳು
16ಬಳಿಕ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಹೋಗಿ ಯೇಸು ತಮಗೆ ಗೊತ್ತು ಮಾಡಿದ್ದ ಬೆಟ್ಟಕ್ಕೆ ಸೇರಿದರು. 17ಅಲ್ಲಿ ಆತನನ್ನು ಕಂಡು ಆತನಿಗೆ ಅಡ್ಡಬಿದ್ದರು; ಆದರೆ ಕೆಲವರು ಸಂದೇಹಪಟ್ಟರು. 18ಆಗ ಯೇಸು ಹತ್ತರಕ್ಕೆ ಬಂದು - ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ. 19ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ 20ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು.

Highlight

Share

Copy

None

Want to have your highlights saved across all your devices? Sign up or sign in