ಮತ್ತಾಯ 9
9
1ಆತನು ದೋಣಿಯನ್ನು ಹತ್ತಿ ಸಮುದ್ರವನ್ನು ದಾಟಿ ತನ್ನ ಊರಿಗೆ ಬಂದನು.
ಪಾರ್ಶ್ವವಾಯುರೋಗಿಗೆ ಪಾಪವನ್ನು ಕ್ಷವಿುಸಿದ್ದು
(ಮಾರ್ಕ. 2.1-12; ಲೂಕ. 5.17-26)
2ಅಲ್ಲಿಗೆ ಬಂದಾಗ ಹಾಸಿಗೆಯ ಮೇಲೆ ಬಿದ್ದುಕೊಂಡಿರುವ ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ಹೊತ್ತುಕೊಂಡು ಬಂದರು. ಯೇಸು ಅವರ ನಂಬಿಕೆಯನ್ನು ನೋಡಿ ಪಾರ್ಶ್ವವಾಯುರೋಗಿಗೆ - ಮಗನೇ, ಧೈರ್ಯವಾಗಿರು, ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಎಂದು ಹೇಳಿದನು. 3ಅಲ್ಲಿದ್ದ ಶಾಸ್ತ್ರಿಗಳಲ್ಲಿ ಕೆಲವರು - ಇವನು ದೇವದೂಷಣೆ ಮಾಡುತ್ತಾನೆಂದು ತಮ್ಮತಮ್ಮೊಳಗೆ ಮಾತಾಡಿಕೊಂಡರು. 4ಯೇಸು ಅವರ ಆಲೋಚನೆಯನ್ನು ತಿಳಿದು - ನೀವು ಯಾಕೆ ನಿಮ್ಮ ಮನಸ್ಸಿನಲ್ಲಿ ಕೆಟ್ಟ ಆಲೋಚನೆಯನ್ನು ಮಾಡುತ್ತೀರಿ? 5ಯಾವದು ಸುಲಭ? ನಿನ್ನ ಪಾಪಗಳು ಕ್ಷವಿುಸಲ್ಪಟ್ಟಿವೆ ಅನ್ನುವದೋ? ಎದ್ದು ನಡೆ ಅನ್ನುವದೋ? 6ಆದರೆ ಪಾಪಗಳನ್ನು ಕ್ಷವಿುಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ ಪಾರ್ಶ್ವವಾಯುರೋಗಿಯನ್ನು ನೋಡಿ - ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಅಂದನು. 7ಅವನು ಎದ್ದು ಮನೆಗೆ ಹೋದನು. 8ಜನರು ಇದನ್ನು ನೋಡಿ ಭಯಪಟ್ಟು ದೇವರು ಮನುಷ್ಯರಿಗೆ ಅಂಥ ಅಧಿಕಾರವನ್ನು ಕೊಟ್ಟದ್ದಕ್ಕೆ ಆತನನ್ನು ಕೊಂಡಾಡಿದರು.
ಯೇಸು ತಾನು ಪಾಪಿಗಳ ಸಂಗಡ ಊಟಮಾಡಿದ್ದಕ್ಕೂ ಉಪವಾಸಮಾಡದೆ ಹೋದದ್ದಕ್ಕೂ ಕಾರಣ ತೋರಿಸಿದ್ದು
(ಮಾರ್ಕ. 2.13-22; ಲೂಕ. 5.27-38)
9ಯೇಸು ಅಲ್ಲಿಂದ ಹೋಗುತ್ತಿರುವಾಗ ಸುಂಕಕ್ಕೆ ಕೂತಿದ್ದ ಮತ್ತಾಯನೆಂಬ ಒಬ್ಬ ಮನುಷ್ಯನನ್ನು ನೋಡಿ - ನನ್ನನ್ನು ಹಿಂಬಾಲಿಸು ಎಂದು ಅವನನ್ನು ಕರೆಯಲು ಅವನು ಎದ್ದು ಆತನನ್ನು ಹಿಂಬಾಲಿಸಿದನು.
10ಅನಂತರ ಆತನು ಅವನ ಮನೆಯಲ್ಲಿ ಊಟಕ್ಕೆ ಕೂತಿರುವಾಗ ಬಹು ಮಂದಿ ಸುಂಕದವರೂ ಪಾಪಿಗಳೂ ಬಂದು ಯೇಸುವಿನ ಮತ್ತು ಆತನ ಶಿಷ್ಯರ ಪಙ್ತಿಯಲ್ಲೇ ಕೂತುಕೊಂಡರು. 11ಫರಿಸಾಯರು ಅದನ್ನು ನೋಡಿ ಆತನ ಶಿಷ್ಯರನ್ನು - ನಿಮ್ಮ ಗುರುವು ಸುಂಕದವರ ಮತ್ತು ಪಾಪಿಗಳ ಸಂಗಡ ಯಾಕೆ ಊಟಮಾಡುತ್ತಾನೆ ಎಂದು ಕೇಳಿದರು. 12ಆತನು ಅದನ್ನು ಕೇಳಿ - ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು. 13ನೀವು ಹೋಗಿ - ನನಗೆ ಯಜ್ಞವು ಬೇಡ, ಕರುಣೆಯೇಬೇಕು ಎಂಬ ಮಾತಿನ ಅರ್ಥವನ್ನು ಕಲಿತುಕೊಳ್ಳಿರಿ. ನಾನು ನೀತಿವಂತರನ್ನು ಕರೆಯುವದಕ್ಕೆ ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಅಂದನು.
14ಆಮೇಲೆ ಯೋಹಾನನ ಶಿಷ್ಯರು ಆತನ ಬಳಿಗೆ ಬಂದು - ಫರಿಸಾಯರೂ ನಾವೂ ಉಪವಾಸಮಾಡುತ್ತೇವಲ್ಲ; ನಿನ್ನ ಶಿಷ್ಯರು ಯಾಕೆ ಉಪವಾಸಮಾಡುವದಿಲ್ಲ ಎಂದು ಕೇಳಲು 15ಯೇಸು ಅವರಿಗೆ - ಮದುವೆಯ ಜನರು ತಮ್ಮ ಸಂಗಡ ಮದಲಿಂಗನು ಇರುವ ತನಕ ದುಃಖಪಟ್ಟಾರೋ? ಆದರೆ ಮದಲಿಂಗನನ್ನು ಅವರ ಬಳಿಯಿಂದ ತೆಗೆದುಕೊಂಡುಹೋಗುವ ಕಾಲ ಬರುತ್ತದೆ; ಆಗ ಉಪವಾಸಮಾಡುವರು. ಯಾರೂ ಹೊಸ ಬಟ್ಟೆಯ ತುಂಡನ್ನು ಹಳೆಯ ವಸ್ತ್ರಕ್ಕೆ ತ್ಯಾಪೆಹಚ್ಚುವದಿಲ್ಲ; 16[ಹಚ್ಚಿದರೆ] ಆ ತ್ಯಾಪೆಯು ವಸ್ತ್ರವನ್ನು ಹಿಂಜುವದರಿಂದ ಹರಕು ಹೆಚ್ಚಾಗುವದು. 17ಇದಲ್ಲದೆ ಹಳೆಯ ಬುದ್ದಲಿಗಳಲ್ಲಿ ಹೊಸ ದ್ರಾಕ್ಷಾರಸವನ್ನು ಹಾಕಿಡುವದಿಲ್ಲ; ಇಟ್ಟರೆ ಬುದ್ದಲಿಗಳು ಒಡೆದು ದ್ರಾಕ್ಷಾರಸವು ಚೆಲ್ಲಿಹೋಗುವದು, ಬುದ್ದಲಿಗಳು ಕೆಟ್ಟುಹೋಗುವವು; ಆದರೆ ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲಿ ಹಾಕಿಡುತ್ತಾರೆ, ಆಗ ಎರಡೂ ಉಳಿಯುತ್ತವೆ ಎಂದು ಹೇಳಿದನು.
ಯೇಸು ಒಬ್ಬ ಹುಡುಗಿಯನ್ನು ಬದುಕಿಸಿದ್ದೂ ಇನ್ನೂ ಕೆಲವು ಅದ್ಭುತಕಾರ್ಯಗಳನ್ನು ನಡಿಸಿದ್ದೂ
(ಮಾರ್ಕ. 5.22-43; ಲೂಕ. 8.41-56)
18ಹೀಗೆ ಆತನು ಅವರೊಂದಿಗೆ ಮಾತಾಡುತ್ತಿರುವಾಗ ಒಬ್ಬ ಅಧಿಕಾರಿ ಬಂದು ಆತನಿಗೆ ಅಡ್ಡಬಿದ್ದು - ನನ್ನ ಮಗಳು ಈಗಲೇ ತೀರಿಹೋದಳು; ಆದಾಗ್ಯೂ ನೀನು ಬಂದು ಆಕೆಯ ಮೇಲೆ ಕೈ ಇಟ್ಟರೆ ಬದುಕುವಳು ಎಂದು ಬೇಡಿಕೊಳ್ಳಲು 19ಯೇಸು ಎದ್ದು ತನ್ನ ಶಿಷ್ಯರನ್ನು ಕರಕೊಂಡು ಅವನ ಹಿಂದೆ ಹೋದನು.
20ಅಷ್ಟರಲ್ಲಿ ಹನ್ನೆರಡು ವರುಷದಿಂದ ರಕ್ತ ಕುಸುಮ ರೋಗವಿದ್ದ ಒಬ್ಬ ಹೆಂಗಸು - 21ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು ಎಂದು ಮನಸ್ಸಿನಲ್ಲಿ ಅಂದುಕೊಂಡು ಹಿಂದಿನಿಂದ ಬಂದು ಆತನ ಉಡುಪಿನ ಗೊಂಡೆಯನ್ನು ಮುಟ್ಟಿದಳು. 22ಆಗ ಯೇಸು ಹಿಂತಿರುಗಿ ಆಕೆಯನ್ನು ನೋಡಿ - ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು ಅಂದನು. ಆ ಕ್ಷಣವೇ ಆ ಹೆಂಗಸು ಸ್ವಸ್ಥವಾದಳು.
23ಆಮೇಲೆ ಯೇಸು ಆ ಅಧಿಕಾರಿಯ ಮನೆಗೆ ಬಂದು ವಾದ್ಯಗಾರರನ್ನೂ ಗದ್ದಲ ಮಾಡುವ ಜನರ ಗುಂಪನ್ನೂ ಕಂಡು - 24ಹೊರಗೆ ಹೋಗಿರಿ; ಹುಡುಗಿ ಸತ್ತಿಲ್ಲ, ನಿದ್ದೆಮಾಡುತ್ತಾಳೆ ಅನ್ನಲು ಅವರು ಆತನನ್ನು ಹಾಸ್ಯಮಾಡಿದರು. 25ಜನರನ್ನು ಹೊರಕ್ಕೆ ಕಳುಹಿಸಿದ ಮೇಲೆ ಆತನು ಒಳಕ್ಕೆ ಹೋಗಿ ಆಕೆಯ ಕೈ ಹಿಡಿಯಲು ಆಕೆ ಎದ್ದಳು. 26ಈ ಸುದ್ದಿ ಆ ದೇಶದೊಳಗೆಲ್ಲಾ ಹಬ್ಬಿತು.
27ಯೇಸು ಅಲ್ಲಿಂದ ಹೋಗುವಾಗ ಇಬ್ಬರು ಕುರುಡರು - ದಾವೀದನ ಕುಮಾರನೇ, ನಮ್ಮನ್ನು ಕರುಣಿಸು ಎಂದು ಕೂಗುತ್ತಾ ಆತನ ಹಿಂದೆ ಹೋದರು. 28ಆತನು ಮನೆಗೆ ಬಂದಾಗ ಆ ಕುರುಡರು ಆತನ ಬಳಿಗೆ ಬಂದರು. ಯೇಸು ಅವರನ್ನು - ನಾನು ಇದನ್ನು ಮಾಡಬಲ್ಲೆನೆಂಬದನ್ನು ನಂಬುತ್ತೀರೋ ಎಂದು ಕೇಳಿದ್ದಕ್ಕೆ ಅವರು - ಹೌದು, ಸ್ವಾಮೀ, ನಂಬುತ್ತೇವೆ ಅಂದರು. 29ಆಗ ಆತನು ಅವರ ಕಣ್ಣುಗಳನ್ನು ಮುಟ್ಟಿ - ನೀವು ನಂಬಿದಂತೆ ನಿಮಗೆ ಆಗಲಿ ಅಂದನು. 30ಆಗ ಅವರಿಗೆ ಕಣ್ಣು ಬಂದವು. ಮತ್ತು ಯೇಸು ಅವರಿಗೆ - ಇದು ಯಾರಿಗೂ ತಿಳಿಯಬಾರದು ನೋಡಿರಿ ಎಂದು ಖಂಡಿತವಾಗಿ ಹೇಳಿದನು. 31ಆದರೆ ಅವರು ಹೊರಟುಹೋಗಿ ಆ ದೇಶದೊಳಗೆಲ್ಲಾ ಆತನ ಸುದ್ದಿಯನ್ನು ಹಬ್ಬಿಸಿದರು.
32ಅವರು ಹೊರಟುಹೋಗುತ್ತಿರುವಾಗ ದೆವ್ವಹಿಡಿದ ಒಬ್ಬ ಮೂಕನನ್ನು ಆತನ ಬಳಿಗೆ ಕರತಂದರು. 33ಆತನು ದೆವ್ವಬಿಡಿಸಿದ ಮೇಲೆ ಆ ಮೂಕನು ಮಾತಾಡುವವನಾದನು. ಅದಕ್ಕೆ ಆ ಜನರು - ಇಸ್ರಾಯೇಲ್ ಜನರಲ್ಲಿ ಇಂಥ ಕಾರ್ಯವನ್ನು ಇದುವರೆಗೆ ಯಾರೂ ನೋಡಲಿಲ್ಲವೆಂದು ಬೆರಗಾದರು. 34ಆದರೆ ಫರಿಸಾಯರು - ಇವನು ದೆವ್ವಗಳ ಒಡೆಯನ ಸಹಾಯದಿಂದಲೇ ದೆವ್ವಗಳನ್ನು ಬಿಡಿಸುತ್ತಾನೆ ಅಂದರು.
ಯೇಸು ಹನ್ನೆರಡು ಮಂದಿ ಶಿಷ್ಯರನ್ನು ಆದುಕೊಂಡು, ಸುವಾರ್ತೆಯನ್ನು ಸಾರುವದಕ್ಕೆ ಕಳುಹಿಸಿದ್ದು
(ಮಾರ್ಕ. 3.13-19, 6.6-13; ಲೂಕ. 6.12-16, 9.1-6)
35ಯೇಸು ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು ಅವರ ಸಭಾಮಂದಿರಗಳಲ್ಲಿ ಉಪದೇಶಮಾಡುತ್ತಾ ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. 36ಆದರೆ ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು. 37ಆಗ ತನ್ನ ಶಿಷ್ಯರಿಗೆ - ಬೆಳೆಯು ಬಹಳ, ಕೆಲಸದವರು ಸ್ವಲ್ಪ; 38ಆದದರಿಂದ ಬೆಳೆಯ ಯಜಮಾನನನ್ನು - ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ ಎಂದು ಹೇಳಿದನು.
Currently Selected:
ಮತ್ತಾಯ 9: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.