ಮತ್ತಾಯ 10
10
1ಮತ್ತು ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತರಕ್ಕೆ ಕರೆದು ದೆವ್ವಗಳನ್ನು ಬಿಡಿಸುವದಕ್ಕೂ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುವದಕ್ಕೂ ಅವರಿಗೆ ಅಧಿಕಾರಕೊಟ್ಟನು.
2ಆತನು ಕಳುಹಿಸಿಕೊಟ್ಟ ಅಪೊಸ್ತಲರೆಂಬ ಹನ್ನೆರಡು ಮಂದಿಯ ಹೆಸರುಗಳು ಯಾವವಂದರೆ - ಮೊದಲನೆಯವನು ಪೇತ್ರನೆನಿಸಿಕೊಳ್ಳುವ ಸೀಮೋನ, ಅವನ ತಮ್ಮನಾದ ಅಂದ್ರೆಯ, ಜೆಬೆದಾಯನ ಮಗನಾದ ಯಾಕೋಬ, ಅವನ ತಮ್ಮನಾದ ಯೋಹಾನ, 3ಫಿಲಿಪ್ಪ, ಬಾರ್ತೊಲೊಮಾಯ, ತೋಮ, ಸುಂಕದ ಮತ್ತಾಯ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, 4ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ, ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ, ಇವುಗಳೇ.
5ಈ ಹನ್ನೆರಡು ಮಂದಿಯನ್ನು ಯೇಸು ಕಳುಹಿಸಿದನು. ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟದ್ದೇನಂದರೆ -
ಅನ್ಯಜನಗಳ ಕಡೆಗೆ ಹೋಗಬೇಡಿರಿ, ಸಮಾರ್ಯರ ಊರೊಳಗೆ ಕಾಲಿಡಬೇಡಿರಿ; 6ಇವರನ್ನು ಬಿಟ್ಟು ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ ಬಳಿಗೆ ಹೋಗಿರಿ. 7ಪರಲೋಕರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ. 8ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠಹತ್ತಿದವರನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ. 9ನಿಮ್ಮ ಹಮ್ಮೀಣಿಗಳಲ್ಲಿ ಹೊನ್ನು ಹಣ ದುಡ್ಡುಗಳನ್ನೂ ದಾರಿಗೆ ಹಸಿಬೆಯನ್ನೂ 10ಎರಡು ಅಂಗಿ ಕೆರ ಕೋಲು ಮೊದಲಾದವುಗಳನ್ನೂ ಸೌರಿಸಿಕೊಳ್ಳಬೇಡಿರಿ. ಆಳು ಅಂಬಲಿಗೆ ಯೋಗ್ಯನಷ್ಟೆ.
11ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ ಮುಂದಕ್ಕೆ ಹೊರಡುವ ತನಕ ಅವರಲ್ಲೇ ಇರ್ರಿ. 12ಆ ಮನೆಯೊಳಕ್ಕೆ ಹೋಗುವಾಗ ಶುಭವಾಗಲಿ ಅನ್ನಿರಿ. 13ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ಅವರಿಗೆ ಆಗಲಿ; ಅಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ನಿಮಗೆ ಹಿಂದಕ್ಕೆ ಬರಲಿ. 14ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನು ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಕಾಲಿಗೆ ಹತ್ತಿದ ದೂಳನ್ನು ಝಾಡಿಸಿಬಿಡಿರಿ. 15ನ್ಯಾಯವಿಚಾರಣೆಯ ದಿವಸದಲ್ಲಿ ಅಂಥ ಊರಿನ ಗತಿಯು ಸೊದೋಮ್ ಗೊಮೋರಗಳ ಸೀಮೆಯ ಗತಿಗಿಂತಲೂ ಕಠಿಣವಾಗಿರುವದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
16ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ. ಆದದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರ್ರಿ. 17ಇದಲ್ಲದೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ; ಅವರು ನಿಮ್ಮನ್ನು ನ್ಯಾಯ ವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. 18ನನ್ನ ನಿವಿುತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದಕ್ಕೂ ಅರಸುಗಳ ಮುಂದಕ್ಕೂ ತೆಗೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವದು. 19ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಹೇಗೆ ಮಾತಾಡಬೇಕು, ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಗಳಿಗೆಯಲ್ಲಿ ನಿಮಗೆ ಸೂಚನೆಯಾಗುವದು. 20ಮಾತಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತಾಡುವನು. 21ಇದಲ್ಲದೆ ಅಣ್ಣನು ತಮ್ಮನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ಹೆತ್ತವರ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು. 22ಮತ್ತು ನನ್ನ ಹೆಸರಿನ ನಿವಿುತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು. ಆದರೆ ಕಡೇವರೆಗೂ ತಾಳುವವನು ರಕ್ಷಣೆಹೊಂದುವನು. 23ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳ ಸಂಚಾರವನ್ನು ತೀರಿಸಿರುವದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
24ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ, ಧಣಿಗಿಂತ ಆಳು ದೊಡ್ಡವನಲ್ಲ. 25ಗುರುವಿನಂತೆ ಆಗುವದು ಶಿಷ್ಯನಿಗೆ ಸಾಕು, ಧಣಿಯಂತೆ ಆಗುವದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು#10.25 ಅಂದರೆ: ಪಿಶಾಚಿಗಳ ಒಡೆಯನು. ಹೆಸರಿಟ್ಟ ಮೇಲೆ ಆತನ ಮನೆಯವರನ್ನು ಏನಂದಾರು? ಆದರೂ ಅವರಿಗೆ ಹೆದರಬೇಡಿರಿ. 26ಮರೆಯಾಗಿರುವ ಯಾವದೂ ವ್ಯಕ್ತವಾಗದೆ ಇರುವದಿಲ್ಲ; ಹೊರಪಡದ ರಹಸ್ಯವೂ ಇಲ್ಲ. 27ನಾನು ಕತ್ತಲಲ್ಲಿ ನಿಮಗೆ ಹೇಳುವದನ್ನು ನೀವು ಬೆಳಕಿನಲ್ಲಿ ಹೇಳಿರಿ, ಮತ್ತು ಕಿವಿಯಲ್ಲಿ ಕೇಳಿದ್ದನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ. 28ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ದೇಹ ಎರಡನ್ನೂ ಕೂಡ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ. 29ದುಡ್ಡಿಗೆ ಎರಡು ಗುಬ್ಬಿಗಳನ್ನು ಮಾರುವದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು. 30ನಿಮ್ಮ ತಲೇಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. 31ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.
32ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು. 33ಆದರೆ ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.
34ಭೂಲೋಕದ ಮೇಲೆ ಸಮಾಧಾನ ಹುಟ್ಟಿಸುವದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವದಕ್ಕೆ ಬಂದೆನು. 35ಹೇಗಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದ ಹುಟ್ಟಿಸುವದಕ್ಕೆ ಬಂದೆನು. 36ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು. 37ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ. 38ಮತ್ತು ಯಾವನಾದರೂ ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನ ಹಿಂದೆ ಬಂದ ಹೊರತು ನನಗೆ ಯೋಗ್ಯನಲ್ಲ. 39ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳಕೊಳ್ಳುವನು; ನನ್ನ ನಿವಿುತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.
40ನಿಮ್ಮನ್ನು ಸೇರಿಸಿಕೊಳ್ಳುವವನು ನನ್ನನ್ನು ಸೇರಿಸಿಕೊಳ್ಳುವವನಾಗಿದ್ದಾನೆ; ನನ್ನನ್ನು ಸೇರಿಸಿಕೊಳ್ಳುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಳ್ಳುವವನಾಗಿದ್ದಾನೆ. 41ಪ್ರವಾದಿಯನ್ನು ಪ್ರವಾದಿಯೆಂದು ಸೇರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು; ನೀತಿವಂತನನ್ನು ನೀತಿವಂತನೆಂದು ಸೇರಿಸಿಕೊಳ್ಳುವವನು ನೀತಿವಂತನಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು. 42ಮತ್ತು ಈ ಚಿಕ್ಕವರಲ್ಲಿ ಒಬ್ಬನಿಗೆ ಯೇಸುವಿನ ಶಿಷ್ಯನೆಂದು ಯಾವನಾದರೂ ಒಂದು ತಂಬಿಗೆ ತಣ್ಣೀರನ್ನಾದರೂ ಕುಡಿಯುವದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ ಅಂದನು.
Currently Selected:
ಮತ್ತಾಯ 10: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.