ಮತ್ತಾಯ 2
2
ಜೋಯಿಸರು ಮೂಡಲಿಂದ ಬಂದು ಯೇಸುವಿಗೆ ನಮಸ್ಕರಿಸಿದ್ದು
1ಅರಸನಾದ ಹೆರೋದನ ದಿನಗಳಲ್ಲಿ ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಲ್ಲಿ ಯೇಸು ಹುಟ್ಟಿದಾಗ ಮೂಡಣದೇಶದ ಜೋಯಿಸರು ಯೆರೂಸಲೇವಿುಗೆ ಬಂದು - 2ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಮೂಡಣದೇಶದಲ್ಲಿ ಕಂಡು ಆತನಿಗೆ ಅಡ್ಡಬೀಳುವದಕ್ಕೆ ಬಂದೆವು ಅಂದರು. 3ಇದನ್ನು ಕೇಳಿ ಅರಸನಾದ ಹೆರೋದನೂ ಅವನ ಕೂಡ ಯೆರೂಸಲೇವಿುನವರೆಲ್ಲರೂ ಕಳವಳಪಟ್ಟರು. 4ಅವನು ಯೆಹೂದ್ಯರ ಎಲ್ಲಾ ಮಹಾಯಾಜಕರನ್ನೂ ಶಾಸ್ತ್ರಿಗಳನ್ನೂ ಕೂಡಿಸಿ - ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ ಎಂದು ಅವರನ್ನು ಕೇಳಿದನು. 5ಅವರು ಅವನಿಗೆ - ಯೂದಾಯದ ಬೇತ್ಲೆಹೇವಿುನಲ್ಲಿಯೇ; ಯಾಕಂದರೆ -
6ಯೆಹೂದ ಸೀಮೆಯ ಬೇತ್ಲೆಹೇಮೇ,
ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟುಮಾತ್ರವೂ ಸಣ್ಣದಲ್ಲ.
ಒಬ್ಬ ಅಧಿಪತಿ ನಿನ್ನೊಳಗಿಂದಲೇ ಹೊರಡುವನು,
ಆತನು ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕವನು
ಎಂಬದಾಗಿ ಪ್ರವಾದಿಯ ಮುಖಾಂತರ ಬರೆದದೆ ಎಂದು ಹೇಳಿದರು. 7ಆಗ ಹೆರೋದನು ಯಾರಿಗೂ ತಿಳಿಯದಂತೆ ಆ ಜೋಯಿಸರನ್ನು ಕರೆಸಿ ಆ ನಕ್ಷತ್ರವು ಕಾಣಿಸಿದ ಕಾಲವನ್ನು ಅವರ ಕಡೆಯಿಂದ ಚೆನ್ನಾಗಿ ತಿಳುಕೊಂಡು - 8ನೀವು ಹೋಗಿ ಆ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನೂ ಬಂದು ಅದಕ್ಕೆ ಅಡ್ಡಬೀಳಬೇಕು ಎಂದು ಹೇಳಿ ಅವರನ್ನು ಬೇತ್ಲೆಹೇವಿುಗೆ ಕಳುಹಿಸಿದನು.
9ಅವರು ಅರಸನ ಮಾತನ್ನು ಕೇಳಿ ಹೊರಟಾಗ ಮೂಡಣದೇಶದಲ್ಲಿ ಕಂಡ ನಕ್ಷತ್ರವು ಅವರ ಮುಂದೆ ಮುಂದೆ ನಡೆದು ಕೂಸು ಇದ್ದ ಸ್ಥಳದ ಮೇಲೆ ಬಂದು ನಿಂತಿತು. 10ಅವರು ನಕ್ಷತ್ರವನ್ನು ಕಂಡು ಅತ್ಯಂತ ಸಂತೋಷಪಟ್ಟರು. 11ಮತ್ತು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು. 12ಆಮೇಲೆ ದೇವರು ಕನಸಿನಲ್ಲಿ ಅವರಿಗೆ - ನೀವು ಹೆರೋದನ ಬಳಿಗೆ ತಿರಿಗೆ ಹೋಗಬಾರದೆಂದು ಅಪ್ಪಣೆಕೊಟ್ಟದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.
ಅರಸನು ಯೇಸುವನ್ನು ಕೊಲ್ಲುವದಕ್ಕೆ ಪ್ರಯತ್ನಮಾಡಿದ್ದು
13ಅವರು ಹೋದ ಮೇಲೆ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು - ನೀನು ಎದ್ದು ಈ ಕೂಸನ್ನೂ ಇದರ ತಾಯಿಯನ್ನೂ ಕರಕೊಂಡು ಐಗುಪ್ತದೇಶಕ್ಕೆ ಓಡಿಹೋಗಿ ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು ಅಂದನು. 14ಆಗ ಅವನು ಎದ್ದು ಕೂಸನ್ನೂ ಅದರ ತಾಯಿಯನ್ನೂ ರಾತ್ರಿವೇಳೆಯಲ್ಲಿ ಕರಕೊಂಡು ಐಗುಪ್ತದೇಶಕ್ಕೆ ಹೊರಟುಹೋಗಿ 15ಹೆರೋದನು ತೀರಿಹೋಗುವ ತನಕ ಅಲ್ಲೇ ಇದ್ದನು. ಇದರಿಂದ - ನನ್ನ ಮಗನನ್ನು ಐಗುಪ್ತದೇಶದೊಳಗಿಂದ ಕರೆದೆನೆಂದು ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.
16ಆಗ ಹೆರೋದನು ತನಗೆ ಜೋಯಿಸರು ಮೋಸ ಮಾಡಿದರೆಂದು ತಿಳಿದು ಬಹಳ ಸಿಟ್ಟಾಗಿ ಆಳುಗಳನ್ನು ಕಳುಹಿಸಿ ತಾನು ಜೋಯಿಸರಿಂದ ತಿಳುಕೊಂಡ ಕಾಲಕ್ಕೆ ಸರಿಯಾಗಿ, ಬೇತ್ಲೆಹೇವಿುನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಎರಡು ವರುಷದೊಳಗಿನ ಗಂಡುಕೂಸುಗಳನ್ನೆಲ್ಲಾ ಕೊಲ್ಲಿಸಿದನು. 17ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಆ ಕಾಲದಲ್ಲಿ ನೆರವೇರಿತು; ಅದೇನಂದರೆ -
18ರಾಮದಲ್ಲಿ ಬೊಬ್ಬೆಯು ಕೇಳಿಸಿತು;
ಅಳುವಿಕೆಯೂ ಬಹು ಗೋಳಾಟವೂ ಉಂಟಾದವು;
ರಾಹೇಲಳು ತನ್ನ ಮಕ್ಕಳಿಗೋಸ್ಕರ ಅತ್ತತ್ತು
ಅವರು ಇಲ್ಲದೆಹೋದದ್ದಕ್ಕಾಗಿ ಸಮಾಧಾನ ಹೊಂದಲೊಲ್ಲದೆ ಇದ್ದಳು
ಎಂಬದು.
19ಹೆರೋದನು ತೀರಿಹೋದ ಮೇಲೆ ಐಗುಪ್ತದೇಶದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು - 20ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್‍ದೇಶಕ್ಕೆ ಹೋಗು; ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತುಹೋದರು ಎಂದು ಹೇಳಿದನು. 21ಆಗ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್‍ದೇಶಕ್ಕೆ ಬಂದನು. 22ಆದರೆ ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯವನ್ನು ಆಳುತ್ತಾನೆಂದು ಕೇಳಿ ಅಲ್ಲಿಗೆ ಹೋಗುವದಕ್ಕೆ ಅಂಜಿದನು. ಆಗ ಅವನು ಕನಸಿನಲ್ಲಿ ದೇವರ ಅಪ್ಪಣೆಯನ್ನು ಹೊಂದಿ ಗಲಿಲಾಯ ಸೀಮೆಗೆ ಹೋದನು. 23ಮತ್ತು ನಜರೇತೆಂಬ ಊರಿಗೆ ಬಂದು ಅಲ್ಲಿ ಮನೆಮಾಡಿಕೊಂಡು ಇದ್ದನು. ಇದರಿಂದ - ನಜರಾಯನೆಂಬ ಹೆಸರು ಆತನಿಗೆ ಬರುವದು ಎಂಬದಾಗಿ ಪ್ರವಾದಿಗಳಿಂದ ಹೇಳಿಸಿರುವ ಮಾತು ನೆರವೇರಿತು.
Currently Selected:
ಮತ್ತಾಯ 2: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.