ಮತ್ತಾಯ 1
1
ಯೇಸುಕ್ರಿಸ್ತನ ವಂಶಾವಳಿಯು
1ಯೇಸು ಕ್ರಿಸ್ತನ ವಂಶಾವಳಿಯು. ಆತನು ದಾವೀದನ ವಂಶದವನು. ದಾವೀದನು ಅಬ್ರಹಾಮನ ವಂಶದವನು.
2ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನು ಯಾಕೋಬನನ್ನು ಪಡೆದನು. ಯಾಕೋಬನು ಯೆಹೂದನನ್ನೂ ಅವನ ಅಣ್ಣತಮ್ಮಂದಿರನ್ನೂ ಪಡೆದನು. 3ಯೆಹೂದನು ತಾಮಾರಳಲ್ಲಿ ಪೆರೆಚನನ್ನೂ ಜೆರಹನನ್ನೂ ಪಡೆದನು. ಪೆರೆಚನು ಹೆಚ್ರೋನನನ್ನು ಪಡೆದನು. 4ಹೆಚ್ರೋನನು ಅರಾಮನನ್ನು ಪಡೆದನು. ಅರಾಮನು ಅಮ್ಮೀನಾದಾಬನನ್ನು ಪಡೆದನು. ಅಮ್ಮೀನಾದಾಬನು ನಹಶೋನನನ್ನು ಪಡೆದನು. ನಹಶೋನನು ಸಲ್ಮೋನನನ್ನು ಪಡೆದನು. 5ಸಲ್ಮೋನನು ರಾಹಾಬಳಲ್ಲಿ ಬೋವಜನನ್ನು ಪಡೆದನು. ಬೋವಜನು ರೂತಳಲ್ಲಿ ಓಬೇದನನ್ನು ಪಡೆದನು. ಓಬೇದನು ಇಷಯನನ್ನು ಪಡೆದನು. 6ಇಷಯನು ಅರಸನಾದ ದಾವೀದನನ್ನು ಪಡೆದನು.
ದಾವೀದನು ಊರೀಯನ ಹೆಂಡತಿಯಾಗಿದ್ದವಳಲ್ಲಿ ಸೊಲೊಮೋನನನ್ನು ಪಡೆದನು. 7ಸೊಲೊಮೋನನು ರೆಹಬ್ಬಾಮನನ್ನು ಪಡೆದನು. ರೆಹಬ್ಬಾಮನು ಅಬೀಯನನ್ನು ಪಡೆದನು. ಅಬೀಯನು ಆಸನನ್ನು ಪಡೆದನು. 8ಆಸನು ಯೆಹೋಷಾಫಾಟನನ್ನು ಪಡೆದನು. ಯೆಹೋಷಾಫಾಟನು ಯೆಹೋರಾಮನನ್ನು ಪಡೆದನು. ಯೆಹೋರಾಮನು ಉಜ್ಜೀಯನನ್ನು ಪಡೆದನು. 9ಉಜ್ಜೀಯನು ಯೋತಾಮನನ್ನು ಪಡೆದನು. ಯೋತಾಮನು ಆಹಾಜನನ್ನು ಪಡೆದನು. ಆಹಾಜನು ಹಿಜ್ಕೀಯನನ್ನು ಪಡೆದನು. 10ಹಿಜ್ಕೀಯನು ಮನಸ್ಸೆಯನ್ನು ಪಡೆದನು. ಮನಸ್ಸೆಯು ಆಮೋನನನ್ನು ಪಡೆದನು. 11ಆಮೋನನು ಯೋಷೀಯನನ್ನು ಪಡೆದನು. ಪ್ರಜೆಯು ಬಾಬೆಲಿಗೆ ಸೆರೆಹೋದ ಸಮಯದಲ್ಲಿ ಯೋಷೀಯನು ಯೆಕೊನ್ಯನನ್ನೂ ಅವನ ಅಣ್ಣತಮ್ಮಂದಿರನ್ನೂ ಪಡೆದನು.
12ಬಾಬೆಲಿಗೆ ಸೆರೆಹೋದ ಮೇಲೆ ಯೆಕೊನ್ಯನು ಶೆಯಲ್ತಿಯೇಲನನ್ನು ಪಡೆದನು. ಶೆಯಲ್ತಿಯೇಲನು ಜೆರುಬ್ಬಾಬೆಲನನ್ನು ಪಡೆದನು. 13ಜೆರುಬ್ಬಾಬೆಲನು ಅಬಿಹೂದನನ್ನು ಪಡೆದನು. ಅಬಿಹೂದನು ಎಲ್ಯಕೀಮನನ್ನು ಪಡೆದನು. ಎಲ್ಯಕೀಮನು ಅಜೋರನನ್ನು ಪಡೆದನು. 14ಅಜೋರನು ಸದೋಕನನ್ನು ಪಡೆದನು. ಸದೋಕನು ಅಖೀಮನನ್ನು ಪಡೆದನು. ಅಖೀಮನು ಎಲಿಹೂದನನ್ನು ಪಡೆದನು. 15ಎಲಿಹೂದನು ಎಲಿಯಾಜರನನ್ನು ಪಡೆದನು. ಎಲಿಯಾಜರನು ಮತ್ತಾನನನ್ನು ಪಡೆದನು. ಮತ್ತಾನನು ಯಾಕೋಬನನ್ನು ಪಡೆದನು. 16ಯಾಕೋಬನು ಮರಿಯಳ ಗಂಡನಾದ ಯೋಸೇಫನನ್ನು ಪಡೆದನು. ಈ ಮರಿಯಳಲ್ಲಿ ಕ್ರಿಸ್ತನೆಂಬ ಯೇಸು ಹುಟ್ಟಿದನು.
17ಹೀಗೆ ಅಬ್ರಹಾಮನಿಂದ ದಾವೀದನವರೆಗೂ ಒಟ್ಟು ಹದಿನಾಲ್ಕು ತಲೆಗಳು. ದಾವೀದ ಮೊದಲುಗೊಂಡು ಬಾಬೆಲಿಗೆ ಸೆರೆಹೋಗುವವರೆಗೂ ಹದಿನಾಲ್ಕು ತಲೆಗಳು. ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನವರೆಗೂ ಹದಿನಾಲ್ಕು ತಲೆಗಳು.
ಯೇಸು ಕ್ರಿಸ್ತನ ಜನನವು
18ಯೇಸು ಕ್ರಿಸ್ತನ ಜನನವು ಹೇಗಾಯಿತಂದರೆ - ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯಮಾಡಿರಲಾಗಿ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಬಸುರಾಗಿದ್ದದ್ದು ತಿಳಿದುಬಂತು. 19ಆದರೆ ಆಕೆಯ ಗಂಡನಾದ ಯೋಸೇಫನು ಸಜ್ಜನನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ, ಯಾರಿಗೂ ತಿಳಿಯದಂತೆ ಆಕೆಯನ್ನು ಬಿಟ್ಟುಬಿಡಬೇಕೆಂದಿದ್ದನು. 20ಅವನು ಇದನ್ನು ಆಲೋಚಿಸುತ್ತಿರುವಾಗ ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿಕೊಂಡು - ಎಲೈ ಯೋಸೇಫನೇ, ದಾವೀದನ ವಂಶದವನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳುವದಕ್ಕೆ ಅಂಜಬೇಡ. ಆಕೆಯ ಗರ್ಭವು ಪವಿತ್ರಾತ್ಮದಿಂದಲೇ ಆದದ್ದು. 21ಆಕೆಯು ಒಬ್ಬ ಮಗನನ್ನು ಹಡೆಯುವಳು; ನೀನು ಆತನಿಗೆ ಯೇಸು ಎಂದು ಹೆಸರಿಡಬೇಕು; ಯಾಕಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ಕಾಯುವನು ಅಂದನು. 22ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು; ಆ ಮಾತು ಏನಂದರೆ -
23ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹಡೆಯುವಳು;
ಆತನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು ಎಂಬದು.
ದೇವರು ನಮ್ಮ ಕೂಡ ಇದ್ದಾನೆಂದು ಈ ಹೆಸರಿನ ಅರ್ಥ. 24ಆಗ ಯೋಸೇಫನು ನಿದ್ದೆ ತಿಳಿದೆದ್ದು ಕರ್ತನ ದೂತನು ಅಪ್ಪಣೆಕೊಟ್ಟ ಹಾಗೆ ತನ್ನ ಹೆಂಡತಿಯನ್ನು ಸೇರಿಸಿಕೊಂಡನು. 25ಆದರೆ ಆಕೆಯು ಗಂಡುಮಗನನ್ನು ಹಡೆಯುವ ತನಕ ಆಕೆಯನ್ನು ಅರಿಯಲಿಲ್ಲ. ಮಗುವಿಗೆ ಯೇಸುವೆಂದು ಹೆಸರಿಟ್ಟನು.
Currently Selected:
ಮತ್ತಾಯ 1: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.