YouVersion Logo
Search Icon

ಲೂಕ 1

1
ಪೀಠಿಕೆ
1-2ಶ್ರೀಮತ್ ಥೆಯೊಫಿಲನೇ, ನಮ್ಮಲ್ಲಿ ನಿಶ್ಚಯಕ್ಕೆ ಬಂದಿರುವ ಕಾರ್ಯಗಳನ್ನು ಮೊದಲಿಂದ ಕಣ್ಣಾರೆ ಕಂಡು ಸುವಾರ್ತಾ ವಾಕ್ಯವನ್ನು ಸಾರುತ್ತಿದ್ದವರು ನಮಗೆ ತಿಳಿಸಿದ ಪ್ರಕಾರ ಆ ಕಾರ್ಯಗಳನ್ನು ಚರಿತ್ರ ರೂಪವಾಗಿ ಬರೆಯುವದಕ್ಕೆ ಅನೇಕರು ಪ್ರಯತ್ನಿಸಿರಲಾಗಿ 3ನಾನು ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಿದವನಾದಕಾರಣ ಅವುಗಳನ್ನು ನಿನಗೆ ಕ್ರಮವಾಗಿ ಬರೆಯುವದು ಒಳ್ಳೇದೆಂದು ನನಗೂ ತೋಚಿತು. 4ನಿನಗೆ ಉಪದೇಶಿಸಿರುವ ವಿಷಯಗಳು ಯಥಾರ್ಥವಾದವುಗಳೆಂದು ಇದರಿಂದ ನೀನು ಗೊತ್ತುಮಾಡಿಕೊಳ್ಳಬಹುದು.
ದೇವದೂತನು ಸ್ನಾನಿಕನಾದ ಯೋಹಾನನ ಜನನವನ್ನು ಮುಂತಿಳಿಸಿದ್ದು
5ಯೂದಾಯದ ಅರಸನಾದ ಹೆರೋದನ ಕಾಲದಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರೀಯನೆಂಬ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ವಂಶದವಳು. ಆಕೆಯ ಹೆಸರು ಎಲಿಸಬೇತ್. 6ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು. 7ಆದರೆ ಎಲಿಸಬೇತಳು ಬಂಜೆಯಾದದರಿಂದ ಅವರಿಗೆ ಮಕ್ಕಳಿರಲಿಲ್ಲ; ಇದಲ್ಲದೆ ಅವರಿಬ್ಬರೂ ದಿನಹೋದವರಾಗಿದ್ದರು.
8ಹೀಗಿರಲಾಗಿ ಜಕರೀಯನ ವರ್ಗದ ಸರತಿ ಬಂದಾಗ ಅವನು ದೇವರ ಸನ್ನಿಧಿಯಲ್ಲಿ ಯಾಜಕಧರ್ಮವನ್ನು ನಡಿಸುತ್ತಿರಲು 9ದೇವಾಲಯದೊಳಕ್ಕೆ ಹೋಗಿ ಧೂಪವನ್ನರ್ಪಿಸುವದು ಯಾಜಕರ ಮರ್ಯಾದೆಯ ಪ್ರಕಾರ ಅವನ ಪಾಲಿಗೆ ಬಂತು. 10ಧೂಪವನ್ನು ಅರ್ಪಿಸುವ ಹೊತ್ತಿನಲ್ಲಿ ಜನರ ಗುಂಪೆಲ್ಲಾ ಹೊರಗೆ ನಿಂತು ದೇವರನ್ನು ಪ್ರಾರ್ಥಿಸುತ್ತಿರಲಾಗಿ 11ಕರ್ತನ ದೂತನು ಧೂಪಪೀಠದ ಬಲಗಡೆಯಲ್ಲಿ ನಿಂತುಕೊಂಡವನಾಗಿ ಅವನಿಗೆ ಕಾಣಿಸಿಕೊಂಡನು. 12ಜಕರೀಯನು ಅವನನ್ನು ಕಂಡು ತತ್ತರಗೊಂಡು ಭಯಹಿಡಿದವನಾದನು. 13ಆದರೆ ಆ ದೂತನು ಅವನಿಗೆ - ಜಕರೀಯಾ, ಭಯಪಬೇಡ; ನಿನ್ನ ವಿಜ್ಞಾಪನೆ ದೇವರಿಗೆ ಮುಟ್ಟಿತು; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. 14ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು. ನಿನಗೆ ಸಂತೋಷವೂ ಉಲ್ಲಾಸವೂ ಉಂಟಾಗುವದು; ಮತ್ತು ಅವನು ಹುಟ್ಟಿದ್ದಕ್ಕೆ ಬಹು ಜನರು ಸಂತೋಷಪಡುವರು. 15ಅವನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು; ದ್ರಾಕ್ಷಾರಸವನ್ನಾಗಲಿ ಯಾವ ಮದ್ಯವನ್ನಾಗಲಿ ಕುಡಿಯದವನಾಗಿರುವನು; ಅವನು ಹುಟ್ಟಿದಂದಿನಿಂದಲೂ ಪವಿತ್ರಾತ್ಮಭರಿತನಾಗಿರುವನು. 16ಇಸ್ರಾಯೇಲ್ಯರಲ್ಲಿ ಅನೇಕರನ್ನು ಅವರ ದೇವರಾಗಿರುವ ಕರ್ತನ ಕಡೆಗೆ ತಿರುಗಿಸುವನು. ಅವನು ಆತನ ಮುಂದೆ ಹೋಗಿ ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ 17ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ ಹಟಹಿಡಿದವರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ ಸಿದ್ಧವಾದ ಜನವನ್ನು ಕರ್ತನಿಗೆ ಒದಗಿಸುವನು ಎಂದು ಹೇಳಿದನು. 18ಜಕರೀಯನು ಆ ದೂತನಿಗೆ - ಇದನ್ನು ನಾನು ಯಾತರಿಂದ ತಿಳುಕೊಳ್ಳಲಿ? ನಾನು ಮುದುಕನು; ನನ್ನ ಹೆಂಡತಿಯೂ ದಿನಹೋದವಳು ಎಂದು ಹೇಳಿದ್ದಕ್ಕೆ 19ಆ ದೂತನು - ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನ ಕೂಡ ಮಾತಾಡಿ ಈ ಶುಭವರ್ತಮಾನವನ್ನು ನಿನಗೆ ತಿಳಿಸುವದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ. 20ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವದು; ಆದರೆ ನೀನು ಅದನ್ನು ನಂಬದೆಹೋದದ್ದರಿಂದ ಅದೆಲ್ಲಾ ಸಂಭವಿಸುವ ದಿನದವರೆಗೂ ಮಾತನಾಡಲಾರದೆ ಮೂಕನಾಗಿರುವಿ ಎಂದು ಅವನಿಗೆ ಉತ್ತರಕೊಟ್ಟನು. 21ಇಷ್ಟರೊಳಗೆ ಜನರು ಜಕರೀಯನನ್ನು ಕಾದುಕೊಂಡಿದ್ದು ಅವನು ದೇವಾಲಯದೊಳಗೆ ತಡಮಾಡಿದ್ದಕ್ಕೆ ಆಶ್ಚರ್ಯಪಟ್ಟರು. 22ಅವನು ಹೊರಗೆ ಬಂದಾಗ ಅವರ ಕೂಡ ಏನೂ ಮಾತಾಡಲಾರದೆ ಇರಲು ಅವರು - ಇವನಿಗೆ ದೇವಾಲಯದಲ್ಲಿ ಏನೋ ದಿವ್ಯದರ್ಶನವಾಗಿರಬೇಕು ಎಂದು ತಿಳುಕೊಂಡರು. ಅವನು ಅವರಿಗೆ ಕೈಸನ್ನೆ ಮಾಡುತ್ತಾ ಮೂಕನಾಗಿಯೇ ಇದ್ದನು. 23ಅವನ ಯಾಜಕವರ್ಗದ ದಿನಗಳು ತೀರಿದ ನಂತರ ಅವನು ತನ್ನ ಮನೆಗೆ ಹೋದನು.
24ಆ ದಿವಸಗಳಾದ ಮೇಲೆ ಅವನ ಹೆಂಡತಿಯಾದ ಎಲಿಸಬೇತಳು ಬಸುರಾಗಿ ಐದು ತಿಂಗಳು ಮನೆಯಲ್ಲೇ ಮರೆಯಾಗಿದ್ದು - 25ಕರ್ತನು ಈ ಕಾಲದಲ್ಲಿ ನನ್ನನ್ನು ಪರಾಮರಿಸಿ ನನಗೆ ಈ ರೀತಿಯಾಗಿ ಮಾಡಿ ಜನರಲ್ಲಿ ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನಲ್ಲಾ ಅನ್ನುತ್ತಿದ್ದಳು.
ದೇವದೂತನು ಯೇಸುವಿನ ಜನನವನ್ನು ಮುಂತಿಳಿಸಿದ್ದು
26ಆರನೆಯ ತಿಂಗಳಲ್ಲಿ ದೇವರು ಗಬ್ರಿಯೇಲನೆಂಬ ತನ್ನ ದೂತನನ್ನು ಗಲಿಲಾಯ ಸೀಮೆಯ ನಜರೇತೆಂಬ ಊರಿಗೆ ಒಬ್ಬ ಕನ್ಯೆಯ ಬಳಿಗೆ ಕಳುಹಿಸಿದನು; 27ಆ ಕನ್ಯೆಯ ಹೆಸರು ಮರಿಯಳು; ಆಕೆಯು ದಾವೀದನ ಮನೆತನದ ಯೋಸೇಫನೆಂಬ ಪುರುಷನಿಗೆ ನಿಶ್ಚಿತಾರ್ಥವಾಗಿದ್ದಳು. 28ಆ ದೂತನು ಆಕೆಯ ಬಳಿಗೆ ಬಂದು - ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ; ಕರ್ತನು ನಿನ್ನ ಸಂಗಡ ಇದ್ದಾನೆ ಅಂದನು. 29ಆಕೆಯು ಆ ಮಾತಿಗೆ ತತ್ತರಿಸಿ - ಇದೆಂಥ ಆಶೀರ್ವಾದ ಎಂದು ಯೋಚನೆಮಾಡುತ್ತಿರಲಾಗಿ 30ಆ ದೂತನು ಆಕೆಗೆ - ಮರಿಯಳೇ, ಹೆದರಬೇಡ; ನಿನಗೆ ದೇವರ ದಯೆ ದೊರಕಿತು. 31ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. 32ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು. 33ಆತನು ಯಾಕೋಬನ ವಂಶವನ್ನು ಸದಾಕಾಲ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು. 34ಮರಿಯಳು ಆ ದೂತನನ್ನು - ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ ಎಂದು ಕೇಳಿದ್ದಕ್ಕೆ ದೂತನು - 35ನಿನ್ನ ಮೇಲೆ ಪವಿತ್ರಾತ್ಮ ಬರುವದು; ಪರಾತ್ಪರನ ಶಕ್ತಿಯ ನೆರಳು ನಿನ್ನ ಮೇಲೆ ಬೀಳುವದು; ಆದದರಿಂದ ಹುಟ್ಟುವ ಆ ಪವಿತ್ರ ಶಿಶು ದೇವರ ಮಗನೆನಿಸಿಕೊಳ್ಳುವದು. 36ಮತ್ತು ನಿನ್ನ ಬಂಧುವಾದ ಎಲಿಸಬೇತಳಿದ್ದಾಳಲ್ಲಾ, ಆಕೆ ಸಹ ಮುಪ್ಪಿನವಳಾದರೂ ಗರ್ಭಿಣಿಯಾಗಿದ್ದಾಳೆ; ಆಕೆಯ ಗರ್ಭದಲ್ಲಿ ಗಂಡುಮಗುವದೆ; ಬಂಜೆಯೆನಿಸಿಕೊಂಡಿದ್ದ ಆಕೆಗೆ ಇದೇ ಆರನೆಯ ತಿಂಗಳು. 37ದೇವರಿಂದ#1.37 ಅಥವಾ: ಯಾವ ಕಾರ್ಯವೂ ದೇವರಿಗೆ ಅಸಾಧ್ಯವಲ್ಲ. ಆದಿ. 18.14; ರೋಮಾ. 4.21 ನೋಡಿರಿ. ಬರುವ ಯಾವ ಮಾತಾದರೂ ನಿಷ್ಫಲವಾಗುವದಿಲ್ಲ ಅಂದನು. 38ಆಗ ಮರಿಯಳು - ಇಗೋ, ನಾನು ಕರ್ತನ ದಾಸಿ; ನಿನ್ನ ಮಾತಿನಂತೆ ನನಗಾಗಲಿ ಅಂದಳು. ಆಮೇಲೆ ಆ ದೂತನು ಆಕೆಯ ಬಳಿಯಿಂದ ಹೊರಟುಹೋದನು.
ಯೇಸುವಿನ ತಾಯಿಯಾದ ಮರಿಯಳು ಯೋಹಾನನ ತಾಯಿಗೆ ಭೇಟಿಕೊಟ್ಟದ್ದು, ಮತ್ತು ದೇವರನ್ನು ಕೊಂಡಾಡಿದ್ದು
39ಆ ಕಾಲದಲ್ಲಿ ಮರಿಯಳು ಎದ್ದು ಅವಸರದಿಂದ ಮಲೆನಾಡಿಗೆ ಹೊರಟು ಯೆಹೂದದಲ್ಲಿರುವ ಒಂದೂರಿಗೆ ಹೋಗಿ 40ಜಕರೀಯನ ಮನೆಯನ್ನು ಸೇರಿ ಎಲಿಸಬೇತಳಿಗೆ ವಂದಿಸಿದಳು. 41ಎಲಿಸಬೇತಳು ಮರಿಯಳ ವಂದನೆಯನ್ನು ಕೇಳುತ್ತಲೇ ಆಕೆಯ ಗರ್ಭದಲ್ಲಿದ್ದ ಕೂಸು ಹಾರಾಡಿತು. 42ಮತ್ತು ಎಲಿಸಬೇತಳು ಪವಿತ್ರಾತ್ಮಭರಿತಳಾಗಿ ಮಹಾಧ್ವನಿಯಿಂದ ಕೂಗಿ - ನೀನು ಸ್ತ್ರೀಯರೊಳಗೆ ಆಶೀರ್ವಾದ ಹೊಂದಿದವಳು ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು. 43ನನ್ನ ಸ್ವಾವಿುಯ ತಾಯಿಯು ನನ್ನ ಬಳಿಗೆ ಬರುವಷ್ಟು ಭಾಗ್ಯ ನನಗೆ ಎಲ್ಲಿಂದಾಯಿತು? 44ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಉಲ್ಲಾಸದಿಂದ ಹಾರಾಡಿತು. 45ನಂಬಿದವಳಾದ ನೀನು ಧನ್ಯಳೇ; ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು ಅಂದಳು. 46ಆಗ ಮರಿಯಳು ಹೇಳಿದ್ದೇನಂದರೆ -
ನನ್ನ ಪ್ರಾಣವು ಕರ್ತನನ್ನು ಕೊಂಡಾಡುತ್ತದೆ,
47ನನ್ನ ಆತ್ಮವು ನನ್ನ ರಕ್ಷಕನಾದ ದೇವರ ವಿಷಯದಲ್ಲಿ ಉಲ್ಲಾಸಗೊಂಡದೆ.
48ಆತನು ತನ್ನ ದಾಸಿಯ ದೀನಸ್ಥಿತಿಯ ಮೇಲೆ ಲಕ್ಷ್ಯವಿಟ್ಟಿದ್ದಾನೆ.
ಇಗೋ, ಇಂದಿನಿಂದ ತಲತಲಾಂತರದವರೆಲ್ಲಾ ನನ್ನನ್ನು ಧನ್ಯಳೆಂದು ಹೊಗಳುವರು.
49ಶಕ್ತನಾಗಿರುವಾತನು ನನಗೆ ದೊಡ್ಡ ಉಪಕಾರಗಳನ್ನು ಮಾಡಿದ್ದಾನೆ; ಆತನ ನಾಮವು ಪರಿಶುದ್ಧವಾದದ್ದು.
50ಆತನಲ್ಲಿ ಭಯಭಕ್ತಿಯುಳ್ಳವರ ಮೇಲೆ ಆತನ ದಯವು ತಲತಲಾಂತರದವರೆಗೂ ಇರುವದು.
51ಆತನು ತನ್ನ ಭುಜಪರಾಕ್ರಮವನ್ನು ತೋರಿಸಿ ಸೊಕ್ಕಿದ ಮನಸ್ಸುಳ್ಳವರನ್ನು ಚದರಿಸಿಬಿಟ್ಟಿದ್ದಾನೆ.
52ಪ್ರಭುಗಳನ್ನು ಸಿಂಹಾಸನಗಳಿಂದ ದೊಬ್ಬಿ ದೀನಸ್ಥಿತಿಯವರನ್ನು ಉನ್ನತಸ್ಥಿತಿಗೆ ತಂದಿದ್ದಾನೆ.
53ಹಸಿದವರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ ಸ್ಥಿತಿವಂತರನ್ನು ಬರಿಗೈಯಲ್ಲಿ ಕಳುಹಿಸಿಬಿಟ್ಟಿದ್ದಾನೆ.
54-55ಆತನು ನಮ್ಮ ಪೂರ್ವಿಕರಿಗೆ ಹೇಳಿದ್ದಕ್ಕೆ ಸರಿಯಾಗಿ
ಅಬ್ರಹಾಮನಿಗೂ ಅವನ ವಂಶದವರಿಗೂ ಯಾವಾಗಲೂ ದಯೆ ತೋರಿಸಬೇಕೆಂಬದನ್ನು ನೆನಸಿಕೊಂಡು
ತನ್ನ ಸೇವಕನಾದ ಇಸ್ರಾಯೇಲನನ್ನು ಕೈಹಿಡಿದಿದ್ದಾನೆ
ಅಂದಳು. 56ಮರಿಯಳು ಹೆಚ್ಚು ಕಡಿಮೆ ಮೂರು ತಿಂಗಳು ಎಲಿಸಬೇತಳ ಬಳಿಯಲ್ಲಿದ್ದು ತನ್ನ ಮನೆಗೆ ಹಿಂತಿರುಗಿಹೋದಳು.
ಸ್ನಾನಿಕನಾದ ಯೋಹಾನನ ಜನನವೂ ನಾಮಕರಣವೂ. ಅವನ ತಂದೆಯು ದೇವರನ್ನು ಕೊಂಡಾಡಿದ್ದು
57ಎಲಿಸಬೇತಳು ದಿನತುಂಬಿ ಗಂಡು ಮಗುವನ್ನು ಹೆತ್ತಳು. 58ಆಕೆಯ ನೆರೆಹೊರೆಯವರೂ ಬಂಧುಬಾಂಧವರೂ ಆಕೆಯ ಮೇಲೆ ಕರ್ತನು ತನ್ನ ದಯವನ್ನು ವಿಶೇಷವಾಗಿ ತೋರಿಸಿದ್ದಾನೆಂಬದನ್ನು ಕೇಳಿ ಆಕೆಯ ಕೂಡ ಸಂತೋಷಪಟ್ಟರು. 59ಎಂಟನೆಯ ದಿನದಲ್ಲಿ ಅವರು ಆ ಮಗುವಿಗೆ ಸುನ್ನತಿಮಾಡುವದಕ್ಕಾಗಿ ಬಂದು ಅದಕ್ಕೆ ಜಕರೀಯನೆಂದು ತಂದೆಯ ಹೆಸರನ್ನು ಇಡಬೇಕೆಂದಿದ್ದರು. 60ಈ ವಿಷಯದಲ್ಲಿ ಅದರ ತಾಯಿಯು - ಅದು ಬೇಡ, ಯೋಹಾನನೆಂದು ಹೆಸರಿಡಬೇಕು ಅನ್ನಲು 61ಅವರು - ನಿನ್ನ ಬಂಧುಬಾಂಧವರಲ್ಲಿ ಈ ಹೆಸರಿನವರು ಒಬ್ಬರಾದರೂ ಇಲ್ಲವಲ್ಲಾ ಎಂದು ಆಕೆಗೆ ಹೇಳಿ 62ಇದಕ್ಕೆ ಏನು ಹೆಸರಿಡಬೇಕೆಂದಿರುತ್ತೀ ಎಂಬದಾಗಿ ತಂದೆಗೆ ಸನ್ನೆ ಮಾಡಿದರು. 63ಅವನು ಒಂದು ಹಲಿಗೆಯನ್ನು ತರಿಸಿಕೊಂಡು - ಯೋಹಾನನೆಂತಲೇ ಅದರ ಹೆಸರು ಎಂದು ಬರೆದನು. ಅದಕ್ಕೆ ಎಲ್ಲರೂ ಆಶ್ಚರ್ಯಪಟ್ಟರು. 64ಕೂಡಲೆ ಅವನಿಗೆ ಬಾಯಿ ಬಂತು, ನಾಲಿಗೆ ಸಡಿಲವಾಯಿತು, ಅವನು ಮಾತಾಡುವ ಶಕ್ತಿಯುಳ್ಳವನಾಗಿ ದೇವರನ್ನು ಕೊಂಡಾಡಿದನು. 65ಇದನ್ನು ಕೇಳಿದ ನೆರೆಹೊರೆಯವರಿಗೆಲ್ಲಾ ಹೆದರಿಕೆಯುಂಟಾಯಿತು; ಮತ್ತು ಈ ಎಲ್ಲಾ ಸಂಗತಿಗಳನ್ನು ಕುರಿತು ಯೂದಾಯದ ಮಲೆನಾಡಿನಲ್ಲೆಲ್ಲಾ ಮಾತಾಡಿಕೊಳ್ಳುತ್ತಿದ್ದರು. 66ಕೇಳಿದವರೆಲ್ಲರೂ - ಆಹಾ, ಈ ಕೂಸು ಎಂಥವನಾಗುವನೋ ಎಂದು ಈ ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡರು ಮತ್ತು ಕರ್ತನ ಹಸ್ತವು ಅದರ ಮೇಲೆ ಇತ್ತು.
67ಇದಲ್ಲದೆ ಆ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಪ್ರವಾದನವಚನವನ್ನು ನುಡಿದದ್ದೇನಂದರೆ -
68-70ಇಸ್ರಾಯೇಲ್ ಜನರ ದೇವರಾಗಿರುವ ಕರ್ತನಿಗೆ ಸ್ತೋತ್ರವು;
ಆತನು ಪೂರ್ವದಲ್ಲಿದ್ದ ತನ್ನ ಶ್ರೀಪ್ರವಾದಿಗಳ ಬಾಯಿಂದ ತಾನು ಹೇಳಿದಂತೆಯೇ
ತನ್ನ ಪ್ರಜೆಯನ್ನು ಪರಾಮರಿಸಿ ಅವರಿಗೆ ಬಿಡುಗಡೆಯನ್ನುಂಟುಮಾಡಿದ್ದಾನೆ;
ತನ್ನ ಸೇವಕನಾದ ದಾವೀದನ ಮನೆತನದಲ್ಲಿ ನಮಗೋಸ್ಕರ ಒಬ್ಬ#1.68-70 ಮೂಲ: ರಕ್ಷಣೆಯ ಕೊಂಬನ್ನು. ರಕ್ಷಣವೀರನನ್ನು ಎಬ್ಬಿಸಿದ್ದಾನೆ.
71-73ಆತನು ನಮ್ಮ ಪಿತೃಗಳಿಗೆ ದಯೆಯನ್ನು ತೋರಿಸುವವನಾಗಿಯೂ
ನಮ್ಮ ಮೂಲ ಪಿತೃವಾದ ಅಬ್ರಹಾಮನಿಗೆ ಪ್ರಮಾಣಮಾಡಿಕೊಟ್ಟ ತನ್ನ ಪರಿಶುದ್ಧವಾದ ಒಡಂಬಡಿಕೆಯನ್ನು ನೆನಸಿಕೊಳ್ಳುವವನಾಗಿಯೂ ಇದ್ದು
ನಮ್ಮ ವೈರಿಗಳಿಂದಲೂ ನಮ್ಮನ್ನು ದ್ವೇಷಿಸುವವರೆಲ್ಲರ ಕೈಯಿಂದಲೂ ನಮ್ಮನ್ನು ತಪ್ಪಿಸಿ ರಕ್ಷಿಸಿದ್ದಾನೆ.
74-75ಹೀಗೆ ನಾವು ನಮ್ಮ ವೈರಿಗಳ ಕೈಯಿಂದ ಬಿಡುಗಡೆಹೊಂದಿ ಭಯವಿಲ್ಲದವರಾಗಿದ್ದು
ನಮ್ಮ ಜೀವಮಾನದಲ್ಲೆಲ್ಲಾ ನಿರ್ಮಲ ಚಿತ್ತದಿಂದಲೂ ನೀತಿಯಿಂದಲೂ
ತನ್ನ ಸನ್ನಿಧಿಯಲ್ಲಿ ಸೇವೆಮಾಡುವಂತೆ ನಮಗೆ ಅನುಕೂಲಮಾಡಿದ್ದಾನೆ.
76ಮಗುವೇ, ನೀನಾದರೋ ಪರಾತ್ಪರನ ಪ್ರವಾದಿಯೆನಿಸಿಕೊಳ್ಳುವಿ.
ನೀನು ಕರ್ತನ ಮುಂದೆ ಹೋಗಿ ಆತನ ಹಾದಿಗಳನ್ನು ಸಿದ್ಧಮಾಡುವವನಾಗಿಯೂ
77-78ನಮ್ಮ ದೇವರು ಅತ್ಯಂತಕರುಣೆಯಿಂದ ದಯಪಾಲಿಸುವ ಪಾಪಪರಿಹಾರವೆಂಬ ರಕ್ಷಣೆಯ ತಿಳುವಳಿಕೆಯನ್ನು ಆತನ ಪ್ರಜೆಗೆ ಕೊಡುವವನಾಗಿಯೂ ಇರುವಿ.
ಆ ಕರುಣೆಯಿಂದಲೇ ನಮಗೆ ಮೇಲಿನಿಂದ ಅರುಣೋದಯವು ಉಂಟಾಗಿ
79ಕತ್ತಲಲ್ಲಿಯೂ ಮರಣಾಂಧಕಾರದಲ್ಲಿಯೂ ವಾಸಿಸಿರುವವರಾದ ನಮಗೆ ಪ್ರಕಾಶ ಕೊಟ್ಟು
ನಮ್ಮ ಕಾಲುಗಳನ್ನು ಸಮಾಧಾನದ#1.79 ಅಥವಾ: ಸುಕ್ಷೇಮದ. ಮಾರ್ಗದಲ್ಲಿ ಸೇರಿಸಿ ನಡಿಸುವದು
ಅಂದನು. 80ಆ ಬಾಲಕನು ಬೆಳೆದು ಆತ್ಮದಲ್ಲಿ ಬಲವುಳ್ಳವನಾದನು ಮತ್ತು ಇಸ್ರಾಯೇಲ್ ಜನರಿಗೆ ತನ್ನನ್ನು ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯ ಪ್ರದೇಶಗಳಲ್ಲಿ ಇದ್ದನು.

Currently Selected:

ಲೂಕ 1: KANJV-BSI

Highlight

Share

Copy

None

Want to have your highlights saved across all your devices? Sign up or sign in