ಮಾರ್ಕ 16
16
ಸ್ತ್ರೀಯರು ಯೇಸುವಿನ ಸಮಾಧಿಯು ಖಾಲಿಯಾಗಿರುವದನ್ನು ಕಂಡು ದೂತರ ದರ್ಶನವನ್ನು ನೋಡಿದ್ದು
(ಮತ್ತಾ. 28.1-8; ಲೂಕ. 24.1-10; ಯೋಹಾ. 20.1)
1ಸಬ್ಬತ್‍ದಿನ ಕಳೆದ ಮೇಲೆ, ಮಗ್ದಲದ ಮರಿಯಳೂ ಯಾಕೋಬನ ತಾಯಿ ಮರಿಯಳೂ ಸಲೋಮೆಯೂ ಆತನ ದೇಹಕ್ಕೆ ಹಚ್ಚುವದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡರು. 2ಮತ್ತು ವಾರದ ಮೊದಲನೆಯ ದಿನದ ಬೆಳಿಗ್ಗೆ ಹೊತ್ತು ಮೂಡುವಾಗ ಅವರು ಸಮಾಧಿಯ ಬಳಿಗೆ ಬಂದರು. 3ಸಮಾಧಿಗೆ ಮುಚ್ಚಿದ್ದ ಕಲ್ಲು ಬಹಳ ದೊಡ್ಡದಾಗಿದ್ದದರಿಂದ ಅವರು - ಸಮಾಧಿಯ ಬಾಗಿಲಿಂದ ಆ ಕಲ್ಲನ್ನು ನಮಗೋಸ್ಕರ ಉರುಳಿಸುವವರು ಯಾರಿದ್ದಾರೆ ಎಂದು ತಮ್ಮತಮ್ಮೊಳಗೆ ಮಾತಾಡಿಕೊಳ್ಳುತ್ತಾ ಇರಲಾಗಿ 4ತಲೆಯೆತ್ತಿ ನೋಡಿ ಆ ಕಲ್ಲು ಉರುಳಿಸಲ್ಪಟ್ಟಿರುವದನ್ನು ಕಂಡರು. 5ಅವರು ಸಮಾಧಿಯೊಳಕ್ಕೆ ಹೋಗಿ ಒಬ್ಬ ಯೌವನಸ್ಥನು ಬಿಳೀ ಅಂಗಿಯನ್ನು ತೊಟ್ಟುಕೊಂಡು ಬಲಗಡೆ ಕೂತಿರುವದನ್ನು ಕಂಡು ಬೆಚ್ಚಿ ಬೆರಗಾದರು. 6ಅವನು ಅವರಿಗೆ - ಬೆರಗಾಗಬೇಡಿರಿ. ಶಿಲುಬೆಗೆ ಹಾಕಲ್ಪಟ್ಟಿದ್ದ ನಜರೇತಿನ ಯೇಸುವನ್ನು ಹುಡುಕುತ್ತೀರಲ್ಲವೇ. ಆತನು ಜೀವಿತನಾಗಿ ಎದ್ದಿದ್ದಾನೆ; ಇಲ್ಲಿ ಇಲ್ಲ. ಆತನನ್ನು ಇಟ್ಟಿದ್ದ ಸ್ಥಳವು ಇದೇ, ನೋಡಿರಿ. 7ಆದರೆ ನೀವು ಹೋಗಿ ಆತನ ಶಿಷ್ಯರಿಗೂ ಪೇತ್ರನಿಗೂ - ಆತನು ನಿಮಗೆ ಹೇಳಿದಂತೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ, ಅಲ್ಲಿ ಆತನನ್ನು ಕಾಣುವಿರಿ ಎಂದು ತಿಳಿಸಿರಿ ಎಂದು ಹೇಳಿದನು. 8ಅವರು ಭ್ರಮೆಹಿಡಿದವರಾಗಿ ನಡುಗುತ್ತಾ ಹೊರಕ್ಕೆ ಬಂದು ಸಮಾಧಿಯ ಬಳಿಯಿಂದ ಓಡಿಹೋದರು; ಅವರು ಹೆದರಿಕೊಂಡದರಿಂದ ಯಾರಿಗೂ ಏನೂ ಹೇಳಲಿಲ್ಲ.
ಯೇಸು ಜೀವಿತನಾಗಿ ಎದ್ದ ಮೇಲೆ ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು
9[ವಾರದ ಮೊದಲನೆಯ ದಿನ ಬೆಳಿಗ್ಗೆ ಯೇಸು ಜೀವಿತನಾಗಿ ಎದ್ದ ಮೇಲೆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. ಆಕೆಗೆ ಏಳು ದೆವ್ವಗಳನ್ನು ಬಿಡಿಸಿದ್ದನು. 10ಆಕೆ ಹೋಗಿ ಆತನು ಕಾಣಿಸಿಕೊಂಡದ್ದನ್ನು ಮುಂಚೆ ಆತನ ಜೊತೆಯಲ್ಲಿದ್ದವರಿಗೆ ತಿಳಿಸಿದಳು; ಇವರು ಹಂಬಲಿಸುತ್ತಾ ಅಳುತ್ತಾ ಕೂತಿದ್ದರು. 11ಆತನು ಬದುಕಿದ್ದಾನೆ, ನನಗೆ ಕಾಣಿಸಿಕೊಂಡನು ಎಂಬ ಮಾತನ್ನು ಕೇಳಿದಾಗ ಅವರು ನಂಬಲಿಲ್ಲ.
12ಇದಾದ ಮೇಲೆ ಶಿಷ್ಯರಲ್ಲಿ ಇಬ್ಬರು ಒಂದು ಹಳ್ಳಿಗೆ ನಡಕೊಂಡು ಹೋಗುತ್ತಿದ್ದಾಗ ಆತನು ಅವರಿಗೆ ರೂಪಾಂತರದಿಂದ ಕಾಣಿಸಿಕೊಂಡನು. 13ಅವರು ಹೋಗಿ ಉಳಿದವರಿಗೆ ತಿಳಿಸಿದರು. ಆದರೆ ಅವರನ್ನೂ ನಂಬಲಿಲ್ಲ.
14ತರುವಾಯ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕೂತಿದ್ದಾಗ ಆತನು ಅವರಿಗೂ ಕಾಣಿಸಿಕೊಂಡನು. ತಾನು ಜೀವಿತನಾಗಿ ಎದ್ದು ಬಂದ ಮೇಲೆ ತನ್ನನ್ನು ಕಂಡವರ ಮಾತನ್ನು ಅವರು ನಂಬಲಿಲ್ಲವಾದ ಕಾರಣ ಆತನು ಅವರ ಅಪನಂಬಿಕೆಗೂ ಅವರ ಮನಸ್ಸಿನ ಕಾಠಿಣ್ಯಕ್ಕೂ ಅವರನ್ನು ಗದರಿಸಿದನು. 15ಆಮೇಲೆ ಅವರಿಗೆ - ನೀವು ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಿರಿ. 16ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವವನು ರಕ್ಷಣೆಹೊಂದುವನು; ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು. 17ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು; ಹೊಸಭಾಷೆಗಳಿಂದ ಮಾತಾಡುವರು; ಹಾವುಗಳನ್ನು ಎತ್ತುವರು; 18ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ; ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಗುಣವಾಗುವದು ಎಂದು ಹೇಳಿದನು.
19ಯೇಸುಸ್ವಾವಿುಯು ಅವರ ಕೂಡ ಮಾತಾಡಿದ ಮೇಲೆ ಆಕಾಶಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು. 20ಇತ್ತಲಾಗಿ ಅವರು ಹೊರಟುಹೋಗಿ ಎಲ್ಲೆಲ್ಲಿಯೂ ಸುವಾರ್ತೆಯನ್ನು ಸಾರಿದರು; ಮತ್ತು ಕರ್ತನು ಅವರ ಕೂಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳಿಂದ ಸುವಾರ್ತೆಯ ವಾಕ್ಯವನ್ನು ಬಲಪಡಿಸುತ್ತಾ ಇದ್ದನು.]#16.20 9ನೆಯ ವಚನದಿಂದ 20ನೆಯ ವಚನದ ಪರ್ಯಂತರ ಬರೆದಿರುವ ಮಾತುಗಳು ಕೆಲವು ಪುರಾತನ ಪ್ರತಿಗಳಲ್ಲಿ ಇಲ್ಲ. ಕೆಲವು ಪ್ರತಿಗಳಲ್ಲಿ ಅವುಗಳಿಗೆ ಬದಲಾಗಿ ಬೇರೊಂದು ಸಮಾಪ್ತಿ ವಾಕ್ಯವು ಉಂಟು; ಅದೇನಂದರೆ - ಆದರೆ ತಮಗೆ ಆಜ್ಞಾಪಿಸಲ್ಪಟ್ಟ ಮಾತುಗಳನ್ನೆಲ್ಲಾ ಪೇತ್ರನ ಸಂಗಡವಿದ್ದವರಿಗೆ ಸಂಕ್ಷಿಪ್ತವಾಗಿ ತಿಳಿಸಿದರು. ತರುವಾಯ ಯೇಸು ತಾನೇ ನಿರಂತರವಾದ ರಕ್ಷಣೆಯನ್ನು ತಿಳಿಸುವ ಲಯವಾಗದ ದಿವ್ಯ ಪ್ರಕಟಣೆಯನ್ನು ಪೂರ್ವದಿಂದ ಪಶ್ಚಿಮದವರೆಗೂ ಇವರ ಮುಖಾಂತರ ಪ್ರಚುರಪಡಿಸಿದನು.
Currently Selected:
ಮಾರ್ಕ 16: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.