YouVersion Logo
Search Icon

ಆದಿಕಾಂಡ 27

27
ಯಾಕೋಬನು ತನ್ನ ಅಣ್ಣನಿಗೆ ಆಗಬೇಕಾದ ಆಶೀರ್ವಾದವನ್ನು ಮೋಸದಿಂದ ಪಡಕೊಂಡದ್ದು
1ಇಸಾಕನಿಗೆ ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮೊಬ್ಬಾಗಿರಲು ತನ್ನ ಹಿರೀ ಮಗನಾದ ಏಸಾವನನ್ನು ಕರೆದು - ಮಗನೇ ಅನ್ನಲು ಏಸಾವನು - ಇದ್ದೇನೆ ಅಂದನು. 2ಇಸಾಕನು ಅವನಿಗೆ - ನಾನು ಮುದುಕನಾದೆನಷ್ಟೆ; ಯಾವಾಗ ಸಾಯುವೆನೋ ಗೊತ್ತಿಲ್ಲ; 3ಆದದರಿಂದ ನೀನು ಬಿಲ್ಲುಬತ್ತಳಿಕೆ ಮುಂತಾದ ಆಯುಧಗಳನ್ನು ತೆಗೆದುಕೊಂಡು ಕಾಡಿಗೆ ಹೋಗಿ ಬೇಟೆಯಾಡಿ 4ಬೇಟೇ ಮಾಂಸದಿಂದ ನನಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನನ್ನ ಊಟಕ್ಕೆ ಸಿದ್ಧಪಡಿಸಿಕೊಡು; ಸಾವು ಬರುವದಕ್ಕಿಂತ ಮುಂಚೆ ನಾನು ನಿನ್ನನ್ನು ಆಶೀರ್ವದಿಸುತ್ತೇನೆ ಎಂದು ಹೇಳಿದನು. 5ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿತ್ತು. 6ಏಸಾವನು ಬೇಟೆಯಾಡುವದಕ್ಕೆ ಕಾಡಿಗೆ ಹೋಗಿದ್ದಾಗ ರೆಬೆಕ್ಕಳು ತನ್ನ ಮಗನಾದ ಯಾಕೋಬನನ್ನು ಬೋಧಿಸಿ - ನಿನ್ನ ತಂದೆಯು ನಿನ್ನಣ್ಣನಾದ ಏಸಾವನ ಸಂಗಡ ಮಾತಾಡಿ - 7ನೀನು ಹೋಗಿ ಬೇಟೆಯಾಡಿ ಬೇಟೇ ಮಾಂಸದಿಂದ ನನ್ನ ಊಟಕ್ಕೆ ರುಚಿಪದಾರ್ಥವನ್ನು ಸಿದ್ಧಮಾಡು; ಸಾವು ಬರುವದಕ್ಕಿಂತ ಮುಂಚೆ ನಾನು ನಿನ್ನನ್ನು ಯೆಹೋವನ ಸನ್ನಿಧಿಯಲ್ಲಿ ಆಶೀರ್ವದಿಸುತ್ತೇನೆಂದು ಹೇಳುವದನ್ನು ಕೇಳಿದೆನು. 8ಆದದರಿಂದ ಮಗನೇ, ನೀನು ನನ್ನ ಮಾತಿಗೆ ಕಿವಿಗೊಟ್ಟು ನನ್ನಪ್ಪಣೆಯಂತೆ ಮಾಡು. 9ಆಡಿನ ಹಿಂಡಿಗೆ ಹೋಗಿ ಎರಡು ಒಳ್ಳೇ ಆಡಿನ ಮರಿಗಳನ್ನು ಬೇಗ ತೆಗೆದುಕೊಂಡು ಬಾ; ಅವುಗಳಿಂದ ನಿನ್ನ ತಂದೆಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನಾನೇ ಸಿದ್ಧಮಾಡುತ್ತೇನೆ; 10ನೀನು ಅದನ್ನು ಅವನ ಬಳಿಗೆ ತೆಗೆದುಕೊಂಡು ಹೋಗಿ ಬಡಿಸಬೇಕು; ಹೀಗೆ ಮಾಡಿದರೆ ಅವನು ಸಾಯುವದಕ್ಕಿಂತ ಮೊದಲು ನಿನ್ನನ್ನೇ ಆಶೀರ್ವದಿಸುವನು ಅಂದಳು. 11ಅದಕ್ಕೆ ಯಾಕೋಬನು - ನನ್ನ ಅಣ್ಣನ ಮೈ ಬಹಳ ರೋಮವುಳ್ಳದ್ದು, ನನ್ನ ಮೈ ನುಣ್ಣಗದೆ; 12ಒಂದು ವೇಳೆ ತಂದೆಯು ನನ್ನನ್ನು ಮುಟ್ಟಿ ನೋಡಿದರೆ ನಾನು ಅವನಿಗೆ ಗೇಲಿಮಾಡುವವನಾಗಿ ತೋರಿಬಂದು ನನ್ನ ಮೇಲೆ ಶಾಪವನ್ನು ಬರಮಾಡಿಕೊಳ್ಳುವೆನೇ ಹೊರತು ಆಶೀರ್ವಾದವನ್ನು ಬರಮಾಡಿಕೊಳ್ಳುವದಿಲ್ಲ ಅನ್ನಲು 13ಅವನ ತಾಯಿ - ಮಗನೇ, ಅವನು ನಿನಗೆ ಶಾಪಕೊಟ್ಟರೆ ಆ ಶಾಪ ನನಗಿರಲಿ; ನೀನು ನನ್ನ ಮಾತನ್ನು ಕೇಳಿ ಆ ಮರಿಗಳನ್ನು ತೆಗೆದುಕೊಂಡು ಬಾ ಎಂದು ಹೇಳಲು 14ಅವನು ಹೋಗಿ ಅವುಗಳನ್ನು ತಂದು ತಾಯಿಗೆ ಕೊಟ್ಟನು. ರೆಬೆಕ್ಕಳು ಅವನ ತಂದೆಗೆ ಇಷ್ಟವಾಗಿದ್ದ 15ಸವಿಯೂಟವನ್ನು ಸಿದ್ಧಪಡಿಸಿದ ಮೇಲೆ ಮನೆಯಲ್ಲಿ ತನ್ನ ವಶದಲ್ಲಿದ್ದ ಹಿರೀಮಗನಾದ ಏಸಾವನ ಶ್ರೇಷ್ಠ ವಸ್ತ್ರಗಳನ್ನು ತೆಗೆದು ತನ್ನ ಕಿರೀಮಗನಾದ ಯಾಕೋಬನಿಗೆ ಹೊದ್ದಿಸಿ 16ಆ ಆಡಿನ ಮರಿಗಳ ಚರ್ಮಗಳನ್ನು ಅವನ ಕೈಗಳಿಗೂ ನುಣುಪಾದ ಕೊರಳಿಗೂ ಸುತ್ತಿ ತಾನು ಸಿದ್ಧಮಾಡಿದ್ದ ರುಚಿಪದಾರ್ಥವನ್ನೂ ರೊಟ್ಟಿಯನ್ನೂ 17ತನ್ನ ಮಗನಾದ ಯಾಕೋಬನ ಕೈಗೆ ಕೊಟ್ಟಳು. 18ಅವನು ತಂದೆಯ ಬಳಿಗೆ ಹೋಗಿ - ಅಪ್ಪಾ ಎಂದು ಹೇಳಲು ತಂದೆಯು - ಏನು ಮಗನೇ, ನೀನು ಯಾರು ಎಂದು ಕೇಳಿದನು. 19ಯಾಕೋಬನು ಅವನಿಗೆ - ನಾನು ನಿನ್ನ ಹಿರೀ ಮಗನಾದ ಏಸಾವನು; ನಿನ್ನ ಅಪ್ಪಣೆಯಂತೆ ಮಾಡಿಕೊಂಡು ಬಂದಿದ್ದೇನೆ. ಎದ್ದು ಕೂತುಕೊಂಡು ನಾನು ತಂದಿರುವ ಬೇಟೇ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸು ಎಂದು ಹೇಳಲು ಇಸಾಕನು - 20ಏನು ಮಗನೇ, ಇಷ್ಟು ಬೇಗ ಹೇಗೆ ಸಿಕ್ಕಿತು ಎಂದು ಕೇಳಿದ್ದಕ್ಕೆ ಅವನು - ನಿನ್ನ ದೇವರಾದ ಯೆಹೋವನು ಅದನ್ನು ನನ್ನೆದುರಿಗೆ ಬರಮಾಡಿದನು ಅಂದನು. ಇಸಾಕನು ಅವನಿಗೆ - 21ಕಂದಾ, ನನ್ನ ಬಳಿಗೆ ಬಾ; ನೀನು ನನ್ನ ಮಗನಾದ ಏಸಾವನೋ ಅಲ್ಲವೋ ನಿನ್ನನ್ನು ಮುಟ್ಟಿ ತಿಳುಕೊಳ್ಳಬೇಕು ಎಂದು ಹೇಳಿದನು. 22ಯಾಕೋಬನು ತನ್ನ ತಂದೆಯ ಹತ್ತರಕ್ಕೆ ಬಂದಾಗ ಇಸಾಕನು ಅವನನ್ನು ಮುಟ್ಟಿ ನೋಡಿ - ಸ್ವರವೇನೋ ಯಾಕೋಬನ ಸ್ವರ, ಕೈ ಏಸಾವನ ಕೈ ಅಂದುಕೊಂಡನು. 23ಯಾಕೋಬನ ಕೈಗಳು ಅವನ ಅಣ್ಣನ ಕೈಗಳಂತೆ ರೋಮವುಳ್ಳವುಗಳಾಗಿದ್ದದರಿಂದ ಇಸಾಕನು ಅವನ ಗುರುತನ್ನು ತಿಳಿಯಲಾರದೆ ಅವನನ್ನು ಆಶೀರ್ವದಿಸಿದನು. 24ಅವನು - ನೀನು ನಿಜವಾಗಿ ನನ್ನ ಮಗನಾದ ಏಸಾವನೋ ಎಂದು ಕೇಳಿದ್ದಕ್ಕೆ ಯಾಕೋಬನು - ಹೌದು ಅನ್ನಲು 25ಇಸಾಕನು - ಆ ಪದಾರ್ಥವನ್ನು ಹತ್ತರಕ್ಕೆ ತೆಗೆದುಕೊಂಡು ಬಾ; ನೀನು ತಂದ ಬೇಟೇ ಮಾಂಸವನ್ನು ನಾನು ಊಟಮಾಡಿದ ಮೇಲೆ ನಿನ್ನನ್ನು ಆಶೀರ್ವದಿಸುವೆನೆಂದು ಹೇಳಿದನು. ಯಾಕೋಬನು ಅದನ್ನು ಅವನ ಹತ್ತರಕ್ಕೆ ತರಲು ಅವನು ತಿಂದನು; ದ್ರಾಕ್ಷಾರಸವನ್ನು ಕೊಡಲು ಕುಡಿದನು. 26ಆಮೇಲೆ ಅವನ ತಂದೆಯಾದ ಇಸಾಕನು ಅವನಿಗೆ - ಮಗನೇ, ನೀನು ಹತ್ತರ ಬಂದು ನನಗೆ ಮುದ್ದಿಡು ಎಂದು ಹೇಳಲು 27ಅವನು ಹತ್ತರ ಬಂದು ಅವನಿಗೆ ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ನೋಡಿದಾಗ ಅವನನ್ನು ಆಶೀರ್ವದಿಸಿ -
ಆಹಾ, ನನ್ನ ಮಗನ ಸುವಾಸನೆಯು ಯೆಹೋವನು ಆಶೀರ್ವದಿಸಿದ ಹೊಲದ ಸುವಾಸನೆಯಂತಿರುವದು.
28ದೇವರು ನಿನಗೆ ಆಕಾಶದ ಮಂಜನ್ನೂ ಸಾರವುಳ್ಳ ಭೂವಿುಯನ್ನೂ ಕೊಟ್ಟು ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಹೇರಳವಾಗಿ ಅನುಗ್ರಹಿಸಲಿ.
29ಪರಜನಗಳು ನಿನ್ನನ್ನು ಸೇವಿಸಲಿ. ಪರಕುಲಗಳು ನಿನಗೆ ಅಡ್ಡಬೀಳಲಿ. ನಿನ್ನ ಅಣ್ಣತಮ್ಮಂದಿರಲ್ಲಿ ನೀನು ದೊರೆಯಾಗು, ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ.
ನಿನ್ನನ್ನು ಶಪಿಸುವವರಿಗೆ ಶಾಪವು ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಉಂಟಾಗಲಿ
ಅಂದನು. 30ಇಸಾಕನು ಅವನನ್ನು ಆಶೀರ್ವದಿಸಿದ ಮೇಲೆ ಯಾಕೋಬನು ತನ್ನ ತಂದೆಯ ಬಳಿಯಿಂದ ಹೊರಟುಹೋದ ಕ್ಷಣವೇ ಅವನಣ್ಣನಾದ ಏಸಾವನು ಬೇಟೆಯಿಂದ ಬಂದನು. 31ಅವನೂ ಸವಿಯೂಟವನ್ನು ಸಿದ್ಧಮಾಡಿ ತನ್ನ ತಂದೆಯ ಬಳಿಗೆ ತಂದು ಅವನಿಗೆ - ಅಪ್ಪಾ, ನೀನು ಎದ್ದು ನಿನ್ನ ಮಗನಾದ ನಾನು ಬೇಟೆಯಿಂದ ತಂದಿರುವ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸು ಎಂದು ಹೇಳಿದನು. 32ಅವನ ತಂದೆಯಾದ ಇಸಾಕನು - ನೀನು ಯಾರು ಎಂದು ಅವನನ್ನು ಕೇಳಲು ಅವನು - ನಾನು ನಿನ್ನ ಚೊಚ್ಚಲ ಮಗನಾದ ಏಸಾವನು ಅಂದನು. 33ಅದಕ್ಕೆ ಇಸಾಕನು ಬಹಳವಾಗಿ ಗಡಗಡನೆ ನಡುಗುತ್ತಾ - ಯಾರೋ ಬೇರೊಬ್ಬನು ಬೇಟೆ ಮಾಂಸವನ್ನು ತಂದು ನನಗೆ ಕೊಟ್ಟುಹೋದನಲ್ಲಾ. ನೀನು ಬರುವದಕ್ಕಿಂತ ಮುಂಚೆ ಅವನು ತಂದದ್ದರಲ್ಲಿ ನಾನು ಊಟ ಮಾಡಿ ಅವನನ್ನೇ ಆಶೀರ್ವದಿಸಿದೆನು; ಅವನಿಗೆ ಮಾಡಿದ ಆಶೀರ್ವಾದ ತಪ್ಪಲಾರದು ಅಂದನು. 34ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿದಾಗ ದುಃಖಾಕ್ರಾಂತನಾಗಿ ಬಹಳ ಅಳುತ್ತಾ - ಅಪ್ಪಾ ತಂದೆಯೇ, ನನ್ನನ್ನು, ನನ್ನನ್ನು ಸಹ ಆಶೀರ್ವದಿಸು ಎಂದು ಬೇಡಿಕೊಳ್ಳಲು 35ಇಸಾಕನು - ನಿನ್ನ ತಮ್ಮನು ಮೋಸದಿಂದ ಬಂದು ನಿನಗಾಗಬೇಕಾಗಿದ್ದ ಆಶೀರ್ವಾದವನ್ನು ಪಡಕೊಂಡನು ಅಂದನು. 36ಅದಕ್ಕೆ ಏಸಾವನು - ಯಾಕೋಬನೆಂಬ#27.36 ಯಾಕೋಬನು ಅಂದರೆ, ವಂಚಕ; ಆದಿ. 25.26 ನೋಡಿರಿ. ಹೆಸರು ಅವನಿಗೆ ಉಂಟಾದದ್ದು ನ್ಯಾಯವಲ್ಲವೋ? ಎರಡು ಸಾರಿ ನನ್ನನ್ನು ವಂಚಿಸಿದ್ದಾನೆ, ಹಿಂದೆ ನನ್ನ ಚೊಚ್ಚಲತನದ ಹಕ್ಕನ್ನು ಅಪಹರಿಸಿದನು; ಈಗ ಬಂದು ನನಗಾಗಬೇಕಾಗಿದ್ದ ಆಶೀರ್ವಾದವನ್ನೂ ತೆಗೆದುಕೊಂಡಿದ್ದಾನೆ ಎಂದು ಹೇಳಿ ತನ್ನ ತಂದೆಯನ್ನು - ನನಗೋಸ್ಕರವೂ ನಿನ್ನಲ್ಲಿ ಆಶೀರ್ವಾದವಿಲ್ಲವೋ ಎಂದು ಕೇಳಲು 37ಇಸಾಕನು - ನನ್ನ ಮಗನೇ, ಅವನನ್ನು ನಿನ್ನ ದೊರೆಯನ್ನಾಗಿ ನೇವಿುಸಿದ್ದೇನೆ; ಅವನ ಅಣ್ಣತಮ್ಮಂದಿರನ್ನು ಅವನಿಗೆ ಸೇವಕರನ್ನಾಗಿ ಕೊಟ್ಟಿದ್ದೇನೆ; ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನ ಪೋಷಣೆಗಾಗಿ ಕೊಟ್ಟಿದ್ದೇನೆ ನೋಡು. ಹೀಗಿರುವಲ್ಲಿ ನಾನು ನಿನಗೋಸ್ಕರ ಏನು ಮಾಡಲಿ ಅಂದನು. 38ಏಸಾವನು ಅವನಿಗೆ - ಅಪ್ಪಾ, ತಂದೆಯೇ, ನಿನ್ನಲ್ಲಿ ಆ ಒಂದೇ ಆಶೀರ್ವಾದವಿತ್ತೋ? ಅಪ್ಪಾ, ನನ್ನನ್ನು, ನನ್ನನ್ನೂ ಆಶೀರ್ವದಿಸಬೇಕು 39ಎಂದು ಹೇಳಿ ಗೋಳಾಡುತ್ತಾ ಅಳಲು ಅವನ ತಂದೆಯಾದ ಇಸಾಕನು ಅವನಿಗೆ -
ಸಾರವುಳ್ಳ ಭೂವಿುಯೂ ಮೇಲಿನಿಂದ ಬೀಳುವ ಆಕಾಶದ ಮಂಜೂ ಇರುವ#27.39 ಅಥವಾ: ಇಲ್ಲದ. ಸ್ಥಳದಲ್ಲಿ ನಿನ್ನ ನಿವಾಸವಿರುವದು. 40ನೀನು ಕತ್ತಿಯಿಂದಲೇ ಜೀವನ ಮಾಡುವಿ.
ನಿನ್ನ ತಮ್ಮನಿಗೆ ಸೇವಕನಾಗಿರುವಿ. ಆದರೂ ನೀನು ಕೊಸರಿಕೊಳ್ಳುವಾಗ ಅವನು ನಿನ್ನ ಹೆಗಲಿನ ಮೇಲೆ ಹಾಕಿರುವ ನೊಗವನ್ನು ಮುರಿದುಹಾಕುವಿ
ಎಂದು ಹೇಳಿದನು.
41ತಂದೆಯು ಯಾಕೋಬನಿಗೆ ಮಾಡಿದ ಆಶೀರ್ವಾದದ ನಿವಿುತ್ತ ಏಸಾವನು ಯಾಕೋಬನನ್ನು ಹಗೆಮಾಡಿ ತನ್ನ ಮನಸ್ಸಿನೊಳಗೆ - ತಂದೆಗೋಸ್ಕರ ದುಃಖಿಸುವ ಕಾಲ ಸಮೀಪಿಸಿತು; ಆಗ ನನ್ನ ತಮ್ಮನಾದ ಯಾಕೋಬನನ್ನು ಕೊಲ್ಲುವೆನು ಅಂದುಕೊಂಡನು. 42ಹಿರೀ ಮಗನಾದ ಏಸಾವನು ಹೇಳಿದ ಮಾತು ರೆಬೆಕ್ಕಳಿಗೆ ತಿಳಿದುಬಂದಾಗ ಆಕೆಯು ತನ್ನ ಕಿರೀ ಮಗನಾದ ಯಾಕೋಬನನ್ನು ಕರೆದು ಅವನಿಗೆ - ನೋಡು, ನಿನ್ನ ಅಣ್ಣನಾದ ಏಸಾವನು ನಿನ್ನನ್ನು ಕೊಲ್ಲಬೇಕೆಂದು ಯೋಚಿಸಿ ತನ್ನ ಹೊಟ್ಟೆಯ ಉರಿಯನ್ನು ಆರಿಸಿಕೊಳ್ಳುತ್ತಾನೆ. 43ಆದದರಿಂದ ಮಗನೇ, ನನ್ನ ಮಾತನ್ನು ಕೇಳು; ನೀನು ಎದ್ದು ಖಾರಾನ್ ಊರಿನಲ್ಲಿರುವ ನನ್ನಣ್ಣನಾದ ಲಾಬಾನನ ಬಳಿಗೆ ಓಡಿಹೋಗಿ ಕೆಲವು ಕಾಲ, 44ಅಂದರೆ ನಿನ್ನಣ್ಣನ ಕೋಪವು ಶಮನವಾಗುವವರೆಗೂ, ಅವನ ಬಳಿಯಲ್ಲಿರು. 45ನಿನ್ನಣ್ಣನು ನೀನು ಮಾಡಿರುವದನ್ನು ಮರೆತು ತನ್ನ ಕೋಪವನ್ನು ಬಿಟ್ಟಾಗ ನಾನು ನಿನ್ನನ್ನು ಅಲ್ಲಿಂದ ಕರಸುತ್ತೇನೆ. ನಾನು ಒಂದೇ ದಿನದಲ್ಲಿ ನಿಮ್ಮಿಬ್ಬರನ್ನೂ ಕಳಕೊಳ್ಳುವದು ಯಾತಕ್ಕೆ ಎಂದು ಹೇಳಿದಳು.
ಯಾಕೋಬನು ಖಾರಾನಿನಲ್ಲಿರುವ ತನ್ನ ಬಂಧುಗಳಲ್ಲಿ ಹೆಣ್ಣು ತೆಗೆದುಕೊಳ್ಳುವದಕ್ಕೆ ಹೊರಟದ್ದು
46ರೆಬೆಕ್ಕಳು ಇಸಾಕನಿಗೆ - ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಯಿತು. ಯಾಕೋಬನೂ ಈ ದೇಶದವರಲ್ಲಿ ಹೆಣ್ಣನ್ನು ಆದುಕೊಂಡು ಇಂಥಾ ಹಿತ್ತಿಯ ಸ್ತ್ರೀಯನ್ನು ಮದುವೆಮಾಡಿಕೊಂಡರೆ ನಾನು ಇನ್ನೂ ಬದುಕುವದರಿಂದ ಪ್ರಯೋಜನವೇನು ಎಂದು ಹೇಳಿದಳು.

Highlight

Share

Copy

None

Want to have your highlights saved across all your devices? Sign up or sign in