ಕೊಲೊಸ್ಸೆಯವರಿಗೆ 1
1
ಒಕ್ಕಣೆ
1ದೇವರ ಚಿತ್ತಾನುಸಾರವಾಗಿ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ಸಹೋದರನಾದ ತಿಮೊಥೆಯನೂ 2ಕೊಲೊಸ್ಸೆಯಲ್ಲಿರುವ ದೇವಜನರಿಗೆ ಅಂದರೆ ಕ್ರಿಸ್ತನಲ್ಲಿರುವ ನಂಬಿಗಸ್ತರಾದ#1.2 ಅಥವಾ, ನಂಬುವವರಾದ. ಸಹೋದರರಿಗೆ ಬರೆಯುವದೇನಂದರೆ - ನಮ್ಮ ತಂದೆಯಾದ ದೇವರಿಂದ ನಿಮಗೆ ಕೃಪೆಯೂ ಶಾಂತಿಯೂ ಆಗಲಿ.
ಪೌಲನು ಕೊಲೊಸ್ಸೆಯ ಸಭೆಯವರ ವಿಷಯದಲ್ಲಿ ದೇವರಿಗೆ ಮಾಡುವ ಕೃತಜ್ಞತಾಸ್ತುತಿಯೂ ಪ್ರಾರ್ಥನೆಯೂ
3-5ಕ್ರಿಸ್ತ ಯೇಸುವಿನಲ್ಲಿ ನೀವು ಇಟ್ಟ ನಂಬಿಕೆಯ ವಿಷಯವಾಗಿಯೂ ದೇವಜನರ ಮೇಲಿರುವ ನಿಮ್ಮ ಪ್ರೀತಿಯ ವಿಷಯವಾಗಿಯೂ ನಾವು ಕೇಳಿ ಪರಲೋಕದಲ್ಲಿ ನಿಮಗೋಸ್ಕರ ಸಿದ್ಧವಾಗಿರುವ ಮಹಾಪದವಿಯನ್ನು ನೆನಸುತ್ತಾ ನಾವು ಪ್ರಾರ್ಥನೆಮಾಡುವಾಗೆಲ್ಲಾ ನಿಮ್ಮ ನಿವಿುತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಸ್ತೋತ್ರಮಾಡುತ್ತೇವೆ. ನೀವು ಆ ಪದವಿಯನ್ನು ಕುರಿತು ನಿಮ್ಮ ಬಳಿಗೆ ಬಂದಿರುವ ಸುವಾರ್ತೆಯ ಸತ್ಯವಾಕ್ಯದಿಂದ ಮೊದಲೇ ಕೇಳಿದಿರಿ. 6ನೀವು ದೇವರ ಕೃಪೆಯನ್ನು ಕುರಿತು ಸತ್ಯಾರ್ಥವನ್ನು ಕೇಳಿ ತಿಳುಕೊಂಡ ದಿವಸದಿಂದ ಆ ಸುವಾರ್ತೆಯು ನಿಮ್ಮಲ್ಲಿ ಫಲಕೊಟ್ಟು ವೃದ್ಧಿಯಾಗುತ್ತಾ ಬಂದ ಪ್ರಕಾರ ಲೋಕದಲ್ಲೆಲ್ಲಾ ಹಬ್ಬಿ ಫಲಕೊಟ್ಟು ವೃದ್ಧಿಯಾಗುತ್ತಾ ಬರುತ್ತದೆ. 7ನಮ್ಮ ಪ್ರಿಯ ಜೊತೆಯ ದಾಸನಾದ ಎಪಫ್ರನಿಂದ ಆ ಸತ್ಯೋಪದೇಶವನ್ನು ಕಲಿತುಕೊಂಡಿರಿ. ಅವನು ನಿಮಗೋಸ್ಕರ ಕ್ರಿಸ್ತನ ನಂಬಿಗಸ್ತನಾದ ಸೇವಕನು. 8ಪವಿತ್ರಾತ್ಮಪ್ರೇರಿತವಾದ ನಿಮ್ಮ ಪ್ರೀತಿಯ ವಿಷಯದಲ್ಲಿ ನನಗೆ ತಿಳಿಸಿದವನು ಅವನೇ.
9ಆದಕಾರಣ ನಾವು ನಿಮ್ಮ ಸುದ್ದಿಯನ್ನು ಕೇಳಿದ ದಿವಸದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದಿ 10ಕರ್ತನ ಚಿತ್ತದ ವಿಷಯವಾದ ತಿಳುವಳಿಕೆಯಿಂದ ತುಂಬಿಕೊಂಡು ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲ ಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ದೇವಜ್ಞಾನದಿಂದ ಅಭಿವೃದ್ಧಿಯಾಗುತ್ತಿರಬೇಕೆಂತಲೂ 11ಆತನ ಮಹಿಮಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷ್ಠರಾಗಿ ಆನಂದಪೂರ್ವಕವಾದ ತಾಳ್ಮೆಯನ್ನೂ ದೀರ್ಘಶಾಂತಿಯನ್ನೂ ಯಾವಾಗಲೂ ತೋರಿಸುವವರಾಗಿರಬೇಕೆಂತಲೂ 12ಬೆಳಕಿನ ರಾಜ್ಯದೊಳಗೆ ದೇವಜನರ ಬಾಧ್ಯತೆಯಲ್ಲಿ ಪಾಲುಗಾರರಾಗುವದಕ್ಕೆ ನಿಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಗೆ ಕೃತಜ್ಞತಾಸ್ತುತಿ ಮಾಡುವವರಾಗಿರಬೇಕೆಂತಲೂ ದೇವರನ್ನು ಬೇಡಿಕೊಳ್ಳುತ್ತೇವೆ.
ಕ್ರಿಸ್ತನು ಸರ್ವಸೃಷ್ಠಿಗೆ ಉತ್ಕೃಷ್ಟಸ್ಥಾನದಲ್ಲಿದ್ದಾನೆಂಬುವ ಬೋಧೆ
13ದೇವರು ನಮ್ಮನ್ನು ಅಂಧಕಾರದ ದೊರೆತನದಿಂದ ಬಿಡಿಸಿ ತನ್ನ ಪ್ರಿಯ ಕುಮಾರನ ರಾಜ್ಯದೊಳಗೆ ಸೇರಿಸಿದನು. 14ಆ ಕುಮಾರನಲ್ಲಿ ನಮ್ಮ ಪಾಪಗಳು ಪರಿಹಾರವಾಗಿ ನಮಗೆ ಬಿಡುಗಡೆಯಾಯಿತು. 15ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನ ಸ್ಥಾನಹೊಂದಿದವನೂ ಆಗಿದ್ದಾನೆ. 16ಭೂಪರಲೋಕಗಳಲ್ಲಿರುವ ದೃಶ್ಯಾದೃಶ್ಯವಾದವುಗಳೆಲ್ಲವೂ ಸಿಂಹಾಸನಗಳಾಗಲಿ ಪ್ರಭುತ್ವಗಳಾಗಲಿ ದೊರೆತನಗಳಾಗಲಿ ಅಧಿಕಾರಗಳಾಗಲಿ ಆತನಲ್ಲಿ ಸೃಷ್ಟಿಸಲ್ಪಟ್ಟವು. ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು. 17ಆತನು ಎಲ್ಲಕ್ಕೂ ಮೊದಲು ಇದ್ದವನು; ಆತನು ಸಮಸ್ತಕ್ಕೂ ಆಧಾರ ಭೂತನು. 18ಸಭೆಯೆಂಬ ದೇಹಕ್ಕೆ ಆತನು ಶಿರಸ್ಸು; ಆತನು ಆದಿಸಂಭೂತನು. ಎಲ್ಲಾದರಲ್ಲಿ ಪ್ರಮುಖನಾಗುವಂತೆ ಸತ್ತವರೊಳಗಿಂದ ಮೊದಲು ಎದ್ದು ಬಂದವನು ಆತನೇ. 19ತಂದೆಯಾದ ದೇವರು ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ವಾಸವಾಗಿರಬೇಕೆಂತಲೂ 20ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಭೂಪರಲೋಕಗಳಲ್ಲಿರುವ ಸಮಸ್ತವನ್ನೂ ಆತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ನಿಷ್ಕರ್ಷೆಮಾಡಿದನು.
ಕ್ರಿಸ್ತನಲ್ಲಿ ಎಲ್ಲಾ ಜನಾಂಗದವರು ಯೆಹೂದ್ಯರೊಂದಿಗೆ ಸಮಭಾಗಿಗಳಾಗಿದ್ದಾರೆಂಬದು
(ಎಫೆಸ. 2.1-22)
21ಇದಲ್ಲದೆ ನೀವು ಹಿಂದಿನ ಕಾಲದಲ್ಲಿ ಅನ್ಯರೂ ದುಷ್ಕೃತ್ಯಗಳನ್ನು ಮಾಡುವವರಾಗಿ ದ್ವೇಷಮನಸ್ಸುಳ್ಳವರೂ ಆಗಿದ್ದರೂ 22ಆತನು ನಿಮ್ಮನ್ನು ಸಹ ತನ್ನ ಕುಮಾರನ ಸ್ಥೂಲ ದೇಹದಲ್ಲಿ ಉಂಟಾದ ಮರಣದ ಮೂಲಕ ಈಗ ಸಂಧಾನಪಡಿಸಿಕೊಂಡಿದ್ದಾನೆ; ಮತ್ತು ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ನಿರಪರಾಧಿಗಳನ್ನಾಗಿಯೂ ತನ್ನ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂದಿದ್ದಾನೆ. 23ನೀವು ಕೇಳಿದಂಥ ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಂಥ ಸುವಾರ್ತೆಯಿಂದ ಉಂಟಾದ ನಿರೀಕ್ಷೆಯನ್ನು ಬಿಟ್ಟು ತೊಲಗಿಹೋಗದೆ ಅಸ್ತಿವಾರದ ಮೇಲೆ ನಿಂತು ಸ್ಥಿರವಾಗಿದ್ದು ನಂಬಿಕೆಯಲ್ಲಿ ನೆಲೆಗೊಂಡಿರುವದಾದರೆ ಆ ಪದವಿ ನಿಮಗೆ ಪ್ರಾಪ್ತವಾಗುವದು.
24ಪೌಲನೆಂಬ ನಾನು ಈ ಸುವಾರ್ತೆಗೆ ಸೇವಕನಾದೆನು. ನಾನು ಈಗ ನಿಮಗೋಸ್ಕರ ಅನುಭವಿಸುತ್ತಿರುವ ಬಾಧೆಗಳಲ್ಲಿ ಸಂತೋಷಪಟ್ಟು ಕ್ರಿಸ್ತನ ಸಂಕಟಗಳೊಳಗೆ ಇನ್ನೂ ಉಳಿದದ್ದನ್ನು ಸಭೆಯೆಂಬ ಆತನ ದೇಹಕ್ಕೋಸ್ಕರ ನನ್ನ ಶರೀರದಲ್ಲಿ ಅನುಭವಿಸಿ ತೀರಿಸುತ್ತೇನೆ. 25ನಾನು ಸಭೆಗೆ ಸೇವಕನಾದೆನು. ದೇವರು ತನ್ನ ವಾಕ್ಯವನ್ನು ಸಂಪೂರ್ಣವಾಗಿ ತಿಳಿಸುವ ಕೆಲಸವನ್ನು ನಿಮ್ಮ ಪ್ರಯೋಜನಕ್ಕೋಸ್ಕರ ನನಗೆ ದಯಪಾಲಿಸಿದನು. 26ಆ ವಾಕ್ಯವು ಹಿಂದಿನ ಯುಗಗಳಿಂದಲೂ ತಲತಲಾಂತರಗಳಿಂದಲೂ ಮರೆಯಾಗಿತ್ತು; ಈಗಿನ ಕಾಲದಲ್ಲಿ ದೇವಜನರಿಗೆ ತಿಳಿಸಲ್ಪಟ್ಟಿದೆ. 27ಅನ್ಯಜನಗಳ ವಿಷಯವಾದ ಈ ಮರ್ಮದ ಮಹಿಮಾತಿಶಯವು ಎಷ್ಟೆಂಬದನ್ನು ದೇವರು ತನ್ನ ಜನರಿಗೆ ತಿಳಿಸಲಿಕ್ಕೆ ಮನಸ್ಸು ಮಾಡಿಕೊಂಡನು. ಈ ಮರ್ಮವು ಏನಂದರೆ ಕ್ರಿಸ್ತನು ನಿಮ್ಮಲ್ಲಿದ್ದು ಪ್ರಭಾವದ ನಿರೀಕ್ಷೆಗೆ ಆಧಾರಭೂತನಾಗಿರುವದೇ. 28ನಾವು ಆತನನ್ನು ಪ್ರಸಿದ್ಧಿಪಡಿಸುವವರಾಗಿ ಸಕಲರಿಗೂ ಬುದ್ಧಿಹೇಳುತ್ತಾ ಸರ್ವರಿಗೂ ಪೂರ್ಣಜ್ಞಾನವನ್ನು ಉಪದೇಶಿಸುತ್ತಾ ದೇವರ ಮುಂದೆ ಎಲ್ಲರನ್ನು ಕ್ರಿಸ್ತನಲ್ಲಿ ಪ್ರವೀಣರನ್ನಾಗಿ ನಿಲ್ಲಿಸುವದಕ್ಕೆ ಪ್ರಯತ್ನಿಸುತ್ತಿದ್ದೇವೆ. 29ನನ್ನಲ್ಲಿ ಕಾರ್ಯಸಾಧಿಸುವ ದೇವರ ಬಲವನ್ನು ಪ್ರಯೋಗಮಾಡಿ ಇದಕ್ಕೋಸ್ಕರವೇ ಹೋರಾಡುತ್ತೇನೆ, ಪ್ರಯಾಸಪಡುತ್ತೇನೆ.
Currently Selected:
ಕೊಲೊಸ್ಸೆಯವರಿಗೆ 1: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.