YouVersion Logo
Search Icon

ಕೊಲೊಸ್ಸೆಯವರಿಗೆ 2

2
ಸುಳ್ಳುಬೋಧಕರಿಗೆ ಕಿವಿಗೊಡಬಾರದೆಂದು ಎಚ್ಚರಿಕೆ
1ನಿಮಗೋಸ್ಕರವೂ ಲವೊದಿಕೀಯದವರಿಗೋಸ್ಕರವೂ ನನ್ನನ್ನು ಕಣ್ಣಾರೆ ಕಾಣದಿರುವವರೆಲ್ಲರಿಗೋಸ್ಕರವೂ ನನಗೆ ಬಹಳ ಹೋರಾಟ ಉಂಟೆಂಬದು ನಿಮಗೆ ತಿಳಿದಿರಬೇಕೆಂದು ಅಪೇಕ್ಷಿಸುತ್ತೇನೆ. 2-3ಹೇಗಂದರೆ ನೀವೆಲ್ಲರು ಪ್ರೀತಿಯಿಂದ ಹೊಂದಿಕೆಯಾಗಿದ್ದು ಬುದ್ಧಿಪೂರ್ವಕ ನಿಶ್ಚಯವೆಂಬ ಭಾಗ್ಯವನ್ನು ಪಡೆದು ದೇವರು ತಿಳಿಸಿರುವ ಮರ್ಮವನ್ನು ಅಂದರೆ ತನ್ನಲ್ಲೇ ಜ್ಞಾನವಿದ್ಯಾಸಂಬಂಧವಾದ ನಿಕ್ಷೇಪಗಳನ್ನೆಲ್ಲಾ ಅಡಗಿಸಿಕೊಂಡಿರುವ ಕ್ರಿಸ್ತನನ್ನು ತಿಳುಕೊಂಡವರಾಗಿ ಹೃದಯದಲ್ಲಿ ದೃಢವಾಗಿರಬೇಕೆಂಬ ಕುತೂಹಲವು ನನಗುಂಟು. 4ಯಾರಾದರೂ ರಂಜನೆಯಾದ ಮಾತುಗಳಿಂದ ನಿಮ್ಮನ್ನು ಮೋಸಗೊಳಿಸಿಯಾರೆಂಬ ಭಯ ನನಗಿರುವದರಿಂದ ಇದನ್ನು ಹೇಳಿದ್ದೇನೆ. 5ನಾನು ಶರೀರದಿಂದ ನಿಮ್ಮ ಬಳಿಯಲ್ಲಿ ಇಲ್ಲದಿದ್ದರೂ ಆತ್ಮದಿಂದ ನಿಮ್ಮೊಂದಿಗಿದ್ದು ನೀವು ಕ್ರಮವಾಗಿ ನಡೆಯುವದನ್ನೂ ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಂತಿರುವದನ್ನೂ ನೋಡಿ ಸಂತೋಷಪಡುತ್ತೇನೆ. 6ಆದದರಿಂದ ನೀವು ಕರ್ತನಾದ ಯೇಸುವೆಂಬ ಕ್ರಿಸ್ತನನ್ನು ಅಂಗೀಕರಿಸಿದಂತೆಯೇ ಆತನಲ್ಲಿದ್ದವರಾಗಿ ನಡೆದುಕೊಳ್ಳಿರಿ. 7ಆತನಲ್ಲಿ ಬೇರೂರಿಕೊಂಡು ಭಕ್ತಿವೃದ್ಧಿಯನ್ನು ಹೊಂದಿ ನಿಮಗೆ ಬೋಧಿಸಲ್ಪಟ್ಟ ಉಪದೇಶದ ಪ್ರಕಾರವೇ ಕ್ರಿಸ್ತ ನಂಬಿಕೆಯಲ್ಲಿ ನೆಲೆಗೊಂಡು ದೇವರಿಗೆ ಹೆಚ್ಚೆಚ್ಚಾಗಿ ಸ್ತೋತ್ರಮಾಡುವವರಾಗಿರಿ.
8ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ. 9ಕ್ರಿಸ್ತನಲ್ಲಿಯೇ ದೇವರ ಸರ್ವಸಂಪೂರ್ಣತೆಯು ಅವತರಿಸಿ ವಾಸಮಾಡುತ್ತದೆ, 10ಮತ್ತು ನೀವು ಆತನಲ್ಲಿದ್ದುಕೊಂಡೇ ಪರಿಪೂರ್ಣತೆಯನ್ನು ಹೊಂದಿದವರಾಗಿದ್ದೀರಿ. 11ಆತನು ಎಲ್ಲಾ ದೊರೆತನಗಳಿಗೂ ಅಧಿಕಾರಿಗಳಿಗೂ ಶಿರಸ್ಸು. ನೀವು ಆತನಲ್ಲಿ ಸುನ್ನತಿಯನ್ನೂ ಹೊಂದಿದಿರಿ; ಈ ಸುನ್ನತಿಯು ಕೈಯಿಂದ ಮಾಡಿದ್ದಲ್ಲ, ಇದು ಪಾಪಾಧೀನಸ್ವಭಾವವನ್ನು ವಿಸರ್ಜಿಸುವದೇ; ಇದೇ ಕ್ರಿಸ್ತೀಯ ಸುನ್ನತಿ; 12ನೀವು ದೀಕ್ಷಾಸ್ನಾನದಲ್ಲಿ ಕ್ರಿಸ್ತನೊಂದಿಗೆ ಹೂಣಲ್ಪಟ್ಟದ್ದರಿಂದಲೇ ಆ ಸುನ್ನತಿಯನ್ನು ಹೊಂದಿದಿರಿ. ಇದಲ್ಲದೆ ಆತನನ್ನು ಸತ್ತವರೊಳಗಿಂದ ಎಬ್ಬಿಸಿದ ದೇವರ ಸಾಮರ್ಥ್ಯದಲ್ಲಿ ನಂಬಿಕೆಯಿಡುವದರ ಮೂಲಕ ಅದರಲ್ಲಿ ಆತನ ಕೂಡ ಎದ್ದು ಬಂದಿರಿ. 13ಅಪರಾಧಗಳನ್ನು ಮಾಡುವದರಿಂದಲೂ ಸುನ್ನತಿಯಿಲ್ಲದ ಶರೀರಭಾವದಿಂದಲೂ ಸತ್ತವರಾಗಿದ್ದ ನಿಮ್ಮನ್ನು ಸಹ ದೇವರು ಕ್ರಿಸ್ತನೊಂದಿಗೆ ಬದುಕಿಸಿದ್ದಾನೆ. 14ಆತನು ನಮ್ಮ ಅಪರಾಧಗಳನ್ನೆಲ್ಲಾ ಕ್ಷವಿುಸಿ ನಮ್ಮ ಮೇಲೆ ದೋಷಾರೋಪಣೆಮಾಡಿದಂಥ ಆಜ್ಞಾರೂಪವಾಗಿದ್ದಂಥ ಪತ್ರವನ್ನು ಕೆಡಿಸಿ ಅದನ್ನು ಶಿಲುಬೆಗೆ ಜಡಿದು ಇಲ್ಲದಂತಾಗ ಮಾಡಿದನು. 15ಆತನು ದೊರೆತನಗಳನ್ನೂ ಅಧಿಕಾರಗಳನ್ನೂ ನಿರಾಯುಧರನ್ನಾಗಿ#2.15 ಅಥವಾ, ತೆಗೆದಿಟ್ಟು. ಮಾಡಿ ಜಯೋತ್ಸವ ಮಾಡುತ್ತಾನೋ ಎಂಬಂತೆ ಶಿಲುಬೆಯ#2.15 ಅಥವಾ, ಕ್ರಿಸ್ತನಲ್ಲಿ. ಮೇಲೆ ಅವುಗಳನ್ನು ಜಯಿಸಲ್ಪಟ್ಟವುಗಳನ್ನಾಗಿ ಮೆರಸುತ್ತಾ ತೋರಿಸಿದನು.
16ಹೀಗಿರುವದರಿಂದ ತಿಂದು ಕುಡಿಯುವ ವಿಷಯದಲ್ಲಿಯೂ ಹಬ್ಬ ಅಮವಾಸ್ಯೆ ಸಬ್ಬತು ಎಂಬಿವುಗಳ ವಿಷಯದಲ್ಲಿಯೂ ನಿಮ್ಮನ್ನು ದೋಷಿಗಳೆಂದು ಯಾರೂ ಎಣಿಸಬಾರದು. 17ಇವು ಮುಂದೆ ಬರಬೇಕಾಗಿದ್ದ ಕಾರ್ಯಗಳ ಛಾಯೆಯಾಗಿವೆ; ಇವುಗಳ ನಿಜಸ್ವರೂಪವು ಕ್ರಿಸ್ತನೇ. 18ಕೆಲವರು ಅತಿ ವಿನಯದಲ್ಲಿಯೂ ದೇವದೂತರ ಪೂಜೆಯಲ್ಲಿಯೂ ಆಸಕ್ತರಾಗಿದ್ದಾರೆ, 19ತಮಗೆ ದರ್ಶನಗಳಾದವೆಂದು ಕೊಚ್ಚಿಕೊಳ್ಳುತ್ತಾರೆ, ಮತ್ತು ಪ್ರಾಪಂಚಿಕ ಬುದ್ಧಿಯಿಂದ ನಿರಾಧಾರವಾಗಿ ಉಬ್ಬಿಕೊಂಡಿದ್ದಾರೆ, ಆದರೆ ಕ್ರಿಸ್ತನೆಂಬ ಶಿರಸ್ಸಿನ ಹೊಂದಿಕೆಯನ್ನು ಬಿಟ್ಟವರಾಗಿದ್ದಾರೆ. ಇಂಥವರು ನಿಮಗೆ ದೊರಕಿರುವ ಬಿರುದನ್ನು ಅಪಹರಿಸುವದಕ್ಕೆ ಅವಕಾಶಕೊಡಬೇಡಿರಿ. ಆ ಶಿರಸ್ಸಿನಿಂದಲೇ ದೇಹವೆಲ್ಲಾ ಕೀಲುನರಗಳ ಮೂಲಕ ಬೇಕಾದ ಸಹಾಯವನ್ನು ಹೊಂದಿ ಒಂದಾಗಿ ಕೂಡಿಸಲ್ಪಟ್ಟು ದೇವರು ಕೊಡುವ ವೃದ್ಧಿಯಿಂದ ಅಭಿವೃದ್ಧಿಯಾಗುತ್ತಾ ಬರುತ್ತದೆ.
20ಪ್ರಾಪಂಚಿಕ ಬಾಲಬೋಧೆಯ ಪಾಲಿಗೆ ನೀವು ಕ್ರಿಸ್ತನೊಂದಿಗೆ ಸತ್ತವರಾಗಿದ್ದ ಮೇಲೆ ಇನ್ನೂ ಪ್ರಾಪಂಚಿಕರಾಗಿ ಬದುಕುವವರಂತೆ ಮನುಷ್ಯ ಕಲ್ಪಿತ ಆಜ್ಞೆಗಳನ್ನೂ ಉಪದೇಶಗಳನ್ನೂ ಅನುಸರಿಸಿ - 21ಇದನ್ನು ಹಿಡಿಯಬೇಡ, ಇದನ್ನು ರುಚಿನೋಡಬೇಡ, 22ಅದನ್ನು ಮುಟ್ಟಬೇಡ ಎನ್ನುವ ನಿಬಂಧನೆಗಳಿಗೆ ನಿಮ್ಮನ್ನು ಒಳಗಾಗಮಾಡಿಕೊಳ್ಳುವದೇಕೆ? ಆ ಪದಾರ್ಥಗಳೆಲ್ಲವೂ ಬಳಸುವದರಲ್ಲಿ ನಾಶವಾಗುತ್ತವೆ. 23ಅಂಥ ಉಪದೇಶಗಳು ಸ್ವಕಲ್ಪಿತಾಚಾರವನ್ನೂ ಅತಿವಿನಯವನ್ನೂ ದೇಹದಂಡನೆಯನ್ನೂ ಬೋಧಿಸುತ್ತಾ ಹೆಸರಿಗೆ ಮಾತ್ರ ಜ್ಞಾನವೆನಿಸಿಕೊಳ್ಳುತ್ತವೆಯಲ್ಲದೆ ಶಾರೀರಿಕ ಇಚ್ಫೆಗಳನ್ನು ನಿಗ್ರಹಿಸುವದರಲ್ಲಿ ಯಾವ ಪ್ರಯೋಜನಕ್ಕೂ ಬರುವದಿಲ್ಲ.

Highlight

Share

Copy

None

Want to have your highlights saved across all your devices? Sign up or sign in