1 ಕೊರಿಂಥದವರಿಗೆ 15
15
ಸತ್ತವರು ಜೀವಿತರಾಗಿ ಎದ್ದುಬರುವದನ್ನು ಕುರಿತದ್ದು
(15.1-58)
ಕ್ರಿಸ್ತನು ಎದ್ದು ಬಂದನೆಂಬದಕ್ಕೆ ಸಾಕ್ಷಿಗಳು
1ಸಹೋದರರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿದಿರಿ, ಅದರಲ್ಲಿ ನಿಂತಿದ್ದೀರಿ. 2ನಾನು ಯಾವ ಸಂಗತಿಯನ್ನು ಹೇಳಿ ನಿಮಗೆ ಸುವಾರ್ತೆಯನ್ನು ತಿಳಿಸಿದೆನೋ ನೀವು ಅದನ್ನು ಗಟ್ಟಿಯಾಗಿ ಹಿಡುಕೊಂಡರೆ ಮತ್ತು ನಿಮ್ಮ ನಂಬಿಕೆಯು ನಿರಾಧಾರವಾಗದ ಪಕ್ಷಕ್ಕೆ ಆ ಸುವಾರ್ತೆಯಿಂದ ನಿಮಗೆ ರಕ್ಷಣೆಯಾಗುತ್ತದೆ. 3ನಾನು ನಿಮಗೆ ತಿಳಿಸಿದ ಮೊದಲನೆಯ ಸಂಗತಿಗಳೊಳಗೆ ಒಂದು ಸಂಗತಿಯನ್ನು ನಿಮಗೆ ತಿಳಿಸಿಕೊಟ್ಟೆನು. ಅದು ನಾನು ಸಹ ಕಲಿತುಕೊಂಡದ್ದೇ. ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; 4ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು. 5ಕೇಫನಿಗೂ ಆಮೇಲೆ ಹನ್ನೆರಡು ಮಂದಿ ಅಪೊಸ್ತಲರಿಗೂ ಕಾಣಿಸಿಕೊಂಡನು. 6ತರುವಾಯ ಒಂದೇ ಸಮಯದಲ್ಲಿ ಐನೂರು ಮಂದಿಗಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು. ಇವರಲ್ಲಿ ಹೆಚ್ಚು ಜನರು ಇಂದಿನವರೆಗೂ ಇದ್ದಾರೆ. ಕೆಲವರು ನಿದ್ರೆಹೋಗಿದ್ದಾರೆ. 7ತರುವಾಯ ಆತನು ಯಾಕೋಬನಿಗೂ ಆಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡನು. 8ಕಟ್ಟಕಡೆಗೆ ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು. 9ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ. 10ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ. ನನಗುಂಟಾದ ಆತನ ಕೃಪೆಯು ನಿಷ್ಫಲವಾಗಲಿಲ್ಲ; ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ. 11ಹಾಗಾದರೆ ನಾನಾದರೇನು ಅವರಾದರೇನು, ಆ ಸಂಗತಿಗಳನ್ನೇ ಸಾರುತ್ತೇವೆ; ಅವುಗಳನ್ನು ನೀವು ನಂಬಿದಿರಿ.
ಕ್ರಿಸ್ತನು ಜೀವಿತನಾಗಿ ಎದ್ದು ಬಂದದ್ದರಿಂದ ಆತನ ಭಕ್ತರೂ ಎದ್ದುಬರುವರು
12ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರೋಣವಾಗುತ್ತಿರುವಲ್ಲಿ ನಿಮ್ಮೊಳಗೆ ಕೆಲವರು - ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವದು ಹೇಗೆ? 13ಸತ್ತವರಿಗೆ ಪುನರುತ್ಥಾನವಿಲ್ಲವೆಂಬದು ನಿಜವಾಗಿದ್ದರೆ ಕ್ರಿಸ್ತನಾದರೂ ಎದ್ದು ಬರಲಿಲ್ಲ; 14ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ಪ್ರಸಂಗವು ಹುರುಳಿಲ್ಲದ್ದು ಮತ್ತು ನಿಮ್ಮ ನಂಬಿಕೆಯೂ ಹುರುಳಿಲ್ಲದ್ದು. 15ಇದಲ್ಲದೆ ಸತ್ತವರು ಎದ್ದು ಬರುವದಿಲ್ಲವೆಂಬದು ನಿಜವಾಗಿದ್ದ ಪಕ್ಷದಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ; ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೆವು. 16ಸತ್ತವರು ಎದ್ದುಬರುವದಿಲ್ಲವಾದರೆ ಕ್ರಿಸ್ತನೂ ಎದ್ದು ಬರಲಿಲ್ಲ. 17ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಿಮ್ಮ ನಂಬಿಕೆಯು ನಿಷ್ಪ್ರಯೋಜನವಾಗಿದೆ, ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ. 18ಇದು ಮಾತ್ರವಲ್ಲದೆ ಕ್ರಿಸ್ತನವರಾಗಿ ನಿದ್ರೆಹೋದವರು ನಾಶವಾದರು. 19ಈ ಜೀವಮಾನಕಾಲದ ಪೂರ್ತಿಗೆ ನಾವು ಕ್ರಿಸ್ತನಲ್ಲಿ ನಿರೀಕ್ಷೆಯಿಟ್ಟುಕೊಂಡದ್ದೇ ಹೊರತು ಮತ್ತೇನೂ ಇಲ್ಲದಿದ್ದರೆ ಎಲ್ಲಾ ಮನುಷ್ಯರಲ್ಲಿಯೂ ನಿರ್ಭಾಗ್ಯರೇ ಸರಿ.
20ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದೇ ಇದ್ದಾನೆ; ನಿದ್ರೆಹೋದವರಲ್ಲಿ ಪ್ರಥಮಫಲವಾದನು. 21ಮನುಷ್ಯನ ಮೂಲಕ ಮರಣವು ಉಂಟಾದ ಕಾರಣ ಮನುಷ್ಯನ ಮೂಲಕ ಸತ್ತವರಿಗೆ ಪುನರುತ್ಥಾನವುಂಟಾಗುವದು. 22ಯಾವ ಪ್ರಕಾರ ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಕ್ರಿಸ್ತನ ಸಂಬಂಧದಿಂದ ಎಲ್ಲರೂ ಜೀವಿತರಾಗುವರು. 23ಆದರೆ ಪ್ರತಿಯೊಬ್ಬನು ತನ್ನ ತನ್ನ ತರಗತಿಯಲ್ಲಿರುವನು. ಕ್ರಿಸ್ತನು ಪ್ರಥಮಫಲ; ತರುವಾಯ ಕ್ರಿಸ್ತನ ಪ್ರತ್ಯಕ್ಷತೆಯಲ್ಲಿ ಆತನವರು ಎದ್ದುಬರುವರು. 24ಆಮೇಲೆ ಆತನು ಬೇರೆ ಎಲ್ಲಾ ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿಮಾಡಿ ತಂದೆಯಾಗಿರುವ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿ. 25ಯಾಕಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವದು ಅವಶ್ಯ. 26ಮರಣವು ಕಡೇ ಶತ್ರುವಾಗಿ ನಿವೃತ್ತಿಯಾಗುವದು. 27ದೇವರು ಸಮಸ್ತವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನಮಾಡಿದ್ದಾನೆಂಬದಾಗಿ ಹೇಳಿಯದೆಯಲ್ಲಾ. ಸಮಸ್ತವೂ ಆತನಿಗೆ ಅಧೀನಮಾಡಲ್ಪಟ್ಟಿದೆ ಎಂದು ಹೇಳುವಾಗ ಸಮಸ್ತವನ್ನು ಅಧೀನಮಾಡಿ ಕೊಟ್ಟಾತನು ಅದರಲ್ಲಿ ಸೇರಲಿಲ್ಲವೆಂಬದು ಸ್ಪಷ್ಟವಾಗಿದೆ. 28ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.
29ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದು ಬರುವದೇ ಇಲ್ಲವೆಂಬದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ. 30ನಾವು ಸಹ ಪ್ರತಿಗಳಿಗೆಯಲ್ಲಿಯೂ ಯಾಕೆ ಜೀವದ ಭಯದಿಂದಿದ್ದೇವೆ? 31ಸಹೋದರರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತು ನನಗಿರುವ ಹೆಚ್ಚಳದ ಮೇಲೆ ಆಣೆ ಇಟ್ಟು ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ. 32ನಾನು ಎಫೆಸದಲ್ಲಿ ಮೃಗಗಳೊಂದಿಗೆ ಯುದ್ಧಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವದಿಲ್ಲವಾದರೆ - ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ. 33ಮೋಸ ಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ. 34ಇಂಥ ಅಮಲಿನಿಂದೆಚ್ಚತ್ತು ನೀತಿವಂತರಾಗಿರಿ, ಪಾಪವನ್ನು ಬಿಟ್ಟುಬಿಡಿರಿ. ಕೆಲವರಿಗೆ ದೇವರ ವಿಷಯದಲ್ಲಿ ಜ್ಞಾನವೇ ಇಲ್ಲ; ನಿಮಗೆ ನಾಚಿಕೆ ಹುಟ್ಟಬೇಕೆಂದು ಇದನ್ನು ಹೇಳುತ್ತೇನೆ.
ಸತ್ತವರು ಯಾವ ಸ್ಥಿತಿಯಲ್ಲಿ ಎದ್ದುಬರುವರೆಂಬದನ್ನು ಕುರಿತದ್ದು
35ಸತ್ತವರು ಹೇಗೆ ಎಬ್ಬಿಸಲ್ಪಡುತ್ತಾರೆ, ಎಂಥ ದೇಹದಿಂದ ಬರುತ್ತಾರೆ ಎಂದು ಒಬ್ಬನು ಕೇಳಾನು. 36ಮೂಢನು ನೀನು; ನೀನು ಬಿತ್ತುವ ಬೀಜವು ಸಾಯದಿದ್ದರೆ, ಜೀವಿತವಾಗುವದಿಲ್ಲ, ನೋಡು; 37ಒಂದು ವೇಳೆ ಗೋದಿಯನ್ನಾಗಲಿ ಬೇರೆ ಯಾವದೋ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಆಗಬೇಕಾದ ದೇಹವನ್ನು ಬಿತ್ತುವದಿಲ್ಲ. 38ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೆ ಅದರದರ ದೇಹವನ್ನು ಕೊಡುತ್ತಾನೆ. 39ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳದು ಬೇರೆ. 40ಇದಲ್ಲದೆ ಪರಲೋಕದ ದೇಹಗಳುಂಟು, ಭೂಲೋಕದ ದೇಹಗಳುಂಟು, ಆದರೆ ಪರಲೋಕದ ದೇಹಗಳ ಮಹಿಮೆ ಬೇರೆ, ಭೂಲೋಕದ ದೇಹಗಳ ಮಹಿಮೆ ಬೇರೆ. 41ಸೂರ್ಯನ ಮಹಿಮೆ ಒಂದು ವಿಧ, ಚಂದ್ರನ ಮಹಿಮೆ ಮತ್ತೊಂದು ವಿಧ, ನಕ್ಷತ್ರಗಳ ಮಹಿಮೆ ಇನ್ನೊಂದು ವಿಧ. ಮಹಿಮೆಯಲ್ಲಿ ಒಂದು ನಕ್ಷತ್ರಕ್ಕೂ ಇನ್ನೊಂದು ನಕ್ಷತ್ರಕ್ಕೂ ಹೆಚ್ಚುಕಡಿಮೆಯುಂಟಷ್ಟೆ.
42ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವದು. ದೇಹವು ಲಯಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ನಿರ್ಲಯಾವಸ್ಥೆಯಲ್ಲಿ ಎದ್ದುಬರುವದು; 43ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಎದ್ದು ಬರುವದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಾವಸ್ಥೆಯಲ್ಲಿ ಎದ್ದು ಬರುವದು; 44ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಆತ್ಮಿಕದೇಹವಾಗಿ ಎದ್ದು ಬರುವದು. ಪ್ರಾಕೃತದೇಹವಿರುವದಾದರೆ ಆತ್ಮಿಕ ದೇಹವೂ ಇರುವದು. 45ಮೊದಲನೆಯ ಮನುಷ್ಯನಾದ ಆದಾಮನು ಬದುಕುವ ಪ್ರಾಣಿಯಾದನೆಂದು ಬರೆದದೆಯಲ್ಲಾ. ಕಡೇ ಆದಾಮನೋ ಬದುಕಿಸುವ ಆತ್ಮನು. 46ಆತ್ಮಿಕವಾದದ್ದು ಮೊದಲನೇದಲ್ಲ, ಪ್ರಾಕೃತವಾದದ್ದು ಮೊದಲನೇದು; ಆಮೇಲೆ ಆತ್ಮಿಕವಾದದ್ದು. 47ಮೊದಲನೆಯ ಮನುಷ್ಯನು ಭೂವಿುಯೊಳಗಿಂದ ಉತ್ಪನ್ನನಾಗಿ ಮಣ್ಣಿಗೆ ಸಂಬಂಧಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು. 48ಮಣ್ಣಿನಿಂದ ಹುಟ್ಟಿದವನು ಎಂಥವನೋ ಮಣ್ಣಿಗೆ ಸಂಬಂಧಪಟ್ಟವರೂ ಅಂಥವರೇ; ಪರಲೋಕದಿಂದ ಬಂದಾತನು ಎಂಥವನೋ ಪರಲೋಕಸಂಬಂಧಪಟ್ಟವರೂ ಅಂಥವರೇ. 49ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾತನ ಸಾರೂಪ್ಯವನ್ನೂ ಧರಿಸಿಕೊಳ್ಳಬೇಕು.
50ಸಹೋದರರೇ, ನಾನು ಹೇಳುವದೇನಂದರೆ - ರಕ್ತ ಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗಲಾರದು; ಲಯವಾಗುವ ವಸ್ತು ನಿರ್ಲಯಪದವಿಗೆ ಬಾಧ್ಯವಾಗುವದಿಲ್ಲ. 51ಕೇಳಿರಿ, ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ - ನಾವೆಲ್ಲರೂ ನಿದ್ರೆ ಹೋಗುವದಿಲ್ಲ; 52ಆದರೆ ಕಡೇ ತುತೂರಿಯ ಧ್ವನಿಯಾಗುವಾಗ ನಾವೆಲ್ಲರು ಒಂದು ಕ್ಷಣದಲ್ಲೇ ರೆಪ್ಪೆ ಬಡಿಯುವಷ್ಟರೊಳಗಾಗಿ ಮಾರ್ಪಡುವೆವು. ತುತೂರಿಯು ಊದಲಾಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ಮಾರ್ಪಡುವೆವು. 53ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವದೂ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವದೂ ಅವಶ್ಯ. 54ಲಯವಾಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವದು. ಆ ಮಾತು ಏನಂದರೆ - ಮರಣವು ನುಂಗಿಯೇ ಹೋಯಿತು, ಜಯವಾಯಿತು ಎಂಬದೇ. 55ಮರಣವೇ, ನಿನ್ನ ಜಯವೆಲ್ಲಿ? ಮರಣವೇ, ನಿನ್ನ ವಿಷದ ಕೊಂಡಿ ಎಲ್ಲಿ? 56ಮರಣದ ಕೊಂಡಿ ಪಾಪವೇ; ಮತ್ತು ಪಾಪದ ಬಲಕ್ಕೆ ಆಧಾರವು ಧರ್ಮಶಾಸ್ತ್ರವೇ. 57ಆದರೆ ದೇವರು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಟ್ಟಿದ್ದಾನೆ; ಆತನಿಗೆ ಸ್ತೋತ್ರ.
58ಆದದರಿಂದ, ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.
Currently Selected:
1 ಕೊರಿಂಥದವರಿಗೆ 15: KANJV-BSI
Highlight
Share
Copy

Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.