YouVersion Logo
Search Icon

1 ಕೊರಿಂಥದವರಿಗೆ 14

14
ವಾಣಿಯನ್ನಾಡುವ ವರಕ್ಕಿಂತ ಪ್ರವಾದಿಸುವ ವರವೇ ವಿಶೇಷವಾದದ್ದು
1ಪ್ರೀತಿಯನ್ನು ಅಭ್ಯಾಸಮಾಡಿಕೊಳ್ಳಿರಿ. ಆದರೂ ಪವಿತ್ರಾತ್ಮನಿಂದುಂಟಾಗುವ ವರಗಳನ್ನು, ಅವುಗಳೊಳಗೆ ವಿಶೇಷವಾಗಿ ಪ್ರವಾದಿಸುವ ವರವನ್ನೇ ಆಸಕ್ತಿಯಿಂದ ಅಪೇಕ್ಷಿಸಿರಿ. 2ವಾಣಿಯನ್ನಾಡುವವನು ದೇವರ ಸಂಗಡ ಮಾತಾಡುತ್ತಾನೆ ಹೊರತು ಮನುಷ್ಯರ ಸಂಗಡ ಆಡುವದಿಲ್ಲ. ಅವನು ಆತ್ಮಪ್ರೇರಿತನಾಗಿ ರಹಸ್ಯಾರ್ಥಗಳನ್ನು ನುಡಿಯುತ್ತಿದ್ದರೂ ಯಾರೂ ತಿಳುಕೊಳ್ಳುವದಿಲ್ಲ. 3ಪ್ರವಾದಿಸುವವರಾದರೋ ಮನುಷ್ಯರ ಸಂಗಡ ಮಾತಾಡುವವನಾಗಿ ಅವರಿಗೆ ಭಕ್ತಿವೃದ್ಧಿಯನ್ನೂ ಪ್ರೋತ್ಸಾಹವನ್ನೂ ಸಂತೈಸುವಿಕೆಯನ್ನೂ ಉಂಟುಮಾಡುತ್ತಾನೆ. 4ವಾಣಿಯನ್ನಾಡುವವನು ತನಗೆ ಮಾತ್ರ ಭಕ್ತಿವೃದ್ಧಿಯನ್ನುಂಟುಮಾಡುತ್ತಾನೆ, ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟುಮಾಡುತ್ತಾನೆ. 5ನೀವೆಲ್ಲರೂ ವಾಣಿಗಳನ್ನಾಡಬೇಕೆಂದು ನಾನು ಅಪೇಕ್ಷಿಸಿದರೂ ಅದಕ್ಕಿಂತಲೂ ನೀವು ಪ್ರವಾದಿಸಬೇಕೆಂಬದೇ ನನ್ನಿಷ್ಟ. ವಾಣಿಗಳನ್ನಾಡುವವನು ಸಭೆಗೆ ಭಕ್ತಿವೃದ್ಧಿಯಾಗುವದಕ್ಕಾಗಿ ಆ ವಾಣಿಯ ಅರ್ಥವನ್ನು ಹೇಳದೆ ಹೋದರೆ ಅವನಿಗಿಂತ ಪ್ರವಾದಿಸುವವನು ಶ್ರೇಷ್ಠ. 6ಹೀಗಿರುವದರಿಂದ ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ದೇವರು ತಿಳಿಸಿದ್ದನ್ನು ಪ್ರಕಟಿಸದೆ ಜ್ಞಾನವಾಕ್ಯವನ್ನಾಡದೆ ಪ್ರವಾದನೆಯನ್ನು ಹೇಳದೆ ಉಪದೇಶಮಾಡದೆ ವಾಣಿಗಳನ್ನು ಮಾತ್ರ ಆಡುವವನಾಗಿದ್ದರೆ ನನ್ನಿಂದ ನಿಮಗೇನು ಪ್ರಯೋಜನವಾದೀತು? 7ಕೊಳಲು ವೀಣೆ ಮೊದಲಾದ ಅಚೇತನ ವಾದ್ಯಗಳು ಸ್ವರಗಳಲ್ಲಿ ಯಾವ ಭೇದವನ್ನೂ ತೋರಿಸದಿದ್ದರೆ ಊದಿದ್ದು ಅಥವಾ ಬಾರಿಸಿದ್ದು ಇಂಥದೇ ಎಂದು ಹೇಗೆ ತಿಳಿಯುವದು? 8ತುತೂರಿಯು ಗೊತ್ತಿಲ್ಲದ ಶಬ್ದವನ್ನು ಕೊಟ್ಟರೆ ಯಾರು ಯುದ್ಧಕ್ಕೆ ಸಿದ್ಧಮಾಡಿಕೊಳ್ಳುವರು? 9ಹಾಗೆಯೇ ನೀವೂ ತಿಳಿಯಬಹುದಾದ ಭಾಷೆಯನ್ನೂ ಬಾಯಿಂದ ಆಡದೆಹೋದರೆ ನಿಮ್ಮ ಮಾತಿನ ಅರ್ಥವನ್ನು ಹೇಗೆ ತಿಳಿಯುವದು? ನೀವು ಗಾಳಿಯ ಸಂಗಡ ಮಾತಾಡಿದ ಹಾಗಿರುವದಷ್ಟೆ. 10ಲೋಕದಲ್ಲಿ ಎಷ್ಟು ವಿಧವಾದ ಭಾಷೆಗಳಿದ್ದರೂ ಅವುಗಳಲ್ಲಿ ಒಂದಾದರೂ ಅರ್ಥವಿಲ್ಲದ್ದಾಗಿರುವದಿಲ್ಲ. 11ಭಾಷೆಯ ಅರ್ಥವು ನನಗೆ ತಿಳಿಯದಿದ್ದರೆ ಮಾತಾಡುವವನಿಗೆ ನಾನು ಅನ್ಯದೇಶದವನಂತಿರುವೆನು; ಮಾತಾಡುವವನು ನನಗೆ ಅನ್ಯದೇಶದವನಂತಿರುವನು. 12ಹಾಗೆಯೇ ನೀವೂ ಆತ್ಮಪ್ರೇರಿತವಾದ ನುಡಿಗಳನ್ನಾಡುವದಕ್ಕೆ ಅಪೇಕ್ಷಿಸುವವರಾಗಿರುವದರಿಂದ ಸಭೆಗೆ ಭಕ್ತಿವೃದ್ಧಿ ಉಂಟಾಗುವ ಹಾಗೆ ಅದಕ್ಕಿಂತಲೂ ಹೆಚ್ಚಾದದ್ದನ್ನು ಮಾಡುವದಕ್ಕೆ ಪ್ರಯತ್ನಿಸಿರಿ. 13ಆದದರಿಂದ ವಾಣಿಯನ್ನಾಡುವವನು ತನಗೆ ಅದರ ಅರ್ಥವನ್ನು ಹೇಳುವ ಶಕ್ತಿಯೂ ಉಂಟಾಗಬೇಕೆಂದು ದೇವರನ್ನು ಪ್ರಾರ್ಥಿಸಲಿ. 14ಯಾಕಂದರೆ ನಾನು ವಾಣಿಯನ್ನಾಡುತ್ತಾ ದೇವರನ್ನು ಪ್ರಾರ್ಥಿಸಿದರೆ ನನ್ನಾತ್ಮವು ಪ್ರಾರ್ಥಿಸುವದೇ ಹೊರತು ನನ್ನ ಬುದ್ಧಿ ನಿಷ್ಫಲವಾಗಿರುವದು. 15ಹಾಗಾದರೇನು? ನಾನು ಆತ್ಮದಿಂದ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು; ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು. 16ನೀನು ಆತ್ಮದಿಂದ ಮಾತ್ರ ದೇವರ ಸ್ತೋತ್ರಮಾಡಿದರೆ ಆ ವರವನ್ನು ಹೊಂದದಿರುವ ಸಭೆಯವನಿಗೆ ನೀನು ಹೇಳಿದ್ದು ತಿಳಿಯದೆ ಇರುವದರಿಂದ ನೀನು ಮಾಡುವ ಕೃತಜ್ಞತಾಸ್ತುತಿಗೆ ಅವನು ಆಮೆನ್ ಎಂದು ಹೇಗೆ ಹೇಳಾನು? 17ನೀನಂತೂ ಚೆನ್ನಾಗಿ ಕೃತಜ್ಞತಾಸ್ತುತಿ ಮಾಡುತ್ತೀ ಹೌದು, ಆದರೆ ಬೇರೊಬ್ಬನು ಭಕ್ತಿವೃದ್ಧಿ ಹೊಂದುವದಿಲ್ಲ. 18ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ವಾಣಿಗಳನ್ನಾಡುತ್ತೇನೆಂದು ದೇವರನ್ನು ಕೊಂಡಾಡುತ್ತೇನೆ. 19ಆದರೂ ಸಭೆಯಲ್ಲಿ ವಾಣಿಯಿಂದ ಹತ್ತು ಸಾವಿರ ಮಾತುಗಳನ್ನಾಡುವದಕ್ಕಿಂತ ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ ಇತರರಿಗೆ ಉಪದೇಶಮಾಡುವದು ನನಗೆ ಇಷ್ಟವಾದದ್ದು. 20ಸಹೋದರರೇ, ಬುದ್ಧಿಯ ವಿಷಯದಲ್ಲಿ ಬಾಲಕರಾಗಿರಬೇಡಿರಿ; ಕೆಟ್ಟತನದ ವಿಷಯದಲ್ಲಿ ಶಿಶುಗಳಾಗಿಯೇ ಇದ್ದು ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಾಗಿರಬೇಕು.
21ಅನ್ಯಭಾಷೆಯವರ ಮೂಲಕವಾಗಿಯೂ ಪರದೇಶಸ್ಥರ ನಾಲಿಗೆಯಿಂದಲೂ ನಾನು ಈ ಜನರ ಸಂಗಡ ಮಾತಾಡುವೆನು; ಆದರೂ ಅವರು ನನ್ನ ಮಾತಿಗೆ ಕಿವಿಕೊಡುವದಿಲ್ಲವೆಂದು ಕರ್ತನು ಹೇಳುತ್ತಾನೆಂಬದಾಗಿ ಧರ್ಮಶಾಸ್ತ್ರದಲ್ಲಿ ಬರೆದದೆ. 22ಆದದರಿಂದ ವಾಣಿಗಳನ್ನಾಡುವದು ನಂಬದವರಿಗೆ ಸೂಚನೆಗಾಗಿದೆ ಹೊರತು ನಂಬುವವರಿಗೆ ಸೂಚನೆಯಲ್ಲವೆಂದು ನಾವು ತಿಳುಕೊಳ್ಳಬೇಕು. ಆದರೆ ಪ್ರವಾದನೆಯು ನಂಬದವರಿಗೋಸ್ಕರವಲ್ಲ ನಂಬುವವರಿಗೋಸ್ಕರವಾಗಿದೆ. 23ಹೀಗಿರುವಲ್ಲಿ ಸಭೆಯೆಲ್ಲಾ ಒಂದೇ ಸ್ಥಳದಲ್ಲಿ ಕೂಡಿಬಂದಾಗ ಎಲ್ಲರೂ ವಾಣಿಗಳನ್ನಾಡಿದರೆ ಈ ವರವನ್ನು ಹೊಂದದಿರುವ ಸಭೆಯವರು ಅಥವಾ ಕ್ರಿಸ್ತನಂಬಿಕೆಯಿಲ್ಲದವರು ಒಳಗೆ ಬಂದು ನೋಡಿ - ನಿಮಗೆ ಹುಚ್ಚು ಹಿಡಿದದೆ ಎಂದು ಹೇಳುವದಿಲ್ಲವೋ? 24ಆದರೆ ನೀವೆಲ್ಲರು ಪ್ರವಾದಿಸುತ್ತಿರಲು ಕ್ರಿಸ್ತನಂಬಿಕೆಯಿಲ್ಲದವನಾಗಲಿ ಈ ವರವಿಲ್ಲದವನಾಗಲಿ ಒಳಗೆ ಬಂದರೆ ಅವನು ಎಲ್ಲರ ಮಾತನ್ನು ಕೇಳಿ ತಾನು ಪಾಪಿಯೆಂಬ ಅರುಹನ್ನು ಹೊಂದುವನು, ಎಲ್ಲರ ಮಾತಿನಿಂದ ಪರಿಶೋಧಿತನಾಗುವನು, 25ಅವನ ಹೃದಯದ ರಹಸ್ಯಗಳು ಬೈಲಾಗುವವು; ಮತ್ತು ಅಡ್ಡಬಿದ್ದು ದೇವರನ್ನು ಆರಾಧಿಸಿ - ದೇವರು ನಿಜವಾಗಿ ನಿಮ್ಮಲ್ಲಿದ್ದಾನೆಂಬದನ್ನು ಪ್ರಚುರ ಪಡಿಸುವನು.
ಸಭೆಯಲ್ಲಿ ಎಲ್ಲವೂ ಮರ್ಯಾದೆಯಿಂದ ನಡೆಯಬೇಕೆಂಬುವ ಬೋಧೆ
26ಹಾಗಾದರೇನು, ಸಹೋದರರೇ? ನೀವು ಕೂಡಿ ಬಂದಿರುವಾಗ ಒಬ್ಬನು ಹಾಡುವದೂ, ಒಬ್ಬನು ಉಪದೇಶಮಾಡುವದೂ, ಒಬ್ಬನು ತನಗೆ ಪ್ರಕಟವಾದದ್ದನ್ನು ತಿಳಿಸುವದೂ, ಒಬ್ಬನು ವಾಣಿಯನ್ನಾಡುವದೂ, ಒಬ್ಬನು ಅದರ ಅರ್ಥವನ್ನು ಹೇಳುವದೂ ಉಂಟಷ್ಟೆ. ನೀವು ಏನೂ ನಡಿಸಿದರೂ ಭಕ್ತಿವೃದ್ಧಿಗಾಗಿಯೇ ನಡಿಸಿರಿ. 27ವಾಣಿಯನ್ನಾಡುವದಾದರೆ ಇಬ್ಬರು ಅಥವಾ ಅವಶ್ಯಕವಿದ್ದರೆ ಮೂವರಿಗಿಂತ ಹೆಚ್ಚಿಲ್ಲದೆ ಒಬ್ಬೊಬ್ಬರಾಗಿ ಮಾತಾಡಬೇಕು; ಮತ್ತು ಒಬ್ಬನೇ ಅರ್ಥವನ್ನು ಹೇಳಬೇಕು. 28ಅರ್ಥವನ್ನು ಹೇಳುವವನಿಲ್ಲದಿದ್ದರೆ ವಾಣಿಯನ್ನಾಡುವವನು ಸಭೆಯಲ್ಲಿ ಸುಮ್ಮಗಿರಲಿ; ತನ್ನೊಂದಿಗೆಯೂ ದೇವರೊಂದಿಗೆಯೂ ಮಾತಾಡಿಕೊಳ್ಳಲಿ. 29ಪ್ರವಾದಿಗಳು ಇಬ್ಬರಾಗಲಿ ಮೂವರಾಗಲಿ ಮಾತಾಡಲಿ, ವಿುಕ್ಕಾದವರು ಕೇಳಿ ವಿವೇಚನೆ ಮಾಡಲಿ. 30ಕೂತಿರುವ ಮತ್ತೊಬ್ಬನಿಗೆ ಪ್ರಕಟನೆ ಉಂಟಾದರೆ ಮೊದಲಿನವನು ಸುಮ್ಮಗಾಗಲಿ. 31ನೀವೆಲ್ಲರು ಒಬ್ಬೊಬ್ಬರಾಗಿ ಪ್ರವಾದಿಸುವದಕ್ಕೆ ಅಡ್ಡಿಯಿಲ್ಲ; ಹೀಗೆ ಮಾಡಿದರೆ ಎಲ್ಲರೂ ಕಲಿತುಕೊಳ್ಳುವರು, ಎಲ್ಲರೂ ಎಚ್ಚರಿಕೆ ಹೊಂದುವರು. 32ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿ ಅವೆ. 33ದೇವರು ಸಮಾಧಾನಕ್ಕೆ ಕಾರಣನೇ ಹೊರತು ಗಲಿಬಿಲಿಗೆ ಕಾರಣನಲ್ಲ.
34ದೇವಜನರ ಎಲ್ಲಾ ಸಭೆಗಳ ಮರ್ಯಾದೆಯ ಪ್ರಕಾರ ಸ್ತ್ರೀಯರು ಸಭೆಯ ಕೂಟಗಳಲ್ಲಿ ಸುಮ್ಮಗಿರಬೇಕು; ಮಾತಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ; ಅವರು ಅಧೀನದಲ್ಲಿರಬೇಕು; ಧರ್ಮಶಾಸ್ತ್ರದಲ್ಲಿಯೂ ಹೀಗೆ ಹೇಳಿಯದೆಯಲ್ಲಾ. 35ಅವರು ಏನಾದರೂ ತಿಳುಕೊಳ್ಳುವದಕ್ಕೆ ಅಪೇಕ್ಷಿಸಿದರೆ ಮನೆಯಲ್ಲಿ ತಮ್ಮ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತಾಡುವದು ನಾಚಿಗೆಗೆಟ್ಟ ಕೆಲಸವಾಗಿದೆ.
36ಏನು, ದೇವರ ವಾಕ್ಯವು ನಿವ್ಮಿುಂದಲೇ ಹೊರಟಿತೋ? ನಿಮಗೆ ಮಾತ್ರವೇ ಬಂತೋ? 37ಯಾವನಾದರೂ ತನ್ನನ್ನು ಪ್ರವಾದಿಯೆಂದಾಗಲಿ ದೇವರಾತ್ಮನಿಂದ ನಡಿಸಲ್ಪಡುವವನೆಂದಾಗಲಿ ಭಾವಿಸಿಕೊಂಡರೆ ನಾನು ನಿಮಗೆ ಬರೆದಿರುವ ಸಂಗತಿಗಳು ಕರ್ತನ ವಿಧಿಯೇ ಎಂದು ಚೆನ್ನಾಗಿ ತಿಳುಕೊಳ್ಳಲಿ. 38ಯಾವನಾದರೂ ತನಗೆ ಇದು ಗೊತ್ತಿಲ್ಲವೆಂದರೆ ಅವನು ಗೊತ್ತಿಗೆ ಬಾರದವನು.
39ಆದಕಾರಣ ನನ್ನ ಸಹೋದರರೇ, ಪ್ರವಾದಿಸುವದಕ್ಕೆ ಆಸಕ್ತಿಯಿಂದ ಅಪೇಕ್ಷಿಸಿರಿ, ಮತ್ತು ವಾಣಿಯನ್ನಾಡುವದಕ್ಕೆ ಬೇಡವೆನ್ನಬಾರದು. 40ಆದರೆ ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ.

Highlight

Share

Copy

None

Want to have your highlights saved across all your devices? Sign up or sign in

Videos for 1 ಕೊರಿಂಥದವರಿಗೆ 14