ಆದಿಕಾಂಡ 9

9
ನೋಹನೊಡನೆ ಒಡಂಬಡಿಕೆ
1ದೇವರು ನೋಹನನ್ನೂ ಅವನ ಮಕ್ಕಳನ್ನೂ ಆಶೀರ್ವದಿಸಿ ಹೀಗೆಂದರು - “ನೀವು ಅಭಿವೃದ್ಧಿಯಾಗಿ ಹೆಚ್ಚು ಮಕ್ಕಳನ್ನು ಪಡೆಯಿರಿ’; ಭೂಲೋಕದಲ್ಲೆಲ್ಲ ಹರಡಿಕೊಳ್ಳಿ. 2ಭೂಮಿಯ ಮೇಲಿರುವ ಎಲ್ಲ ಪ್ರಾಣಿಗಳೂ ಆಕಾಶದ ಎಲ್ಲ ಪಕ್ಷಿಗಳೂ ನೆಲದ ಮೇಲೆ ಹರಿದಾಡುವ ಎಲ್ಲ ಕ್ರಿಮಿಕೀಟಗಳೂ ಸಮುದ್ರದ ಎಲ್ಲ ಮೀನುಗಳೂ ನಿಮಗೆ ಹೆದರಿ ಬೆದರುವುವು. ಅವುಗಳನ್ನೆಲ್ಲ ನಿಮ್ಮ ಸ್ವಾಧೀನಕ್ಕೆ ಕೊಟ್ಟಿದ್ದೇನೆ. 3ಭೂಮಿಯ ಮೇಲೆ ಪೈರುಪಚ್ಚೆಯನ್ನು ಕೊಟ್ಟಂತೆ ಇವುಗಳನ್ನೂ ಕೊಟ್ಟಿದ್ದೇನೆ. 4ಆದರೆ ಮಾಂಸವನ್ನು ಅದರ ಜೀವಸತ್ವವಾದ ರಕ್ತಸಮೇತ ತಿನ್ನಬಾರದು. 5ನಿಮ್ಮ ರಕ್ತಸುರಿಸಿ ಪ್ರಾಣತೆಗೆಯುವವರೆಗೆ ಮುಯ್ಯಿತೀರಿಸುವೆನು - ಮೃಗವಾಗಿದ್ದರೆ ಅದಕ್ಕೂ, ಮನುಷ್ಯನಾಗಿದ್ದರೆ, ಹತನಾದವನು ಅವನ ಸಹೋದರನಾದುದರಿಂದ ಅವನಿಗೂ ಮುಯ್ಯಿತೀರಿಸುವೆನು.
6"ನಿರ್ಮಿಸಿಹರು ದೇವರು ತಮ್ಮ
ಸ್ವರೂಪದಲ್ಲಿ ನರನನ್ನು
ಎಂತಲೆ ನರನನ್ನು ಕೊಲ್ಲುವವನು
ನರನಿಂದಲೇ ಹತನಾಗುವನು.
7ನೀವು ಹೆಚ್ಚಿ ಅಭಿವೃದ್ಧಿಯಾಗಿರಿ,
ನಿಮ್ಮ ಸಂಖ್ಯೆ ಬೆಳೆಯಲಿ
ಭೂಮಿಯಲ್ಲಿ."
8ಇದಲ್ಲದೆ ದೇವರು ನೋಹನಿಗೂ ಅವನ ಮಕ್ಕಳಿಗೂ ಇಂತೆಂದು ಹೇಳಿದರು:
9“ಕೇಳಿ, ನಾನು ನಿಮ್ಮನ್ನೂ ನಿಮ್ಮ ಸಂತತಿಯವರನ್ನೂ 10ನಿಮ್ಮ ಕೂಡ ನಾವೆಯಿಂದ ಹೊರಟುಬಂದ ಪ್ರಾಣಿ-ಪಕ್ಷಿ-ಮೃಗಾದಿ ಸಕಲ ಭೂಜಂತುಗಳನ್ನೂ ಕುರಿತು ಒಂದು ಸ್ಥಿರ ಪ್ರತಿಜ್ಞೆಯನ್ನು ಮಾಡುತ್ತೇನೆ. 11ಆ ಪ್ರತಿಜ್ಞೆ ಏನೆಂದರೆ - ಇನ್ನು ಮೇಲೆ ನಾನು ಪ್ರಾಣಿಗಳನ್ನೆಲ್ಲಾ ಜಲಪ್ರಳಯದಿಂದ ನಾಶಮಾಡುವುದಿಲ್ಲ; ಇನ್ನು ಮುಂದೆ ಭೂಮಿಯನ್ನು ಹಾಳುಮಾಡುವ ಪ್ರಳಯವು ಬರುವುದೇ ಇಲ್ಲ.” 12ದೇವರು ಮತ್ತೆ ಹೇಳಿದ್ದೇನೆಂದರೆ - “ನಾನು ನಿಮ್ಮನ್ನೂ ನಿಮ್ಮ ಸಂಗಡವಿರುವ ಸಮಸ್ತ ಜೀವರಾಶಿಗಳನ್ನೂ ಕುರಿತು ತಲತಲಾಂತರಗಳಿಗೆ ಮಾಡುವ ಈ ಪ್ರತಿಜ್ಞೆಗೆ 13ಮೇಘಗಳಲ್ಲಿ ನಾನಿಟ್ಟಿರುವ ಮಳೆಬಿಲ್ಲೇ ಗುರುತು. ನನಗೂ ಭೂಪ್ರಾಣಿಗಳಿಗೂ ಆದ ಒಡಂಬಡಿಕೆಗೆ ಇದೇ ಕುರುಹು. 14ನಾನು ಜಗದ ಮೇಲೆ ಮೇಘಗಳನ್ನು ಕವಿಸುವಾಗ ಆ ಬಿಲ್ಲು ಮೇಘಗಳಲ್ಲಿ ಕಂಡುಬರುವುದು. 15ಆಗ ನಿಮ್ಮನ್ನೂ ಎಲ್ಲ ಜೀವರಾಶಿಗಳನ್ನೂ ಕುರಿತು ನಾನು ಮಾಡಿದ ಪ್ರತಿಜ್ಞೆಯನ್ನು ನೆನೆಸಿಕೊಳ್ಳುತ್ತೇನೆ. ಇನ್ನು ಮುಂದೆ ಜಲ ಹೆಚ್ಚಿ ಭೂಪ್ರಾಣಿಗಳನ್ನೆಲ್ಲಾ ಹಾಳುಮಾಡುವ ಪ್ರಳಯ ಬರುವುದಿಲ್ಲ. 16ಆ ಬಿಲ್ಲು ಮೇಘಗಳಲ್ಲಿ ಕಾಣಿಸುವಾಗ ನಾನು ಅದನ್ನು ನೋಡಿ ದೇವರಾದ ನನಗೂ ಭೂಮಿಯ ಮೇಲಿರುವ ಎಲ್ಲ ಜೀವಜಂತುಗಳಿಗೂ ಆದ ಶಾಶ್ವತ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುತ್ತೇನೆ,” 17ಇದು ಅಲ್ಲದೆ ದೇವರು ನೋಹನಿಗೆ, “ನನಗೂ ಸಮಸ್ತ ಭೂಜೀವಿಗಳಿಗೂ ಆದ ಒಡಂಬಡಿಕೆಗೆ ಇದೇ ಗುರುತು,” ಎಂದು ಹೇಳಿದರು.
ಕಾನಾನ್ಯರಿಗೆ ಶಾಪ; ಶೇಮ್, ಯೆಫೆತರಿಗೆ ಆಶೀರ್ವಾದ
18ನಾವೆಯಿಂದ ಹೊರಟುಬಂದ ನೋಹನ ಮಕ್ಕಳು ಶೇಮ್, ಹಾಮ್, ಯೆಫೆತ್ ಎಂಬುವರು. (ಹಾಮನು ಕಾನಾನನ ತಂದೆ). 19ಜಗದಲ್ಲೆಲ್ಲ ಹರಡಿಕೊಂಡಿರುವ ಜನರು ನೋಹನ ಈ ಮೂರು ಮಕ್ಕಳಿಂದಲೇ ಉತ್ಪತ್ತಿಯಾದುದು.
20ನೋಹನು ವ್ಯವಸಾಯಗಾರ. ದ್ರಾಕ್ಷಿತೋಟ ಮಾಡುವುದನ್ನು ಪ್ರಾರಂಭಿಸಿದವನು ಅವನೇ. 21ಒಮ್ಮೆ ಅವನು ಕುಡಿದು ಅಮಲೇರಿ ಗುಡಾರದಲ್ಲಿ ಬೆತ್ತಲೆಯಾಗಿ ಬಿದ್ದಿದ್ದನು. 22ತನ್ನ ತಂದೆ ಬೆತ್ತಲೆಯಾಗಿರುವುದನ್ನು ಕಂಡ ಕಾನಾನನ ತಂದೆ ಹಾಮನು ಹೊರಗಿದ್ದ ಶೇಮ್, ಯೆಫೆತ್ ಸೋದರರಿಗೆ ತಿಳಿಸಿದನು. 23ಅವರಿಬ್ಬರು ಬಂದು ಹೊದಿಕೆಯನ್ನು ತೆಗೆದುಕೊಂಡು, ಬೆನ್ನಿನ ಹಿಂದೆ ಹಾಕಿಕೊಂಡು, ಹಿಂದುಹಿಂದಕ್ಕೆ ನಡೆದುಬಂದು ತಂದೆಗೆ ಅದನ್ನು ಹೊದಿಸಿ ಅವನ ಮಾನವನ್ನು ಕಾಪಾಡಿದರು. ಅವರಿಬ್ಬರು ಹಿಮ್ಮುಖರಾಗಿ ಇದ್ದುದರಿಂದ ತಂದೆ ಬೆತ್ತಲೆಯಾಗಿದ್ದುದನ್ನು ನೋಡಲಿಲ್ಲ. 24ನೋಹನಿಗೆ ಅಮಲು ಇಳಿದ ಮೇಲೆ ತನ್ನ ಕಿರಿಯ ಮಗ ಮಾಡಿದ್ದು ತಿಳಿಯಿತು. ಆಗ ಅವನು ಹೀಗೆಂದನು:
25“ಶಾಪ ತಟ್ಟಲಿ ಕಾನಾನಿಗೆ
ದಾಸಾನುದಾಸನಾಗಲಿ ಅವನು ತನ್ನ
ಸೋದರರಿಗೆ”
26"ಸ್ತೋತ್ರ, ಶೇಮನ ದೇವರಾದ
ಸರ್ವೇಶ್ವರನಿಗೆ
ದಾಸನಾಗಲಿ ಕಾನಾನನು
ಶೇಮನಿಗೆ"
27"ಅಭಿವೃದ್ಧಿಯನು ನೀಡಲಿ ದೇವರು
ಯೆಫೆತನಿಗೆ#9:27 ಅಂದರೆ - “ಅಭಿವೃದ್ಧಿ".
ವಾಸವಾಗಿರಲಿವನು ಶೇಮನ
ಗುಡಾರದೊಳಗೆ,
ದಾಸನಾಗಿರಲಿ ಕಾನಾನನು
ಯೆಫೆತನಿಗೆ”
28ಜಲಪ್ರಳಯ ಮುಗಿದ ಮೇಲೆ ನೋಹನು 350 ವರ್ಷ ಬದುಕಿದ್ದನು. 29ಸತ್ತಾಗ ಅವನಿಗೆ ಒಟ್ಟು 950 ವರ್ಷಗಳಾಗಿದ್ದವು.

Kleurmerk

Deel

Kopieer

None

Wil jy jou kleurmerke oor al jou toestelle gestoor hê? Teken in of teken aan

Video vir ಆದಿಕಾಂಡ 9