ಆದಿಕಾಂಡ 4
4
ಕಾಯಿನನಿಂದ ಹೇಬೆಲನ ಕೊಲೆ
1ಆದಾಮನು ತನ್ನ ಹೆಂಡತಿಯ ಜೊತೆ ಕೂಡಲು ಆಕೆ ಗರ್ಭಿಣಿಯಾಗಿ ಕಾಯಿನನನ್ನು#4:1 ಹಿಬ್ರು ಭಾಷೆಯಲ್ಲಿ “ಪಡೆ - ಹಡೆ’ ಎಂದು ಅರ್ಥ. ಹೆತ್ತಳು. “ಸರ್ವೇಶ್ವರ ಸ್ವಾಮಿಯ ಅನುಗ್ರಹದಿಂದ ಒಂದು ಗಂಡುಮಗುವನ್ನು ಪಡೆದಿದ್ದೇನೆ” ಎಂದಳು. 2ತರುವಾಯ ಅವನ ತಮ್ಮನಾದ ಹೇಬೆಲನಿಗೆ ಜನ್ಮವಿತ್ತಳು. ಹೇಬೆಲನು ಕುರಿಗಾಹಿಯಾದನು; ಕಾಯಿನನು ವ್ಯವಸಾಯಗಾರನಾದನು. 3ಕ್ರಮೇಣ ಕಾಯಿನನು ತಾನು ಬೆಳೆಸಿದ ಫಸಲಲ್ಲಿ ಕೆಲವನ್ನು ತಂದು ಸರ್ವೇಶ್ವರ ಸ್ವಾಮಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4ಅಂತೆಯೇ, ಹೇಬೆಲನು ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಕಾಣಿಕೆಯಾಗಿ ತಂದು ಅವುಗಳ ಕೊಬ್ಬನ್ನು ಸಮರ್ಪಿಸಿದನು. 5ಸರ್ವೇಶ್ವರ ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು; ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ. ಇದರಿಂದ ಕಾಯಿನನು ಕಡುಗೋಪಗೊಂಡನು; ಅವನ ಮುಖ ಸಿಂಡರಿಸಿತು. 6ಆಗ ಸರ್ವೇಶ್ವರ ಕಾಯಿನನಿಗೆ, “ಕೋಪವೇಕೆ? ಮುಖ ಸಿಂಡರಿಸಿದೆ ಏಕೆ? 7ನೀನು ಒಳಿತನ್ನು ಮಾಡಿದ್ದರೆ ತಲೆ ಎತ್ತುತ್ತಿದ್ದೆ; ಕೆಡುಕನ್ನು ಮಾಡಿದ್ದರಿಂದ ಪಾಪವು ಹೊಸ್ತಿಲಲ್ಲಿ ಹೊಂಚುಹಾಕುತ್ತಿದೆ; ಅದು ನಿನ್ನನ್ನು ಬಯಸುತ್ತಿದೆ. ನೀನು ಅದನ್ನು ಜಯಿಸಬೇಕು,” ಎಂದರು.
8ಬಳಿಕ ಕಾಯಿನನು ತಮ್ಮ ಹೇಬೆಲನಿಗೆ, “ಹೊಲಕ್ಕೆ ಹೋಗೋಣ ಬಾ”, ಎಂದು ಕರೆದನು. ಅವರಿಬ್ಬರೂ ಅಲ್ಲಿಗೆ ಬಂದಾಗ ಕಾಯಿನನು ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು. 9“ನಿನ್ನ ತಮ್ಮನೆಲ್ಲಿ?" ಎಂದು ಸರ್ವೇಶ್ವರ ಕೇಳಿದಾಗ “ನಾನರಿಯೆ, ನನ್ನ ತಮ್ಮನಿಗೆ ನಾನೇನು ಕಾವಲುಗಾರನೋ” ಎಂದು ಕಾಯಿನನು ಉತ್ತರ ಕೊಟ್ಟನು.
10ಆಗ ಸರ್ವೇಶ್ವರ, “ನೀನು ಎಂಥ ಕೃತ್ಯ ಎಸಗಿದೆ? ಪ್ರತೀಕಾರಕ್ಕಾಗಿ ನೆಲದಿಂದ ನಿನ್ನ ತಮ್ಮನ ರಕ್ತ ಕೂಗಿ ನನಗೆ ಮೊರೆಯಿಡುತ್ತಿದೆ, ಕೇಳು. 11ನಿನ್ನ ಕೈ ಸುರಿಸಿದ ನಿನ್ನ ತಮ್ಮನ ರಕ್ತವನ್ನು ಕುಡಿದ ಈ ನೆಲದಿಂದಾಗಿ ನೀನು ಶಾಪಗ್ರಸ್ತನು; ತಿರಸ್ಕೃತನು. 12ಇದನ್ನು ನೀನು ವ್ಯವಸಾಯ ಮಾಡಿದರೂ ಇನ್ನು ಮುಂದೆ ಇದು ಫಲಕೊಡುವುದಿಲ್ಲ. ನೆಲೆಯಿಲ್ಲದೆ ನೀನು ಲೋಕದಲ್ಲಿ ಅಲೆಮಾರಿಯಾಗಿರಬೇಕು,” ಎಂದರು.
13ಅದಕ್ಕೆ ಕಾಯಿನನು, “ಸರ್ವೇಶ್ವರಾ, ಈ ಶಿಕ್ಷೆ ನನ್ನಿಂದ ಸಹಿಸಲಾಗದಷ್ಟು ಕಠಿಣ. 14ಈ ನಾಡಿನಿಂದ ನನ್ನನ್ನು ಹೊರದೂಡುತ್ತಿರುವಿರಿ, ತಮ್ಮ ಸಾನ್ನಿಧ್ಯ ನನಗಿನ್ನು ದೊರಕದು; ನೆಲೆ ಇಲ್ಲದ ನಾನು ಲೋಕದಲ್ಲಿ ಅಲೆಮಾರಿಯಾಗಿರಬೇಕು; ಕಂಡಕಂಡವರೆಲ್ಲರು ನನ್ನನ್ನು ಕೊಲ್ಲುವರು” ಎಂದು ಹೇಳಿದನು.
15ಅದಕ್ಕೆ ಸರ್ವೇಶ್ವರ, “ಇಲ್ಲ, ಕಾಯಿನನ ಪ್ರಾಣವನ್ನು ತೆಗೆದವನಿಗೆ ಏಳ್ಮಡಿ ದಂಡನೆ ಆಗುವುದು,"ಎಂದು ಹೇಳಿ, ಅವನನ್ನು ಕಂಡವರು ಕೊಲ್ಲದಂತೆ ಅವನ ಮೇಲೆ ಒಂದು ಗುರುತನ್ನು ಇಟ್ಟರು. 16ಕಾಯಿನನು ಸರ್ವೇಶ್ವರ ಸ್ವಾಮಿಯ ಸಾನ್ನಿಧ್ಯದಿಂದ ಹೊರಟುಹೋಗಿ ಏದೆನ್ ನಾಡಿಗೆ ಪೂರ್ವಕ್ಕಿರುವ “ಅಲೆನಾಡು"#4:16 ಮೂಲ - ‘ನೋದ್’. ಎಂಬ ನಾಡಿನಲ್ಲಿ ವಾಸಮಾಡಿದನು.
ಕಾಯಿನನ ಸಂತತಿ
17ಕಾಯಿನನು ತನ್ನ ಹೆಂಡತಿಯ ಜೊತೆ ಕೂಡಲು ಆಕೆ ಗರ್ಭಿಣಿಯಾಗಿ ಹನೋಕನನ್ನು ಹೆತ್ತಳು. ತಾನು ಕಟ್ಟಿದ ಊರಿಗೆ ಕಾಯಿನನು ‘ಹನೋಕ’ ಎಂದು ತನ್ನ ಮಗನ ಹೆಸರನ್ನೇ ಇಟ್ಟನು. 18ಹನೋಕನಿಗೆ ಈರಾದನು ಹುಟ್ಟಿದನು. ಈರಾದನಿಗೆ ಮೆಹೂಯಾಯೇಲನು ಹುಟ್ಟಿದನು. ಮೆಹೂಯಾಯೇಲನಿಗೆ ಮೆತೂಷಾಯೇಲನು, ಮೆತೂಷಾಯೇಲನಿಗೆ ಲೆಮೆಕನು ಹುಟ್ಟಿದರು.
19ಲೆಮೆಕನಿಗೆ ‘ಆದಾ’ ಹಾಗು ‘ಚಿಲ್ಲಾ’ ಎಂಬ ಇಬ್ಬರು ಹೆಂಡಿರು. 20ಆದಾಳು ಯಾಬಾಲನನ್ನು ಹೆತ್ತಳು. ಗುಡಾರಗಳಲ್ಲಿದ್ದು ದನಕರುಗಳನ್ನು ಸಾಕುವವರಿಗೆ ಇವನೇ ಮೂಲಪುರುಷ. 21ಇವನ ತಮ್ಮನ ಹೆಸರು ಯೂಬಾಲ, ಇವನು ಕಿನ್ನರಿ ಕೊಳಲುಗಳನ್ನು ನುಡಿಸುವವರಿಗೆ ಮೂಲಪುರುಷ. 22ಚಿಲ್ಲಾ ಎಂಬುವಳು ತೂಬಲ್ ಕಾಯಿನನಿಗೆ ಜನ್ಮವಿತ್ತಳು. ಇವನು ಕಬ್ಬಿಣ, ಹಿತ್ತಾಳೆ ಆಯುಧಗಳನ್ನು ಮಾಡುವ ಕುಲುಮೆಗಾರರಿಗೆ ಮೂಲಪುರುಷ. ತೂಬಲ್ ಕಾಯಿನನ ತಂಗಿಯ ಹೆಸರು ನಯಮಾ. 23ಲೆಮೆಕನು ತನ್ನ ಹೆಂಡತಿಯರಿಗೆ ಹೀಗೆಂದನು:
ಆದಾ, ಚಿಲ್ಲಾ, ಕೇಳಿ ನಾನು ಹೇಳುವುದನ್ನು
ಲೆಮೆಕನ ಸತಿಯರೇ, ಆಲಿಸಿ ನನ್ನ ಮಾತನ್ನು
ನಾ ಹತಮಾಡಿದೆ ನನಗೆ
ಗಾಯ ಮಾಡಿದವನನ್ನು
ನಾ ಕೊಂದೆ ನನ್ನನ್ನು ಹೊಡೆದಾ
ಪ್ರಾಯದವನನ್ನು.
24ಕಾಯಿನನನ್ನು ಕೊಂದವನಿಗೆ
ಆಗುವುದಾದರೆ ಪ್ರತೀಕಾರ ಏಳ್ಮಡಿ
ಲೆಮೆಕನನ್ನು ಕೊಂದವನಿಗೆ
ಆಗುವುದು ಪ್ರತೀಕಾರ ಎಪ್ಪತ್ತೇಳ್ಮಡಿ.
‘ಸೇತ್’ ಮತ್ತು ಅವನ ಹೆಂಡತಿ
25ಆದಾಮ್ ಮತ್ತು ಅವನ ಹೆಂಡತಿಗೆ ಮತ್ತೊಂದು ಗಂಡುಮಗು ಆಯಿತು. ಅಕೆ, “ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತಾನವನ್ನು ಅನುಗ್ರಹಿಸಿದ್ದಾರೆ,” ಎಂದುಕೊಂಡು ಅವನಿಗೆ “ಸೇತ್"#4:25 ಅಂದರೆ - ಅನುಗ್ರಹಿಸಲ್ಪಟ್ಟವನು. ಎಂದು ನಾಮಕರಣ ಮಾಡಿದಳು. 26ತರುವಾಯ ಸೇತನು ಸಹ ಒಬ್ಬ ಮಗನನ್ನು ಪಡೆದು ಅವನಿಗೆ “ಏನೋಷ್” ಎಂದು ಹೆಸರಿಟ್ಟನು. ಜನರು “ಸರ್ವೇಶ್ವರ” ಎಂಬ ಹೆಸರನ್ನು ಆರಾಧಿಸುವುದಕ್ಕೆ ಪ್ರಾರಂಭಿಸಿದ್ದು ಆ ಕಾಲದಲ್ಲಿಯೇ.
Tans Gekies:
ಆದಿಕಾಂಡ 4: KANCLBSI
Kleurmerk
Deel
Kopieer
Wil jy jou kleurmerke oor al jou toestelle gestoor hê? Teken in of teken aan
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.