ಆದಿಕಾಂಡ 15

15
ಅಬ್ರಾಮನೊಡನೆ ಒಡಂಬಡಿಕೆ
1ಈ ಘಟನೆಗಳೆಲ್ಲ ನಡೆದ ಮೇಲೆ ಅಬ್ರಾಮನಿಗೆ ಒಂದು ದಿವ್ಯದರ್ಶನ ಆಯಿತು. ಅದರಲ್ಲಿ ಸರ್ವೇಶ್ವರ ಸ್ವಾಮಿಯ ಈ ವಾಣಿ ಕೇಳಿಸಿತು:
“ಅಬ್ರಾಮನೇ ಭಯಪಡಬೇಡ,
ನಿನ್ನನ್ನು ರಕ್ಷಿಸುವ ಕವಚ ನಾನೇ,
ಘನವಾದ ಬಹುಮಾನ ಸಿಗುವುದು ನಿನಗೆ".
2ಅದಕ್ಕೆ ಪ್ರತ್ಯುತ್ತರವಾಗಿ ಅಬ್ರಾಮನು - “ಸ್ವಾಮಿ ಸರ್ವೇಶ್ವರಾ, ನನಗೇ ಏನು ಕೊಟ್ಟರೇನು? ನಾನು ಪುತ್ರಸಂತಾನವಿಲ್ಲದವನು. ನನ್ನ ಮನೆಮಾರುಗಳಿಗೆ ಉತ್ತರಾಧಿಕಾರಿ ದಮಸ್ಕದ ಎಲೀಯೆಜರನೇ ಹೊರತು ಮತ್ತಾರೂ ಇಲ್ಲ; 3ನೀವು ನನಗೆ ಮಕ್ಕಳನ್ನು ಕೊಟ್ಟಿಲ್ಲ. ನನ್ನ ಮನೆದಾಸನೇ ನನಗೆ ಉತ್ತರಾಧಿಕಾರಿ,” ಎಂದನು.
4ಮತ್ತೆ ಸ್ವಾಮಿಯ ವಾಣಿ - “ಇಲ್ಲ, ಅವನು ಉತ್ತರಾಧಿಕಾರಿಯಾಗುವುದಿಲ್ಲ, ನಿನ್ನಿಂದ ಹುಟ್ಟಿದವನೇ ನಿನಗೆ ಉತ್ತರಾಧಿಕಾರಿ ಆಗುತ್ತಾನೆ” ಎಂದಿತು. 5ಸರ್ವೇಶ್ವರ ಬಳಿಕ ಅಬ್ರಾಮನನ್ನು ಹೊರಗೆ ಕರೆತಂದು, “ಆಕಾಶದ ಕಡೆಗೆ ನೋಡು. ಆ ನಕ್ಷತ್ರಗಳನ್ನು ನಿನ್ನಿಂದಾದರೆ ಲೆಕ್ಕಿಸು. ನಿನ್ನ ಸಂತಾನವು ಅಷ್ಟು ಅಸಂಖ್ಯಾತವಾಗುವುದು!” ಎಂದರು.
6ಅಬ್ರಾಮನು ಸರ್ವೇಶ್ವರ ಸ್ವಾಮಿಯಲ್ಲಿ ವಿಶ್ವಾಸವಿಟ್ಟನು. ಅವರು ಅವನ ವಿಶ್ವಾಸವೇ ಸರಿಯಾದ ಸಂಬಂಧವೆಂದು ಪರಿಗಣಿಸಿದರು.
7ಸವೇಶ್ವರ ಬಳಿಕ ಅಬ್ರಾಮನಿಗೆ ಇಂತೆಂದರು: “ಈ ನಾಡನ್ನು ನಿನಗೆ ಸೊತ್ತಾಗಿ ಕೊಡಬೇಕೆಂದು ಬಾಬಿಲೋನಿನಲ್ಲಿರುವ ಊರ್ ಪಟ್ಟಣದಿಂದ ನಿನ್ನನ್ನು ಬರಮಾಡಿದ ಸರ್ವೇಶ್ವರ ನಾನೇ,” ಎಂದರು. 8ಅದಕ್ಕೆ ಅಬ್ರಾಮನು, “ಸರ್ವೇಶ್ವರಾ, ಇದು ನನ್ನ ಸೊತ್ತು ಎಂದು ತಿಳಿದುಕೊಳ್ಳುವುದು ಹೇಗೆ?” ಎಂದನು.
9ಸರ್ವೇಶ್ವರ ಪ್ರತ್ಯುತ್ತರವಾಗಿ, “ನೀನು ಮೂರು ಮೂರು ವರ್ಷದ ಒಂದು ಕಡಸನ್ನು, ಒಂದು ಆಡನ್ನು, ಒಂದು ಟಗರನ್ನು, ಒಂದು ಬೆಳವಕ್ಕಿಯನ್ನು ಹಾಗು ಒಂದು ಮರಿಪಾರಿವಾಳವನ್ನು ತೆಗೆದುಕೊಂಡು ಬಾ,” ಎಂದರು. 10ಅಬ್ರಾಮನು ಅವುಗಳನ್ನೆಲ್ಲಾ ತೆಗೆದುಕೊಂಡು ಬಂದು ಆ ಪ್ರಾಣಿಗಳನ್ನು ಕಡಿದು, ಎರಡೆರಡು ಹೋಳುಮಾಡಿ, ತುಂಡಿಗೆ ತುಂಡನ್ನು ಎದುರಾಗಿಟ್ಟನು. ಪಕ್ಷಿಗಳನ್ನು ಮಾತ್ರ ಕಡಿಯಲಿಲ್ಲ. 11ಆ ಪ್ರಾಣಿಗಳ ತುಂಡುಗಳ ಮೇಲೆ ರಣಹದ್ದುಗಳು ಎರಗಿದಾಗ ಅಬ್ರಾಮನು ಅವುಗಳನ್ನು ಓಡಿಸಿಬಿಟ್ಟನು.
12ಹೊತ್ತು ಮುಳುಗುತ್ತಿದ್ದಾಗ ಅಬ್ರಾಮನಿಗೆ ಗಾಢನಿದ್ರೆ ಹತ್ತಿತು. ಭೀಕರವಾದ ಕಾರ್ಗತ್ತಲು ಅವನನ್ನು ಕವಿಯಿತು. 13ಆಗ ಅಬ್ರಾಮನಿಗೆ ಸರ್ವೇಶ್ವರ, “ಇದನ್ನು ನೀನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು: ನಿನ್ನ ಸಂತತಿಯವರು ಅನ್ಯ ನಾಡಿಗೆ ಆಗಂತುಕರಂತೆ ಹೋಗುವರು; ಆ ನಾಡಿಗರಿಗೆ ಗುಲಾಮರಾಗುವರು; ನಾನೂರು ವರ್ಷ ಅಲ್ಲಿಯವರ ಶೋಷಣೆಗೆ ಗುರಿಯಾಗುವರು. 14ಆದರೆ ಅವರನ್ನು ಗುಲಾಮರನ್ನಾಗಿಸಿಕೊಳ್ಳುವ ರಾಷ್ಟ್ರವನ್ನು ನಾನು ದಂಡಿಸುವೆನು. ಬಳಿಕ ಬಿಡುಗಡೆ ಹೊಂದಿ ಅಧಿಕ ಆಸ್ತಿವಂತರಾಗಿ ಹಿಂತಿರುಗುವರು. 15ನೀನಂತೂ ಹಣ್ಣುಹಣ್ಣು ಮುದುಕನಾಗಿ ಶವಸಂಸ್ಕಾರವನ್ನು ಪಡೆಯುವೆ; ಶಾಂತಿ ಸಮಾಧಾನದಿಂದ ನಿನ್ನ ಪಿತೃಗಳನ್ನು ಸೇರುವೆ. 16ನಿನ್ನ ಸಂತತಿಯವರು ನಾಲ್ಕನೆಯ ತಲಾಂತರವಾದ ಮೇಲೆ ಇಲ್ಲಿಗೆ ಮರಳಿ ಬರುವರು. ಏಕೆಂದರೆ ಅಮೋರಿಯರ ಪಾಪಕ್ರಮ ಇನ್ನೂ ಮಾಗಿಲ್ಲ,” ಎಂದರು. 17ಹೊತ್ತು ಮುಳುಗಿ ಕಾರ್ಗತ್ತಲಾದಾಗ ಇಗೋ, ಹೊಗೆಯಾಡುವ ಒಲೆಯೊಂದು ಹಾಗು ಉರಿಯುವ ದೀವಿಟಿಗೆಯೊಂದು ಕಾಣಿಸಿಕೊಂಡು ಆ ತುಂಡುಗಳ ನಡುವೆ ಹಾದುಹೋದವು. 18ಸರ್ವೇಶ್ವರ ಅಂದೇ ಅಬ್ರಾಮನ ಸಂಗಡ ಒಂದು ಒಡಂಬಡಿಕೆಯನ್ನು ಮಾಡಿಕೊಂಡರು: ”ಈಜಿಪ್ಟಿನ ನದಿಯಿಂದ ಯೂಫ್ರೆಟಿಸ್ ಮಹಾನದಿಯವರೆಗೆ, ಕೊಡುವೆನು ಈ ನಾಡೆಲ್ಲವನ್ನು ನಿನ್ನ ಸಂತತಿಯವರಿಗೆ,” 19ಅಂದರೆ. ಕೇನಿಯರು, ಕೆನಿಜೀಯರು, ಕದ್ಮೋನಿಯರು, 20ಹಿತ್ತಿಯರು, ಪೆರಿಜೀಯರು, ರೆಫಾಯರು, 21ಆಮೋರಿಯರು, ಕಾನಾನ್ಯರು, ಗಿರ್ಗಾಷಿಯರು ಹಾಗು ಯೆಬೂಸಿಯರು ವಾಸವಾಗಿರುವ ಪ್ರಾಂತಗಳಿಂದ ಕೂಡಿರುವ ಈ ನಾಡನ್ನು ಕೊಡುವೆನು,” ಎಂದು ವಾಗ್ದಾನ ಮಾಡಿದರು.

Kleurmerk

Deel

Kopieer

None

Wil jy jou kleurmerke oor al jou toestelle gestoor hê? Teken in of teken aan

Video vir ಆದಿಕಾಂಡ 15