YouVersion 標識
搜索圖示

ಆದಿಕಾಂಡ 33

33
ಯಾಕೋಬನು ಏಸಾವನನ್ನು ಸಂಧಿಸಿದ್ದು
1ಯಾಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಮಂದಿ ಮನುಷ್ಯರ ಸಮೇತ ಬರುವದನ್ನು ಕಂಡನು. ಆಗ ಅವನು ಲೇಯಳಿಗೂ ರಾಹೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ ಅವರನ್ನು ಬೇರೆ ಬೇರೆ ಮಾಡಿ ಮುಂದುಗಡೆಯಲ್ಲಿ ದಾಸಿಯರನ್ನೂ 2ಅವರ ಮಕ್ಕಳನ್ನೂ ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ ಕಟ್ಟಕಡೆಯಲ್ಲಿ ರಾಹೇಲಳನ್ನೂ ಯೋಸೇಫನನ್ನೂ ಬರಮಾಡಿದನು. 3ತಾನೇ ಅವರ ಮುಂದಾಗಿ ಹೋಗಿ ತನ್ನ ಅಣ್ಣನಿಗೆ ಸಮೀಪಿಸುತ್ತಿರುವಾಗ ಏಳು ಸಾರಿ ನೆಲದ ತನಕ ಬೊಗ್ಗಿ ನಮಸ್ಕರಿಸಿದನು. 4ಆದರೆ ಏಸಾವನು ಅವನನ್ನು ಎದುರುಗೊಳ್ಳುವದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಕಣ್ಣೀರು ಸುರಿಸಿದರು. 5ತರುವಾಯ ಏಸಾವನು ಕಣ್ಣೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ಕಂಡು - ನಿನ್ನ ಜೊತೆಯಲ್ಲಿರುವ ಇವರು ಯಾರೆಂದು ಕೇಳಲು ಯಾಕೋಬನು ಅವನಿಗೆ - ದೇವರು ನಿನ್ನ ಸೇವಕನಿಗೆ ಅನುಗ್ರಹಿಸಿಕೊಟ್ಟ ಮಕ್ಕಳೇ ಇವರು ಎಂದು ಹೇಳಿದನು. 6ಆಗ ಅವನ ದಾಸಿಯರಿಬ್ಬರೂ ತಮ್ಮ ಮಕ್ಕಳನ್ನು ಕರಕೊಂಡು ಹತ್ತಿರಕ್ಕೆ ಬಂದು ನಮಸ್ಕಾರ ಮಾಡಿದರು; 7ಆಮೇಲೆ ಲೇಯಳು ತನ್ನ ಮಕ್ಕಳೊಡನೆ ಬಂದು ಅಡ್ಡಬಿದ್ದಳು; ಕಡೆಯಲ್ಲಿ ಯೋಸೇಫನೂ ರಾಹೇಲಳೂ ಬಂದು ಎರಗಿದರು. 8ಏಸಾವನು - ನಾನು ದಾರಿಯಲ್ಲಿ ಕಂಡ ಆ ಪಶುಗಳ ಹಿಂಡುಗಳು ಯಾತಕ್ಕೆ ಎಂದು ಕೇಳಲು ಯಾಕೋಬನು - ಸ್ವಾವಿುಯವರ ದಯ ನನಗೆ ದೊರಕಬೇಕೆಂದು ನಾನು ತಮಗೆ ಕಳುಹಿಸಿಕೊಟ್ಟೆನು ಅಂದನು. 9ಏಸಾವನು - ತಮ್ಮನೇ, ನನಗೆ ಬೇಕಾದಷ್ಟು ಆಸ್ತಿಯುಂಟು; ನಿನ್ನದು ನಿನಗೇ ಇರಲಿ ಅನ್ನಲು 10ಯಾಕೋಬನು - ಹಾಗೆ ಅಪ್ಪಣೆಕೊಡಕೂಡದು; ನೀನು ನನ್ನ ಮೇಲೆ ಕಟಾಕ್ಷವಿಟ್ಟು ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಬೇಕು. ನಿನ್ನನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು. ನನ್ನನ್ನು ಪ್ರೀತಿಯಿಂದ ಅಂಗೀಕರಿಸಿದ್ದೇ ವಿಶೇಷ. 11ದೇವರು ನನಗೆ ಕೃಪೆಯನ್ನು ಮಾಡಿದ್ದರಿಂದ ನನಗೆ ಸಮೃದ್ಧಿಯುಂಟು; ಆದಕಾರಣ ನಾನು ಸಮರ್ಪಿಸುವ ಕಾಣಿಕೆಯನ್ನು ನೀನು ದಯವಿಟ್ಟು ಅಂಗೀಕರಿಸಬೇಕು ಎಂದು ಹೇಳಿ ಏಸಾವನನ್ನು ಬಲವಂತಮಾಡಿದ್ದರಿಂದ ಅವನು ಆ ಕಾಣಿಕೆಯನ್ನು ತೆಗೆದುಕೊಂಡನು. 12ತರುವಾಯ ಏಸಾವನು - ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ; ನಾನು ಮುಂದಾಗಿ ಹೋಗುತ್ತೇನೆ ಅಂದನು. 13ಅದಕ್ಕೆ ಯಾಕೋಬನು - ನನ್ನ ಮಕ್ಕಳು ಎಳೇ ಪ್ರಾಯದವರು; ಅದಲ್ಲದೆ ಈದಿರುವ ದನಕುರಿಗಳು ನನ್ನ ಬಳಿಯಲ್ಲಿರುವದು ಪ್ರಭುವಿಗೆ ತಿಳಿದಿದೆ; ಒಂದೇ ದಿನ ಹೆಚ್ಚಾಗಿ ದಾರಿ ನಡಿಸಿದರೆ ಆಡುಕುರಿಗಳೆಲ್ಲವೂ ಸತ್ತು ಹೋದಾವು. 14ತಾವು ದಯವಿಟ್ಟು ಸೇವಕನಿಗಿಂತಲೂ ಮುಂಚೆ ಹೊರಡಬಹುದು. ನಾನು ನನ್ನ ಮುಂದಿರುವ ಆಡುಕುರಿಗಳ ನಡಿಗೆಗೂ ಮಕ್ಕಳ ಶಕ್ತಿಗೂ ಸರಿಯಾಗಿ ಮೆಲ್ಲಮೆಲ್ಲನೆ ನಡೆದು ನನ್ನ ಪ್ರಭುವಿನ ಸೀಮೆಯಾಗಿರುವ ಸೇಯೀರಿಗೆ ಬರುತ್ತೇನೆ ಅಂದನು. 15ಏಸಾವನು - ನನ್ನ ಆಳುಗಳಲ್ಲಿ ಕೆಲವರನ್ನು ನಿನ್ನ ಸಂಗಡ ಬಿಟ್ಟು ಹೋಗುತ್ತೇನೆ ಅನ್ನಲು ಯಾಕೋಬನು - ಅದೇಕೆ, ತಮ್ಮ ದಯೆ ನನ್ನ ಮೇಲಿದ್ದರೆ ಸಾಕು ಎಂದು ಹೇಳಿದನು. 16ಏಸಾವನು ಆ ದಿವಸವೇ ಸೇಯೀರ್ ಸೀಮೆಗೆ ಹೊರಟು ಹೋದನು. 17ಯಾಕೋಬನು ಪ್ರಯಾಣ ಮಾಡಿ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ದನಗಳಿಗೆ ಚಪ್ಪರಗಳನ್ನೂ ಮಾಡಿಸಿದನು; ಆದದರಿಂದ ಆ ಸ್ಥಳಕ್ಕೆ ಸುಕ್ಕೋತ್#33.17 ಸುಕ್ಕೋತ್ ಅಂದರೆ, ಚಪ್ಪರಗಳು. ಎಂದು ಹೆಸರಾಯಿತು.
ಯಾಕೋಬನ ಮಗಳಿಗೆ ಶೆಕೆವಿುನ ಪಟ್ಟಣದಲ್ಲಿ ಮಾನಭಂಗವಾದ್ದರಿಂದ ಆಕೆಯ ಅಣ್ಣಂದಿರು ಆ ಪಟ್ಟಣದವರನ್ನು ಸಂಹರಿಸಿದ್ದು
18ಯಾಕೋಬನು ಪದ್ದನ್ಅರಾವಿುನಿಂದ ಬಂದ ಮೇಲೆ ಕಾನಾನ್‍ದೇಶದ ಶೆಕೆಮ್#33.18 ಪಾಠಾಂತರ: ಶೆಕೆವಿುಗೆ ಸೇರಿರುವ ಸಾಲೆಮ್ ಎಂಬ ಊರಿಗೆ ಬಂದನು. ಪಟ್ಟಣಕ್ಕೆ ಸುರಕ್ಷಿತವಾಗಿ ಸೇರಿದನು. ಆ ಊರಿನ ಮುಂದೆ ತನ್ನ ಗುಡಾರಗಳನ್ನು ಹಾಕಿಸಿಕೊಂಡನು. 19ಅವನು ತನ್ನ ಗುಡಾರಗಳನ್ನು ಹಾಕಿಸಿದ ಭೂವಿುಯನ್ನು ಹಮೋರನ ಮಕ್ಕಳಿಗೆ ನೂರು ವರಹಾ ಕೊಟ್ಟು ಅವರಿಂದ ಕೊಂಡುಕೊಂಡನು. ಹಮೋರನು ಶೆಕೆಮನ ತಂದೆ. 20ಅಲ್ಲಿ ಯಾಕೋಬನು ಯಜ್ಞವೇದಿಯನ್ನು ಕಟ್ಟಿಸಿ#33.20 ಮೂಲ: ನಿಲ್ಲಿಸಿ. ಅದಕ್ಕೆ ಏಲೆಲೋಹೇ#33.20 ಏಲೆಲೋಹೇ ಇಸ್ರಾಯೇಲ್ ಅಂದರೆ, ದೇವರೇ ಇಸ್ರಾಯೇಲನ ದೇವರು. ಇಸ್ರಾಯೇಲ್ ಎಂದು ಹೆಸರಿಟ್ಟನು.

醒目顯示

分享

複製

None

想要在所有設備上保存你的醒目顯示嗎? 註冊或登入