ಲೂಕ. 13
13
ಪಾಪಕ್ಕೆ ವಿಮುಖರಾಗಿರಿ
1ಅದೇ ಸಮಯಕ್ಕೆ ಅಲ್ಲಿದ್ದವರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು, ಬಲಿಯರ್ಪಿಸುತ್ತಾ ಇದ್ದ ಗಲಿಲೇಯದವರನ್ನು ಪಿಲಾತನು ಕೊಲ್ಲಿಸಿದನೆಂಬ ವಿಷಯವನ್ನು ತಿಳಿಸಿದರು. 2ಅದಕ್ಕೆ ಯೇಸು, “ಇಂಥಾ ಕೊಲೆಗೆ ಈಡಾದವರು ಇತರ ಎಲ್ಲ ಗಲಿಲೇಯದವರಿಗಿಂತ ಹೆಚ್ಚು ಪಾಪಿಗಳೆಂದು ಭಾವಿಸುತ್ತೀರೋ? 3ಹಾಗೆ ಭಾವಿಸಕೂಡದು. ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದೆಹೋದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ. 4ಶಿಲೊವಾ ಎಂಬಲ್ಲಿ ಗೋಪುರ ಕುಸಿದು ಬಿದ್ದಾಗ ಹದಿನೆಂಟು ಜನ ಸತ್ತರಲ್ಲವೆ? ಅವರು ಜೆರುಸಲೇಮಿನಲ್ಲಿ ವಾಸವಾಗಿರುವ ಇತರ ಎಲ್ಲಾ ಜನರಿಗಿಂತ ಹೆಚ್ಚು ದೋಷಿಗಳಾಗಿದ್ದರೆಂದು ಭಾವಿಸಿತ್ತೀರೋ? 5ಹಾಗಲ್ಲ, ನೀವು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗದಿದ್ದರೆ, ಅವರ ಹಾಗೆಯೇ ನೀವೂ ನಾಶವಾಗುವಿರಿ,” ಎಂದರು.
ಹಣ್ಣು ಬಿಡದ ಅಂಜೂರ
6ಅನಂತರ ಯೇಸುಸ್ವಾಮಿ ಈ ಸಾಮತಿಯನ್ನು ಹೇಳಿದರು: “ಒಬ್ಬನು ತನ್ನ ದ್ರಾಕ್ಷಿತೋಟದಲ್ಲಿ ಒಂದು ಅಂಜೂರದ ಮರವನ್ನು ನೆಡಿಸಿದ್ದ. ಒಮ್ಮೆ ಅವನು ಬಂದು ಅದರಲ್ಲಿ ಹಣ್ಣನ್ನು ಹುಡುಕಲು ಒಂದೂ ಕಾಣಿಸಲಿಲ್ಲ. 7ತೋಟಗಾರನನ್ನು ಕರೆದು, ‘ನೋಡು, ಮೂರು ವರ್ಷಗಳಿಂದ ಈ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಇದ್ದೇನೆ. ಒಂದಾದರೂ ಕಂಡುಬರಲಿಲ್ಲ. ಇನ್ನು ಇದನ್ನು ಕಡಿದುಹಾಕು. ಭೂಮಿಗೆ ಭಾರವಾಗಿ ಅದರ ಸಾರವನ್ನು ಇದೇಕೆ ವ್ಯರ್ಥ ಮಾಡಬೇಕು?’ ಎಂದು ಹೇಳಿದ. 8ಅದಕ್ಕೆ ತೋಟಗಾರನು, ‘ಸ್ವಾಮೀ, ಈ ಒಂದು ವರ್ಷ ಇದು ಹಾಗೆಯೇ ಇರಲಿ ಬಿಡಿ. ಅಷ್ಟರಲ್ಲಿ ಸುತ್ತಲೂ ಪಾತಿ ತೆಗೆದು ಗೊಬ್ಬರ ಹಾಕುತ್ತೇನೆ. 9ಮುಂದಿನ ವರ್ಷ ಹಣ್ಣು ಬಿಟ್ಟರೆ ಸರಿ; ಇಲ್ಲದಿದ್ದರೆ ಕಡಿದುಹಾಕೋಣ,’ ಎಂದನು.”
ಗುಣಹೊಂದಿದ ಗೂನಿ
10ಒಂದು ಸಬ್ಬತ್‍ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರದಲ್ಲಿ ಬೋಧಿಸುತ್ತಿದ್ದರು. 11ಹದಿನೆಂಟು ವರ್ಷಗಳಿಂದ ದೆವ್ವಪೀಡಿತಳಾಗಿ ನರಳುತ್ತಿದ್ದ ಒಬ್ಬ ಮಹಿಳೆ ಅಲ್ಲಿದ್ದಳು. ಆಕೆ ಒಬ್ಬ ಗೂನಿ; ನೆಟ್ಟಗೆ ನಿಲ್ಲಲು ಸ್ವಲ್ಪವೂ ಆಗುತ್ತಿರಲಿಲ್ಲ. 12ಯೇಸು ಆಕೆಯನ್ನು ನೋಡಿ ಹತ್ತಿರಕ್ಕೆ ಕರೆದು, “ನೋಡಮ್ಮ, ನೀನು ವ್ಯಾಧಿಯಿಂದ ಬಿಡುಗಡೆಯಾದೆ,” ಎಂದು ಹೇಳಿ, 13ಆಕೆಯ ಮೇಲೆ ತಮ್ಮ ಹಸ್ತಗಳನ್ನಿಟ್ಟರು. ತಕ್ಷಣವೇ ಆಕೆ ನೆಟ್ಟಗಾದಳು ಮತ್ತು ದೇವರಿಗೆ ಸ್ತುತಿಸ್ತೋತ್ರ ಸಲ್ಲಿಸಿದಳು.
14ಯೇಸು ಸಬ್ಬತ್‍ದಿನದಲ್ಲಿ ಗುಣಮಾಡಿದ್ದನ್ನು ಕಂಡು, ಪ್ರಾರ್ಥನಾಮಂದಿರದ ಅಧಿಕಾರಿ ಕುಪಿತನಾದನು. ಕೂಡಿದ್ದ ಜನರನ್ನು ಉದ್ದೇಶಿಸಿ, “ಕೆಲಸ ಮಾಡಲು ಆರು ದಿನಗಳಿವೆ, ಆ ದಿನಗಳಲ್ಲಿ ಬಂದು ಗುಣಮಾಡಿಸಿಕೊಳ್ಳಿರಿ; ಸಬ್ಬತ್‍ದಿನದಲ್ಲಿ ಮಾತ್ರ ಕೂಡದು,” ಎಂದನು. 15ಪ್ರಭು, ಅವನಿಗೆ ಪ್ರತ್ಯುತ್ತರವಾಗಿ, “ಕಪಟಿಗಳೇ, ಸಬ್ಬತ್‍ದಿನ ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಕತ್ತೆಯನ್ನಾಗಲಿ, ಎತ್ತನ್ನಾಗಲಿ ಕೊಟ್ಟಿಗೆಯಿಂದ ಬಿಚ್ಚಿ ನೀರಿಗೆ ಹಿಡಿದುಕೊಂಡು ಹೋಗುವುದಿಲ್ಲವೆ? 16ಅಬ್ರಹಾಮನ ವಂಶಜಳಾದ ಈಕೆಯನ್ನು ಸೈತಾನನು ಹದಿನೆಂಟು ವರ್ಷಗಳಿಂದ ಕಟ್ಟಿಹಾಕಿದ್ದನು; ಈ ಕಟ್ಟಿನಿಂದ ಈಕೆಯನ್ನು ಸಬ್ಬತ್‍ದಿನ ಬಿಡಿಸಬಾರದಿತ್ತೆ?” ಎಂದರು.
17ಈ ಉತ್ತರವನ್ನು ಕೇಳಿ ಯೇಸುವಿನ ವಿರೋಧಿಗಳೆಲ್ಲರೂ ನಾಚಿದರು. ಜನರ ಕೂಟವಾದರೋ ಅವರು ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಕಂಡು ಸಂತೋಷಪಟ್ಟಿತು.
ಸಾಸಿವೆ ಕಾಳಿನ ಸಾಮತಿ
(ಮತ್ತಾ. 13:31-32; ಮಾರ್ಕ. 4:30-32)
18ಆಗ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವು ಏನನ್ನು ಹೋಲುತ್ತದೆ? 19ಅದನ್ನು ಯಾವುದಕ್ಕೆ ಹೋಲಿಸಲಿ? ಅದು ಒಂದು ಸಾಸಿವೆಕಾಳಿನಂತೆ ಇದೆ. ಒಬ್ಬನು ಅದನ್ನು ತೆಗೆದುಕೊಂಡು ಹೋಗಿ ತನ್ನ ತೋಟದಲ್ಲಿ ಬಿತ್ತಿದನು. ಅದು ಬೆಳೆದು ಮರವಾಯಿತು. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಮಾಡತೊಡಗಿದವು,” ಎಂದರು.
ಹುಳಿಹಿಟ್ಟಿನ ಸಾಮತಿ
(ಮತ್ತಾ. 13:33)
20ಪುನಃ ಯೇಸುಸ್ವಾಮಿ, “ದೇವರ ಸಾಮ್ರಾಜ್ಯವನ್ನು ಯಾವುದಕ್ಕೆ ಹೋಲಿಸಲಿ? 21ಅದು ಹುಳಿಹಿಟ್ಟಿನಂತೆ ಇದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟಿನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು,” ಎಂದರು.
ಇಕ್ಕಟ್ಟಾದ ಬಾಗಿಲು
(ಮತ್ತಾ. 7:13-14,21-23)
22ಯೇಸುಸ್ವಾಮಿ ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಉಪದೇಶಮಾಡಿಕೊಂಡು ಜೆರುಸಲೇಮಿನತ್ತ ಪ್ರಯಾಣಮಾಡುತ್ತಿದ್ದರು. 23ಆಗ ಒಬ್ಬನು, “ಸ್ವಾಮೀ, ಜೀವೋದ್ಧಾರ ಹೊಂದುವವರು ಕೆಲವರು ಮಾತ್ರವೊ?” ಎಂದು ವಿಚಾರಿಸಿದನು. 24ಆಗ ಯೇಸು ಜನರಿಗೆ, “ಇಕ್ಕಟ್ಟಾದ ಬಾಗಿಲಿನಿಂದಲೇ ಒಳಹೋಗಲು ಸರ್ವಪ್ರಯತ್ನ ಮಾಡಿ. ಏಕೆಂದರೆ, ಅನೇಕರು ಒಳಕ್ಕೆ ಹೋಗಲು ಖಂಡಿತವಾಗಿ ಪ್ರಯತ್ನಿಸುವರು; ಆದರೆ ಅದು ಅವರಿಂದಾಗದು. 25ಮನೆಯ ಯಜಮಾನನು ಎದ್ದು ಬಾಗಿಲನ್ನು ಮುಚ್ಚಿದ ಮೇಲೆ ನೀವು ಹೊರಗಡೆ ನಿಲ್ಲಬೇಕಾಗುವುದು. ಬಾಗಿಲನ್ನು ತಟ್ಟುತ್ತಾ, ‘ಸ್ವಾಮೀ, ನಮಗೆ ಬಾಗಿಲು ತೆರೆಯಿರಿ,’ ಎಂದು ನೀವು ಕೇಳುವಿರಿ. ಅದಕ್ಕೆ ಅವನು, ‘ನೀವು ಎಲ್ಲಿಯವರೋ ನಾನು ಅರಿಯೆ’ ಎನ್ನುವನು. 26ಆಗ ನೀವು, ‘ನಿಮ್ಮೊಂದಿಗೆ ನಾವು ಊಟಮಾಡಿದ್ದೇವೆ, ಪಾನಮಾಡಿದ್ದೇವೆ; ನೀವು ನಮ್ಮ ಬೀದಿಗಳಲ್ಲಿ ಉಪದೇಶಮಾಡಿದ್ದೀರಿ,’ ಎಂದು ಹೇಳಲಾರಂಭಿಸುವಿರಿ. 27ಆದರೆ ಅವನು ಪುನಃ, ‘ನೀವು ಎಲ್ಲಿಯವರೋ ನಾನರಿಯೆ. ಅಕ್ರಮಿಗಳೇ, ಎಲ್ಲರೂ ನನ್ನಿಂದ ತೊಲಗಿರಿ,’ ಎಂದು ಸ್ಪಷ್ಟವಾಗಿ ನುಡಿಯುವನು. 28ಅಬ್ರಹಾಮ, ಇಸಾಕ, ಯಕೋಬ ಮತ್ತು ಎಲ್ಲಾ ಪ್ರವಾದಿಗಳು ದೇವರ ಸಾಮ್ರಾಜ್ಯದಲ್ಲಿ ಇರುವುದನ್ನೂ ನಿಮ್ಮನ್ನು ಮಾತ್ರ ಹೊರಗೆ ಹಾಕಿರುವುದನ್ನೂ ನೋಡುವಾಗ ನಿಮಗಾಗುವ ಗೋಳಾಟವೇನು! ಹಲ್ಲು ಕಡಿತವೇನು!! 29ಚತುರ್ದಿಕ್ಕುಗಳಿಂದಲೂ ಜನರು ಬಂದು, ದೇವರ ಸಾಮ್ರಾಜ್ಯದ ಹಬ್ಬದೂಟದಲ್ಲಿ ಭಾಗಿಗಳಾಗುವರು.
30“ಇಗೋ, ಕಡೆಯವರಲ್ಲಿ ಕೆಲವರು ಮೊದಲಿಗರಾಗುವರು. ಮೊದಲಿಗರಲ್ಲಿ ಕೆಲವರು ಕಡೆಯವರಾಗುವರು,” ಎಂದರು.
ಜೆರುಸಲೇಮನ್ನು ಕುರಿತು ಪ್ರಲಾಪ
(ಮತ್ತಾ. 23:37-39)
31ಅದೇ ಸಮಯಕ್ಕೆ ಸರಿಯಾಗಿ ಕೆಲವು ಮಂದಿ ಫರಿಸಾಯರು ಯೇಸುಸ್ವಾಮಿಯ ಬಳಿಗೆ ಬಂದು, “ಇಲ್ಲಿಂದ ಹೊರಟು ಹೋಗಿಬಿಡಿ, ಹೆರೋದನು ನಿಮ್ಮನ್ನು ಕೊಲ್ಲಬೇಕೆಂದಿದ್ದಾನೆ,” ಎಂದರು. 32ಅದಕ್ಕೆ ಯೇಸು, “ನೀವು ಹೋಗಿ ಆ ನರಿಗೆ ಹೀಗೆಂದು ತಿಳಿಸಿರಿ: ಇಂದು ಮತ್ತು ನಾಳೆ ದೆವ್ವಗಳನ್ನು ಬಿಡಿಸುತ್ತೇನೆ, ರೋಗಿಗಳನ್ನು ಗುಣಪಡಿಸುತ್ತೇನೆ, ಮೂರನೆಯ ದಿನ ನನ್ನ ಕಾರ್ಯಸಿದ್ಧಿಗೆ ಬರುವುದು. 33ಹೇಗೂ ಇಂದು, ನಾಳೆ ಮತ್ತು ನಾಡಿದ್ದು ನಾನು ನನ್ನ ಮಾರ್ಗವನ್ನು ಮುಂದುವರಿಸಬೇಕು. ಪ್ರವಾದಿಯಾದವನು ಜೆರುಸಲೇಮಿನ ಹೊರಗೆ ಕೊಲೆಗೀಡಾಗುವುದು ಸಲ್ಲದು.
34“ಓ ಜೆರುಸಲೇಮೇ, ಜೆರುಸಲೇಮೇ, ಪ್ರವಾದಿಗಳ ಕೊಲೆಪಾತಕಿಯೇ, ದೇವರು ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲುಗಳಿಂದ ಹೊಡೆಯುವವಳೇ, ಕೋಳಿ ತನ್ನ ಮರಿಗಳನ್ನು ರೆಕ್ಕೆಗಳಡಿ ಸೇರಿಸಿಕೊಳ್ಳುವಂತೆ, ನಾನು ನಿನ್ನ ಮಕ್ಕಳನ್ನು ಒಂದಾಗಿ ಸೇರಿಸಿ ಅಪ್ಪಿಕೊಳ್ಳಲು ಎಷ್ಟೋ ಬಾರಿ ಅಪೇಕ್ಷಿಸಿದೆ. 35ಆದರೆ ನೀನು ಒಪ್ಪಲಿಲ್ಲ. ಇಗೋ, ನಿಮ್ಮ ದೇವಾಲಯ ಪಾಳುಬೀಳುವುದು. ‘ಸರ್ವೇಶ್ವರನ ನಾಮದಲ್ಲಿ ಬರುವವರು ಧನ್ಯರು,’ ಎಂದು ನೀವಾಗಿ ಹೇಳುವ ದಿನದವರೆಗೂ ನೀವು ನನ್ನನ್ನು ಕಾಣಲಾರಿರಿ, ಎಂಬುದು ನಿಶ್ಚಯ,” ಎಂದರು.
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.