YouVersion 標誌
搜尋圖標

ಯೊವಾನ್ನ 7

7
ಯೇಸು ಮತ್ತು ಸಹೋದರರು
1ಇದಾದ ಬಳಿಕ ಯೇಸುಸ್ವಾಮಿ ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ. 2ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಹತ್ತಿರವಾಗುತ್ತಿತ್ತು. ಯೇಸುವಿನ ಸೋದರರು, 3“ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಅಲ್ಲಿ ನೀನು ಮಾಡುವುದನ್ನೆಲ್ಲಾ ನಿನ್ನ ಅನುಯಾಯಿಗಳು ನೋಡಲಿ. 4ಪ್ರಖ್ಯಾತನಾಗಬೇಕೆಂದಿರುವ ಯಾರೂ ತನ್ನ ಕಾರ್ಯಗಳನ್ನು ಮರೆಯಲ್ಲಿ ಮಾಡುವುದಿಲ್ಲ, ಇವನ್ನೆಲ್ಲಾ ನೀನು ಮಾಡುವುದಾದರೆ ಲೋಕಕ್ಕೆ ಪ್ರಕಟವಾಗುವಂತೆ ಮಾಡಬೇಕು,” ಎಂದು ಯೇಸುವಿಗೆ ಹೇಳಿದರು. 5ಅವರ ಸೋದರರಿಗೆ ಕೂಡ ಅವರಲ್ಲಿ ವಿಶ್ವಾಸವಿರಲಿಲ್ಲ. 6ಅದಕ್ಕೆ ಯೇಸು, “ನನಗೆ ಸೂಕ್ತ ಸಮಯ ಇನ್ನೂ ಬಂದಿಲ್ಲ, ನಿಮಗಾದರೋ ಎಲ್ಲಾ ಸಮಯವೂ ಒಂದೇ. 7ಲೋಕಕ್ಕೆ ನಿಮ್ಮ ಮೇಲೆ ಹಗೆಯಿಲ್ಲ. ಅದಕ್ಕೆ ಹಗೆಯಿರುವುದು ನನ್ನ ಮೇಲೆ. ಏಕೆಂದರೆ, ಅದರ ವರ್ತನೆ ಕೆಟ್ಟದೆಂದು ನಾನು ಯಥಾರ್ಥವಾಗಿ ಹೇಳುತ್ತಾ ಇದ್ದೇನೆ. 8ಹಬ್ಬಕ್ಕೆ ನೀವೇ ಹೋಗಿರಿ, ನನಗೆ ಸಮಯವು ಇನ್ನೂ ಬಂದಿಲ್ಲವಾದ ಕಾರಣ ನಾನು ಹಬ್ಬಕ್ಕೆ ಈಗ ಹೋಗುವುದಿಲ್ಲ,” ಎಂದು ಹೇಳಿ 9ಯೇಸು ಗಲಿಲೇಯದಲ್ಲೇ ಉಳಿದುಕೊಂಡರು.
ಪರ್ಣಕುಟೀರ ಹಬ್ಬದಲ್ಲಿ ಯೇಸು
10ಯೇಸುಸ್ವಾಮಿಯ ಸೋದರರು ಹಬ್ಬಕ್ಕೆಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ. 11ಹಬ್ಬದ ಸಮಯದಲ್ಲಿ ಯೆಹೂದ್ಯರು ಯೇಸು ಎಲ್ಲಿದ್ದಾನೆಂದು ಹುಡುಕುತ್ತಿದ್ದರು. ಯೇಸುವನ್ನು ಕುರಿತು ಜನರ ಗುಂಪು ಗುಜುಗುಜು ಮಾತನಾಡುತ್ತಿತ್ತು. 12‘ಆತ ಒಳ್ಳೆಯ ವ್ಯಕ್ತಿ’ ಎಂದು ಕೆಲವರು ಹೇಳಿದರೆ, ‘ಇಲ್ಲ, ಆತನು ಜನರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾನೆ,’ ಎನ್ನುತ್ತಿದ್ದರು ಇತರರು. 13ಯೆಹೂದ್ಯರಿಗೆ ಅಂಜಿ ಅವರಾರೂ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. 14ಹಬ್ಬವು ಅರ್ಧಕ್ಕೆ ಅರ್ಧ ಮುಗಿಯತು. ಆಗ ಯೇಸು ಮಹಾದೇವಾಲಯಕ್ಕೆ ಹೋಗಿ ಬೋಧನೆ ಮಾಡತೊಡಗಿದರು. 15ಅದನ್ನು ಕೇಳಿ ಯೆಹೂದ್ಯ ಅಧಿಕಾರಿಗಳು ಬೆರಗಾದರು. “ಕಲಿಯದಿದ್ದರೂ ಈ ಮನುಷ್ಯನಿಗೆ ಇಷ್ಟೆಲ್ಲಾ ಪಾಂಡಿತ್ಯ ಎಲ್ಲಿಂದ ಬಂದಿತು?” ಎಂದು ವಿಚಾರಿಸತೊಡಗಿದರು.
16ಆಗ ಯೇಸು ಸ್ವಾಮಿ, “ನಾನು ಮಾಡುವ ಬೋಧನೆ ನನ್ನದಲ್ಲ; ನನ್ನನ್ನು ಕಳುಹಿಸಿದಾತನದು. 17ದೇವರ ಚಿತ್ತದಂತೆ ನಡೆಯಲು ಮನಸ್ಸು ಉಳ್ಳವನಿಗೆ, ನಾನು ಬೋಧಿಸುವುದು ದೇವರಿಂದ ಬಂದುದೋ ಅಥವಾ ನನ್ನ ಸ್ವಂತ ಕಲ್ಪನೆಯೋ ಎಂಬುದು ತಿಳಿಯುತ್ತದೆ. 18ಸ್ವಂತ ಕಲ್ಪನೆಯಿಂದ ಮಾತನಾಡುವವನು ತನ್ನ ಸ್ವಪ್ರತಿಷ್ಠೆಯನ್ನು ಬಯಸುತ್ತಾನೆ. ತನ್ನನ್ನು ಕಳುಹಿಸಿದಾತನ ಪ್ರತಿಷ್ಠೆಯನ್ನು ಬಯಸುವವನು ಪ್ರಾಮಾಣಿಕನು. ಕಪಟವೆಂಬುದು ಅವನಲ್ಲಿ ಇರದು. 19ಮೋಶೆ ಕೊಟ್ಟ ಧರ್ಮಶಾಸ್ತ್ರ ನಿಮಗಿದೆಯಲ್ಲವೇ, ಆದರೂ ಅದಕ್ಕೆ ಸರಿಯಾಗಿ ನಡೆಯುವವರಾರೂ ನಿಮ್ಮಲ್ಲಿ ಇಲ್ಲ. ನನ್ನನ್ನು ಕೊಲ್ಲಬೇಕೆಂದು ನೀವು ಹವಣಿಸುವುದೇಕೆ?” ಎಂದರು. 20ಅದಕ್ಕೆ ಆ ಜನರು, “ನಿನಗೆ ದೆವ್ವ ಹಿಡಿದಿರಬೇಕು; ನಿನ್ನನ್ನು ಕೊಲ್ಲಲು ಹವಣಿಸುತ್ತಿರುವವರಾದರು ಯಾರು?” ಎಂದರು. 21ಯೇಸು ಅವರಿಗೆ, “ಸಬ್ಬತ್ ದಿನ ನಾನು ಮಾಡಿದ್ದು ಒಂದು ಸೂಚಕಕಾರ್ಯ ಮಾತ್ರ. ಅಷ್ಟಕ್ಕೇ ನೀವೆಲ್ಲರೂ ಕಂಗಾಲಾಗಿದ್ದೀರಿ. 22ಸುನ್ನತಿಯನ್ನು ಆಚರಿಸಬೇಕೆಂದು ನಿಯಮಿಸಿದವನು ಮೋಶೆ. (ವಾಸ್ತವವಾಗಿ ಅದು ಮೋಶೆಯ ಕಾಲದಿಂದಲ್ಲ, ಪೂರ್ವಜರ ಕಾಲದಿಂದಲೂ ರೂಢಿಯಲ್ಲಿತ್ತು). ಸಬ್ಬತ್ ದಿನದಲ್ಲಿಯೂ ನೀವು ಸುನ್ನತಿಯನ್ನು ಮಾಡುವುದುಂಟು. 23ಮೋಶೆಯ ನಿಯಮವನ್ನು ಉಲ್ಲಂಘಿಸದೆ ನೀವು ಸಬ್ಬತ್ ದಿನದಲ್ಲಿ ಒಬ್ಬನಿಗೆ ಸುನ್ನತಿ ಮಾಡಬಹುದಾದರೆ ಅದೇ ಸಬ್ಬತ್ ದಿನದಲ್ಲಿ ನಾನು ಒಬ್ಬ ಮನುಷ್ಯನನ್ನು ಸಂಪೂರ್ಣ ಸ್ವಸ್ಥಪಡಿಸಿದ್ದಕ್ಕೆ ನೀವು ಸಿಟ್ಟಾಗಬೇಕೆ? 24ಬರೀ ತೋರಿಕೆಯಿಂದ ತೀರ್ಪುಕೊಡುವುದು ಸಲ್ಲದು; ನಿಮ್ಮ ತೀರ್ಪು ನ್ಯಾಯಬದ್ಧವಾಗಿರಬೇಕು,” ಎಂದು ಹೇಳಿದರು.
ಯೇಸು ಲೋಕೋದ್ಧಾರಕನೆ?
25ಜೆರುಸಲೇಮಿನ ಕೆಲವುಮಂದಿ ಇದನ್ನು ಕೇಳಿ, “ಅವರು ಕೊಲ್ಲಬೇಕೆಂದು ಹವಣಿಸುತ್ತಾ ಇರುವುದು ಈತನನ್ನೇ ಅಲ್ಲವೆ? 26ಇಗೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೂ ಈತನಿಗೆ ವಿರುದ್ಧವಾಗಿ ಅವರಾರೂ ಮಾತೆತ್ತುತ್ತಿಲ್ಲ! ಈತನೇ ಲೋಕೋದ್ಧಾರಕನೆಂದು ಆ ಮುಖಂಡರಿಗೆ ಹೊಳೆದಿರಬಹುದೆ? 27ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತನು ಎಲ್ಲಿಂದ ಬಂದನೆಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಈತನು ಎಲ್ಲಿಂದ ಬಂದವರೆಂದು ನಮ್ಮೆಲ್ಲರಿಗೂ ತಿಳಿದಿದೆಯಲ್ಲಾ!” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 28ಆದುದರಿಂದ ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸು ಸ್ವಾಮಿ ಆಗ ಗಟ್ಟಿಯಾಗಿ ಇಂತೆಂದರು: “ನಾನು ಯಾರೆಂದು, ಎಲ್ಲಿಂದ ಬಂದವನೆಂದು ನೀವು ಬಲ್ಲಿರೋ? ನಾನು ನನ್ನಷ್ಟಕ್ಕೇ ಬಂದವನಲ್ಲ: ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ. 29ನಾನಾದರೋ ಆತನನ್ನು ಅರಿತಿದ್ದೇನೆ. ಏಕೆಂದರೆ, ನಾನು ಬಂದುದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು,” 30ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆ ಇನ್ನೂ ಬಾರದೆ ಇದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಿಲ್ಲ. 31ಅಲ್ಲಿ ನೆರೆದಿದ್ದ ಹಲವರಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು. “ಲೋಕೋದ್ಧಾರಕ ಬಂದಾಗ ಈತನು ಮಾಡಿದ್ದಕ್ಕೂ ಮಿಗಿಲಾದ ಸೂಚಕಕಾರ್ಯಗಳನ್ನು ಮಾಡಿಯಾನೆ?” ಎಂದುಕೊಂಡರು.
ಯೇಸುವನ್ನು ಬಂಧಿಸಲು ಸಂಚು
32ಯೇಸು ಸ್ವಾಮಿಯನ್ನು ಕುರಿತು ಜನರು ಹೀಗೆ ಆಡುತ್ತಿದ್ದ ಗುಸುಗುಸು ಮಾತು ಫರಿಸಾಯರ ಕಿವಿಗೆ ಮುಟ್ಟಿತು. ಅವರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸಲು ಕಾಲಾಳುಗಳನ್ನು ಕಳುಹಿಸಿದರು. 33ಆಗ ಯೇಸು, “ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ. ಅನಂತರ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟುಹೋಗುತ್ತೇನೆ. 34ಆಗ ನೀವು ನನ್ನನ್ನು ಹುಡುಕುವಿರಿ. ಆದರೆ ನಾನು ನಿಮಗೆ ಕಾಣಸಿಗುವುದಿಲ್ಲ. ನಾನು ಇರುವಲ್ಲಿಗೆ ನೀವು ಬರುವಂತೆಯೂ ಇಲ್ಲ,” ಎಂದು ಹೇಳಿದರು. 35ಯೆಹೂದ್ಯ ಅಧಿಕಾರಿಗಳು, “ನಮಗೆ ಕಾಣಸಿಗದ ಹಾಗೆ ಇವನು ಎಲ್ಲಿ ಹೋಗಲಿದ್ದಾನೆ? ಗ್ರೀಕರ ನಡುವೆ ಚದರಿಹೋಗಿರುವ ಯೆಹೂದ್ಯರಲ್ಲಿಗೆ ಹೋಗಿ ಅವರಿಗೆ ಬೋಧಿಸುವನೋ? 36‘ನನ್ನನ್ನು ಅರಸುವಿರಿ, ಆದರೆ ನಾನು ನಿಮಗೆ ಕಾಣಸಿಗುವುದಿಲ್ಲ. ನಾನಿರುವಲ್ಲಿಗೆ ನೀವು ಬರುವಂತಿಲ್ಲ’ ಎಂದು ಇವನು ಹೇಳುವುದರ ಅರ್ಥ ಏನಿರಬಹುದು?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
ಜೀವದಾಯಕ ಹೊನಲು
37ಹಬ್ಬದ ಕೊನೆಯ ದಿನ ಮಹಾದಿನ ಆಗಿತ್ತು. ಅಂದು ಯೇಸು ಸ್ವಾಮಿ ಅಲ್ಲಿ ನಿಂತುಕೊಂಡು, “ಬಾಯಾರಿದವನು ನನ್ನ ಬಳಿಗೆ ಬಂದು ಕುಡಿಯಲಿ. 38ಪವಿತ್ರಗ್ರಂಥದಲ್ಲಿ ಹೇಳಿರುವಂತೆ, ‘ನನ್ನಲ್ಲಿ ವಿಶ್ವಾಸವಿಡುವವನ ಹೃದಯದಿಂದ ಜೀವಜಲ ಹೊನಲುಹೊನಲಾಗಿ ಹರಿಯುವುದು,’ “ ಎಂದು ಕೂಗಿ ಹೇಳಿದರು. 39ತಮ್ಮಲ್ಲಿ ವಿಶ್ವಾಸವಿಡುವವರು ಪಡೆಯಲಿದ್ದ ಪವಿತ್ರಾತ್ಮರನ್ನು ಕುರಿತೇ ಯೇಸು ಹೀಗೆ ಹೇಳಿದ್ದು. ಪವಿತ್ರ ಆತ್ಮ ಇನ್ನೂ ಬಂದಿರಲಿಲ್ಲ. ಏಕೆಂದರೆ, ಯೇಸು ಇನ್ನೂ ಮೇಲೇರಿ ಮಹಿಮೆಯನ್ನು ಪಡೆದಿರಲಿಲ್ಲ.
ಜನರಲ್ಲಿ ಭಿನ್ನಭಾವನೆ
40ಇದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು, “ಬರಬೇಕಾಗಿದ್ದ ಪ್ರವಾದಿ ಈತನೇ ಸರಿ,” ಎಂದರು. 41ಇನ್ನೂ ಕೆಲವರು, “ಈತನೇ ಲೋಕೋದ್ಧಾರಕ,” ಎಂದರು. ಮತ್ತೆ ಕೆಲವರು, “ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ? 42‘ಆತ ದಾವೀದ ವಂಶಜನು; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೇಮಿನಲ್ಲಿ’ ಎಂದು ಪವಿತ್ರಗ್ರಂಥವೇ ಹೇಳಿದೆಯಲ್ಲವೆ?” ಎಂದು ವಾದಿಸಿದರು. 43ಹೀಗೆ ಯೇಸುವನ್ನು ಕುರಿತು ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. 44ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು, ಆದರೆ ಯಾರೂ ಅವರ ಮೇಲೆ ಕೈಹಾಕಲಿಲ್ಲ.
ವಿಶ್ವಾಸವಿಹೀನ ಮುಖಂಡರು
45ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು, “ಅವನನ್ನೇಕೆ ನೀವು ಹಿಡಿದು ತರಲಿಲ್ಲ?” ಎಂದು ಕೇಳಿದರು. 46ಅವರು, “ಆತನು ಮಾತನಾಡುವಂತೆ ಯಾರೂ ಎಂದೂ ಮಾತನಾಡಿದ್ದಿಲ್ಲ,” ಎಂದು ಉತ್ತರಿಸಿದರು. 47ಅದಕ್ಕೆ ಫರಿಸಾಯರು, “ಏನು, ನೀವು ಕೂಡ ಅವನಿಗೆ ಮರುಳಾಗಿಬಿಟ್ಟಿರೋ? 48ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ, ಯಾರಾದರೂ ಅವನನ್ನು ನಂಬಿದ್ದುಂಟೆ? 49ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನಜಂಗುಳಿ ಶಾಪಗ್ರಸ್ತವಾಗಿದೆ,” ಎಂದರು. 50ಅಲ್ಲಿದ್ದ ಫರಿಸಾಯರಲ್ಲಿ ನಿಕೊದೇಮನು ಒಬ್ಬನು. ಹಿಂದೆ ಯೇಸುವನ್ನು ಕಾಣಲು ಬಂದಿದ್ದವನು ಈತನೇ. 51ಈತನು ಅವರಿಗೆ, “ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ, ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?” ಎಂದು ಕೇಳಿದನು. 52ಅದಕ್ಕೆ ಅವರು, “ನೀನೂ ಗಲಿಲೇಯದವನೋ? ಪವಿತ್ರಗ್ರಂಥವನ್ನು ಓದಿನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೇ ಗೊತ್ತಾಗುತ್ತದೆ,” ಎಂದು ಮರುತ್ತರಕೊಟ್ಟರು. 53ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.

醒目顯示

分享

複製

None

想在你所有裝置上儲存你的醒目顯示?註冊帳戶或登入