YouVersion 標誌
搜尋圖標

ಆದಿಕಾಂಡ 18

18
ಅಬ್ರಹಾಮನಿಗೆ ಪುತ್ರ ವಾಗ್ದಾನ
1ಒಂದು ದಿನ ಅಬ್ರಹಾಮನು ಉರಿಬಿಸಿಲ ವೇಳೆಯಲ್ಲಿ ಮಮ್ರೋತೋಪಿನ ತನ್ನ ಗುಡಾರದ ಬಾಗಿಲಲ್ಲಿ ಕುಳಿತಿದ್ದನು. ಆಗ ಅವನಿಗೆ ಸರ್ವೇಶ್ವರ ಸ್ವಾಮಿಯ ದರ್ಶನವಾಯಿತು. 2ಅವನು ಕಣ್ಣೆತ್ತಿ ನೋಡಿದಾಗ ಯಾರೋ ಮೂರು ಮಂದಿ ಪುರುಷರು ಹತ್ತಿರದಲ್ಲೇ ನಿಂತಿದ್ದರು. ಅವರನ್ನು ಎದುರುಗೊಳ್ಳಲು ಅಬ್ರಹಾಮನು ಕೂಡಲೆ ಗುಡಾರದ ಬಾಗಿಲಿನಿಂದ ಓಡಿಬಂದು, ತಲೆಬಾಗಿ ನಮಸ್ಕರಿಸಿ, 3“ಸ್ವಾಮೀ, ದಯವಿರಲಿ, ದಾಸನ ಬಳಿಗೆ ದಯಮಾಡದೆ ಮುಂದೆ ಹೋಗಬೇಡಿ. 4ನೀರು ತರಿಸಿಕೊಡುತ್ತೇನೆ, ಕಾಲುತೊಳೆದುಕೊಂಡು ಈ ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಿ. 5ಸ್ವಲ್ಪ ಆಹಾರ ತರುತ್ತೇನೆ, ಊಟವಾದ ಮೇಲೆ ನೀವು ಮುಂದಕ್ಕೆ ಪ್ರಯಾಣ ಮಾಡಬಹುದು. ದಾಸನಿರುವ ಸ್ಥಳದ ಹತ್ತಿರ ಹಾದುಹೋಗುತ್ತಿದ್ದೀರಲ್ಲವೇ?” ಎನ್ನಲು ಅವರು “ನೀನು ಹೇಳಿದಂತೆಯೇ ಆಗಲಿ,” ಎಂದರು.
6ಆಗ ಅಬ್ರಹಾಮನು ಗುಡಾರದಲ್ಲಿದ್ದ ಸಾರಳ ಬಳಿಗೆ ಓಡಿ ಆಕೆಗೆ, “ಹಸನಾದ ಮೂರು ಸೇರು ಹಿಟ್ಟನ್ನು ನಾದಿ, ಬೇಗ ರೊಟ್ಟಿಗಳನ್ನು ಮಾಡು,” ಎಂದನು. 7ಅನಂತರ ದನಗಳ ಹಟ್ಟಿಗೆ ಓಡಿಹೋಗಿ ಕೊಬ್ಬಿದ ಎಳೇ ಕರುವನ್ನು ತೆಗೆದು ಆಳಿನ ಕೈಗೆ ಕೊಟ್ಟನು. ಆಳು ಬೇಗನೆ ಅಡಿಗೆ ಮಾಡಿದನು. 8ತರುವಾಯ ಅಬ್ರಹಾಮನು ಹಾಲು ಮೊಸರನ್ನು ಹಾಗು ಅಟ್ಟ ಮಾಂಸವನ್ನು ತೆಗೆದುಕೊಂಡು ಬಂದು ಆ ಮನುಷ್ಯರಿಗೆ ಬಡಿಸಿದನು. ಅವರು ಮರದ ಕೆಳಗೆ ಊಟಮಾಡಿ ಮುಗಿಸುವವರೆಗೂ ಅವನೇ ಹತ್ತಿರ ನಿಂತು ಉಪಚಾರ ಮಾಡಿದನು.
9ಬಳಿಕ, “ನಿನ್ನ ಹೆಂಡತಿ ಸಾರಳು ಎಲ್ಲಿ?” ಎಂದು ಆ ಅತಿಥಿಗಳು ವಿಚಾರಿಸಿದಾಗ, “ಅಲ್ಲಿ ಗುಡಾರದಲ್ಲಿದ್ದಾಳೆ,” ಎಂದು ಉತ್ತರಕೊಟ್ಟನು. 10ಆಗ ಸರ್ವೇಶ್ವರ ಸ್ವಾಮಿ, “ಬರುವ ವರ್ಷ ಇದೇ ಕಾಲದಲ್ಲಿ ನಾನು ತಪ್ಪದೆ ಮರಳಿ ನಿನ್ನ ಬಳಿಗೆ ಬರುತ್ತೇನೆ; ಬಂದಾಗ ನಿನ್ನ ಹೆಂಡತಿ ಸಾರಳಿಗೆ ಮಗನಿರುತ್ತಾನೆ,” ಎಂದರು. ಈ ಮಾತು ಹಿಂದೆ ಗುಡಾರದ ಬಾಗಿಲಲ್ಲಿ ನಿಂತಿದ್ದ ಸಾರಳ ಕಿವಿಗೆ ಬಿದ್ದಿತು. 11ಅಬ್ರಹಾಮನು ಮತ್ತು ಸಾರಳು ಬಹು ವೃದ್ಧರಾಗಿದ್ದರು; ಸಾರಳಿಗೆ ಮುಟ್ಟುನಿಂತುಹೋಗಿತ್ತು. 12ಎಂತಲೇ ಆಕೆ, “ನನ್ನಂಥ ಮುದುಕಿಗೆ ಸಂಭೋಗ ಸಾಧ್ಯವೆ? ನನ್ನ ಯಜಮಾನರೂ ಮುದುಕರಲ್ಲವೆ?” ಎಂದುಕೊಂಡು ನಕ್ಕಳು. 13ಅಬ್ರಹಾಮನಿಗೆ, ಸರ್ವೇಶ್ವರ “ 'ಸಾರಳು ತಾನು ಮುದುಕಿಯಾದ ಕಾರಣ ಹೆರಲು ಸಾಧ್ಯವೆ' ಎಂದು ನಕ್ಕಿದ್ದು ಏಕೆ? 14ಸರ್ವೇಶ್ವರನಿಗೆ ಅಸಾಧ್ಯವಾದುದು ಯಾವುದು? ನಾನು ಹೇಳಿದಂತೆಯೇ ಬರುವ ವರ್ಷದ ಇದೇ ಕಾಲದಲ್ಲಿ ನಾನು ನಿನ್ನ ಬಳಿಗೆ ಬಂದಾಗ ಸಾರಳಿಗೆ ಮಗನಿರುತ್ತಾನೆ” ಎಂದು ಹೇಳಿದರು. 15ಆಗ ಸಾರಳು ಭಯದಿಂದ, “ನಾನು ನಗಲಿಲ್ಲ” ಎಂದು ನಿರಾಕರಿಸಿದಳು. ಸರ್ವೇಶ್ವರ, "ಹಾಗನ್ನಬೇಡಮ್ಮಾ, 'ನೀನು ನಕ್ಕದ್ದು ನಿಜ' ” ಎಂದರು.
ಸೊದೋಮಿನ ಪರವಾಗಿ ಅಬ್ರಹಾಮನ ಪ್ರಾರ್ಥನೆ
16ಆ ಮನುಷ್ಯರು ಅಲ್ಲಿಂದ ಹೊರಟು ಸೊದೋಮ್ ಕಾಣಿಸುತ್ತಿದ್ದ ಒಂದು ಸ್ಥಳಕ್ಕೆ ಬಂದರು. ಅವರನ್ನು ಸಾಗಕಳುಹಿಸುತ್ತಾ ಅಬ್ರಹಾಮನೂ ಅವರ ಜೊತೆಯಲ್ಲೇ ಅಲ್ಲಿಗೆ ಬಂದನು. 17ಆಗ ಸರ್ವೇಶ್ವರ ತಮ್ಮೊಳಗೆ ಇಂತೆಂದುಕೊಂಡರು: “ನಾನು ಮಾಡಬೇಕು ಎಂದಿರುವ ಕಾರ್ಯವನ್ನು ಅಬ್ರಹಾಮನಿಂದ ಮರೆಮಾಡುವುದು ಸರಿಯಲ್ಲ, 18ಅವನಿಂದ ಮಹಾ ಬಲಿಷ್ಠವಾದ ರಾಷ್ಟ್ರವೊಂದು ಹುಟ್ಟಬೇಕಾಗಿದೆ. ಅವನ ಮುಖಾಂತರ ಜಗದ ಎಲ್ಲ ರಾಷ್ಟ್ರಗಳಿಗೆ ನನ್ನ ಆಶೀರ್ವಾದ ದೊರಕಬೇಕಾಗಿದೆ. 19ಅವನು ತನ್ನ ಪುತ್ರಪೌತ್ರರಿಗೆ, ‘ನೀವು ನ್ಯಾಯನೀತಿಯನ್ನು ಪಾಲಿಸುತ್ತಾ ಸರ್ವೇಶ್ವರ ಸ್ವಾಮಿಯ ಮಾರ್ಗದಲ್ಲೇ ನಡೆಯಬೇಕು; ಹಾಗೆ ಮಾಡಿದರೆ ವಾಗ್ದಾನ ಮಾಡಿದುದನ್ನೆಲ್ಲ ಈಡೇರಿಸುವರು,’ ಎಂದು ಬೋಧಿಸಲೆಂದೇ ನಾನು ಅವನನ್ನು ಆರಿಸಿಕೊಂಡಿದ್ದೇನೆ".
20ಇದಲ್ಲದೆ ಸರ್ವೇಶ್ವರ, “ಸೊದೋಮ್ ಗೊಮೋರಗಳ ವಿರುದ್ಧ ಎಷ್ಟೋ ಘನತರವಾದ ದೂರುಗಳು ನನಗೆ ಬಂದಿವೆ; ಆ ಊರಿನವರ ಮೇಲೆ ಹೊರಿಸಲಾಗಿರುವ ಪಾಪಕೃತ್ಯವೂ ಘೋರವಾದುದು. 21ನನಗೆ ಮುಟ್ಟಿರುವ ದೂರಂತೆ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳಿದುಕೊಳ್ಳುತ್ತೇನೆ,” ಎಂದುಕೊಂಡರು.
22ಆಗ ಆ ಇಬ್ಬರು ಮನುಷ್ಯರು ಅಲ್ಲಿಂದ ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಸರ್ವೇಶ್ವರ ಸ್ವಾಮಿಯ ಸಂಗಡವೇ ಉಳಿದುಕೊಂಡನು. 23ಅವನು ಅವರ ಹತ್ತಿರಕ್ಕೆ ಬಂದು, “ನೀವು ದುರ್ಜನರ ಸಂಗಡ ಸಜ್ಜನರನ್ನೂ ನಾಶಮಾಡುವಿರೋ? 24ಒಂದು ವೇಳೆ ಆ ಊರೊಳಗೆ ಐವತ್ತು ಮಂದಿ ಸಜ್ಜನರಿದ್ದಾರು. ಅದರಲ್ಲಿ ಐವತ್ತು ಮಂದಿ ಸಜ್ಜನರಿದ್ದರೂ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ? 25ಹೀಗೆ ದುಷ್ಟರಿಗೂ ಶಿಷ್ಟರಿಗೂ ಭೇದಮಾಡದೆ ದುಷ್ಟರ ಸಂಗಡ ಸಜ್ಜನರನ್ನೂ ಸಂಹರಿಸುವುದು ನಿಮ್ಮಿಂದ ಎಂದಿಗೂ ಆಗಬಾರದು. ಇಡೀ ಜಗತ್ತಿನ ನ್ಯಾಯಾಧಿಪತಿ ಸರಿಯಾಗಿ ನ್ಯಾಯತೀರಿಸಬೇಕಲ್ಲವೇ?" ಎಂದನು. 26ಅದಕ್ಕೆ ಸರ್ವೇಶ್ವರ, “ಸೊದೋಮಿನಲ್ಲಿ ಐವತ್ತು ಮಂದಿ ಸಜ್ಜನರು ನನಗೆ ಸಿಕ್ಕಿದರೆ ಅವರ ನಿಮಿತ್ತ ಊರನ್ನೆಲ್ಲಾ ಉಳಿಸುತ್ತೇನೆ,” ಎಂದರು. 27ಆಗ ಅಬ್ರಹಾಮನು, “ನಾನಂತೂ ಮಣ್ಣುಬೂದಿ, ಆದರೂ ಸ್ವಾಮಿಯ ಸಂಗಡ ವಾದಿಸುವುದಕ್ಕೆ ಧೈರ್ಯಗೊಂಡಿದ್ದೇನೆ. 28ಒಂದು ವೇಳೆ ಐವತ್ತು ಮಂದಿ ಸಜ್ಜನರಿಗೆ ಐದು ಮಂದಿ ಕಡಿಮೆಯಾಗಿದ್ದಾರು. ಐದು ಮಂದಿ ಕಡಿಮೆಯಾದುದಕ್ಕೆ ಪಟ್ಟಣವನ್ನೆಲ್ಲ ನಾಶಮಾಡುವಿರೋ?” ಎಂದು ಕೇಳಲು ಸರ್ವೇಶ್ವರ, “ಅಲ್ಲಿ ನಲವತ್ತೈದು ಮಂದಿ ಸಿಕ್ಕಿದರೆ ಅದನ್ನು ನಾಶಮಾಡುವುದಿಲ್ಲ” ಎಂದರು. 29ಅಬ್ರಹಾಮನು ಇನ್ನೂ ಮುಂದುವರೆದು, “ಒಂದು ವೇಳೆ ಅಲ್ಲಿ ನಲವತ್ತು ಮಂದಿ ಸಿಕ್ಕಾರು"ಎನ್ನಲು "ನಲವತ್ತು ಮಂದಿ ಸಿಕ್ಕಿದರೆ ಆ ಪಟ್ಟಣವನ್ನು ನಾಶಮಾಡುವುದಿಲ್ಲ,” ಎಂದರು. 30ಅಬ್ರಹಾಮನು, “ಸ್ವಾಮೀ, ಕೋಪಮಾಡಬೇಡಿ; ಇನ್ನೂ ಮಾತಾಡುತ್ತೇನೆ. ಒಂದು ವೇಳೆ ಮೂವತ್ತು ಮಂದಿ ಅಲ್ಲಿ ಸಿಕ್ಕಾರು” ಎನ್ನಲು ಸರ್ವೇಶ್ವರ, “ಅಲ್ಲಿ ಮೂವತ್ತು ಮಂದಿ ಸಿಕ್ಕಿದರೂ ಅದನ್ನು ನಾಶಮಾಡುವುದಿಲ್ಲ,” ಎಂದರು. 31ಅವನು, “ಸ್ವಾಮಿಯ ಸಂಗಡ ಮಾತನಾಡಲು ನಾನು ಇನ್ನೂ ಧೈರ್ಯಗೊಂಡಿದ್ದೇನೆ; ಒಂದು ವೇಳೆ ಇಪ್ಪತ್ತೇ ಮಂದಿ ಅಲ್ಲಿ ಸಿಕ್ಕಾರು,” ಎನ್ನಲು, ಸರ್ವೇಶ್ವರ, “ಇಪ್ಪತ್ತು ಮಂದಿಯಿದ್ದರೆ ಅವರ ನಿಮಿತ್ತ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು. 32ಅಬ್ರಹಾಮನು, “ಸ್ವಾಮೀ, ಸಿಟ್ಟುಗೊಳ್ಳಬೇಡಿ; ಇನ್ನು ಒಂದೇ ಒಂದು ಸಾರಿ ಮಾತಾಡುತ್ತೇನೆ; ಒಂದು ವೇಳೆ ಹತ್ತೇ ಮಂದಿ ಸಿಕ್ಕಾರು” ಎನ್ನಲು, ಸರ್ವೇಶ್ವರ, “ಹತ್ತು ಮಂದಿಯ ನಿಮಿತ್ತವೂ ಅದನ್ನು ಉಳಿಸುತ್ತೇನೆ, ನಾಶಮಾಡುವುದಿಲ್ಲ,” ಎಂದರು. 33ಅನಂತರ ಅಬ್ರಹಾಮನೊಡನೆ ಮಾತಾಡುವುದನ್ನು ಮುಗಿಸಿ ಸರ್ವೇಶ್ವರ ಸ್ವಾಮಿ ಹೊರಟುಹೋದರು. ಅಬ್ರಹಾಮನು ತನ್ನ ಮನೆಗೆ ಹಿಂತಿರುಗಿದನು.

醒目顯示

分享

複製

None

想在你所有裝置上儲存你的醒目顯示?註冊帳戶或登入