ಆದಿಕಾಂಡ 7

7
1ಯೆಹೋವ ದೇವರು ನೋಹನಿಗೆ, “ನೀನೂ, ನಿನ್ನ ಮನೆಯವರೆಲ್ಲರೂ ನಾವೆಯೊಳಗೆ ಸೇರಿಕೊಳ್ಳಿರಿ. ಏಕೆಂದರೆ ಈ ಕಾಲದವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿರುವುದನ್ನು ನಾನು ನೋಡಿದ್ದೇನೆ. 2ಎಲ್ಲಾ ಶುದ್ಧ ಪಶುಗಳಲ್ಲಿ ಏಳೇಳು ಗಂಡು, ಹೆಣ್ಣುಗಳನ್ನೂ, ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡು, ಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೊಳ್ಳಬೇಕು. 3ಆಕಾಶದ ಪಕ್ಷಿಗಳಲ್ಲಿ ಗಂಡು, ಹೆಣ್ಣು ಏಳೇಳರಂತೆ ತೆಗೆದುಕೊಂಡು, ಭೂಮಿಯ ಮೇಲೆಲ್ಲಾ ಅವುಗಳ ಸಂತತಿಯನ್ನು ಜೀವಂತವಾಗಿ ಉಳಿಸಬೇಕು. 4ಏಳು ದಿವಸಗಳಾದ ಮೇಲೆ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳು ಮಳೆಯು ಬರುವಂತೆ ನಾನು ಮಾಡುವೆನು. ನಾನು ಉಂಟುಮಾಡಿದ ಪ್ರತಿಯೊಂದು ಜೀವರಾಶಿಯನ್ನೂ ಭೂಮಿಯ ಮೇಲಿಂದ ಅಳಿಸಿಬಿಡುತ್ತೇನೆ,” ಎಂದರು.
5ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನೂ ಮಾಡಿದನು.
6ಜಲಪ್ರಳಯವು ಭೂಮಿಯ ಮೇಲೆ ಉಂಟಾದಾಗ ನೋಹನು ಆರುನೂರು ವರ್ಷದವನಾಗಿದ್ದನು. 7ಆಗ ನೋಹನು ಪ್ರಳಯದ ನಿಮಿತ್ತವಾಗಿ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯಲ್ಲಿ ಸೇರಿದನು. 8ಶುದ್ಧ ಪ್ರಾಣಿಗಳಲ್ಲಿಯೂ, ಅಶುದ್ಧ ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ ಮತ್ತು ನೆಲದ ಮೇಲೆ ಹರಿದಾಡುವ ಜೀವಿಗಳೆಲ್ಲವೂ 9ದೇವರು ನೋಹನಿಗೆ ಆಜ್ಞಾಪಿಸಿದಂತೆಯೇ ಗಂಡುಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು. 10ಏಳು ದಿವಸಗಳಾದ ನಂತರ ಜಲಪ್ರಳಯವು ಭೂಮಿಯ ಮೇಲೆ ಬಂತು.
11ನೋಹನ ಜೀವನದ ಆರುನೂರು ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾಸಾಗರದ ಸೆಲೆಗಳು ಒಡೆದವು. ಆಕಾಶದ ಪ್ರವಾಹದ ದ್ವಾರಗಳು ತೆರೆದವು. 12ನಲವತ್ತು ದಿವಸ ಹಗಲಿರುಳು ಭೂಮಿಯ ಮೇಲೆ ದೊಡ್ಡ ಮಳೆ ಸುರಿಯಿತು.
13ಅದೇ ದಿನದಲ್ಲಿ ನೋಹನು ಮತ್ತು ಅವನ ಪುತ್ರರಾದ ಶೇಮ್, ಹಾಮ್, ಯೆಫೆತ್ ಇವರೂ ನೋಹನ ಹೆಂಡತಿಯೂ ಅವನ ಪುತ್ರರ ಹೆಂಡತಿಯರೂ ನಾವೆಯನ್ನು ಪ್ರವೇಶಿಸಿದರು. 14ಇದಲ್ಲದೆ ತಮ್ಮ ತಮ್ಮ ಜಾತಿಗನುಸಾರವಾಗಿ ಎಲ್ಲಾ ಕಾಡು ಮೃಗಗಳೂ ಎಲ್ಲಾ ಪಶುಗಳೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳೂ ಎಲ್ಲಾ ಪಕ್ಷಿಗಳೂ ಎಲ್ಲಾ ವಿಧವಾದ ರೆಕ್ಕೆಯಿರುವ ಜೀವಿಗಳೂ ಪ್ರವೇಶಿಸಿದವು. 15ಹೀಗೆ ಜೀವಶ್ವಾಸವಿರುವ ಎಲ್ಲಾ ಸೃಷ್ಟಿಗಳಲ್ಲಿ ಎರಡೆರಡು ನೋಹನ ಬಳಿಗೆ ನಾವೆಯೊಳಗೆ ಹೋದವು. 16ದೇವರು ನೋಹನಿಗೆ ಆಜ್ಞಾಪಿಸಿದಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವ ದೇವರು ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು.
17ನಲವತ್ತು ದಿನ ಭೂಮಿಯ ಮೇಲೆ ಪ್ರಳಯವು ಬಂದು, ನೀರು ಹೆಚ್ಚಿ ನಾವೆಯನ್ನು ಮೇಲಕ್ಕೆ ಎತ್ತಲು ಅದು ಭೂಮಿಯಿಂದ ತೇಲಾಡಿತು. 18ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಿದಾಗ ನಾವೆಯು ನೀರಿನ ಮೇಲೆ ಚಲಿಸಿತು. 19ಭೂಮಿಯ ಮೇಲೆ ನೀರು ಅಧಿಕವಾಗಿ ಪ್ರಬಲವಾದದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಕೊಂಡವು. 20ನೀರು ಬೆಟ್ಟವನ್ನು ಮುಚ್ಚಿ ಅವುಗಳ ಮೇಲೆ ಸುಮಾರು ಏಳು ಮೀಟರಷ್ಟು#7:20 ಅಂದರೆ, ಸುಮಾರು ಹದಿನೈದು ಮೊಳ ಏರಿತು. 21ಪಕ್ಷಿಗಳು, ಪಶುಗಳು, ಕಾಡುಮೃಗಗಳು, ನೆಲದ ಮೇಲೆ ಚಲಿಸುವ ಸಕಲ ಪ್ರಾಣಿಗಳು ಮತ್ತು ಮನುಷ್ಯರು ನಾಶವಾದರು. 22ಒಣನೆಲದ ಮೇಲಿದ್ದ ಮೂಗಿನಿಂದ ಶ್ವಾಸಬೀಡುವ ಜೀವಿಗಳೆಲ್ಲವೂ ಸತ್ತು ಹೋದವು. 23ಹೀಗೆ ಮನುಷ್ಯರು, ಪಶುಪಕ್ಷಿ, ಕ್ರಿಮಿಕೀಟಗಳು, ಭೂಮಿಯ ಮೇಲಿದ್ದ ಎಲ್ಲಾ ಜೀವರಾಶಿಗಳೂ ನಾಶವಾಯಿತು. ಅವು ಭೂಮಿಯ ಮೇಲಿಂದ ಅಳಿದುಹೋದವು. ನೋಹನು ಮತ್ತು ಅವನ ಸಂಗಡ ನಾವೆಯಲ್ಲಿದ್ದವರು ಮಾತ್ರ ಜೀವಂತವಾಗಿ ಉಳಿದರು.
24ಜಲವು ಭೂಮಿಯ ಮೇಲೆ ನೂರೈವತ್ತು ದಿನ ಮುಂದುವರೆಯಿತು.

高亮显示

分享

复制

None

想要在所有设备上保存你的高亮显示吗? 注册或登录