ಆದಿಕಾಂಡ 1

1
ಪ್ರಾರಂಭ
1ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದರು. 2ಭೂಮಿಯು ನಿರಾಕಾರವಾಗಿಯೂ ಬರಿದಾಗಿಯೂ ಇತ್ತು. ಆದಿಸಾಗರದ ಮೇಲೆ ಕತ್ತಲೆ ಕವಿದಿತ್ತು. ದೇವರಾತ್ಮರು ಜಲ ಸಮೂಹಗಳ ಮೇಲೆ ಚಲಿಸುತ್ತಿದ್ದರು.
3ಆಗ ದೇವರು, “ಬೆಳಕಾಗಲಿ” ಎನ್ನಲು, ಬೆಳಕಾಯಿತು. 4ದೇವರು ಬೆಳಕನ್ನು ಒಳ್ಳೆಯದೆಂದು ಕಂಡರು. ದೇವರು ಬೆಳಕನ್ನು ಕತ್ತಲೆಯಿಂದ ಪ್ರತ್ಯೇಕಿಸಿದರು. 5ದೇವರು ಬೆಳಕಿಗೆ ಹಗಲು ಎಂದೂ ಕತ್ತಲೆಗೆ ರಾತ್ರಿ ಎಂದೂ ಕರೆದರು. ಆಗ ಸಾಯಂಕಾಲವೂ ಉದಯಕಾಲವೂ ಆಗಿ ಮೊದಲನೆಯ ದಿನವಾಯಿತು.
6ನಂತರ ದೇವರು, “ಜಲರಾಶಿಯ ನಡುವೆ ವಿಸ್ತಾರವಾದ ಗುಮ್ಮಟವಾಗಲಿ, ಅದು ನೀರಿನಿಂದ ಭೂಮಿಯನ್ನು ಪ್ರತ್ಯೇಕ ಮಾಡಲಿ,” ಎಂದರು. 7ಹೀಗೆ ದೇವರು ವಿಸ್ತಾರವಾದ ಗುಮ್ಮಟವನ್ನು ಅದರ ಕೆಳಗಿದ್ದ ನೀರನ್ನೂ ಅದರ ಮೇಲಿದ್ದ ನೀರನ್ನೂ ಪ್ರತ್ಯೇಕಿಸಿದರು. ಅದು ಹಾಗೆಯೇ ಆಯಿತು. 8ದೇವರು ಆ ಗುಮ್ಮಟಕ್ಕೆ ಆಕಾಶ ಎಂದು ಕರೆದರು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಎರಡನೆಯ ದಿನವಾಯಿತು.
9ಆಗ ದೇವರು, “ಆಕಾಶದ ಕೆಳಗಿರುವ ನೀರು ಒಂದೇ ಸ್ಥಳದಲ್ಲಿ ಕೂಡಿಕೊಳ್ಳಲಿ, ಒಣ ನೆಲವು ಕಾಣಿಸಲಿ,” ಎಂದರು. ಅದು ಹಾಗೆಯೇ ಆಯಿತು. 10ದೇವರು ಒಣ ನೆಲಕ್ಕೆ “ಭೂಮಿ” ಎಂದೂ ಕೂಡಿಕೊಂಡಿದ್ದ ನೀರಿಗೆ “ಸಮುದ್ರ” ಎಂದೂ ಹೆಸರಿಟ್ಟರು. ದೇವರು ಅದನ್ನು ಒಳ್ಳೆಯದೆಂದು ಕಂಡರು.
11ಅನಂತರ ದೇವರು, “ಭೂಮಿಯು ಹುಲ್ಲನ್ನೂ ಬೀಜಬಿಡುವ ಗಿಡಗಳನ್ನೂ ಅದರದರ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳನ್ನೂ ಉತ್ಪತ್ತಿ ಮಾಡಲಿ,” ಎಂದು ಹೇಳಿದರು. ಅದು ಹಾಗೆಯೇ ಆಯಿತು. 12ಭೂಮಿಯ ಮೇಲೆ ತಮ್ಮ ತಮ್ಮ ಜಾತಿಯ ಪ್ರಕಾರ ಬೀಜಬಿಡುವ ಕಾಯಿಪಲ್ಯದ ಗಿಡಗಳು ಉಂಟಾದವು ಮತ್ತು ಅದರದರ ಜಾತಿಗನುಸಾರವಾಗಿ ಬೀಜವುಳ್ಳ ಹಣ್ಣಿನ ಮರಗಳನ್ನು ಮೊಳೆಯಿಸಿದವು. ದೇವರು ಅದನ್ನು ಒಳ್ಳೆಯದೆಂದು ಕಂಡರು. 13ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಮೂರನೆಯ ದಿನವಾಯಿತು.
14ಅನಂತರ ದೇವರು, “ಹಗಲನ್ನು ರಾತ್ರಿಯಿಂದ ಪ್ರತ್ಯೇಕಿಸುವುದಕ್ಕೆ ಆಕಾಶಮಂಡಲದಲ್ಲಿ ಬೆಳಕುಗಳಿರಲಿ; ಅವು ಕಾಲಗಳನ್ನೂ ದಿನ ಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರಲಿ. 15ಅವು ಭೂಮಿಗೆ ಬೆಳಕನ್ನು ಕೊಡುವುದಕ್ಕೆ ಆಕಾಶಮಂಡಲದಲ್ಲಿ ದೀಪಗಳಂತಿರಲಿ,” ಎಂದರು. ಅದು ಹಾಗೆಯೇ ಆಯಿತು. 16ಹಗಲನ್ನಾಳುವುದಕ್ಕೆ ದೊಡ್ಡ ಬೆಳಕನ್ನು, ರಾತ್ರಿಯನ್ನಾಳುವುದಕ್ಕೆ ಚಿಕ್ಕ ಬೆಳಕನ್ನು ಎಂಬಂತೆ ದೇವರು ಎರಡು ದೊಡ್ಡ ಬೆಳಕುಗಳನ್ನು ಉಂಟುಮಾಡಿದರು. ದೇವರು ನಕ್ಷತ್ರಗಳನ್ನು ಸಹ ಉಂಟುಮಾಡಿದರು. 17ದೇವರು ಆ ಬೆಳಕುಗಳನ್ನು ಆಕಾಶದಲ್ಲಿಟ್ಟು ಭೂಮಿಗೆ ಬೆಳಕನ್ನು ಕೊಡುವುದಕ್ಕೂ 18ಹಗಲನ್ನು ಮತ್ತು ರಾತ್ರಿಯನ್ನು ಆಳುವುದಕ್ಕೂ ಬೆಳಕನ್ನು ಕತ್ತಲೆಯಿಂದ ಪ್ರತ್ಯೇಕಿಸುವುದಕ್ಕೂ ದೇವರು ಅವುಗಳನ್ನು ನೇಮಿಸಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು. 19ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ನಾಲ್ಕನೆಯ ದಿನವಾಯಿತು.
20ಆಮೇಲೆ ದೇವರು, “ನೀರಿನಲ್ಲಿ ಜೀವಜಂತುಗಳು ತುಂಬಿಕೊಳ್ಳಲಿ, ಭೂಮಿಯ ಮೇಲೆ ಆಕಾಶಮಂಡಲದಲ್ಲಿ ಪಕ್ಷಿಗಳು ಹಾರಾಡಲಿ,” ಎಂದರು. 21ಹೀಗೆ ದೇವರು ದೊಡ್ಡ ಜಲಚರಗಳನ್ನು, ನೀರಿನಲ್ಲಿ ತುಂಬಿರುವ ಎಲ್ಲಾ ಚಲಿಸುವ ಜೀವ ಜಂತುಗಳನ್ನು, ರೆಕ್ಕೆಗಳುಳ್ಳ ಪ್ರತಿಯೊಂದು ಪಕ್ಷಿಯನ್ನು ಅವುಗಳ ಜಾತಿಗನುಸಾರವಾಗಿ ಸೃಷ್ಟಿಸಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು. 22ದೇವರು ಅವುಗಳನ್ನು ಆಶೀರ್ವದಿಸಿ ಅವುಗಳಿಗೆ, “ನೀವು ಅಭಿವೃದ್ಧಿಯಾಗಿ ಹೆಚ್ಚಿರಿ, ಸಮುದ್ರಗಳಲ್ಲಿ ನೀರನ್ನು ತುಂಬಿರಿ, ಭೂಮಿಯ ಮೇಲೆ ಪಕ್ಷಿಗಳ ಸಂಖ್ಯೆ ಹೆಚ್ಚಾಗಲಿ,” ಎಂದರು. 23ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಐದನೆಯ ದಿನವಾಯಿತು.
24ಆಮೇಲೆ ದೇವರು, “ಭೂಮಿಯಿಂದ ಎಲ್ಲಾ ತರಹದ ಜೀವಿಗಳು ಉಂಟಾಗಲಿ: ಪಶುಗಳು, ನೆಲದ ಮೇಲೆ ಹರಿದಾಡುವ ಜೀವಿಗಳು, ಕಾಡುಮೃಗಗಳು, ತಮ್ಮ ತಮ್ಮ ಜಾತಿಗನುಸಾರವಾಗಿ ಉಂಟಾಗಲಿ,” ಎಂದರು. ಅದು ಹಾಗೆಯೇ ಆಯಿತು. 25ಹೀಗೆ ದೇವರು ಎಲ್ಲ ತರದ ಕಾಡುಮೃಗಗಳನ್ನೂ ಪಶುಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನೂ ಅವುಗಳ ಜಾತಿಗನುಸಾರವಾಗಿ ಉಂಟುಮಾಡಿದರು. ದೇವರು ಅದನ್ನು ಒಳ್ಳೆಯದೆಂದು ಕಂಡರು.
26ತರುವಾಯ ದೇವರು, “ನಾವು ನಮ್ಮ ಸ್ವರೂಪದಲ್ಲಿ, ನಮ್ಮ ಹೋಲಿಕೆಯಲ್ಲಿ ಮನುಷ್ಯನನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಜೀವಿಗಳ ಮೇಲೆಯೂ ಆಳ್ವಿಕೆ ಮಾಡಲಿ,” ಎಂದರು.
27ಹೀಗೆ ದೇವರು ಮನುಷ್ಯನನ್ನು ತಮ್ಮ ಸ್ವರೂಪದಲ್ಲಿ ಸೃಷ್ಟಿ ಮಾಡಿದರು.
ದೇವರ ಸ್ವರೂಪದಲ್ಲಿಯೇ ಅವರನ್ನು ಸೃಷ್ಟಿ ಮಾಡಿದರು.
ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿ ಮಾಡಿದರು.
28ದೇವರು ಅವರನ್ನು ಆಶೀರ್ವದಿಸಿ, “ನೀವು ಸಂತಾನವುಳ್ಳವರಾಗಿ, ಸಂಖ್ಯೆಯಲ್ಲಿ ಹೆಚ್ಚಿರಿ, ಭೂಮಿಯನ್ನು ತುಂಬಿಸಿ ಅದನ್ನು ಆಳಿರಿ. ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ನೆಲದ ಮೇಲೆ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ಆಳ್ವಿಕೆ ನಡೆಸಿರಿ,” ಎಂದು ಅವರಿಗೆ ಹೇಳಿದರು.
29ದೇವರು, “ಇಗೋ, ಭೂಮಿಯ ಮೇಲಿರುವ ಬೀಜಬಿಡುವ ಸಕಲ ಸಸ್ಯಗಳನ್ನೂ ಬೀಜಬಿಡುವ ಸಕಲ ಹಣ್ಣಿನ ಮರಗಳನ್ನೂ ನಿಮಗೆ ಕೊಟ್ಟಿದ್ದೇನೆ. ಅವು ನಿಮಗೆ ಆಹಾರಕ್ಕಾಗಿರುವುವು. 30ಭೂಮಿಯಲ್ಲಿರುವ ಎಲ್ಲಾ ಜೀವಿಗಳಿಗೂ ಆಕಾಶದ ಪಕ್ಷಿಗಳಿಗೂ ನೆಲದ ಮೇಲೆ ಹರಿದಾಡುವ ಜೀವಿಗಳಿಗೂ ಉಸಿರನ್ನು ಹೊಂದಿರುವ ಪ್ರತಿಯೊಂದು ಜೀವಿಗಳಿಗೆ ಹಸಿರಾದ ಸಸ್ಯಗಳನ್ನೆಲ್ಲಾ ನಾನು ಆಹಾರವಾಗಿ ಕೊಟ್ಟಿದ್ದೇನೆ,” ಎಂದರು. ಅದು ಹಾಗೆಯೇ ಆಯಿತು.
31ದೇವರು ತಾವು ಉಂಟು ಮಾಡಿದ್ದನ್ನೆಲ್ಲಾ ನೋಡಲು, ಅವೆಲ್ಲವೂ ಬಹಳ ಒಳ್ಳೆಯದಾಗಿದ್ದವು. ಹೀಗೆ ಸಾಯಂಕಾಲವೂ ಉದಯಕಾಲವೂ ಆಗಿ ಆರನೆಯ ದಿನವಾಯಿತು.

高亮显示

分享

复制

None

想要在所有设备上保存你的高亮显示吗? 注册或登录