ಆದಿಕಾಂಡ 17

17
ಸುನ್ನತಿ ಒಡಂಬಡಿಕೆಯ ಸಂಕೇತ
1ಅಬ್ರಾಮನಿಗೆ ತೊಂಬತ್ತೊಂಬತ್ತು ವರ್ಷಗಳಾಗಿದ್ದಾಗ, ಸರ್ವೇಶ್ವರ ದರ್ಶನವಿತ್ತು ಇಂತೆಂದರು: “ನಾನು ಸರ್ವಶಕ್ತ ಸರ್ವೇಶ್ವರ. ನೀನು ನನ್ನ ಸಮ್ಮುಖದಲ್ಲಿದ್ದು ನಿರ್ದೋಷಿಯಾಗಿ ನಡೆದುಕೊಳ್ಳಬೇಕು. 2ನಿನ್ನ ಸಂಗಡ ನಾನು ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ: ನಿನಗೆ ಅಧಿಕಾಧಿಕವಾದ ಸಂತತಿಯನ್ನು ಕೊಡುತ್ತೇನೆ,” ಎಂದರು. 3ಅಬ್ರಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. 4ದೇವರು ಅವನಿಗೆ, “ನಾನು ನಿನಗೆ ವಾಗ್ದಾನ ಮಾಡಿ ಹೇಳುತ್ತೇನೆ: ನೀನು ಅನೇಕ ರಾಷ್ಟ್ರಗಳಿಗೆ ಮೂಲಪುರುಷನಾಗುವೆ. 5ಇನ್ನು ಮುಂದೆ ನಿನಗೆ ‘ಅಬ್ರಾಮ’ ಎಂಬ ಹೆಸರಿರುವುದಿಲ್ಲ. ನಿನ್ನನ್ನು ನಾನು ಅನೇಕಾನೇಕ ರಾಷ್ಟ್ರಗಳಿಗೆ ಮೂಲಪುರುಷನನ್ನಾಗಿ ನೇಮಿಸುವುದರಿಂದ ನಿನಗೆ ‘ಅಬ್ರಹಾಮ’ ಎಂಬ ಹೆಸರಿರುವುದು. 6ನಿನ್ನನ್ನು ಅತ್ಯಂತ ಫಲದಾಯಕ ಪುರುಷನನ್ನಾಗಿ ಮಾಡುತ್ತೇನೆ. ನಿನ್ನಿಂದ ರಾಷ್ಟ್ರಗಳೂ ರಾಜರುಗಳೂ ಉತ್ಪತ್ತಿಯಾಗುವರು. 7ನಿನಗೂ ನಿನ್ನ ಸಂತತಿಗೂ ನಾನು ದೇವರಾಗಿರುತ್ತೇನೆ. ಈ ನನ್ನ ಒಡಂಬಡಿಕೆಯನ್ನು ನಿನಗೋಸ್ಕರವೂ ನಿನ್ನ ಸಂತತಿಗೋಸ್ಕರವೂ ತಲತಲಾಂತರದವರೆಗೂ ಚಿರಒಡಂಬಡಿಕೆಯಾಗಿ ಸ್ಥಿರಪಡಿಸುತ್ತೇನೆ. 8ನೀನು ಪ್ರವಾಸವಾಗಿರುವ ಈ ಕಾನಾನ್ ನಾಡೆಲ್ಲವನ್ನು ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾದ ಸೊತ್ತಾಗಿ ಕೊಡುತ್ತೇನೆ. ನಾನು ನಿಮ್ಮ ಕುಲದೇವರಾಗಿರುತ್ತೇನೆ.”
9ಇದಲ್ಲದೆ ದೇವರು ಅಬ್ರಹಾಮನಿಗೆ ಹೀಗೆಂದು ಹೇಳಿದರು: “ನೀನು ಕೂಡ ನನ್ನ ಒಡಂಬಡಿಕೆಯನ್ನು ಕೈಗೊಂಡು ನಡೆಯಬೇಕು ನೀನು ಮಾತ್ರವಲ್ಲ, ನಿನ್ನ ಸಂತತಿಯವರು ತಲತಲಾಂತರಕ್ಕೂ ಅದನ್ನು ಕೈಗೊಂಡು ನಡೆಯಬೇಕು. 10ನೀನೂ ನಿನ್ನ ಸಂತತಿಯವರೂ ಕೈಗೊಳ್ಳಬೇಕಾದ ನನ್ನ ಒಡಂಬಡಿಕೆ ಇದು: ನಿಮ್ಮಲ್ಲಿ ಪ್ರತಿಯೊಬ್ಬ ಗಂಡಸಿಗೂ ಸುನ್ನತಿಯಾಗಬೇಕು. 11ನೀವು ನಿಮ್ಮ ಜನನಾಂಗದ ಮುಂದೊಗಲನ್ನು ಸುನ್ನತಿಮಾಡಿಸಿಕೊಳ್ಳಬೇಕು. ಅದೇ ನಿಮಗೂ ನನಗೂ ಆದ ಒಡಂಬಡಿಕೆಯ ಗುರುತು. 12ಎಲ್ಲ ತಲಾಂತರಗಳಲ್ಲಿ ನಿಮ್ಮಲ್ಲಿರುವ ಪ್ರತಿಯೊಂದು ಗಂಡುಮಗುವಿಗೂ ಜೀತಗಾರರಿಗೂ ಮನೆಯಲ್ಲಿ ಹುಟ್ಟಿದ ಅಥವಾ ಅನ್ಯರಿಂದ ಕ್ರಯಕ್ಕೆ ಕೊಂಡುಕೊಂಡವರಿಗೂ, ಎಂಟು ದಿನಗಳ ವಯಸ್ಸಾದಾಗ ಸುನ್ನತಿ ಮಾಡಿಸಬೇಕು. 13ಮನೆಯಲ್ಲಿ ಹುಟ್ಟಿದವನೇ ಆಗಿರಲಿ, ಕ್ರಯಕ್ಕೆ ಕೊಂಡುಕೊಂಡವನೇ ಆಗಿರಲಿ, ಪ್ರತಿ ಒಬ್ಬನಿಗೂ ತಪ್ಪದೆ ಸುನ್ನತಿಯಾಗಬೇಕು. ನಾನು ಮಾಡುವ ಒಡಂಬಡಿಕೆಯ ಗುರುತು ಹೀಗೆ ನಿಮ್ಮ ದೇಹದಲ್ಲಿ ಇದ್ದು ಶಾಶ್ವತವಾದ ಒಡಂಬಡಿಕೆಯನ್ನು ಸೂಚಿಸುವುದು. 14ಸುನ್ನತಿ ಮಾಡಿಸಿಕೊಳ್ಳದ ಗಂಡಸು ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದವನಾದ ಕಾರಣ, ಅವನು ಕುಲದಿಂದ ಬಹಿಷ್ಕೃತನಾಗಬೇಕು.
15ದೇವರುಅಬ್ರಹಾಮನಿಗೆ ಇನ್ನೂ ಹೇಳಿದ್ದು ಏನೆಂದರೆ: “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳು#17:15 ಅಥವಾ: ‘ಸಾರಾಯಿ’ ಎಂದರೆ “ರಾಜಕುಮಾರಿ". ಎಂದು ಕರೆಯದೆ ಸಾರಳು ಎಂದು ಕರೆಯಬೇಕು. 16ನಾನು ಆಕೆಯನ್ನು ಆಶೀರ್ವದಿಸಿದ್ದೇನೆ. ಆಕೆ ನಿನಗೊಬ್ಬ ಮಗನನ್ನು ಹೆರುವಳು. ನನ್ನ ಆಶೀರ್ವಾದ ಪಡೆದ ಆಕೆ ರಾಷ್ಟ್ರಗಳಿಗೆ ಮಾತೆಯಾಗುವಳು; ಆಕೆಯಿಂದ ರಾಷ್ಟ್ರಗಳೂ, ರಾಜರುಗಳೂ ಉತ್ಪತ್ತಿಯಾಗುವರು.” 17ಅಬ್ರಹಾಮನು ಅಡ್ಡಬಿದ್ದು ಸಾಷ್ಟಾಂಗ ಪ್ರಣಾಮ ಮಾಡಿದನು. ಆದರೆ, "ನೂರು ವರ್ಷದವನಿಗೆ ಮಗ ಹುಟ್ಟುವುದುಂಟೆ? ತೊಂಬತ್ತು ವರ್ಷದವಳಾದ ಸಾರಳು ಹೆತ್ತಾಳೆ?” ಎಂದು ಅಬ್ರಹಾಮನು ಮನಸ್ಸಿನಲ್ಲೇ ನೆನೆದು ನಕ್ಕು ದೇವರಿಗೆ, 18“ಇಷ್ಮಾಯೇಲನು ಇದ್ದಾನಲ್ಲವೆ? ನಿಮ್ಮ ಸಮ್ಮುಖದಲ್ಲಿ ಅವನು ಬಾಳಿದರೆ ಸಾಕಲ್ಲವೆ?” ಎಂದನು. 19ಅದಕ್ಕೆ ದೇವರು, “ಇಲ್ಲ, ನಿನ್ನ ಹೆಂಡತಿ ಸಾರಳೇ ನಿನಗೊಂದು ಮಗನನ್ನು ಹೆರುವಳು. ಅವನಿಗೆ ಇಸಾಕನೆಂದು#17:19 ಎಂದರೆ, “ನಗು”, “ಆಟ". ಹೆಸರಿಡಬೇಕು. ನನ್ನ ಒಡಂಬಡಿಕೆಯನ್ನು ಅವನೊಂದಿಗೂ ಅವನ ಸಂತತಿಯೊಂದಿಗೂ ಚಿರವಾದ ಒಡಂಬಡಿಕೆಯಾಗಿ ಸ್ಥಿರಗೊಳಿಸುತ್ತೇನೆ. 20ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ. ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತತಿಯನ್ನು ಕೊಡುತ್ತೇನೆ. ಅವನು ಹನ್ನೆರಡು ಮಂದಿ ಅಧಿಪತಿಗಳಿಗೆ ಮೂಲಪಿತನಾಗುವನು. ಅವನ ಸಂತತಿಯನ್ನು ದೊಡ್ಡ ರಾಷ್ಟ್ರವನ್ನಾಗಿ ಮಾಡುತ್ತೇನೆ. 21ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನಲ್ಲಿಯೇ ಊರ್ಜಿತಗೊಳಿಸುತ್ತೇನೆ. 22ಬರುವ ವರ್ಷ ಇದೇ ಕಾಲದಲ್ಲಿ ಸಾರಳು ಅವನನ್ನು ಹೆರುವಳು,” ಎಂದರು. ಇಷ್ಟನ್ನು ಮಾತಾಡಿ ಮುಗಿಸಿದ ಮೇಲೆ ದೇವರು ಅಬ್ರಹಾಮನಿಂದ ಅದೃಶ್ಯರಾದರು.
23ಅದೇ ದಿನದಂದು ಅಬ್ರಹಾಮನು ದೇವರ ಅಪ್ಪಣೆಯ ಪ್ರಕಾರ ತನ್ನ ಮಗನಾದ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಎಲ್ಲ ಗಂಡಸರಿಗೂ ಮನೆಯಲ್ಲಿ ಹುಟ್ಟಿದ ಹಾಗು ತಾನು ಕ್ರಯಕ್ಕೆ ಕೊಂಡುಕೊಂಡ ಜೀತದಾರರಿಗೂ ಸುನ್ನತಿಮಾಡಿಸಿದನು. 24ಅಬ್ರಹಾಮನಿಗೆ ಸುನ್ನತಿ ಆದಾಗ ಅವನಿಗೆ ತೊಂಬತ್ತೊಂಬತ್ತು ವರ್ಷವಾಗಿತ್ತು. 25ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷ ವಯಸ್ಸು.
26ಅಬ್ರಹಾಮನಿಗೂ ಅವನ ಮಗ ಇಷ್ಮಾಯೇಲನಿಗೂ ಒಂದೇ ದಿನದಲ್ಲಿ ಸುನ್ನತಿ ಆಯಿತು. 27ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಮನೆಯಲ್ಲಿ ಹುಟ್ಟಿದ ಹಾಗೂ ಅನ್ಯರಿಂದ ಕ್ರಯಕ್ಕೆ ಕೊಂಡುಕೊಂಡಿದ್ದ ಜೀತದಾರರಿಗೂ ಅವನೊಂದಿಗೆ ಸುನ್ನತಿಯಾಯಿತು.

高亮显示

分享

复制

None

想要在所有设备上保存你的高亮显示吗? 注册或登录