ಆದಿಕಾಂಡ 12

12
ಅಬ್ರಾಮನಿಗೆ ದೇವರ ಕರೆ
1ಸರ್ವೇಶ್ವರ‍ಸ್ವಾಮಿ ಅಬ್ರಾಮನಿಗೆ ಹೀಗೆಂದರು - “ನೀನು ನಿನ್ನ ಸ್ವಂತ ನಾಡನ್ನೂ ಬಂಧುಬಳಗದವರನ್ನೂ ತವರು ಮನೆಯನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೊರಟುಹೋಗು. 2ನಾನು ನಿನ್ನನ್ನು ದೊಡ್ಡ ಜನಾಂಗವಾಗಿ ಮಾಡುತ್ತೇನೆ. ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರಿಗೆ ಘನತೆಗೌರವವನ್ನು ತರುತ್ತೇನೆ. ನೀನೇ ಆದರ್ಶದ ಆಶೀರ್ವಾದವಾಗಿ ಬೆಳಗುವೆ.
3"ನಿನ್ನನ್ನು ಹರಸುವವರನು ನಾ ಹರಸುವೆ,
ನಿನ್ನನ್ನು ಶಪಿಸುವವರನು ನಾ ಶಪಿಸುವೆ.
ಧರೆಯ ಕುಲದವರಿಗೆಲ್ಲ ನಿನ್ನ ಮುಖೇನ
ದೊರಕುವುದು ನನ್ನಿಂದ ಆಶೀರ್ವಾದ.”
4ಸರ್ವೇಶ್ವರ ಹೀಗೆಂದು ಹೇಳಿದ ಮೇಲೆ ಅಬ್ರಾಮನು ಹೊರಟನು. ಲೋಟನು ಅವನ ಸಂಗಡವೆ ಹೋದನು. ಆ ಹಾರಾನ್ ಪಟ್ಟಣವನ್ನು ಬಿಟ್ಟು ಹೊರಟಾಗ ಅಬ್ರಾಮನಿಗೆ ಎಪ್ಪತ್ತೈದು ವರ್ಷಗಳಾಗಿದ್ದವು. 5ತನ್ನ ಹೆಂಡತಿ ಸಾರಯಳನ್ನು, ತನ್ನ ತಮ್ಮನ ಮಗನಾದ ಲೋಟನನ್ನು, ತಾನು ಮತ್ತು ಲೋಟನು ಹಾರಾನಿನಲ್ಲಿ ಗಳಿಸಿದ ಆಸ್ತಿಪಾಸ್ತಿಯನ್ನು ಹಾಗು ದಾಸದಾಸಿಯರನ್ನು ತೆಗೆದುಕೊಂಡು ಹೋಗಿ ಕಾನಾನ್ ನಾಡನ್ನು ಸೇರಿದನು.
6ಆ ನಾಡಿನಲ್ಲಿ ಸಂಚರಿಸುತ್ತಾ ಅಬ್ರಾಮನು ಶೆಕೆಮ್ ಪುಣ್ಯಕ್ಷೇತ್ರದಲ್ಲಿರುವ ‘ಮೋರೆ’ ಎಂಬ ವೃಕ್ಷದ ಬಳಿಗೆ ಬಂದನು. ಆ ಕಾಲದಲ್ಲಿ ಕಾನಾನ್ಯರು ಆ ನಾಡಿನಲ್ಲಿ ವಾಸವಾಗಿದ್ದರು. 7ಅಲ್ಲಿ ಸರ್ವೇಶ್ವರ ಸ್ವಾಮಿ ಅಬ್ರಾಮನಿಗೆ ದರ್ಶನವಿತ್ತು - “ಈ ನಾಡನ್ನು ನಾನು ನಿನ್ನ ಸಂತಾನಕ್ಕೆ ಕೊಡುತ್ತೇನೆ” ಎಂದು ಹೇಳಿದರು. ತನಗೆ ದರ್ಶನಕೊಟ್ಟ ಸರ್ವೇಶ್ವರನಿಗೆ ಅಬ್ರಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. 8ಬಳಿಕ ಅವನು ಅಲ್ಲಿಂದ ದಕ್ಷಿಣಕ್ಕೆ ಹೊರಟು ಬೇತೇಲಿಗೆ ಪೂರ್ವಕ್ಕಿರುವ ಗುಡ್ಡಗಾಡಿಗೆ ಬಂದು ಗುಡಾರ ಹಾಕಿ ನೆಲಸಿದನು. ಪಶ್ಚಿಮಕ್ಕೆ ಬೇತೇಲೂ ಪೂರ್ವಕ್ಕೆ ಆಯಿ ಎಂಬ ಊರು ಇದ್ದವು. ಅಲ್ಲೂ ಸರ್ವೇಶ್ವರ ಸ್ವಾಮಿಗೆ ಒಂದು ಬಲಿಪೀಠವನ್ನು ಕಟ್ಟಿಸಿ ಅವರ ನಾಮಸ್ಮರಣೆಮಾಡಿ ಆರಾಧಿಸಿದನು. 9ತರುವಾಯ ಅಲ್ಲಿಂದ ಮುಂದ ಮುಂದಕ್ಕೆ ಸಾಗುತ್ತಾ ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು.
ಈಜಿಪ್ಟಿಗೆ ಪ್ರಯಾಣ
10ಕಾನಾನ್ ನಾಡಿನಲ್ಲಿ ಕ್ಷಾಮ ತಲೆದೋರಿತು. ಅದು ಘೋರವಾಗಿದ್ದುದರಿಂದ ಅಬ್ರಾಮನು ಕೆಲವು ಕಾಲ ಈಜಿಪ್ಟಿನಲ್ಲಿರಲು ಅಲ್ಲಿಗೆ ಇಳಿದುಹೋದನು. 11ಈಜಿಪ್ಟನ್ನು ಪ್ರವೇಶಿಸುವುದಕ್ಕೆ ಮುಂಚೆಯೆ ತನ್ನ ಹೆಂಡತಿ ಸಾರಯಳಿಗೆ, “ನೀನು ಬಲು ಚೆಲುವಾದ ಹೆಣ್ಣು; 12ಈಜಿಪ್ಟಿನವರು ನಿನ್ನನ್ನು ನೋಡಿ, ನೀನು ನನ್ನ ಹೆಂಡತಿಯಾಗಿರಬಹುದೆಂದು ಊಹಿಸಿ, ನನ್ನನ್ನು ಕೊಂದು ನಿನ್ನನ್ನು ಜೀವದಿಂದ ಉಳಿಸಾರು. 13ಆದಕಾರಣ ನೀನು ನನಗೆ ತಂಗಿಯೆಂದೇ ಅವರಿಗೆ ಹೇಳು. ಆಗ ನಿನ್ನ ನಿಮಿತ್ತ ನನಗೆ ಸತ್ಕಾರ ದೊರಕುವುದು; ನಿನ್ನ ದೆಸೆಯಿಂದ ನನ್ನ ಪ್ರಾಣ ಉಳಿಯುವುದು,” ಎಂದು ತಿಳಿಸಿದನು. 14ಅಬ್ರಾಮನು ಈಜಿಪ್ಟಿಗೆ ಬಂದಾಗ ಈಜಿಪ್ಟಿನವರು ಅವನ ಸಂಗಡ ಇದ್ದ ಹೆಣ್ಣು ಬಹಳ ಚೆಲುವೆಯೆಂದುಕೊಂಡರು 15ಫರೋಹನ ಪದಾಧಿಕಾರಿಗಳು ಆಕೆಯನ್ನು ನೋಡಿಬಂದು ಆಕೆಯ ಚೆಲುವನ್ನು ಅವನ ಮುಂದೆ ಹೊಗಳಿದರು. 16ಅವನು ಆಕೆಯನ್ನು ಅರಮನೆಗೆ ಕರೆಸಿದನು. ಆಕೆಯ ನಿಮಿತ್ತ ಅಬ್ರಾಮನಿಗೆ ಸತ್ಕಾರ ದೊರಕಿತು; ಕುರಿಮೇಕೆಗಳು, ದನಕರುಗಳು, ಗಂಡುಹೆಣ್ಣು ಕತ್ತೆಗಳು, ದಾಸದಾಸಿಯರು ಹಾಗು ಒಂಟೆಗಳು ದೊರೆತವು.
17ಆದರೆ ಅಬ್ರಾಮನ ಹೆಂಡತಿಯನ್ನು ಕರೆಸಿಕೊಂಡ ಕಾರಣ ಫರೋಹನಿಗೂ ಮತ್ತು ಅವನ ಮನೆಯವರಿಗೂ ಸರ್ವೇಶ್ವರ ದೊಡ್ಡ ದೊಡ್ಡ ಗಂಡಾಂತರಗಳನ್ನು ಬರಮಾಡಿದರು. 18ಆಗ ಫರೋಹನು ಅಬ್ರಾಮನನ್ನು ಕರೆಸಿ, “ನೀನು ಮಾಡಿರುವುದೇನು? 19ಆಕೆ ನಿನ್ನ ಹೆಂಡತಿಯೆಂದು ನನಗೇಕೆ ತಿಳಿಸಲಿಲ್ಲ? ತಂಗಿಯೆಂದು ಏಕೆ ಹೇಳಿದೆ? ಹಾಗೆ ಹೇಳಿದ್ದರಿಂದಲೆ ಆಕೆ ನನಗೆ ಹೆಂಡತಿಯಾಗಲೆಂದು ಕರೆಸಿಕೊಂಡೆ. ಇಗೋ ನಿನ್ನ ಹೆಂಡತಿ! ಕರೆದುಕೊಂಡು ಇಲ್ಲಿಂದ ತೆರಳು,” ಎಂದು ಆಜ್ಞಾಪಿಸಿದನು. 20ಅವನ ಅಪ್ಪಣೆ ಪಡೆದ ಸೇವಕರು ಅಬ್ರಾಮನನ್ನೂ ಅವನ ಹೆಂಡತಿಯನ್ನೂ ಅವನಿಗಿದ್ದ ಎಲ್ಲದರ ಸಮೇತ ಅಲ್ಲಿಂದ ಕಳಿಸಿಬಿಟ್ಟರು.

高亮显示

分享

复制

None

想要在所有设备上保存你的高亮显示吗? 注册或登录