Logo ng YouVersion
Hanapin ang Icon

ಆದಿಕಾಂಡ 16

16
ಸೇವಕಿಯಾಗಿದ್ದ ಹಾಗರಳು
1ಸಾರಯಳು ಅಬ್ರಾಮನ ಹೆಂಡತಿ. ಆಕೆಗೆ ಮಕ್ಕಳಿರಲಿಲ್ಲ. ಸಾರಯಳಿಗೆ ಈಜಿಪ್ಟಿನ ಒಬ್ಬ ಸೇವಕಿಯಿದ್ದಳು. ಅವಳ ಹೆಸರು ಹಾಗರಳು. 2ಸಾರಯಳು ಅಬ್ರಾಮನಿಗೆ, “ಯೆಹೋವನು ನನಗೆ ಮಕ್ಕಳನ್ನು ಪಡೆಯುವ ಅವಕಾಶವನ್ನು ಕೊಡಲಿಲ್ಲ. ಆದ್ದರಿಂದ ನನ್ನ ಸೇವಕಿಯಾದ ಹಾಗರಳ ಬಳಿಗೆ ಹೋಗು. ಆಕೆಯಲ್ಲಿ ಹುಟ್ಟುವ ಮಗುವನ್ನು ನನ್ನ ಮಗುವಂತೆ ಸ್ವೀಕರಿಸಿಕೊಳ್ಳುವೆನು” ಎಂದು ಹೇಳಿದಳು. ಅಬ್ರಾಮನು ತನ್ನ ಹೆಂಡತಿಯಾದ ಸಾರಯಳಿಗೆ ವಿಧೇಯನಾದನು.
3ಅಬ್ರಾಮನು ಕಾನಾನಿಗೆ ಬಂದು ಹತ್ತು ವರ್ಷಗಳಾದ ಮೇಲೆ ಇದು ನಡೆಯಿತು. ಹೀಗೆ ಸಾರಯಳು ತನ್ನ ಗಂಡನಾದ ಅಬ್ರಾಮನಿಗೆ ಹಾಗರಳನ್ನು ಕೊಟ್ಟಳು. ಹಾಗರಳು ಆಕೆಯ ಈಜಿಪ್ಟಿನ ಸೇವಕಿಯಾಗಿದ್ದಳು. 4ಹಾಗರಳು ಅಬ್ರಾಮನಿಂದ ಗರ್ಭಿಣಿಯಾದಾಗ ತನ್ನ ಯಜಮಾನಿಯಾದ ಸಾರಯಳನ್ನೇ ಕಡೆಗಣಿಸತೊಡಗಿದಳು. 5ಆಗ ಸಾರಯಳು ಅಬ್ರಾಮನಿಗೆ, “ನನ್ನ ಸಂಕಟಕ್ಕೆ ನೀನೇ ಕಾರಣ. ನಾನು ಅವಳನ್ನು ನಿನಗೆ ಕೊಟ್ಟೆನು. ಈಗ ಅವಳು ಗರ್ಭಿಣಿಯಾಗಿದ್ದಾಳೆ ಮತ್ತು ನನ್ನನ್ನೇ ಕಡೆಗಣಿಸುತ್ತಿದ್ದಾಳೆ. ಯೆಹೋವನೇ ನನಗೂ ನಿನಗೂ ನ್ಯಾಯ ತೀರಿಸಲಿ” ಎಂದು ಹೇಳಿದಳು.
6ಅದಕ್ಕೆ ಅಬ್ರಾಮನು ಸಾರಯಳಿಗೆ, “ನೀನು ಹಾಗರಳ ಯಜಮಾನಿ. ನೀನು ಅವಳಿಗೆ ಏನುಬೇಕಾದರೂ ಮಾಡಬಹುದು” ಎಂದು ಹೇಳಿದನು. ಆದ್ದರಿಂದ ಸಾರಯಳು ಹಾಗರಳನ್ನು ಶಿಕ್ಷಿಸಿದಳು. ಆಗ ಹಾಗರಳು ಓಡಿಹೋದಳು.
ಹಾಗರಳ ಮಗನಾದ ಇಷ್ಮಾಯೇಲ
7ಯೆಹೋವನ ದೂತನು ಹಾಗರಳನ್ನು ಮರುಳುಗಾಡಿನ ಒರತೆಯೊಂದರ ಬಳಿಯಲ್ಲಿ ಕಂಡನು. ಆ ಒರತೆಯು ಶೂರಿಗೆ ಹೋಗುವ ದಾರಿಯ ಬಳಿಯಲ್ಲಿತ್ತು. 8ದೇವದೂತನು ಅವಳಿಗೆ, “ಹಾಗರಳೇ, ನೀನು ಸಾರಯಳ ಸೇವಕಿಯಾಗಿದ್ದರೂ ಯಾಕೆ ಇಲ್ಲಿರುವೆ? ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.
ಹಾಗರಳು, “ನನ್ನ ಯಜಮಾನಿಯಾದ ಸಾರಯಳ ಬಳಿಯಿಂದ ಓಡಿಹೋಗುತ್ತಿರುವೆ” ಎಂದು ಹೇಳಿದಳು.
9ಯೆಹೋವನ ದೂತನು ಹಾಗರಳಿಗೆ, “ಸಾರಯಳು ನಿನ್ನ ಯಜಮಾನಿ. ನೀನು ಆಕೆಯ ಬಳಿಗೆ ಹಿಂತಿರುಗಿ ಹೋಗಿ ಆಕೆಗೆ ವಿಧೇಯಳಾಗಿರು” ಎಂದು ಹೇಳಿದನು. 10ಇದಲ್ಲದೆ ಯೆಹೋವನ ದೂತನು ಹಾಗರಳಿಗೆ, “ನಾನು ನಿನ್ನ ಸಂತತಿಯವರನ್ನು ಅಸಂಖ್ಯಾತರನ್ನಾಗಿ ಮಾಡುವೆನು” ಅಂದನು.
11ಇದಲ್ಲದೆ ದೇವದೂತನು ಆಕೆಗೆ,
“ಹಾಗರಳೇ, ಈಗ ನೀನು ಗರ್ಭಿಣಿಯಾಗಿರುವೆ;
ನಿನಗೆ ಒಬ್ಬ ಮಗನು ಹುಟ್ಟುವನು.
ನೀನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಡಬೇಕು;
ಯಾಕೆಂದರೆ ಯೆಹೋವನು ನಿನ್ನ ಕಷ್ಟಗಳನ್ನು ಕೇಳಿದ್ದಾನೆ; ಆತನು ನಿನಗೆ ಸಹಾಯ ಮಾಡುವನು.
12ಇಷ್ಮಾಯೇಲನು ಕಾಡುಕತ್ತೆಯಂತೆ
ಗಡುಸಾಗಿದ್ದು ಸ್ವತಂತ್ರವಾಗಿರುವನು.
ಅವನು ಪ್ರತಿಯೊಬ್ಬರಿಗೂ ವಿರೋಧವಾಗಿರುವನು;
ಪ್ರತಿಯೊಬ್ಬರೂ ಅವನಿಗೆ ವಿರೋಧವಾಗಿರುವರು.
ಅವನು ಸ್ಥಳದಿಂದ ಸ್ಥಳಕ್ಕೆ ಹೋಗುತ್ತಾ
ತನ್ನ ಸಹೋದರರ ಸಮೀಪದಲ್ಲಿ ವಾಸಿಸಿದರೂ ಅವರಿಗೆ ವಿರೋಧವಾಗಿರುವನು.”
ಎಂದು ಹೇಳಿ ಹೊರಟುಹೋದನು.
13ಯೆಹೋವನು ತನ್ನೊಡನೆ ಮಾತಾಡಿದ್ದರಿಂದ ಹಾಗರಳು, “ಈ ಸ್ಥಳದಲ್ಲಿಯೂ ದೇವರು ನನ್ನನ್ನು ನೋಡಿ ನನಗಾಗಿ ಚಿಂತಿಸುತ್ತಾನೆ ಎಂದುಕೊಂಡು ಆತನಿಗೆ ‘ನನ್ನನ್ನು ನೋಡುವ ದೇವರು’” ಎಂದು ಹೆಸರಿಟ್ಟಳು. 14ಆದ್ದರಿಂದ ಆ ಬಾವಿಗೆ ಬೀರ್‌ಲಹೈರೋಯಿ (ಬೀರ್‌ಲಹೈರೋಯಿ. ಇದರರ್ಥ: “ನನ್ನನ್ನು ನೋಡುವ ಜೀವಸ್ವರೂಪನ ಬಾವಿ.”) ಎಂದು ಹೆಸರಾಯಿತು. ಈ ಬಾವಿಯು ಕಾದೇಶಿಗೂ ಬೆರೆದಿಗೂ ನಡುವೆ ಇದೆ.
15ಹಾಗರಳು ಅಬ್ರಾಮನ ಮಗನಿಗೆ ಜನ್ಮಕೊಟ್ಟಳು. ಅಬ್ರಾಮನು ಆ ಮಗನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. 16ಅಬ್ರಾಮನಿಗೆ ಎಂಭತ್ತಾರು ವರ್ಷವಾಗಿದ್ದಾಗ ಹಾಗರಳಲ್ಲಿ ಇಷ್ಮಾಯೇಲನು ಜನಿಸಿದನು.

Kasalukuyang Napili:

ಆದಿಕಾಂಡ 16: KERV

Haylayt

Ibahagi

Kopyahin

None

Gusto mo bang ma-save ang iyong mga hinaylayt sa lahat ng iyong device? Mag-sign up o mag-sign in