Chapa ya Youversion
Ikoni ya Utafutaji

ಆದಿಕಾಂಡ 7

7
ಜಲಪ್ರಳಯ
1ಸರ್ವೇಶ್ವರ ಸ್ವಾಮಿ ನೋಹನಿಗೆ, "ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ. 2ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ. 3ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಹೀಗೆ ಆಯಾ ಜಾತಿಯನ್ನು ಭೂಮಿಯಲ್ಲಿ ಉಳಿಸಿ ಕಾಪಾಡಬೇಕು. 4ಏಳು ದಿನಗಳಾನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲ ಭೂಮಿಯಿಂದ ಅಳಿಸಿಹಾಕುವೆನು,” ಎಂದು ಹೇಳಿದರು. 5ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು.
6ಭೂಮಿಯ ಮೇಲೆ ಜಲಪ್ರಳಯ ಬಂದಾಗ ನೋಹನಿಗೆ ಆರುನೂರು ವರ್ಷ. 7ಆ ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ತನ್ನ ಮಡದಿ, ಮಕ್ಕಳು, ಸೊಸೆಯರ ಸಮೇತ ನಾವೆಯನ್ನು ಹತ್ತಿದನು. 8ದೇವರ ಆಜ್ಞಾನುಸಾರ ಶುದ್ಧಾಶುದ್ಧ ಪ್ರಾಣಿಗಳಲ್ಲಿಯೂ ಪಕ್ಷಿಗಳಲ್ಲಿಯೂ ಕ್ರಿಮಿಕೀಟಗಳಲ್ಲಿಯೂ 9ಗಂಡುಹೆಣ್ಣುಗಳು ಜೋಡಿಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು. 10ಏಳು ದಿನಗಳಾದ ಬಳಿಕ ಜಲಪ್ರಳಯವಾಗತೊಡಗಿತು.
11ನೋಹನ ಜೀವಮಾನದ ಆರುನೂರನೆಯ ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನ ಭೂಮಿಯ ಅಡಿಸಾಗರದ ಸೆಲೆಗಳು ಒಡೆದವು. ಆಕಾಶದ ತೂಬುಗಳು ತೆರೆದವು. 12ನಲವತ್ತು ದಿನವೂ ಹಗಲಿರುಳೆನ್ನದೆ ಭೂಮಿಯ ಮೇಲೆ ಬಿರುಮಳೆ ಸುರಿಯಿತು. 13ಅದೇ ದಿನ ನೋಹನೂ ಅವನ ಹೆಂಡತಿಯೂ ಮತ್ತು ಶೇಮ್, ಹಾಮ್, ಯೆಫೆತ್ ಎಂಬ ಅವನ ಮಕ್ಕಳೂ ಅವರ ಮಡದಿಯರೂ ನಾವೆಯನ್ನು ಹೊಕ್ಕರು. 14ಅವರೊಂದಿಗೆ ಸಕಲ ವಿಧವಾದ ಕಾಡುಮೃಗಗಳೂ ಸಾಕು ಪ್ರಾಣಿಗಳೂ ಕ್ರಿಮಿಕೀಟಗಳೂ ರೆಕ್ಕೆಬಡಿಯುವ ಹಕ್ಕಿಪಕ್ಷಿಗಳೂ 15ತಮ್ಮತಮ್ಮ ಜಾತಿಗನುಸಾರ ಎಲ್ಲ ಜೀವಿಗಳು ಎರಡೆರಡಾಗಿ ಬಂದು ನಾವೆಯನ್ನು ಸೇರಿದವು. 16ದೇವರು ನೋಹನಿಗೆ ಅಪ್ಪಣೆಕೊಟ್ಟ ಮೇರೆಗೆ, ಗಂಡು ಹೆಣ್ಣಂತೆ ಎಲ್ಲ ಪ್ರಾಣಿಗಳು ಬಂದು ಸೇರಿದವು. ಬಳಿಕ ಸರ್ವೇಶ್ವರ, ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು.
17ಜಲಪ್ರಳಯಡ ಮಳೆ ನಲವತ್ತು ದಿನ ಭೂಮಿಯ ಮೇಲೆ ಒಂದೇ ಸಮನೆ ಸುರಿಯಿತು. ನೀರು ಹೆಚ್ಚುತ್ತಾ ನಾವೆಯನ್ನು ಮೇಲೆತ್ತಲು ಅದು ನೀರಿನ ಮೇಲೆ ತೇಲತೊಡಗಿತು. 18ನೀರು ಪ್ರಬಲವಾಗಿ ಹೆಚ್ಚಲು ನಾವೆಯು ಅದರ ಮೇಲೆ ಚಲಿಸಿತು. 19ಅದು ಇನ್ನೂ ಎಷ್ಟು ಅಧಿಕವಾಯಿತು ಎಂದರೆ, ಆಕಾಶದ ಕೆಳಗಿರುವ ಗುಡ್ಡಬೆಟ್ಟಗಳೆಲ್ಲ ಮುಚ್ಚಿಹೋದವು. 20ಹೀಗೆ ಮುಚ್ಚಿಹೋದ ಬೆಟ್ಟಗಳ ಮೇಲೆ ಹದಿನೈದು ಮೊಳ ನೀರು ನಿಂತಿತು. 21ಈ ಕಾರಣ ಭೂಮಿಯ ಮೇಲೆ ಸಂಚರಿಸುತ್ತಿದ್ದ ಎಲ್ಲ ಪ್ರಾಣಿಗಳು, ಕಾಡುಮೃಗಗಳು, ಸಾಕುಪ್ರಾಣಿಗಳು, ಕ್ರಿಮಿಕೀಟಗಳು, ಮನುಷ್ಯರು ಸಹಿತವಾಗಿ ನಾಶವಾದುವು. 22ಉಸಿರಾಡುವ ಭೂಮಿಯ ಜಂತುಗಳೆಲ್ಲ ಸತ್ತುಹೋದವು. 23ಮನುಷ್ಯರು ಮೊದಲ್ಗೊಂಡು ಪ್ರಾಣಿಪಕ್ಷಿ, ಕ್ರಿಮಿಕೀಟದವರೆಗೆ ಭೂಮಿಯ ಮೇಲಿನದೆಲ್ಲವೂ ನಾಶವಾಯಿತು. ಭೂಮಿಯಿಂದ ಎಲ್ಲವೂ ನಿರ್ಮೂಲವಾಯಿತು. ನೋಹನು ಹಾಗೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳು ಮಾತ್ರ ಉಳಿದುಕೊಂಡವು. 24ಪ್ರಳಯದ ನೀರು ಭೂಮಿಯ ಮೇಲೆ ನೂರೈವತ್ತು ದಿನಗಳವರೆಗೂ ಪ್ರಬಲವಾಗಿಯೇ ಇತ್ತು.

Kuonyesha

Shirikisha

Nakili

None

Je, ungependa vivutio vyako vihifadhiwe kwenye vifaa vyako vyote? Jisajili au ingia