ಯೋಹಾನನ ಸುವಾರ್ತೆ 15
15
ಯೇಸು ದ್ರಾಕ್ಷಿಬಳ್ಳಿಯಂತಿದ್ದಾನೆ
1“ನಾನು ನಿಜವಾದ ದ್ರಾಕ್ಷಿಬಳ್ಳಿ. ನನ್ನ ತಂದೆ ತೋಟಗಾರನು. 2ಫಲಕೊಡದಿರುವ ಪ್ರತಿಯೊಂದು ಕವಲನ್ನು ಆತನು ಕತ್ತರಿಸಿಹಾಕುವನು. ಫಲಕೊಡುವ ಕವಲು ಇನ್ನೂ ಹೆಚ್ಚು ಫಲಕೊಡುವಂತೆ ಅದನ್ನು ಶುದ್ಧಗೊಳಿಸುವನು. 3ನಾನು ನಿಮಗೆ ಹೇಳಿದ ಉಪದೇಶದಿಂದ ನೀವು ಈಗಾಗಲೇ ಶುದ್ಧರಾಗಿದ್ದೀರಿ. 4ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಯಾವ ಕವಲೂ ತನ್ನಷ್ಟಕ್ಕೆ ತಾನೇ ಫಲಕೊಡಲಾರದು. ಅದು ದ್ರಾಕ್ಷಿಬಳ್ಳಿಯಲ್ಲಿ ನೆಲೆಗೊಂಡಿರಬೇಕು. ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮಷ್ಟಕ್ಕೇ ಫಲಕೊಡಲಾರಿರಿ. ನೀವು ನನ್ನಲ್ಲಿ ನೆಲೆಗೊಂಡಿರಬೇಕು.
5“ನಾನೇ ದ್ರಾಕ್ಷಿಬಳ್ಳಿ; ನೀವೇ ಕವಲುಗಳು. ಒಬ್ಬನು ನನ್ನಲ್ಲಿ ನೆಲೆಗೊಂಡಿದ್ದರೆ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ, ಆಗ ಅವನು ಹೆಚ್ಚು ಫಲಕೊಡುವನು. ಆದರೆ ಅವನು ನನ್ನನ್ನು ಬಿಟ್ಟು ಏನೂ ಮಾಡಲಾರನು. 6ನನ್ನಲ್ಲಿ ನೆಲೆಗೊಂಡಿಲ್ಲದವನು ಹೊರಗೆ ಬಿಸಾಡಲ್ಪಟ್ಟ ಕವಲಿನಂತಿರುವನು. ಆ ಕವಲು ಸತ್ತುಹೋಗುವುದು. ಸತ್ತ ಕವಲುಗಳನ್ನು ಜನರು ಒಟ್ಟುಗೂಡಿಸಿ ಬೆಂಕಿಯೊಳಕ್ಕೆ ಎಸೆದು ಸುಟ್ಟುಹಾಕುವರು. 7ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಕೇಳಿಕೊಳ್ಳಿರಿ, ಅದು ನಿಮಗೆ ದೊರೆಯುವುದು. 8ನೀವು ಬಹಳ ಫಲಕೊಟ್ಟು, ನೀವೇ ನನ್ನ ಶಿಷ್ಯರೆಂಬುದನ್ನು ತೋರಿಸಬೇಕು. ಇದರಿಂದ ನನ್ನ ತಂದೆಗೆ ಮಹಿಮೆ ಆಗುವುದು.
9“ತಂದೆಯು ನನ್ನನ್ನು ಪ್ರೀತಿಸಿದಂತೆ ನಾನೂ ನಿಮ್ಮನ್ನು ಪ್ರೀತಿಸಿದೆನು. ಈಗ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10ನಾನು ನನ್ನ ತಂದೆಯ ಆಜ್ಞೆಗಳಿಗೆ ವಿಧೇಯನಾಗಿದ್ದು ಆತನ ಪ್ರೀತಿಯಲ್ಲಿ ನೆಲೆಗೊಂಡಿದ್ದೇನೆ. ಅದೇ ರೀತಿಯಲ್ಲಿ, ನೀವು ನನ್ನ ಆಜ್ಞೆಗಳಿಗೆ ವಿಧೇಯರಾದರೆ, ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. 11ನನಗಿರುವ ಆನಂದವನ್ನು ನೀವೂ ಹೊಂದಿಕೊಳ್ಳಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನು ಹೇಳಿದ್ದೇನೆ. ನಿಮ್ಮ ಆನಂದವು ಪರಿಪೂರ್ಣವಾದ ಆನಂದವಾಗಿರಬೇಕೆಂದು ನಾನು ಬಯಸುತ್ತೇನೆ. 12ನಾನು ನಿಮ್ಮನ್ನು ಪ್ರೀತಿಸಿದಂತೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ. 13ಗೆಳೆಯರಿಗಾಗಿ ಸ್ವಂತ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. 14ನಾನು ಹೇಳುವ ಕಾರ್ಯಗಳನ್ನು ನೀವು ಮಾಡಿದರೆ, ನೀವು ನನ್ನ ಸ್ನೇಹಿತರು. 15ಈಗ ನಾನು ನಿಮ್ಮನ್ನು ನನ್ನ ಸೇವಕರುಗಳೆಂದು ಕರೆಯುವುದಿಲ್ಲ. ಯಜಮಾನನ ಕೆಲಸಕಾರ್ಯಗಳು ಸೇವಕನಿಗೆ ತಿಳಿದಿರುವುದಿಲ್ಲ. ಆದರೆ ಈಗ ನಾನು ನಿಮ್ಮನ್ನು ನನ್ನ ಗೆಳೆಯರೆಂದು ಕರೆಯುತ್ತೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ ಪ್ರತಿಯೊಂದನ್ನೂ ನಾನು ನಿಮಗೆ ಹೇಳಿದ್ದೇನೆ.
16“ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ; ನಾನು ನಿಮ್ಮನ್ನು ಆರಿಸಿಕೊಂಡೆನು. ನೀವು ಹೊರಟುಹೋಗಿ ಫಲಕೊಡಬೇಕು. ಇದೇ ನಾನು ನಿಮಗೆ ಕೊಟ್ಟಿರುವ ಕೆಲಸ. ಈ ಫಲವು ನಿಮ್ಮ ಜೀವನದಲ್ಲಿ ಶಾಶ್ವತವಾಗಿರಲಿ ಎಂಬುದೇ ನನ್ನ ಬಯಕೆ. ಹೀಗಿರಲಾಗಿ, ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆ.
ಯೇಸು ತನ್ನ ಶಿಷ್ಯರಿಗೆ ನೀಡಿದ ಎಚ್ಚರಿಕೆ
18“ಈ ಲೋಕವು ನಿಮ್ಮನ್ನು ದ್ವೇಷ ಮಾಡಿದರೆ, ಅದು ಮೊದಲು ನನ್ನನ್ನೇ ದ್ವೇಷ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ. 19ನೀವು ಈ ಲೋಕಕ್ಕೆ ಸೇರಿದವರಾಗಿದ್ದರೆ, ಈ ಲೋಕವು ತನ್ನ ಸ್ವಂತ ಜನರನ್ನು ಪ್ರೀತಿಸುವಂತೆ ನಿಮ್ಮನ್ನೂ ಪ್ರೀತಿಸುತ್ತಿತ್ತು. ಆದರೆ ನಾನು ನಿಮ್ಮನ್ನು ಈ ಲೋಕದೊಳಗಿಂದ ಆರಿಸಿಕೊಂಡಿದ್ದೇನೆ. ಆದ್ದರಿಂದ ನೀವು ಈ ಲೋಕಕ್ಕೆ ಸೇರಿದವರಲ್ಲ. ಆದಕಾರಣ ಈ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.
20“ಸೇವಕನು ತನ್ನ ಒಡೆಯನಿಗಿಂತ ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಿಸಿಕೊಳ್ಳಿ. ಜನರು ನನ್ನನ್ನು ಹಿಂಸಿಸಿದಂತೆ ನಿಮ್ಮನ್ನೂ ಹಿಂಸಿಸುವರು ಮತ್ತು ನನ್ನ ಉಪದೇಶಕ್ಕೆ ವಿಧೇಯರಾದರೆ ನಿಮ್ಮ ಉಪದೇಶಕ್ಕೂ ವಿಧೇಯರಾಗುವರು. 21ಜನರು ನನ್ನ ದೆಸೆಯಿಂದ ಇದನ್ನೆಲ್ಲಾ ನಿಮಗೆ ಮಾಡುವರು. ನನ್ನನ್ನು ಕಳುಹಿಸಿದಾತನನ್ನು ಅವರು ತಿಳಿದಿಲ್ಲ. 22ನಾನು ಬಂದು ಈ ಲೋಕದ ಜನರೊಂದಿಗೆ ಮಾತಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ನಾನು ಅವರೊಂದಿಗೆ ಮಾತಾಡಿದ್ದೇನೆ. ಆದ್ದರಿಂದ ತಮ್ಮ ಪಾಪಕ್ಕೆ ಅವರಿಗೆ ಯಾವ ನೆವವೂ ಇಲ್ಲ.
23“ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನೂ ದ್ವೇಷಿಸುವವನಾಗಿದ್ದಾನೆ. 24ಬೇರೆ ಯಾವ ವ್ಯಕ್ತಿಯೂ ಹಿಂದೆಂದೂ ಮಾಡಿಲ್ಲದ ಕಾರ್ಯಗಳನ್ನು ಮಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ನಾನು ಮಾಡಿದ ಆ ಕಾರ್ಯಗಳನ್ನು ಅವರು ನೋಡಿದ್ದಾರೆ. ಹೀಗಿದ್ದರೂ ಅವರು ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸುತ್ತಾರೆ. 25‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’#15:25 ಅವರು … ದ್ವೇಷಿಸಿದರು ನೋಡಿರಿ: ಕೀರ್ತನೆ 35:19; 69:4. ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನಿಜವಾಗಲೆಂದು ಹೀಗಾಯಿತು.
26“ನಾನು ತಂದೆಯ ಬಳಿಯಿಂದ ಸಹಾಯಕನನ್ನು ನಿಮಗೆ ಕಳುಹಿಸಿಕೊಡುವೆನು. ತಂದೆಯ ಬಳಿಯಿಂದ ಬರುವ ಆ ಸಹಾಯಕನು ಸತ್ಯದ ಆತ್ಮನಾಗಿದ್ದಾನೆ. ಆತನು ಬಂದಾಗ ನನ್ನ ಬಗ್ಗೆ ನಿಮಗೆ ತಿಳಿಸುವನು. 27ಮತ್ತು ನೀವು ಮೊದಲಿಂದಲೂ ನನ್ನೊಂದಿಗೆ ಇದ್ದಕಾರಣ ನೀವು ಸಹ ನನ್ನ ಬಗ್ಗೆ ಜನರಿಗೆ ಹೇಳುವಿರಿ.
Aktualisht i përzgjedhur:
ಯೋಹಾನನ ಸುವಾರ್ತೆ 15: KERV
Thekso
Ndaje
Kopjo

A doni që theksimet tuaja të jenë të ruajtura në të gjitha pajisjet që keni? Regjistrohu ose hyr
Kannada Holy Bible: Easy-to-Read Version
All rights reserved.
© 1997 Bible League International