Logoja YouVersion
Ikona e kërkimit

ಯೋಹಾನ 15

15
1ನಾನೇ ನಿಜವಾದ ದ್ರಾಕ್ಷೇಬಳ್ಳಿ. ನನ್ನ ತಂದೆ ತೋಟಗಾರನು. 2ನನ್ನಲ್ಲಿದ್ದು ಫಲಕೊಡದಿರುವ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚು ಫಲಕೊಡುವ ಹಾಗೆ ಅದನ್ನು ಶುದ್ಧಿಮಾಡುತ್ತಾನೆ. 3ನಾನು ನಿಮಗೆ ಹೇಳಿದ ವಾಕ್ಯದ ದೆಸೆಯಿಂದ ಈಗ ಶುದ್ಧರಾಗಿದ್ದೀರಿ. 4ನೀವು ನನ್ನಲ್ಲಿ ನೆಲೆಗೊಂಡಿರ್ರಿ, ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಕೊಂಬೆಯು ಬಳ್ಳಿಯಲ್ಲಿ ನೆಲೆಗೊಂಡಿರದಿದ್ದರೆ ಹೇಗೆ ತನ್ನಷ್ಟಕ್ಕೆ ತಾನೇ ಫಲಕೊಡಲಾರದೋ ಹಾಗೆಯೇ ನೀವು ನನ್ನಲ್ಲಿ ನೆಲೆಗೊಂಡಿರದಿದ್ದರೆ ಫಲಕೊಡಲಾರಿರಿ. 5ನಾನು ದ್ರಾಕ್ಷೇ ಬಳ್ಳಿ, ನೀವು ಕೊಂಬೆಗಳು; ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅವನೇ ಬಹಳ ಫಲಕೊಡುವನು; ನೀವು ನನ್ನನ್ನು ಬಿಟ್ಟು ಏನೂ ಮಾಡಲಾರಿರಿ. 6ಯಾವನು ನನ್ನಲ್ಲಿ ನೆಲೆಗೊಂಡಿರುವದಿಲ್ಲವೋ ಅವನು ಆ ಕೊಂಬೆಯಂತೆ ಹೊರಕ್ಕೆ ಬಿಸಾಡಲ್ಪಟ್ಟು ಒಣಗಿಹೋಗುವನು; ಅಂಥ ಕೊಂಬೆಗಳನ್ನು ಕೂಡಿಸಿ ಬೆಂಕಿಯಲ್ಲಿ ಹಾಕುತ್ತಾರೆ, ಅವು ಸುಟ್ಟುಹೋಗುತ್ತವೆ. 7ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು. 8ನೀವು ಬಹಳ ಫಲಕೊಡುವದರಿಂದಲೇ ನನ್ನ ತಂದೆಗೆ ಮಹಿಮೆ ಉಂಟಾಗುವದು; ಮತ್ತು ನನ್ನ ಶಿಷ್ಯರಾಗುವಿರಿ.
9ತಂದೆ ನನ್ನನ್ನು ಪ್ರೀತಿಸಿದ ಹಾಗೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ; ನನ್ನ ಪ್ರೀತಿಯಲ್ಲಿ ನೆಲೆಗೊಂಡಿರ್ರಿ. 10ನಾನು ನನ್ನ ತಂದೆಯ ಆಜ್ಞೆಗಳನ್ನು ಕೈಕೊಂಡು ನಡೆದು ಆತನ ಪ್ರೀತಿಯಲ್ಲಿ ನೆಲೆಗೊಂಡಿರುವ ಮೇರೆಗೆ ನೀವು ನನ್ನ ಆಜ್ಞೆಗಳನ್ನು ಕೈಕೊಂಡು ನಡೆದರೆ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ.
11ನನ್ನಲ್ಲಿರುವ ಆನಂದವು ನಿಮ್ಮಲ್ಲಿಯೂ ಇರಬೇಕೆಂತಲೂ ನಿಮ್ಮ ಆನಂದವು ಪರಿಪೂರ್ಣವಾಗಬೇಕೆಂತಲೂ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 12ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬದೇ ನಾನು ಕೊಡುವ ಆಜ್ಞೆಯಾಗಿದೆ. 13ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ. 14ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು. 15ಇನ್ನು ಮೇಲೆ ನಾನು ನಿಮ್ಮನ್ನು ಆಳುಗಳನ್ನುವದಿಲ್ಲ; ಯಜಮಾನನು ಮಾಡುವಂಥದು ಆಳಿಗೆ ತಿಳಿಯುವದಿಲ್ಲ. ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ. 16ನೀವು ನನ್ನನ್ನು ಆರಿಸಿ ತೆಗೆದುಕೊಂಡಿಲ್ಲ; ನಾನು ನಿಮ್ಮನ್ನು ಆರಿಸಿ ತೆಗೆದುಕೊಂಡೆನು. ನೀವು ಹೊರಟುಹೋಗಿ ಫಲಕೊಡುವವರಾಗಬೇಕೆಂತಲೂ ನೀವು ಕೊಡುವ ಫಲವು ನಿಲ್ಲುವಂಥದಾಗಬೇಕೆಂತಲೂ ನಿಮ್ಮನ್ನು ನೇವಿುಸಿದ್ದೇನೆ. ಹೀಗಿರಲಾಗಿ ನನ್ನ ಹೆಸರಿನಲ್ಲಿ ತಂದೆಯನ್ನು ಏನೇನು ಬೇಡಿಕೊಳ್ಳುವಿರೋ ಅದನ್ನು ಆತನು ನಿಮಗೆ ಕೊಡುವನು.
17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂತಲೇ ಇವುಗಳನ್ನು ನಿಮಗೆ ಆಜ್ಞಾಪಿಸುತ್ತೇನೆ. 18ಲೋಕವು ನಿಮ್ಮ ಮೇಲೆ ದ್ವೇಷಮಾಡುವದಾದರೆ ಅದು ಮೊದಲು ನನ್ನ ಮೇಲೆ ದ್ವೇಷಮಾಡಿತೆಂದು ತಿಳುಕೊಳ್ಳಿರಿ. 19ನೀವು ಲೋಕದ ಕಡೆಯವರಾಗಿರುತ್ತಿದ್ದರೆ ಲೋಕವು ನಿಮ್ಮ ಮೇಲೆ ತನ್ನವರೆಂದು ಮಮತೆ ಇಡುತ್ತಿತ್ತು; ಆದರೆ ನೀವು ಲೋಕದ ಕಡೆಯವರಲ್ಲದೆ ಇರುವದರಿಂದಲೂ ನಾನು ನಿಮ್ಮನ್ನು ಲೋಕದೊಳಗಿಂದ ಆರಿಸಿ ತೆಗೆದುಕೊಂಡಿರುವದರಿಂದಲೂ ಲೋಕವು ನಿಮ್ಮ ಮೇಲೆ ದ್ವೇಷ ಮಾಡುತ್ತದೆ. 20ದಣಿಗಿಂತ ಆಳು ದೊಡ್ಡವನಲ್ಲವೆಂಬದಾಗಿ ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಳ್ಳಿರಿ. ಅವರು ನನ್ನನ್ನು ಹಿಂಸೆಪಡಿಸಿದರೆ ನಿಮ್ಮನ್ನು ಸಹ ಹಿಂಸೆಪಡಿಸುವರು; ಅವರು ನನ್ನ ಮಾತನ್ನು ಕೈಕೊಂಡು ನಡೆದರೆ ನಿಮ್ಮ ಮಾತನ್ನು ಸಹ ಕೈಕೊಂಡು ನಡೆಯುವರು. 21ಆದರೆ ಅವರು ನನ್ನನ್ನು ಕಳುಹಿಸಿಕೊಟ್ಟಾತನನ್ನು ತಿಳಿಯದವರಾದದರಿಂದ ಇದನ್ನೆಲ್ಲಾ ನನ್ನ ಹೆಸರಿನ ನಿವಿುತ್ತ ನಿಮಗೆ ಮಾಡುವರು. 22ನಾನು ಬಂದು ಅವರ ಕೂಡ ಮಾತಾಡದಿದ್ದರೆ ಅವರಿಗೆ ಪಾಪವು ಇರುತ್ತಿದ್ದಿಲ್ಲ; ಆದರೆ ಅವರು ಮಾಡಿದ ಪಾಪಕ್ಕಾಗಿ ಅವರಿಗೆ ಈಗ ನೆವವಿಲ್ಲ. 23ನನ್ನ ಮೇಲೆ ದ್ವೇಷಮಾಡುವವನು ನನ್ನ ತಂದೆಯ ಮೇಲೆಯೂ ದ್ವೇಷಮಾಡುವವನಾಗಿದ್ದಾನೆ. 24ಮತ್ತಾರೂ ನಡಿಸದ ಕ್ರಿಯೆಗಳನ್ನು ನಾನು ಅವರಲ್ಲಿ ನಡಿಸದೆ ಇದ್ದರೆ ಅವರಿಗೆ ಪಾಪವು ಇರುತ್ತಿದ್ದಿಲ್ಲ; ಆದರೆ ಈಗ ಅವರು ನೋಡಿದ್ದಾರೆ, ಆದರೂ ನನ್ನ ಮೇಲೆಯೂ ನನ್ನ ತಂದೆಯ ಮೇಲೆಯೂ ದ್ವೇಷಮಾಡಿದ್ದಾರೆ. 25ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.
26ಆದರೆ ತಂದೆಯ ಬಳಿಯಿಂದ ನಾನು ನಿಮಗೆ ಕಳುಹಿಸಿಕೊಡುವ ಸಹಾಯಕನು, ಅಂದರೆ ತಂದೆಯ ಬಳಿಯಿಂದ ಹೊರಡುವ ಸತ್ಯದ ಆತ್ಮನು, ಬಂದಾಗ ಆತನು ನನ್ನನ್ನು ಕುರಿತು ಸಾಕ್ಷಿಹೇಳುವನು. 27ನೀವು ಮೊದಲಿನಿಂದ ನನ್ನ ಸಂಗಡ ಇದ್ದ ಕಾರಣ ನೀವೂ ಸಾಕ್ಷಿಗಳಾಗಿದ್ದೀರಿ.

Aktualisht i përzgjedhur:

ಯೋಹಾನ 15: KANJV-BSI

Thekso

Ndaje

Copy

None

A doni që theksimet tuaja të jenë të ruajtura në të gjitha pajisjet që keni? Regjistrohu ose hyr