Logotip YouVersion
Search Icon

ಯೋಹಾನನ ಸುವಾರ್ತೆ 3

3
ಯೇಸು ಮತ್ತು ನಿಕೊದೇಮ
1ನಿಕೊದೇಮ ಎಂಬ ಒಬ್ಬ ಮನುಷ್ಯನಿದ್ದನು. ನಿಕೊದೇಮನು ಫರಿಸಾಯರಲ್ಲಿ ಒಬ್ಬನಾಗಿದ್ದನು. ಅವನು ಒಬ್ಬ ಮುಖ್ಯ ಯೆಹೂದ್ಯ ನಾಯಕನಾಗಿದ್ದನು. 2ಒಂದು ರಾತ್ರಿ ನಿಕೊದೇಮನು ಯೇಸುವಿನ ಬಳಿಗೆ ಬಂದನು. ನಿಕೊದೇಮನು, “ಗುರುವೇ, ನೀನು ದೇವರಿಂದ ಕಳುಹಿಸಲ್ಪಟ್ಟ ಉಪದೇಶಕನೆಂದು ನಮಗೆ ಗೊತ್ತಿದೆ. ನೀನು ಮಾಡುವ ಈ ಸೂಚಕಕಾರ್ಯಗಳನ್ನು ದೇವರ ಸಹಾಯದಿಂದಲ್ಲದೆ ಯಾರೂ ಮಾಡಲಾರರು” ಎಂದು ಹೇಳಿದನು.
3ಯೇಸು “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ಹೊಸದಾಗಿ ಹುಟ್ಟಲೇಬೇಕು. ಒಬ್ಬನು ಹೊಸದಾಗಿ ಹುಟ್ಟಿಲ್ಲದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು” ಎಂದು ಉತ್ತರಿಸಿದನು.
4ನಿಕೊದೇಮನು, “ಮನುಷ್ಯನು ಮುದುಕನಾದ ಮೇಲೆ ಹುಟ್ಟುವುದು ಹೇಗೆ? ಒಬ್ಬನು ತನ್ನ ತಾಯಿಯ ಗರ್ಭದೊಳಗೆ ಮತ್ತೆ ಪ್ರವೇಶಿಸಲು ಸಾಧ್ಯವೇ?” ಎಂದು ಕೇಳಿದನು.
5ಅದಕ್ಕೆ ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಒಬ್ಬನು ನೀರಿನಿಂದಲೂ ಆತ್ಮನಿಂದಲೂ ಹುಟ್ಟಲೇಬೇಕು. ಇಲ್ಲವಾದರೆ ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು. 6ದೇಹವು ಮಾನುಷ ತಂದೆತಾಯಿಗಳಿಂದ ಹುಟ್ಟಿದ್ದು. ಆದರೆ ಆತ್ಮಿಕ ಜೀವನವು ಆತ್ಮನಿಂದ ಹುಟ್ಟಿದ್ದು. 7‘ನೀನು ಹೊಸದಾಗಿ ಹುಟ್ಟಲೇಬೇಕು’ ಎಂದು ನಾನು ಹೇಳಿದ್ದಕ್ಕೆ ಆಶ್ಚರ್ಯಪಡಬೇಡ. 8ಗಾಳಿಯು ತನಗಿಷ್ಟ ಬಂದ ಕಡೆಗೆ ಹೋಗುತ್ತದೆ. ಗಾಳಿ ಬೀಸುವ ಶಬ್ದವನ್ನು ನೀನು ಕೇಳುವೆ. ಆದರೆ ಗಾಳಿ ಎಲ್ಲಿಂದ ಬರುತ್ತದೋ ಮತ್ತು ಎಲ್ಲಿಗೆ ಹೋಗುತ್ತದೋ ನಿನಗೆ ತಿಳಿಯದು. ಆತ್ಮನಿಂದ ಹುಟ್ಟಿದ ಪ್ರತಿಯೊಬ್ಬರೂ ಅದರಂತಿದ್ದಾರೆ” ಎಂದು ಹೇಳಿದನು.
9ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು.
10ಯೇಸು, “ನೀನು ಇಸ್ರೇಲಿನ ಉಪದೇಶಕನಾಗಿರುವೆ. ಆದರೆ ನಿನಗೆ ಈ ಸಂಗತಿಗಳು ಇನ್ನೂ ಅರ್ಥವಾಗುವುದಿಲ್ಲವೇ? 11ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ನಮಗೆ ಗೊತ್ತಿರುವುದರ ಬಗ್ಗೆ ನಾವು ಮಾತಾಡುತ್ತೇವೆ. ನಾವು ಕಂಡದ್ದರ ಬಗ್ಗೆ ನಾವು ಸಾಕ್ಷಿ ಕೊಡುತ್ತೇವೆ. ಆದರೆ ನಾವು ಹೇಳುವುದನ್ನು ನೀವು ಸ್ವೀಕರಿಸಿಕೊಳ್ಳುವುದಿಲ್ಲ. 12ನಾನು ನಿಮಗೆ ಭೂಲೋಕದ ಸಂಗತಿಗಳ ಬಗ್ಗೆ ಹೇಳಿದೆ, ಆದರೆ ನೀವು ನನ್ನನ್ನು ನಂಬುವುದಿಲ್ಲ. ಆದ್ದರಿಂದ ನಾನು ಪರಲೋಕದ ಸಂಗತಿಗಳ ಬಗ್ಗೆ ನಿನಗೆ ಹೇಳಿದರೂ ನೀವು ಖಂಡಿತವಾಗಿ ನಂಬುವುದಿಲ್ಲ! 13ಪರಲೋಕದಿಂದ ಇಳಿದುಬಂದ ಮನುಷ್ಯಕುಮಾರನೊಬ್ಬನೇ ಪರಲೋಕಕ್ಕೆ ಏರಿಹೋದ ಏಕೈಕ ವ್ಯಕ್ತಿಯಾಗಿದ್ದಾನೆ.
14“ಮೋಶೆಯು ಮರಳುಗಾಡಿನಲ್ಲಿ ಸರ್ಪವನ್ನು ಎತ್ತರವಾದ ಕಂಬದ ಮೇಲಿಟ್ಟನು. ಅಂತೆಯೇ ಮನುಷ್ಯಕುಮಾರನನ್ನು ಸಹ ಎತ್ತರವಾದ ಕಂಬದ ಮೇಲಿಡಬೇಕು. 15ಆತನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರೂ ನಿತ್ಯಜೀವವನ್ನು ಹೊಂದಿಕೊಳ್ಳುವರು” ಎಂದು ಹೇಳಿದನು.
16ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು. 18ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ. 19ಆ ತೀರ್ಪು ಏನೆಂದರೆ: ಬೆಳಕು ಈ ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕನ್ನು ಅಪೇಕ್ಷಿಸದೆ ಕತ್ತಲೆಯನ್ನೇ ಬಯಸಿದರು. ಏಕೆಂದರೆ ಅವರು ದುಷ್ಕೃತ್ಯಗಳನ್ನು ಮಾಡುತ್ತಿದ್ದರು. 20ಕೇಡನ್ನು ಮಾಡುವ ಪ್ರತಿಯೊಬ್ಬನೂ ಬೆಳಕನ್ನು ದ್ವೇಷಿಸುವನು. ಅವನು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವನು ಮಾಡಿರುವ ಕೆಟ್ಟಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ. 21ಆದರೆ ಸತ್ಯಮಾರ್ಗವನ್ನು ಅನುಸರಿಸುವವನು ಬೆಳಕಿಗೆ ಬರುತ್ತಾನೆ. ಅವನು ಮಾಡಿರುವ ಕಾರ್ಯಗಳೆಲ್ಲಾ ದೇವರ ಮೂಲಕವಾಗಿ ಮಾಡಿದ ಕಾರ್ಯಗಳೆಂದು ಬೆಳಕು ತೋರಿಸುತ್ತದೆ.
ಯೇಸು ಮತ್ತು ಸ್ನಾನಿಕ ಯೋಹಾನ
22ಇದಾದ ನಂತರ, ಯೇಸು ಮತ್ತು ಆತನ ಶಿಷ್ಯರು ಜುದೇಯ ಪ್ರಾಂತ್ಯಕ್ಕೆ ಹೋದರು. ಅಲ್ಲಿ ಯೇಸು ತನ್ನ ಶಿಷ್ಯರೊಡನೆ ತಂಗಿದ್ದು, ಜನರಿಗೆ ದೀಕ್ಷಾಸ್ನಾನ ಮಾಡಿಸಿದನು. 23ಯೋಹಾನನು ಸಹ ಐನೋನ್ ಎಂಬ ಸ್ಥಳದಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಐನೋನ್ ಎಂಬ ಊರು ಸಲೀಮ್ ಊರಿನ ಸಮೀಪದಲ್ಲಿದೆ. ಅಲ್ಲಿ ಬೇಕಾದಷ್ಟು ನೀರಿದ್ದುದರಿಂದ ಯೋಹಾನನು ಅಲ್ಲಿ ಜನರಿಗೆ ದೀಕ್ಷಾಸ್ನಾನ ಮಾಡಿಸುತ್ತಿದ್ದನು. ಜನರು ಅಲ್ಲಿಗೆ ಬಂದು ದೀಕ್ಷಾಸ್ನಾನ ತೆಗೆದುಕೊಳ್ಳುತ್ತಿದ್ದರು. 24(ಆಗ ಯೋಹಾನನನ್ನು ಇನ್ನೂ ಸೆರೆಮನೆಗೆ ಹಾಕಿರಲಿಲ್ಲ.)
25ಯೋಹಾನನ ಶಿಷ್ಯರಲ್ಲಿ ಕೆಲವರಿಗೂ ಮತ್ತೊಬ್ಬ ಯೆಹೂದ್ಯನಿಗೂ ಶುದ್ಧಾಚಾರದ ಬಗ್ಗೆ ವಾದವಾಯಿತು. 26ಆದ್ದರಿಂದ ಶಿಷ್ಯರು ಯೋಹಾನನ ಬಳಿಗೆ ಬಂದು, “ಗುರುವೇ, ಜೋರ್ಡನ್ ನದಿಯ ಆಚೆದಡದಲ್ಲಿ ನಿನ್ನೊಂದಿಗಿದ್ದ ವ್ಯಕ್ತಿಯನ್ನು ಜ್ಞಾಪಿಸಿಕೊ. ಆತನ ಕುರಿತಾಗಿ ನೀನೇ ಸಾಕ್ಷಿ ಹೇಳಲಿಲ್ಲವೇ? ಆತನು ಜನರಿಗೆ ದೀಕ್ಷಾಸ್ನಾನ ಕೊಡುತ್ತಿದ್ದಾನೆ. ಅನೇಕ ಜನರು ಆತನ ಬಳಿಗೆ ಹೋಗುತ್ತಿದ್ದಾರೆ” ಎಂದು ಹೇಳಿದರು.
27ಯೋಹಾನನು, “ದೇವರು ಏನು ಕೊಡುತ್ತಾನೋ ಅದನ್ನು ಮಾತ್ರ ಒಬ್ಬನು ಪಡೆದುಕೊಳ್ಳಬಲ್ಲನು. 28‘ನಾನು ಕ್ರಿಸ್ತನಲ್ಲ. ಆತನಿಗಾಗಿ ಹಾದಿಯನ್ನು ಸಿದ್ಧಪಡಿಸುವುದಕ್ಕಾಗಿ ಮಾತ್ರ ಕಳುಹಿಸಲ್ಪಟ್ಟಿದ್ದೇನೆ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29ಮದುಮಗಳು ಮದುಮಗನಿಗೆ ಮಾತ್ರ ಸೇರಿದವಳಾಗಿದ್ದಾಳೆ. ಮದುಮಗನಿಗೆ ಸಹಾಯಮಾಡುವ ಸ್ನೇಹಿತನು ಮದುಮಗನ ಬರುವಿಕೆಗಾಗಿ ಕಾಯುತ್ತಿರುತ್ತಾನೆ ಮತ್ತು ಆತನ ಕರೆಗಾಗಿ ಆಲಿಸುತ್ತಿರುತ್ತಾನೆ. ಮದುಮಗನ ಸ್ವರವನ್ನು ಕೇಳುವಾಗ ಈ ಸ್ನೇಹಿತನು ಬಹು ಸಂತೋಷಪಡುವನು. ಅದೇ ಸಂತೋಷ ನನಗಿದೆ. ನನ್ನ ಪೂರ್ಣಾನಂದದ ಸಮಯವು ಇದೇ ಆಗಿದೆ. 30ಆತನು (ಯೇಸು) ವೃದ್ಧಿಯಾಗಬೇಕು ಮತ್ತು ನಾನು ಕಡಿಮೆಯಾಗಬೇಕು.
ಪರಲೋಕದಿಂದ ಬರುವ ವ್ಯಕ್ತಿ
31“ಮೇಲಿನಿಂದ ಬರುವ ಒಬ್ಬನು (ಯೇಸು) ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. ಈ ಲೋಕದ ವ್ಯಕ್ತಿಯು ಈ ಲೋಕಕ್ಕೆ ಸೇರಿದವನಾಗಿದ್ದಾನೆ. ಅವನು ಈ ಲೋಕದಲ್ಲಿನ ಸಂಗತಿಗಳ ಬಗ್ಗೆ ಮಾತಾಡುತ್ತಾನೆ. ಆದರೆ ಪರಲೋಕದಿಂದ ಬರುವ ಒಬ್ಬನು ಬೇರೆಲ್ಲಾ ಜನರಿಗಿಂತಲೂ ದೊಡ್ಡವನಾಗಿದ್ದಾನೆ. 32ಆತನು ತಾನು ಕಂಡಿರುವುದರ ಬಗ್ಗೆ ಮತ್ತು ಕೇಳಿರುವುದರ ಬಗ್ಗೆ ಸಾಕ್ಷಿ ನೀಡುತ್ತಾನೆ. ಆದರೆ ಆತನ ಸಾಕ್ಷಿಯನ್ನು ಜನರು ಸ್ವೀಕರಿಸಿಕೊಳ್ಳುವುದಿಲ್ಲ. 33ಆತನ ಸಾಕ್ಷಿಯನ್ನು ಸ್ವೀಕರಿಸಿಕೊಳ್ಳುವ ವ್ಯಕ್ತಿಯು ದೇವರೇ ಸತ್ಯವಂತನೆಂದು ನಿರೂಪಿಸುತ್ತಾನೆ. 34ದೇವರು ಆತನನ್ನು (ಯೇಸುವನ್ನು) ಕಳುಹಿಸಿದನು. ದೇವರು ಹೇಳುವ ಸಂಗತಿಗಳನ್ನು ಆತನು ಹೇಳುತ್ತಾನೆ. ಏಕೆಂದರೆ ದೇವರು ಆತನಿಗೆ ಆತ್ಮವನ್ನು ಅಮಿತವಾಗಿ ಕೊಡುತ್ತಾನೆ. 35ತಂದೆಯು ಮಗನನ್ನು ಪ್ರೀತಿಸುತ್ತಾನೆ. ತಂದೆಯು ಮಗನಿಗೆ ಪ್ರತಿಯೊಂದರ ಮೇಲೆಯೂ ಅಧಿಕಾರವನ್ನು ಕೊಟ್ಟಿದ್ದಾನೆ. 36ಮಗನಲ್ಲಿ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ಆದರೆ ಮಗನಿಗೆ ವಿಧೇಯನಾಗದವನು ಆ ಜೀವವನ್ನು ಎಂದಿಗೂ ಹೊಂದಿಕೊಳ್ಳುವುದಿಲ್ಲ. ದೇವರ ಕೋಪವು ಅವನ ಮೇಲೆ ನೆಲೆಗೊಂಡಿರುವುದು” ಎಂದು ಉತ್ತರಕೊಟ್ಟನು.

Označeno

Share

Copy

None

Want to have your highlights saved across all your devices? Sign up or sign in