Logo YouVersion
Ikona Hľadať

ಆದಿಕಾಂಡ 13

13
ಅಬ್ರಾಮ್ ಮತ್ತು ಲೋಟನ ಬೇರ್ಪಾಡು
1ಅಬ್ರಾಮನು ತನ್ನದುದನ್ನೆಲ್ಲಾ ತೆಗೆದುಕೊಂಡು ಹೆಂಡತಿ ಮತ್ತು ಲೋಟನ ಸಂಗಡ ಈಜಿಪ್ಟನ್ನು ಬಿಟ್ಟು ಕಾನಾನ್ ನಾಡಿನ ದಕ್ಷಿಣ ಪ್ರಾಂತ್ಯಕ್ಕೆ ಬಂದನು. 2ಈಗ ಅವನಿಗೆ ಪಶುಪ್ರಾಣಿಗಳಿದ್ದವು. ಬೆಳ್ಳಿಬಂಗಾರವಿತ್ತು. ಅವನೀಗ ಘನಧನವಂತನಾಗಿದ್ದನು. 3ಅಲ್ಲಿಂದ ಮುಂದೆ ಪ್ರಯಾಣ ಮಾಡುತ್ತಾ 4ಬೇತೇಲಿಗೂ ಆಯಿ ಎಂಬ ಊರಿಗೂ ನಡುವೆ ತಾನು ಹಿಂದೆ ಗುಡಾರ ಹಾಕಿ ಬಲಿಪೀಠವನ್ನು ಕಟ್ಟಿದ ಕ್ಷೇತ್ರವನ್ನು ತಲುಪಿದನು. ಅಲ್ಲಿ ಸರ್ವೇಶ್ವರ ಸ್ವಾಮಿಯ ನಾಮಸ್ಮರಣೆ ಮಾಡಿ ಆರಾಧಿಸಿದನು.
5ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೆ ಕುರಿಮಂದೆಗಳೂ ದನಕರುಗಳೂ ಗುಡಾರಬಿಡಾರಗಳೂ ಇದ್ದವು. 6ಈ ಕಾರಣ ಅವರಿಬ್ಬರ ಜೀವನಕ್ಕೆ ಅಲ್ಲಿ ಸ್ಥಳ ಸಾಲದೆಹೋಯಿತು. ಇಬ್ಬರಿಗೂ ಪಶುಪ್ರಾಣಿಗಳು ಹೇರಳವಾಗಿದ್ದುದರಿಂದ ಒಂದೇ ಸ್ಥಳದಲ್ಲಿ ವಾಸವಾಗಿರಲು ಆಗಲಿಲ್ಲ. 7ಅಬ್ರಾಮನ ದನಕಾಯುವವರಿಗೂ ಲೋಟನ ದನಕಾಯುವವರಿಗೂ ಜಗಳ ಬೇರೆ. ಇದೂ ಅಲ್ಲದೆ, ಆ ಕಾಲದಲ್ಲಿ ಕಾನಾನ್ಯರೂ ಪೆರಿಜೀಯರೂ ಅದೇ ನಾಡಿನಲ್ಲಿ ವಾಸವಾಗಿದ್ದರು. 8ಆದುದರಿಂದ ಅಬ್ರಾಮನು ಲೋಟನಿಗೆ ಹೀಗೆಂದನು: “ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು. ನಾವು ಬಳಗದವರು. 9ನಾಡೆಲ್ಲಾ ನಿನ್ನ ಕಣ್ಮುಂದಿದೆ. ದಯವಿಟ್ಟು ನನ್ನನ್ನು ಬಿಟ್ಟು ಬೇರೆ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುತ್ತೇನೆ. ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುತ್ತೇನೆ". 10ಲೋಟನು ಕಣ್ಣೆತ್ತಿ ನೋಡಿದನು. ಜೋರ್ಡನ್ ನದಿಯ ಸುತ್ತಲಿನ ಪ್ರದೇಶ ಚೋಗರೂರಿನವರೆಗೂ ಎಲ್ಲೆಲ್ಲೂ ನೀರಾವರಿ ಆಗಿರುವುದು ಕಾಣಿಸಿತು. ಸರ್ವೇಶ್ವರ, ಸೋದೋಮ್ - ಗೊಮೋರ ಪಟ್ಟಣಗಳನ್ನು ವಿನಾಶ ಮಾಡುವುದಕ್ಕೆ ಮುಂಚೆ ಈ ಪ್ರಾಂತ್ಯವು ಸರ್ವೇಶ್ವರನ ಉದ್ಯಾನ ವನದಂತೆ, ಈಜಿಪ್ಟಿನ ದೇಶದಂತೆ, ನೀರಿನ ಸೌಕರ್ಯಪಡೆದಿತ್ತು. 11ಆದುದರಿಂದ ಲೋಟನು ಜೋರ್ಡನ್ ನದಿಯ ಸುತ್ತಲಿನ ಪ್ರದೇಶವನ್ನು ಆರಿಸಿಕೊಂಡು ಪೂರ್ವದಿಕ್ಕಿನ ಕಡೆಗೆ ಹೊರಟನು. ಹೀಗೆ ಅವರಿಬ್ಬರೂ ಬೇರೆ ಬೇರೆ ಆದರು. 12ಅಬ್ರಾಮನು ಕಾನಾನ್ ನಾಡಿನಲ್ಲೇ ವಾಸಮಾಡಿದನು. ಲೋಟನು ಜೋರ್ಡನ್ ನದಿಯ ಸುತ್ತಣ ಊರುಗಳಲ್ಲಿ ವಾಸಮಾಡುತ್ತಾ ಸೋದೋಮ್‍ಗೆ ಸಮೀಪದಲ್ಲಿ ಗುಡಾರಹಾಕಿದನು. 13ಸೋದೋಮಿನ ಪಟ್ಟಣದವರು ಬಹಳ ದುಷ್ಟರು; ಪ್ರಭುವಿನ ದೃಷ್ಟಿಯಲ್ಲಿ ಕಡುಪಾಪಿಗಳು.
ಹೆಬ್ರೋನಿಗೆ ಅಬ್ರಾಮನ ಆಗಮನ
14ಲೋಟನು ಅಬ್ರಾಮನನ್ನು ಬಿಟ್ಟುಹೋದ ಬಳಿಕ ಸರ್ವೇಶ್ವರ ಸ್ವಾಮಿ ಅಬ್ರಾಮನಿಗೆ, “ನೀನು ಇರುವ ಸ್ಥಳದಿಂದಲೇ ದಕ್ಷಿಣೋತ್ತರ ಪೂರ್ವಪಶ್ಚಿಮಗಳ ಕಡೆಗೆ ಕಣ್ಣೆತ್ತಿ ನೋಡು. 15ನಿನ್ನ ಕಣ್ಣಿಗೆ ಕಾಣಿಸುವ ಈ ಪ್ರಾಂತ್ಯವನ್ನೆಲ್ಲಾ ನಿನಗೂ ನಿನ್ನ ಸಂತಾನಕ್ಕೂ ಶಾಶ್ವತವಾಗಿ ಕೊಡುತ್ತೇನೆ. 16ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯಾತರನ್ನಾಗಿ ಮಾಡುತ್ತೇನೆ. ಭೂಮಿಯ ಧೂಳನ್ನು ಲೆಕ್ಕಿಸಲು ಸಾಧ್ಯವಾದಲ್ಲಿ ನಿನ್ನ ಸಂತಾನದವರನ್ನು ಲೆಕ್ಕಿಸಲು ಸಾಧ್ಯವಾದೀತು. 17ನೀನೆದ್ದು ಈ ನಾಡಿನ ಉದ್ದಗಲಕ್ಕೂ ತಿರುಗಾಡು; ಇದನ್ನು ನಾನು ನಿನಗೆ ಕೊಡುತ್ತೇನೆ, ಎಂದು ಹೇಳಿದರು. 18ಅಬ್ರಾಮನು ಅಲ್ಲಿಂದ ಹೊರಟು ಅಲ್ಲಲ್ಲಿ ಗುಡಾರ ಹಾಕಿಸಿಕೊಳ್ಳುತ್ತಾ, ಹೆಬ್ರೋನಿನಲ್ಲಿರುವ ಮಮ್ರೆವೃಕ್ಷಗಳ ತೋಪಿಗೆ ಬಂದು ವಾಸಮಾಡಿದನು. ಸರ್ವೇಶ್ವರ ಸ್ವಾಮಿಗೆ ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು.

Zvýraznenie

Zdieľať

Kopírovať

None

Chceš mať svoje zvýraznenia uložené vo všetkých zariadeniach? Zaregistruj sa alebo sa prihlás