BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುSample

"ಯೇಸು ಜೀವಂತವಾಗಿದ್ದಾಗ ಆತನನ್ನು ಹಿಂಬಾಲಿಸುತ್ತಿದ್ದ ಕೆಲವು ಮಂದಿ ಸ್ತ್ರೀಯರ ಕುರಿತು ಲೂಕನು ಹೇಳುತ್ತಿರುವನು. ಯೇಸುವನ್ನು ಶಿಲುಬೆಗೆ ಹಾಕಿದ ದಿನದಂದು ಆತನ ದೇಹವನ್ನು ಸಮಾಧಿಯಲ್ಲಿ ಇಡುವುದನ್ನು ಅವರು ನೋಡಿದರು, ಮತ್ತು ಸಬ್ಬತ್ ದಿನವು ಮುಗಿದ್ದು ಮರುದಿನವಾದಾಗ ಸೂರ್ಯೋದಯವಾಗುವುದಕ್ಕಿಂತ ಮೊದಲೇ ಅವರು ಬೇಗನೇ ಎದ್ದು ಯೇಸುವಿನ ಸಮಾಧಿಯ ಬಳಿಗೆ ಹೋದರು. ಆದರೆ ಅವರು ಅಲ್ಲಿ ಬಂದಾಗ, ಸಮಾಧಿಯು ತೆರೆದಿರುವುದನ್ನೂ ಖಾಲಿಯಾಗಿರುವುದನ್ನೂ ಕಂಡರು. ಯೇಸುವಿನ ದೇಹ ಎಲ್ಲಿಗೆ ಹೋಯಿತು ಎಂದು ಅವರಗೆ ತೋಚಲಿಲ್ಲ, ಆಗ ಇದ್ದಕ್ಕಿದ್ದಂತೆ ಮಿಂಚಿನಂತೆ ಹೊಳೆಯುತ್ತಿದ್ದ ಇಬ್ಬರು ದೇವದೂತರು ಪ್ರತ್ಯಕ್ಷವಾಗಿ ಯೇಸು ಜೀವಂತವಾಗಿದ್ದಾನೆಂದು ಹೇಳಿದರು. ಅವರು ಆಶ್ಚರ್ಯಚಕಿತರಾದರು. ಅವರು ಓಡಿಹೋಗಿ ತಾವು ನೋಡಿದ್ದನ್ನೆಲ್ಲ ಇತರ ಶಿಷ್ಯರಿಗೆ ಹೇಳಿದರು, ಆದರೆ ಅವರು ಹೇಳಿದ ಸುದ್ದಿಯು ಆ ಶಿಷ್ಯರಿಗೆ ಹುಚ್ಚು ಮಾತೆಂದು ತೋರಿತು, ಮತ್ತು ಯಾರೂ ಅವರ ಮಾತನ್ನು ನಂಬಲಿಲ್ಲ.
ಅದೇ ಸಮಯದಲ್ಲಿ ಯೆರೂಸಲೇಮಿನ ಹೊರಗೆ, ಯೇಸುವಿನ ಇಬ್ಬರು ಶಿಷ್ಯರು ಆ ಪಟ್ಟಣವನ್ನು ಬಿಟ್ಟು, ಎಮ್ಮಾಹು ಎಂಬ ಊರಿಗೆ ಹೋಗುವ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅವರು ಪಸ್ಕ ಹಬ್ಬದ ವಾರದಲ್ಲಿ ಸಂಭವಿಸಿದ್ದಂಥದ್ದೆಲ್ಲದರ ಕುರಿತು ಮಾತನಾಡುತ್ತಾ ನಡೆಯುವಾಗ ಯೇಸು ಅವರ ಜೊತೆಯಲ್ಲಿ ನಡೆಯಲಾರಂಭಿಸಿದನು, ಆದರೆ ವಿಚಿತ್ರವೇನಂದರೆ ಆತನು ಯೇಸು ಎoದು ಅವರಿಗೆ ಗೊತ್ತಾಗಲಿಲ್ಲ. ಯೇಸು ಅವರೊಂದಿಗೆ ಮಾತನಾಡಲಾರಂಭಿಸಿ ಏನು ಮಾತನಾಡಿಕೊಳ್ಳುತ್ತಿದ್ದಾರೆಂದು ಅವರನ್ನು ಕೇಳಿದನು. ಅವರು ತಮ್ಮ ಮಾತನ್ನು ನಿಲ್ಲಿಸಿ, ನಡೆದಿದ್ದ ಆ ಸಂಗತಿಯಿಂದ ದುಃಖಿತರಾಗಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಸಂಗತಿಗಳ ಕುರಿತು ಆತನಿಗೆ ತಿಳಿದಿಲ್ಲವಲ್ಲಾ ಎಂದು ಅವರು ಆಶ್ಚರ್ಯ ಪಟ್ಟರು.ಇಸ್ರಾಯೇಲ್ಯರನ್ನು ರಕ್ಷಿಸುವ ಶಕ್ತಿಯುತವಾದ ಪ್ರವಾದಿಯಾದ ಯೇಸುವಿನ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ತಾವು ನಿರೀಕ್ಷಿಸಿದ್ದೇವೋ, ಆದರೆ ಆತನನ್ನು ಶಿಲುಬೆಗೇರಿಸಿ ಕೊಂದುಹಾಕಿದರು ಅವರು ಹೇಳಿದರು. ಆತನು ಜೀವಂತವಾಗಿದ್ದಾನೆಂದು ಕೆಲವು ಮಂದಿ ಸ್ತ್ರೀಯರು ಹೇಳಿದರು, ಆದರೆ ಏನನ್ನು ನಂಬಬೇಕೆಂದು ತಮಗೆ ಗೊತ್ತಾಗಲಿಲ್ಲ ಎಂದು ಅವರು ಹೇಳಿದರು. ಆದುದರಿಂದ ಯೆಹೂದ್ಯ ಪವಿತ್ರಶಾಸ್ತ್ರಗಳು ಮೊದಲಿನಿಂದಲೂ ಏನನ್ನು ಸೂಚಿಸುತ್ತಿವೆಯೋ ಅದನ್ನು ಯೇಸು ವಿವರಿಸಿ ಹೇಳಿದನು. ನಿಜವಾಗಿಯೂ ದಂಗೆಖೋರರಾಗಿರುವವ ಪರವಾಗಿ ದಂಗೆಖೋರನಾಗಿ ಕಷ್ಟವನ್ನು ಅನುಭವಿಸಿ ಸಾಯುವಂಥ ರಾಜನ ಅಗತ್ಯವು ಇಸ್ರಾಯೇಲರಿಗೆ ಇತ್ತು. ಈ ರಾಜನು ತನ್ನ ಪುನರುತ್ಥಾನದ ಮೂಲಕ ದೋಷಮುಕ್ತನಾಗಿ ನಿಜವಾದ ಜೀವವನ್ನು ಸ್ವೀಕರಿಸಿಕೊಳ್ಳುವವರಿಗೆ ಅದನ್ನು ಕೊಡುವನು. ಆದರೂ ಪ್ರಯಾಣಿಸುತ್ತಿದ್ದ ಆ ಶಿಷ್ಯರಿಗೆ ಇನ್ನೂ ಏನೂ ಅರ್ಥವಾಗಲಿಲ್ಲ. ಅವರು ಎಂದಿನಂತೆ ಗೊಂದಲಕ್ಕೊಳಗಾಗಿ ತಮ್ಮೊಂದಿಗೆ ಇನ್ನೂ ಹೆಚ್ಚು ಸಮಯ ಇರಬೇಕೆಂದು ಯೇಸುವನ್ನು ಬಲವಂತ ಮಾಡಿದರು. ಯೇಸು ಅವರೊಂದಿಗೆ ಊಟ ಮಾಡಲು ಕುಳಿತುಕೊಳ್ಳುತ್ತಿರುವದೃಶ್ಯದತ್ತ ಲೂಕನು ನಮ್ಮನ್ನು ಕೊಂಡೊಯ್ಯುತ್ತಿರುವನು. ಆತನು ತನ್ನ ಮರಣಕ್ಕಿಂತ ಮೊದಲು ಅಂತಿಮ ಭೋಜನದಲ್ಲಿ ಮಾಡಿದಂತೆಯೇ ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರ ಮಾಡಿ ಮುರಿದು ಅವರಿಗೆ ಕೊಟ್ಟನು.ಇದು ಆತನ ಜಜ್ಜಲ್ಪಟ್ಟ ದೇಹವನ್ನೂ ಆತನ ಶಿಲುಬೆಯ ಮರಣವನ್ನೂ ಸೂಚಿಸುವ ಪ್ರತೀಕವಾಗಿದೆ.ಅವರು ಮುರಿದ ರೊಟ್ಟಿಯನ್ನು ತೆಗೆದುಕೊಳ್ಳುವಾಗ ಯೇಸುವನ್ನು ನೋಡುವಂತೆ ಅವರ ಕಣ್ಣುಗಳು ತೆರೆಯಲ್ಪಟ್ಟವು.ಯೇಸು ನಿಜವಾಗಿಯೂ ಯಾರಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ಕಷ್ಟವೆಂಬುದನ್ನು ಈ ಘಟನೆಯು ತೋರಿಸುತ್ತದೆ.ಈ ಮನುಷ್ಯನ ಅವಮಾನಕರವಾದ ಮರಣದಂಡನೆಯ ಮೂಲಕ ದೇವರ ಶಕ್ತಿಯೂ ಪ್ರೀತಿಯೂ ತೋರಿಬರಲು ಹೇಗೆ ಸಾಧ್ಯ?ಬಲಹೀನತೆಯ ಮೂಲಕ, ತನ್ನ ತ್ಯಾಗದ ಮೂಲಕ ಒಬ್ಬ ದೀನ ಮನುಷ್ಯನಿಗೆ ಲೋಕದ ರಾಜನಾಗಲು ಹೇಗೆ ಸಾಧ್ಯ?ಇದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ! ಆದರೆ ಇದುವೇ ಲೂಕನ ಸುವಾರ್ತೆಯ ಸಂದೇಶವಾಗಿದೆ. ಇದನ್ನು ಅರ್ಥಮಾಡಿಕೊಳ್ಳಲು, ಯೇಸುವಿನ ವಿಭಿನ್ನವಾದ ರಾಜ್ಯವನ್ನು ಸ್ವೀಕರಿಸಿಕೊಳ್ಳಲು, ನಿಮ್ಮ ಚಿಂತನೆಯಲ್ಲಿ ಬದಲಾವಣೆ ಆಗಬೇಕಾದದ್ದು ಅಗತ್ಯ.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ನೀವು ಯೇಸುವಿನ ಪುನರುತ್ಥಾನದ ದಿನದಂದು ಸಮಾಧಿಯ ಬಳಿಯಲ್ಲಿರುವುದನ್ನು ಊಹಿಸಿ ನೋಡಿರಿ. ನಿಮಗೆ ಏನು ಅನಿಸುತ್ತಿತ್ತು? ನೀವು ಏನನ್ನು ಹೇಳುತ್ತಿದ್ದೀರಿ ಮತ್ತು ಏನನ್ನು ಮಾಡುತ್ತಿದ್ದೀರಿ?
•ಪುರಾತನ ಕಾಲದ ಪ್ರವಾದಿಗಳೆಲ್ಲರು ಯೇಸುವಿನ ಕುರಿತು ಹೇಗೆ ಸೂಚಿಸಿದ್ದಾರೆಂದು ನೀವು ಅರ್ಥಮಾಡಿಕೊಂಡಿರಾ? ಯೇಸು ರಾಜನೆಂದು ನೀವು ನಂಬುತ್ತೀರಾ? ಹಾಗಾದರೆ ನೀವು ನಿಮ್ಮ ಜೀವನದಲ್ಲಿ ಹಾಗೆ ನಂಬದೇ ಇದ್ದಂಥ ಸಮಯದ ಕುರಿತು ಒಮ್ಮೆ ಯೋಚಿಸಿ ನೋಡಿರಿ. ಯೇಸು ನಿಜವಾಗಿಯೂ ಯಾರೆಂಬುದನ್ನು ಅರಿತುಕೊಳ್ಳಲು ನಿಮಗೆ ಏನು ಸಹಾಯ ಮಾಡಿತ್ತು? ಯೇಸುವಿನ ಜೀವನದ ಕುರಿತು ಲೂಕನು ಬರೆದಿರುವ ಕಥನವನ್ನು ನಿಮ್ಮಿಂದ ಇನ್ನೂ ನಂಬುವುದಕ್ಕೆ ಆಗದಿದ್ದರೆ, ಯೇಸು ನಿಜವಾಗಿಯೂ ಯಾರೆಂಬುದನ್ನು ನೋಡಲೂ ಅರ್ಥಮಾಡಿಕೊಳ್ಳಲೂ ನಿಮಗೆ ಕಣ್ಣುಗಳನ್ನು ಕೊಡುವಂತೆ ದೇವರನ್ನು ಬೇಡಿಕೊಳ್ಳಿರಿ.
• ನಿಮ್ಮ ಓದುವಿಕೆಯೂ ಪ್ರತಿಫಲನವೂ ನಿಮ್ಮ ಹೃದಯದಿಂದ ದೇವರಿಗೆ ಪ್ರಾರ್ಥನೆ ಮಾಡುವಂತೆ ನಿಮ್ಮನ್ನು ಪ್ರೇರೇಪಿಸಲಿ. ಆತನು ಪ್ರಾರ್ಥನೆಯನ್ನು ಕೇಳಿಸಿಕೊಳ್ಳುತ್ತಿದ್ದಾನೆ."
Scripture
About this Plan

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More