ಯೊವಾನ್ನ 3
3
ನವಜನ್ಮದ ಸಮಸ್ಯೆ
1ಅಲ್ಲಿ ನಿಕೊದೇಮನೆಂಬ ಫರಿಸಾಯನು ಇದ್ದನು. 2ಅವನು ಯೆಹೂದ್ಯರ ನಾಯಕರಲ್ಲಿ ಒಬ್ಬನು. ಒಂದು ರಾತ್ರಿ ಅವನು ಯೇಸು ಸ್ವಾಮಿಯ ಬಳಿಗೆ ಬಂದು, “ಗುರುದೇವಾ, ತಾವು ದೇವರಿಂದ ಬಂದ ಬೋಧಕರೆಂದು ನಾವು ಬಲ್ಲೆವು. ದೇವರು ತನ್ನೊಡನೆ ಇಲ್ಲದ ಹೊರತು ಯಾರಿಂದಲೂ ತಾವು ಮಾಡುವ ಸೂಚಕಕಾರ್ಯಗಳನ್ನು ಮಾಡಲು ಆಗದು,” ಎಂದು ಹೇಳಿದನು. 3ಆಗ ಯೇಸು, “ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ಒಬ್ಬನು ಹೊಸದಾಗಿ ಹುಟ್ಟದಿದ್ದರೆ#3:3 ಮೂಲದಲ್ಲಿ : ಮೇಲಿನಿಂದ ಹುಟ್ಟಿದ ಹೊರತು. ಅವನು ದೇವರ ಸಾಮ್ರಾಜ್ಯವನ್ನು ಸೇರಲಾರ,” ಎಂದು ಹೇಳಿದರು. 4ಅದಕ್ಕೆ ನಿಕೊದೇಮನು, “ವಯಸ್ಸಾದ ಒಬ್ಬನು ಹೊಸದಾಗಿ ಹುಟ್ಟುವುದಾದರೂ ಹೇಗೆ? ತಾಯಿಯ ಗರ್ಭವನ್ನು ಮತ್ತೊಮ್ಮೆ ಹೊಕ್ಕು ಅವನು ಹುಟ್ಟಲು ಸಾಧ್ಯವೇ?” ಎಂದು ಕೇಳಿದನು. 5ಅದ್ಕಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ: ನೀರಿನಿಂದಲೂ ಪವಿತ್ರಾತ್ಮನಿಂದಲೂ ಹುಟ್ಟಿದ ಹೊರತು ಯಾವನೂ ದೇವರ ರಾಜ್ಯವನ್ನು ಪ್ರವೇಶಿಸಲಾರನು. 6ಶರೀರದಿಂದ ಹುಟ್ಟಿದ್ದು ಶರೀರಮಯ, ದೇವರಿಂದ ಹುಟ್ಟಿದ್ದು ದೈವಮಯ. 7ನೀವು ಹೊಸ ಜನ್ಮ ಪಡೆಯಬೇಕೆಂದು ನಾನು ಹೇಳಿದ್ದನ್ನು ಕೇಳಿ ಬೆರಗಾಗಬೇಕಿಲ್ಲ. 8ಗಾಳಿ ತನಗೆ ತೋಚಿದ ಕಡೆ ಬೀಸುತ್ತದೆ, ಅದರ ಸದ್ದು ನಿನಗೆ ಕೇಳಿಸುತ್ತದೆ; ಆದರೆ ಅದು ಎಲ್ಲಿಂದ ಬರುತ್ತದೆ, ಎಲ್ಲಿಗೆ ಹೋಗುತ್ತದೆ ಎಂಬುದು ನಿನಗೆ ತಿಳಿಯದು. ದೇವರ ಆತ್ಮದಿಂದ ಹುಟ್ಟಿದ ಪ್ರತಿಯೊಬ್ಬನೂ ಅದರಂತೆಯೇ,” ಎಂದು ಹೇಳಿದರು. 9ಅದಕ್ಕೆ ನಿಕೊದೇಮನು, “ಇದೆಲ್ಲಾ ಹೇಗೆ ಸಾಧ್ಯ?” ಎಂದು ಕೇಳಿದನು. 10ಆಗ ಯೇಸು, “ಇಸ್ರಯೇಲಿನ ಹೆಸರಾಂತ ಬೋಧಕನಾದ ನಿನಗೇ ಇದು ಅರ್ಥವಾಗಲಿಲ್ಲವೇ? 11ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ ಕೇಳು: ನಮಗೆ ತಿಳಿದುದನ್ನೇ ಕುರಿತು ನಾವು ಮಾತನಾಡುತ್ತೇವೆ, ನಾವು ಕಂಡದ್ದನ್ನು ಕುರಿತು ಸಾಕ್ಷಿ ನೀಡುತ್ತೇವೆ. ಆದರೂ ನಮ್ಮ ಸಾಕ್ಷ್ಯವನ್ನು ನೀವು ಒಪ್ಪಿಕೊಳ್ಳಲು ಸಿದ್ಧರಿಲ್ಲ. 12ಭೂಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಾಗಲೇ ನಿಮಗೆ ವಿಶ್ವಾಸವಿಲ್ಲವೆಂದ ಮೇಲೆ, ಸ್ವರ್ಗಲೋಕದ ವಿಷಯವನ್ನು ಕುರಿತು ನಾನು ಮಾತನಾಡಿದಲ್ಲಿ ನೀವು ವಿಶ್ವಾಸಿಸುವುದು ಉಂಟೆ? 13ಸ್ವರ್ಗಲೋಕದಿಂದಲೇ ಇಳಿದುಬಂದ ನರಪುತ್ರನೇ ಹೊರತು ಬೇರೆ ಯಾರೂ ಸ್ವರ್ಗಕ್ಕೆ ಏರಿಹೋದವರಿಲ್ಲ.
14ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. 15ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. 16ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. 17ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು. 18ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ. 19ಆ ತೀರ್ಪು ಏನೆಂದರೆ: ಜ್ಯೋತಿ ಜಗತ್ತಿಗೆ ಬಂದಿತು: ಮಾನವರಾದರೋ ತಮ್ಮ ದುಷ್ಕೃತ್ಯಗಳಿಂದಾಗಿ ಆ ಜ್ಯೋತಿಗೆ ಬದಲು ಅಂಧಕಾರವನ್ನೇ ಅವಲಂಭಿಸಿದರು. 20ಕೇಡನ್ನು ಮಾಡುವವನಿಗೆ ಬೆಳಕೆಂದರೆ ಆಗದು. ತನ್ನ ದುಷ್ಕೃತ್ಯಗಳು ಬಯಲಾಗಬಾರದೆಂದು ಅವನು ಬೆಳಕಿನ ಬಳಿಗೆ ಸುಳಿಯುವುದೂ ಇಲ್ಲ. 21ಸತ್ಯಸಂಧನಾದರೋ ಬೆಳಕಿನ ಬಳಿಗೆ ಬರುತ್ತಾನೆ. ತಾನು ಮಾಡುವುದು ದೇವರು ಮೆಚ್ಚುವುದನ್ನೇ ಎಂಬುದನ್ನು ತೋರ್ಪಡಿಸುತ್ತಾನೆ.
ಯೇಸು ಮತ್ತು ಯೊವಾನ್ನ
22ಇದಾದ ಬಳಿಕ ಯೇಸು ಸ್ವಾಮಿ ತಮ್ಮ ಶಿಷ್ಯರೊಡನೆ ಜುದೇಯ ಪ್ರಾಂತ್ಯಕ್ಕೆ ಬಂದು ಅವರೊಡನೆ ಕೆಲವು ಕಾಲ ಅಲ್ಲೇ ಉಳಿದುಕೊಂಡು ದೀಕ್ಷಾಸ್ನಾನ ಮಾಡಿಸತೊಡಗಿದರು. 23ಅತ್ತ ಯೊವಾನ್ನನು ಕೂಡ ಸಾಲಿಮ್ ಎಂಬ ಊರಿಗೆ ಹತ್ತಿರವಾಗಿದ್ದ ಐನೋನ್ ಎಂಬ ಸ್ಥಳದಲ್ಲಿ ನೀರು ಹೆಚ್ಚಾಗಿದ್ದುದರಿಂದ ಸ್ನಾನದೀಕ್ಷೆಯನ್ನು ಮಾಡಿಸುತ್ತಿದ್ದನು. ಜನರು ಬಂದು ಸ್ನಾನದೀಕ್ಷೆಯನ್ನು ಪಡೆಯುತ್ತಿದ್ದರು. 24ಯೊವಾನ್ನನು ಆಗ ಇನ್ನೂ ಬಂಧಿತನಾಗಿರಲಿಲ್ಲ.
25ಶುದ್ಧಾಚಾರವನ್ನು ಕುರಿತು ಯೊವಾನ್ನನ ಶಿಷ್ಯರಿಗೂ ಯೆಹೂದ್ಯನೊಬ್ಬನಿಗೂ ವಿವಾದ ಎದ್ದಿತು. 26ಅವರು ಯೊವಾನ್ನನ ಬಳಿಗೆ ಬಂದು, “ಗುರುವೇ, ಜೋರ್ಡನಿನ ಆಚೆಕಡೆಯಲ್ಲಿ ನಿಮ್ಮೊಡನೆ ಒಬ್ಬನು ಇದ್ದನಲ್ಲವೆ? ಆತನನ್ನು ಕುರಿತು ನೀವೇ ಸಾಕ್ಷಿ ಹೇಳಲಿಲ್ಲವೆ? ಈಗ ನೋಡಿ, ಆತನೇ ದೀಕ್ಷಾಸ್ನಾನ ಮಾಡಿಸುತ್ತಿದ್ದಾನೆ. ಎಲ್ಲರೂ ಆತನ ಬಳಿಗೆ ಹೊಗುತ್ತಿದ್ದಾರೆ,” ಎಂದು ದೂರಿತ್ತರು. 27ಅದಕ್ಕೆ ಯೊವಾನ್ನನು, “ದೇವರು ದಯಪಾಲಿಸದೆ ಹೋದರೆ ಮಾನವನಿಗೇನೂ ದಕ್ಕದು. 28‘ನಾನು ಲೋಕೋದ್ಧಾರಕನಲ್ಲ: ಆತನ ಮುಂದೂತ ಮಾತ್ರ’ ಎಂದು ನಾನು ಹೇಳಿದ್ದಕ್ಕೆ ನೀವೇ ಸಾಕ್ಷಿಗಳಾಗಿದ್ದೀರಿ. 29ಮದುಮಗಳು ಮದುಮಗನಿಗೆ ಸೇರಿದವಳು. ಮದುಮಗನ ಗೆಳೆಯನಾದರೋ ಪಕ್ಕದಲ್ಲಿದ್ದು ಮದುಮಗನ ಕರೆಗೆ ಕಿವಿಗೊಡುತ್ತಾನೆ; ಆತನ ಸ್ವರ ಕೇಳಿ ಹರ್ಷಿಸುತ್ತಾನೆ. ಇಂಥ ಆನಂದದಿಂದ ನಾನೀಗ ಭರಿತನಾಗಿದ್ದೇನೆ. 30ಆತ ಬೆಳೆಯುತ್ತಿರಬೇಕು, ನಾನು ಅಳಿಯುತ್ತಿರಬೇಕು.
ಪರದಿಂದ ಬಂದವನು
31ಮೇಲಿಂದ ಬಂದವನೇ ಎಲ್ಲರಿಗಿಂತ ಮೇಲಾದವನು. ಇಹಲೋಕದಿಂದ ಬಂದವನು ಆದರೋ ಈ ಲೋಕಕ್ಕೆ ಸೇರಿದವನು; ಅವನು ಲೌಕಿಕವಾದುದನ್ನೇ ಹೇಳುವವನು. ಸ್ವರ್ಗದಿಂದ ಬಂದವನಾದರೋ ಸರ್ವರಿಗೂ ಶ್ರೇಷ್ಠನು. 32ಆತನು ತಾನು ಕಂಡದ್ದನ್ನೂ ಕೇಳಿದ್ದನ್ನೂ ಕುರಿತೇ ಸಾಕ್ಷಿ ಹೇಳುತ್ತಾನೆ. ಆದರೂ ಆತನ ಮಾತನ್ನು ಯಾರೂ ಅಂಗೀಕರಿಸುವುದಿಲ್ಲ. 33ಆತನ ಮಾತನ್ನು ಅಂಗೀಕರಿಸುವವನು ದೇವರು ಸತ್ಯಸ್ವರೂಪಿ ಎಂದು ಸಾದೃಶ್ಯಪಡಿಸುತ್ತಾನೆ. 34ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ. ಏಕೆಂದರೆ ದೇವರು ಆತನಿಗೆ ಪವಿತ್ರಾತ್ಮ ಅವರನ್ನು ಪೂರ್ಣವಾಗಿ ಕೊಟ್ಟಿರುತ್ತಾರೆ. 35ಪಿತ ಪುತ್ರನನ್ನು ಪ್ರೀತಿಸಿ ಸರ್ವಸ್ವವನ್ನೂ ಆತನ ಕೈಗೆ ಕೊಟ್ಟಿದ್ದಾರೆ. 36ಪುತ್ರನಲ್ಲಿ ವಿಶ್ವಾಸವಿಟ್ಟವನು ನಿತ್ಯಜೀವವನ್ನು ಪಡೆದಿರುತ್ತಾನೆ; ಪುತ್ರನಿಗೆ ಶರಣಾಗದವನು ನಿತ್ಯಜೀವವನ್ನು ಸವಿಯನು. ಅವನು ದೇವರ ಕೋಪಾಗ್ನಿಗೆ ಗುರಿಯಾಗುತ್ತಾನೆ,” ಎಂದು ಉತ್ತರಕೊಟ್ಟನು.
Atualmente selecionado:
ಯೊವಾನ್ನ 3: KANCLBSI
Destaque
Partilhar
Copiar
Quer salvar os seus destaques em todos os seus dispositivos? Faça o seu registo ou inicie sessão
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.