ಆದಿ 17
17
ಸುನ್ನತಿಯು ಒಡಂಬಡಿಕೆಯ ಸಂಕೇತ
1ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ. 2ನಾನು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅತ್ಯಧಿಕವಾದ ಸಂತತಿಯನ್ನು ನಿನಗೆ ಕೊಡುವೆನು” ಎಂದನು.
3ಅಬ್ರಾಮನು ಅಡ್ಡಬೀಳಲು ದೇವರು ಅವನ ಸಂಗಡ ಮಾತನಾಡಿ, 4“ನಾನು ನಿನ್ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅದೇನೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪುರುಷನಾಗುವಿ, 5ಇನ್ನು ಮುಂದೆ ನಿನಗೆ #17:5 ಮಹಾ ಪಿತೃ.ಅಬ್ರಾಮ ಎಂದು ಹೆಸರಿರುವುದಿಲ್ಲ. ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇಮಿಸಿರುವುದರಿಂದ ನಿನಗೆ ಇನ್ನು ಮೇಲೆ #17:5 ಅನೇಕ ಜನಾಂಗಗಳಿಗೆ ಮಹಾ ಪಿತೃ.ಅಬ್ರಹಾಮ ಎಂದು ಹೆಸರಿರುವುದು. 6ನಿನಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು ನಿನ್ನಿಂದ ಜನಾಂಗಗಳು ಉತ್ಪತ್ತಿಯಾಗಿ ಅರಸರು ಹುಟ್ಟುವರು. 7ನಾನು ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದೂ ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು. 8ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತ ಸ್ವತ್ತಾಗಿ ಕೊಟ್ಟು ಎಂದೆಂದಿಗೂ ಅವರಿಗೆ ದೇವರಾಗಿರುವೆನು” ಎಂದನು.
9ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನಂತೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಮಾತ್ರವಲ್ಲದೆ ನಿನ್ನ ಸಂತತಿಯವರು ತಲತಲಾಂತರಗಳಲ್ಲಿ ಅದನ್ನು ಕೈಕೊಂಡು ನಡೆಯಬೇಕು. 10ನೀನೂ ನಿನ್ನ ಸಂತತಿಯುವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ, ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು ಎಂಬುದೇ. 11ಅದೇ ನಿಮಗೂ ನನಗೂ ಉಂಟಾದ ಒಡಂಬಡಿಕೆಯ ಗುರುತಾಗಿದೆ. 12ಮುಂದಿನ ಎಲ್ಲಾ ತಲತಲಾಂತರವಾಗಿ ಬರುವ ನಿಮ್ಮ ಪ್ರತಿಯೊಂದು ಗಂಡು ಮಗುವಿಗೂ, ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು; ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾಗಲಿ; 13ನಿನ್ನ ಮನೆಯಲ್ಲಿ ಹುಟ್ಟಿದವನಿಗೂ, ನೀನು ಕ್ರಯಕ್ಕೆ ತೆಗೆದುಕೊಂಡವನಿಗೂ ತಪ್ಪದೆ ಸುನ್ನತಿಯಾಗಬೇಕು. ಹೀಗೆ ನಾನು ಮಾಡುವ ಒಡಂಬಡಿಕೆಯ ಗುರುತು ನಿಮ್ಮ ಶರೀರದಲ್ಲೇ ಇದ್ದು, ಶಾಶ್ವತವಾದ ಒಡಂಬಡಿಕೆಯನ್ನು ಸೂಚಿಸುವುದು. 14ಸುನ್ನತಿಮಾಡಿಸಿಕೊಳ್ಳದ ಪುರುಷನಿಗೆ ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದಂತೆ ಆಗುವ ಕಾರಣ ಅವನನ್ನು ಕುಲದಿಂದ ಬಹಿಷ್ಕರಿಸಬೇಕು” ಎಂದು ಹೇಳಿದನು.
15ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳೆಂದು ಕರೆಯದೆ ‘ಸಾರಾ’ (ರಾಣಿ) ಎಂದು ಕರೆಯಬೇಕು. 16ನಾನು ಆಕೆಯನ್ನು ಆಶೀರ್ವದಿಸಿ, ಆಕೆಯಿಂದ ನಿನಗೆ ಒಬ್ಬ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು” ಎಂದು ಹೇಳಿದನು.
17ಅಬ್ರಹಾಮನು ಅಡ್ಡ ಬಿದ್ದು ನಕ್ಕು, “ನೂರು ವರ್ಷದವನಿಗೆ ಮಗ ಹುಟ್ಟುವುದುಂಟೇ? ತೊಂಭತ್ತು ವರ್ಷದವಳಾದ ಸಾರಳು ಹೆರಲು ಸಾಧ್ಯವೇ?” ಎಂದು ಮನಸ್ಸಿನಲ್ಲಿ ಅಂದುಕೊಂಡನು. 18ಅಬ್ರಹಾಮನು ದೇವರಿಗೆ, “ಇಷ್ಮಾಯೇಲ್ ಇದ್ದಾನಲ್ಲಾ, ಅವನೇ ನಿನ್ನ ದಯೆ ಹೊಂದಿ ಬಾಳಲಿ” ಎನ್ನಲು.
19ದೇವರು, “ಹಾಗಲ್ಲ ನಿನ್ನ ಹೆಂಡತಿಯಾದ ಸಾರಳಲ್ಲಿಯೇ ನಿನಗೆ ಮಗನು ಹುಟ್ಟುವನು. ಅವನಿಗೆ ‘ಇಸಾಕ’ ಎಂದು ಹೆಸರಿಡಬೇಕು. ಅವನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು; ಅದು ಅವನ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು. 20ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕಿವಿಗೊಟ್ಟು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ; ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು. ಅವನು ಹನ್ನೆರಡು ಮಂದಿ ಅರಸರನ್ನು ಪಡೆಯುವನು, ಅವನಿಂದ ಮಹಾ ಜನಾಂಗವಾಗುವಂತೆ ಮಾಡುವೆನು. 21ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನೊಂದಿಗೆ ಸ್ಥಾಪಿಸಿಕೊಳ್ಳುತ್ತೇನೆ; ಬರುವ ವರ್ಷ ಇದೇ ವೇಳೆಗೆ ಸಾರಳು ಅವನನ್ನು ಹೆರುವಳು” ಅಂದನು. 22ಆ ನಂತರ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿ ಅವನ ಬಳಿಯಿಂದ ಮೇಲಕ್ಕೆ ಏರಿ ಹೋದನು.
23ಅದೇ ದಿನದಲ್ಲಿ ಅಬ್ರಹಾಮನು ತನ್ನ ಮಗನಾದ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೂ, ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ತಾನು ಕ್ರಯಕ್ಕೆ ತೆಗೆದುಕೊಂಡವರಿಗೂ ದೇವರ ಅಪ್ಪಣೆಯಂತೆ ಸುನ್ನತಿಮಾಡಿಸಿದನು. 24ಅಬ್ರಹಾಮನಿಗೆ ಸುನ್ನತಿಯಾದಾಗ ಅವನಿಗೆ ತೊಂಭತ್ತೊಂಭತ್ತು ವರ್ಷವಾಗಿತ್ತು. 25ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷವಾಗಿತ್ತು. 26ಅಬ್ರಹಾಮನಿಗೂ ಅವನ ಮಗನಾದ ಇಷ್ಮಾಯೇಲನಿಗೂ ಒಂದೇ ದಿನದಲ್ಲಿ ಸುನ್ನತಿಯಾಯಿತು. 27ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನೊಂದಿಗೆ ಸುನ್ನತಿಯಾಯಿತು.
अहिले सेलेक्ट गरिएको:
ಆದಿ 17: IRVKan
हाइलाइट
शेयर गर्नुहोस्
कपी गर्नुहोस्
तपाईंका हाइलाइटहरू तपाईंका सबै यन्त्रहरूमा सुरक्षित गर्न चाहनुहुन्छ? साइन अप वा साइन इन गर्नुहोस्
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.