ಆದಿ 14
14
ಅಬ್ರಾಮನು ಲೋಟನನ್ನು ಸೆರೆಯಿಂದ ಬಿಡಿಸಿದ್ದು
1ಆ ದಿನಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಜಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಗೋಯಿಮದ ಅರಸನಾದ ತಿದ್ಗಾಲನು ಈ ನಾಲ್ವರು ಈಗಿನ ಲವಣಸಮುದ್ರ ಎನ್ನಿಸಿಕೊಳ್ಳುವ ಸಿದ್ದೀಮ್, 2ತಗ್ಗು ಪ್ರದೇಶದಲ್ಲಿ ಒಟ್ಟಾಗಿ ಕೂಡಿದ್ದ ಸೊದೋಮಿನ ಅರಸನಾದ ಬೆರಗನು, ಗೊಮೋರದ ಅರಸನಾದ ಬಿರ್ಶಗನು, ಅದ್ಮಾಹದ ಅರಸನಾದ ಶಿನಾಬನು, ಚೆಬೋಯಿಮನ ಅರಸನಾದ ಶೆಮೇಬರನ, ಬೇಲಗ (ಅಂದರೆ ಚೋಗರದ) ಎಂಬ ಐದು ಅರಸರ ವಿರುದ್ಧವಾಗಿ ಯುದ್ಧ ಮಾಡಿದರು.
3ಈ ಐದು ಅರಸರು ಈಗಿನ ಲವಣಸಮುದ್ರ ಎನ್ನಿಸಿಕೊಳ್ಳುವ ಸಿದ್ದೀಮ್, ತಗ್ಗಿನ ಪ್ರದೇಶದಲ್ಲಿ ಒಟ್ಟಾಗಿ ಕೂಡಿದ್ದರು. 4ಬೆರಗ ಮೊದಲಾದ ಈ ಐದು ಅರಸರು ಹನ್ನೆರಡು ವರ್ಷ ಕೆದೊರ್ಲಗೋಮರನಿಗೆ ಅಧೀನರಾಗಿದ್ದು ಹದಿಮೂರನೆಯ ವರ್ಷದಲ್ಲಿ ತಿರುಗಿ ಬಿದ್ದರು.
5ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಅವನಿಗೆ ಸೇರಿದ್ದ ರಾಜರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ ಹಾಮಿನಲ್ಲಿ ಜೂಜ್ಯರನ್ನೂ ಶಾವೆಕಿರ್ಯಾತಯಿಮಿನಲ್ಲಿ ಏಮಿಯರನ್ನೂ ಸೋಲಿಸಿದರು. 6ಇದಲ್ಲದೆ ಸೇಯೀರೆಂಬ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಹೋರಿಯರನ್ನು, ಅಲ್ಲೇ ಸೋಲಿಸಿ ಮರಳುಗಾಡಿನ ಹತ್ತಿರವಿರುವ ಎಲ್ಪಾರಾನಿನ ವರೆಗೂ ಹಿಂದಟ್ಟಿದನು. 7ಆ ಮೇಲೆ ಅವರು ಹಿಂದಿರುಗಿಕೊಂಡು ಕಾದೇಶ್ ಎನ್ನುವ ಎನ್ಮಿಷ್ಟಾಟಿಗೆ ಬಂದು ಅಮಾಲೇಕ್ಯರ ಸಮಸ್ತ ನಾಡನ್ನೂ ಹಚಚೋನ್ ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಗೆದ್ದರು.
8ಆಗ ಸೊದೋಮ್, ಗೊಮೋರ, ಅದ್ಮಾಹ, ಚೆಬೋಯಿಮ್ ಹಾಗೂ ಚೋಗರೆಂಬ ಬೇಲಗದ ರಾಜರು ಹೊರಟು ಅವರಿಗೆದುರಾಗಿ, 9ಅಂದರೆ ಏಲಾಮಿನ ರಾಜನಾದ ಕೆದೊರ್ಲಗೋಮರ್, ಗೋಯಿಮದ ರಾಜನಾದ ತಿದ್ಗಾಲ, ಶಿನಾರ್ ಅರಸನಾದ ಅಮ್ರಾಫೆಲ್, ಎಲ್ಲಸಾರಿನ ರಾಜನಾದ ಅರಿಯೋಕ ಇವರಿಗೆ ವಿರೋಧವಾಗಿ ಸಿದ್ದೀಮ್ ಎಂಬ ತಗ್ಗಿನಲ್ಲಿ ತಮ್ಮ ದಂಡನ್ನು ನಿಲ್ಲಿಸಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರನ್ನು ಎದುರಿಸಿದರು. 10ಆದರೆ ಸಿದ್ದೀಮ್ ತಗ್ಗು ಪ್ರದೇಶ ಕಲ್ಲರಗಿನ ಕೆಸರುಗುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ರಾಜರ ಕಡೆಯವರು ಓಡಿಹೋಗುವಾಗ ಆ ಗುಣಿಗಳಲ್ಲಿ ಬಿದ್ದು ಸತ್ತರು; ಉಳಿದವರು ಬೆಟ್ಟಗಳಿಗೆ ಓಡಿಹೋದರು. 11ಗೆದ್ದ ಆ ನಾಲ್ಕು ಅರಸರು ಸೊದೋಮ್ ಗೊಮೋರ ಪಟ್ಟಣಗಳನ್ನು ಸೂರೆಮಾಡಿ ಅವುಗಳಲ್ಲಿದ್ದ ಎಲ್ಲಾ ಸಂಪತ್ತನ್ನೂ ದವಸವನ್ನೂ ತೆಗೆದುಕೊಂಡು ಹೋದರು. 12ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು.
13ತಪ್ಪಿಸಿಕೊಂಡವನೊಬ್ಬನು, ಇಬ್ರಿಯನಾದ ಅಬ್ರಾಮನ ಬಳಿಗೆ ಬಂದು ಈ ಸಂಗತಿಯನ್ನು ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ಮೋರೆ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆಯನಿಗೆ ಎಷ್ಕೋಲ ಮತ್ತು ಆನೇರ ಎಂಬ ಸಹೋದರರಿದ್ದರು; ಇವರಿಬ್ಬರಿಗೂ ಅಬ್ರಾಮನಿಗೂ ಒಡಂಬಡಿಕೆಯಿತ್ತು.
14ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನವರೆಗೂ ಹಿಂದಟ್ಟಿದನು. 15ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು. 16ರಾಜರು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಅವನು ತಿರುಗಿ ಪಡೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ, ಸೆರೆಯಲ್ಲಿದ್ದ ಸ್ತ್ರೀಯರನ್ನೂ, ಉಳಿದಿದ್ದ ಜನರನ್ನು ಕರೆದುಕೊಂಡು ಬಂದನು.
ಅಬ್ರಾಮನನ್ನು ಯಾಜಕನಾದ ಮೆಲ್ಕೀಚೆದೆಕನು ಆಶೀರ್ವದಿಸಿದ್ದು
17ಅವನು ಕೆದೊರ್ಲಗೋಮರನ್ನೂ ಅವನೊಂದಿಗೆ ಇದ್ದ ರಾಜರನ್ನೂ ಸೋಲಿಸಿ ಬಂದ ಮೇಲೆ ಸೊದೋಮಿನ ಅರಸನು ಅವನನ್ನು ಅರಸನ ತಗ್ಗು ಎನ್ನಿಸಿಕೊಳ್ಳುವ ಶಾವೆ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಂಡನು.
18 # 14:18 ಯೆರೂಸಲೇಮ್. ಸಾಲೇಮಿನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದನು.
19ಇವನು ಅಬ್ರಾಮನನ್ನು ಆಶೀರ್ವದಿಸಿ, “ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ದೊರೆಯಲಿ; 20ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ” ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಯಾಜಕನಿಗೆ ಕೊಟ್ಟನು.
21ಸೊದೋಮಿನ ಅರಸನು, ಅಬ್ರಾಮನಿಗೆ, “ನೀನು ಬಿಡಿಸಿ ತಂದ ಜನರನ್ನು ನನಗೆ ಒಪ್ಪಿಸು; ಆಸ್ತಿಯನ್ನು ನೀನೇ ತೆಗೆದುಕೋ” ಎಂದು ಹೇಳಿದನು.
22ಅಬ್ರಾಮನು, ಸೊದೋಮಿನ ಅರಸನಿಗೆ, 23“ಒಂದು ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಿನ್ನದರಲ್ಲಿ ಯಾವುದನ್ನೂ ನಾನು ತೆಗೆದುಕೊಳ್ಳುವುದಿಲ್ಲವೆಂದು ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರಾಗಿರುವ ಯೆಹೋವನ ಕಡೆಗೆ ಕೈ ಎತ್ತಿ ಪ್ರಮಾಣಮಾಡುತ್ತೇನೆ. ‘ನನ್ನಿಂದ ಅಬ್ರಾಮನು ಐಶ್ವರ್ಯವಂತನಾದನೆಂದು ಹೇಳಿಕೊಳ್ಳುವುದಕ್ಕೆ ನಿನಗೆ ಆಸ್ಪದವಾಗಬಾರದು, ನನಗೆ ಏನೂ ಬೇಡ.’ 24ಆಳುಗಳು ತಿಂದದ್ದು ಹೊರತು ನನ್ನ ಜೊತೆಯವರಾದ ಆನೇರ ಎಷ್ಕೋಲ ಮಮ್ರೆಯರಿಗೆ ಬರತಕ್ಕ ಪಾಲು ಮಾತ್ರ ಅವರಿಗೆ ಇರಲಿ” ಎಂದು ಹೇಳಿದನು.
अहिले सेलेक्ट गरिएको:
ಆದಿ 14: IRVKan
हाइलाइट
शेयर गर्नुहोस्
कपी गर्नुहोस्
तपाईंका हाइलाइटहरू तपाईंका सबै यन्त्रहरूमा सुरक्षित गर्न चाहनुहुन्छ? साइन अप वा साइन इन गर्नुहोस्
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.