ಆದಿಕಾಂಡ 32
32
ಯಾಕೋಬನು ಏಸಾವನ ದಾರೀ ನೋಡುತ್ತಿರಲು ದೇವರಿಗೆ ಪ್ರಾರ್ಥಿಸಿದ್ದೂ ದೈವಪುರುಷನ ಸಂಗಡ ಹೋರಾಡಿದ್ದೂ
1ಯಾಕೋಬನು ಮುಂದೆ ಪ್ರಯಾಣಮಾಡಲು ದೇವದೂತರು ಅವನೆದುರಿಗೆ ಬಂದರು. 2ಅವನು ಅವರನ್ನು ನೋಡಿದಾಗ - ಅದು ದೇವರ ಪಾಳೆಯ ಎಂದು ಹೇಳಿ ಆ ಸ್ಥಳಕ್ಕೆ ಮಹನಯಿಮ್#32.2 ಮಹನಯಿಮ್ ಅಂದರೆ ಎರಡು ಪಾಳೆಯಗಳು. 2 ಸಮು. 2.8; 17.24,27 ಇತ್ಯಾದಿ. ಎಂದು ಹೆಸರಿಟ್ಟನು.
3ಬಳಿಕ ಯಾಕೋಬನು ಎದೋಮ್ಯರ ದೇಶವಾಗಿರುವ ಸೇಯೀರ್‍ಸೀಮೆಗೆ ತನ್ನ ಅಣ್ಣನಾದ ಏಸಾವನ ಬಳಿಗೆ ದೂತರನ್ನು ಮುಂದೆ ಕಳುಹಿಸಿದನು. 4ಕಳುಹಿಸುವಾಗ ಅವರಿಗೆ - ನೀವು ನನ್ನ ಪ್ರಭುವಾದ ಏಸಾವನ ಬಳಿಗೆ ಹೋಗಿ ಅವನಿಗೆ - ನಿನ್ನ ಸೇವಕನಾದ ಯಾಕೋಬನು ಇಷ್ಟು ದಿವಸ ಲಾಬಾನನ ಬಳಿಯಲ್ಲಿ ವಾಸವಾಗಿದ್ದನು; 5ಅವನಿಗೆ ಎತ್ತು, ಕತ್ತೆ ಮುಂತಾದ ಪಶುಗಳ ಹಿಂಡುಗಳೂ ದಾಸದಾಸೀಜನವೂ ಉಂಟಾದವು; ತಮ್ಮ ದಯವಿರಬೇಕೆಂದು ಪ್ರಭುಗಳಿಗೆ ತಿಳಿಸುವದಕ್ಕೆ ನಮ್ಮನ್ನು ಕಳುಹಿಸಿದ್ದಾನೆಂದು ಹೇಳಿರಿ ಅಂದನು. 6ತರುವಾಯ ಆ ದೂತರು ಯಾಕೋಬನ ಬಳಿಗೆ ತಿರಿಗಿ ಬಂದು - ನಾವು ನಿನ್ನ ಅಣ್ಣನಾದ ಏಸಾವನ ಹತ್ತಿರಕ್ಕೆ ಹೋಗಿ ಬಂದಿದ್ದೇವೆ, ಅವನು ನಾನೂರು ಜನರ ಸಮೇತ ನಿನ್ನನ್ನು ಎದುರುಗೊಳ್ಳುವದಕ್ಕೆ ಬರುತ್ತಾನೆಂದು ಹೇಳಿದಾಗ 7ಯಾಕೋಬನಿಗೆ ಬಹು ಭಯವೂ ಕಳವಳವೂ ಉಂಟಾದವು. ಅವನು ತನ್ನೊಂದಿಗಿದ್ದ ಜನರನ್ನೂ ಕುರಿ ದನ ಒಂಟೆಗಳನ್ನೂ ಎರಡು ಪಾಳೆಯ ಮಾಡಿ - 8ಏಸಾವನು ಒಂದು ಪಾಳೆಯದ ಮೇಲೆ ಬಿದ್ದರೂ ಮತ್ತೊಂದು ಪಾಳೆಯವು ತಪ್ಪಿಸಿಕೊಂಡು ಹೋಗುವದು ಅಂದುಕೊಂಡನು. 9ಇದಲ್ಲದೆ ಅವನು ದೇವರನ್ನು ಪ್ರಾರ್ಥಿಸಿ - ಯೆಹೋವನೇ, ನನ್ನ ತಂದೆತಾತಂದಿರಾದ ಇಸಾಕ ಅಬ್ರಹಾಮರ ದೇವರೇ, ಸ್ವದೇಶಕ್ಕೆ ಬಂಧುಗಳ ಬಳಿಗೆ ತಿರಿಗಿ ಹೋಗಬೇಕೆಂದು ನನಗೆ ಆಜ್ಞಾಪಿಸಿ ನಿನಗೆ ಒಳ್ಳೇದನ್ನು ಮಾಡುವೆನೆಂದು ನನಗೆ ವಾಗ್ದಾನ ಮಾಡಿದವನು ನೀನೇ ಅಲ್ಲವೇ. 10ನೀನು ನಿನ್ನ ದಾಸನಾದ ನನ್ನ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ನಿನ್ನ ವಾಗ್ದಾನವನ್ನು ನೆರವೇರಿಸಿದ್ದೀಯಲ್ಲಾ. ನಾನು ಅದಕ್ಕೆ ಕೇವಲ ಅಪಾತ್ರನಾಗಿದ್ದೇನೆ. ನಾನು ಮೊದಲು ಈ ಯೊರ್ದನ್ ನದಿಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಪಾಳೆಯಗಳಿಗೆ ಒಡೆಯನಾಗಿದ್ದೇನೆ. 11ನನ್ನ ಅಣ್ಣನಾದ ಏಸಾವನು ಬಂದು ನನ್ನನ್ನೂ ನನ್ನ ಮಕ್ಕಳನ್ನೂ ಅವರ ತಾಯಿಯನ್ನೂ ಕೊಲ್ಲುವನೋ ಏನೋ ಎಂದು ನನಗೆ ಭಯವದೆ. ಅವನ ಕೈಗೆ ಸಿಕ್ಕದಂತೆ ನಮ್ಮನ್ನು ಕಾಪಾಡಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. 12ನಿನಗೆ ಒಳ್ಳೇದನ್ನು ಮಾಡಿ ನಿನ್ನ ಸಂತತಿಯನ್ನು ಸಮುದ್ರದ ಉಸುಬಿನಂತೆ ಅಸಂಖ್ಯವಾಗಿ ಅಭಿವೃದ್ಧಿ ಮಾಡುವೆನೆಂದು ನೀನು ನನಗೆ ಹೇಳಿದ್ದೀಯಲ್ಲವೇ ಅಂದನು.
13,14ಅವನು ಆ ರಾತ್ರಿ ಅಲ್ಲೇ ಇಳುಕೊಂಡು ಇನ್ನೂರು ಆಡು, ಇಪ್ಪತ್ತು ಹೋತ, ಇನ್ನೂರು ಕುರಿ, 15ಇಪ್ಪತ್ತು ಟಗರು, ಮರಿಯೊಡನೆ ಹಾಲು ಕರೆಯುವ ಮೂವತ್ತು ಒಂಟೆ, ನಾಲ್ವತ್ತು ಆಕಳು, ಹತ್ತು ಹೋರಿ, ಇಪ್ಪತ್ತು ಹೆಣ್ಣುಕತ್ತೆ, ಹತ್ತು ಕತ್ತೇಮರಿ ಇವುಗಳನ್ನು ತನ್ನ ಅಣ್ಣನಾದ ಏಸಾವನಿಗೆ ಕಾಣಿಕೆಗಾಗಿ ತೆಗೆದುಕೊಂಡನು. 16ಇವುಗಳ ಪ್ರತಿಯೊಂದು ಹಿಂಡನ್ನು ತನ್ನ ಸೇವಕರ ವಶಕ್ಕೆ ಒಪ್ಪಿಸಿ - ನೀವು ನನಗಿಂತ ಮುಂಚಿತವಾಗಿ ನದಿಯನ್ನು ದಾಟಿಹೋಗಿರಿ, ಮತ್ತು ಹಿಂಡು ಹಿಂಡಿಗೆ ಬಿಡುವು ಇರಲಿ ಅಂದನು. 17ಮೊದಲನೆಯ ಹಿಂಡಿನ ಮೇಲಿದ್ದವನಿಗೆ - ನನ್ನ ಅಣ್ಣನಾದ ಏಸಾವನು ನಿನ್ನೆದುರಿಗೆ ಬಂದು- ನೀನು ಯಾರ ಸೇವಕನು? ಎಲ್ಲಿಗೆ ಹೋಗುತ್ತಿ? ನಿನ್ನ ಮುಂದೆ ಇರುವ ಇವೆಲ್ಲಾ ಯಾರವು ಎಂದು ಕೇಳಿದರೆ 18ನೀನು - ಇವು ನಿಮ್ಮ ಸೇವಕನಾದ ಯಾಕೋಬನವು; ತನ್ನ ಪ್ರಭುಗಳಾದ ನಿಮಗೆ ಇವುಗಳನ್ನು ಕಾಣಿಕೆಯಾಗಿ ಕಳುಹಿಸಿಕೊಟ್ಟಿದ್ದಾನೆ; ತಾನೂ ನಮ್ಮ ಹಿಂದೆ ಬರುತ್ತಾನೆ ಎಂದು ಉತ್ತರಕೊಡಬೇಕು ಎಂಬದಾಗಿ ಅಪ್ಪಣೆಕೊಟ್ಟನು. 19ಹಾಗೆಯೇ ಎರಡನೆಯವನಿಗೂ ಮೂರನೆಯವನಿಗೂ ಹಿಂಡುಗಳ ಹಿಂದೆ ಹೋದವರೆಲ್ಲರಿಗೂ - ನೀವು ಏಸಾವನನ್ನು ಕಾಣುವಾಗ 20ಇದೇ ರೀತಿಯಾಗಿ ಮಾತಾಡಿ - ನಿಮ್ಮ ಸೇವಕನಾದ ಯಾಕೋಬನೇ ನಮ್ಮ ಹಿಂದೆ ಬರುತ್ತಾನೆ ಅನ್ನಿರಿ ಎಂದು ಅಪ್ಪಣೆಕೊಟ್ಟನು. ಯಾಕೋಬನು ತನ್ನೊಳಗೆ - ನನ್ನ ಮುಂದೆ ಹೋಗುವ ಈ ಕಾಣಿಕೆಯಿಂದ ಏಸಾವನನ್ನು ಸಮಾಧಾನಪಡಿಸಿದ ಮೇಲೆ ಅವನ ಸನ್ನಿಧಿಗೆ ಸೇರುವೆನು; ಒಂದು ವೇಳೆ ನನ್ನನ್ನು ಪ್ರೀತಿಯಿಂದ ಅಂಗೀಕರಿಸುವನು ಅಂದುಕೊಂಡನು. 21ಆದಕಾರಣ ಅವನು ಆ ಕಾಣಿಕೆಯನ್ನು ತನಗೆ ಮುಂಚಿತವಾಗಿ ಹೊಳೆಯಿಂದಾಚೆಗೆ ದಾಟಿಸಿ ತಾನು ಆ ರಾತ್ರಿ ತನ್ನ ಪಾಳೆಯದೊಳಗೆ ಇದ್ದನು.
22ಆ ರಾತ್ರಿ ಅವನು ತನ್ನ ಇಬ್ಬರು ಹೆಂಡರನ್ನೂ ಇಬ್ಬರು ದಾಸಿಯರನ್ನೂ ಹನ್ನೊಂದು ಮಂದಿ ಮಕ್ಕಳನ್ನೂ ಕರೆದುಕೊಂಡು ಯಬ್ಬೋಕ್#32.22 ಯಬ್ಬೋಕ್ ಅಂದರೆ, ಹೋರಾಟ; ಧರ್ಮೋ. 2.37; 3.16; ಯೆಹೋ. 12.2. ಹೊಳೆಯನ್ನು ದಾಟುವ ಸ್ಥಳದಲ್ಲಿ ದಾಟಿದನು. 23ಅವರನ್ನೂ ತನ್ನ ಆಸ್ತಿಯೆಲ್ಲವನ್ನೂ ದಾಟಿಸಿದ ಮೇಲೆ 24ಯಾಕೋಬನು ಒಂಟಿಗನಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. 25ಆ ಪುರುಷನು ತಾನು ಗೆಲ್ಲದೆ ಇರುವದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು. 26ಆ ಪುರುಷನು - ನನ್ನನ್ನು ಬಿಡು, ಬೆಳಗಾಗುತ್ತದೆ ಅನ್ನಲು, ಯಾಕೋಬನು - ನೀನು ನನ್ನನ್ನು ಆಶೀರ್ವದಿಸಿದ ಹೊರತು ನಿನ್ನನ್ನು ಬಿಡುವದಿಲ್ಲ ಅಂದನು. 27ಆ ಪುರುಷನು - ನಿನ್ನ ಹೆಸರೇನು ಎಂದು ಕೇಳಿದ್ದಕ್ಕೆ ಅವನು - ಯಾಕೋಬನು ಅಂದಾಗ, 28ಅವನು ಯಾಕೋಬನಿಗೆ - ಇನ್ನು ಮೇಲೆ ನೀನು ಯಾಕೋಬನೆನ್ನಿಸಿಕೊಳ್ಳುವದಿಲ್ಲ; ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದ್ದರಿಂದ ನಿನಗೆ ಇಸ್ರಾಯೇಲೆಂದು#32.28 ದೇವರ ಸಂಗಡ ಹೋರಾಡಿದ ಮನುಷ್ಯ ಎಂಬರ್ಥವಿದ್ದ ಹಾಗೆ. ಹೆಸರುಂಟಾಗುವದು ಎಂದು ಹೇಳಿದನು. 29ಯಾಕೋಬನು - ನಿನ್ನ ಹೆಸರನ್ನು ನನಗೆ ತಿಳಿಸಬೇಕು ಸ್ವಾಮೀ ಅಂದಾಗ ಆ ಪುರುಷನು - ನನ್ನ ಹೆಸರನ್ನು ವಿಚಾರಿಸುವದೇಕೆ ಎಂದು ಹೇಳಿ ಅಲ್ಲಿ ಅವನನ್ನು ಆಶೀರ್ವದಿಸಿದನು. 30ಯಾಕೋಬನು - ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನಲ್ಲಾ; ಆದರೂ ನನ್ನ ಪ್ರಾಣ ಉಳಿದದೆ ಅಂದುಕೊಂಡು ಆ ಸ್ಥಳಕ್ಕೆ ಪೆನೀಯೇಲ್#32.30 ಪೆನೀಯೇಲ್ ಅಂದರೆ, ದೇವದರ್ಶನ; ಪಾಠಾಂತರ: ಪೆನೂವೇಲ್. ಎಂದು ಹೆಸರಿಟ್ಟನು. 31ಅವನು ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯವಾಯಿತು. ಅವನು ತೊಡೆಯ ನಿವಿುತ್ತ ಕುಂಟಿಕೊಂಡು ನಡೆದನು. 32ಆ ಪುರುಷನು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಇಸ್ರಾಯೇಲ್ಯರು ಇಂದಿನವರೆಗೂ ತೊಡೆಯ ಕೀಲಿನ ಮೇಲಿರುವ ಸೊಂಟದ ಮಾಂಸವನ್ನು ತಿನ್ನುವದಿಲ್ಲ.
सध्या निवडलेले:
ಆದಿಕಾಂಡ 32: KANJV-BSI
ठळक
सामायिक करा
कॉपी करा

तुमचे हायलाइट तुमच्या सर्व डिव्हाइसेसवर सेव्ह करायचे आहेत? साइन अप किंवा साइन इन
Kannada J.V. Bible © The Bible Society of India, 2016.
Used by permission. All rights reserved worldwide.