ಪ್ರಲಾಪಗಳು 3
3
ಮೂರನೆಯ ಶೋಕಗೀತೆ
ಶಿಕ್ಷೆ, ಪಶ್ಚಾತ್ತಾಪ ಮತ್ತು ನಿರೀಕ್ಷೆ
1ಸರ್ವೇಶ್ವರನ ಕೋಪವೆಂಬ ಕೋಲಿನಿಂದಲೇ
ಪೆಟ್ಟುತಿಂದ ವ್ಯಕ್ತಿಯೆಂದರೆ ನಾನೇ
2ಆತ ನನ್ನನ್ನು ಕರೆದೊಯ್ದು
ಬೆಳಕಿನಲ್ಲಿ ಅಲ್ಲ, ಕತ್ತಲಲ್ಲೇ ನಡೆಸಿದ.
3ಹೌದು ದಿನವಿಡೀ, ಪದೇ ಪದೇ
ಕೈಮಾಡುತ್ತಾ ಬಂದಿಹನು ನನ್ನ ಮೇಲೆ.
4ಸವೆಸಿರುವನು ನನ್ನ ಮಾಂಸಚರ್ಮಗಳನ್ನು
ಮುರಿದಿರುವನು ನನ್ನ ಎಲುಬುಗಳನ್ನು.
5ನನ್ನನ್ನು ಹಿಡಿದು ಬಂದಿಸಿರುವನು ದಿಬ್ಬಗಳ ಮಧ್ಯೆ
ಸುತ್ತುಗಟ್ಟಿರುವನು ಕಷ್ಟಸಂಕಟಗಳ ನಡುವೆ.
6ಎಷ್ಟೋ ದಿನಗಳ ಹಿಂದೆ ಸತ್ತವರ ಜೊತೆಯಲ್ಲಿ
ನನ್ನನ್ನು ಇರಿಸಿದ್ದಾನೆ ಆ ಕಾರ್ಗತ್ತಲಲ್ಲಿ.
7ನಾನು ಹೊರಗಡೆ ಹೋಗದಂತೆ ಗೋಡೆಯೆಬ್ಬಿಸಿರುವನು,
ಭಾರವಾದ ಬೇಡಿಗಳನ್ನು ನನಗೆ ತೊಡಿಸಿರುವನು.
8ಎಷ್ಟೋ ಮೊರೆಯಿಟ್ಟು ಕೂಗಿಕೊಂಡೆ.
ಕಿವಿಗೊಡಲಿಲ್ಲ ಆತ ನನ್ನ ಮೊರೆಗೆ.
9ನನ್ನ ದಾರಿಗೆ ಅಡ್ಡವಾಗಿ ನೆಟ್ಟಿರುವನು ಮೊನಚು ಕಲ್ಲುಗಳನ್ನು,
ಡೊಂಕು ಡೊಂಕು ಮಾಡಿರುವನು ನನ್ನ ಹಾದಿಯನ್ನು.
10ನನಗಾಗಿ ಆತ ಹೊಂಚುಹಾಕುತ್ತಿರುವನು ಕರಡಿಯಂತೆ
ಗುಹೆಯಲ್ಲಿ ಅಡಗಿಕೊಂಡಿರುವನು ಸಿಂಹದಂತೆ.
11ಆತ ನನಗೆ ದಾರಿ ತಪ್ಪಿಸಿರುವನು
ತುಂಡರಿಸಿ ದಿಕ್ಕಿಲ್ಲದವನಂತೆ ಮಾಡಿರುವನು.
12ತನ್ನ ಬಿಲ್ಲನ್ನು ಬಗ್ಗಿಸಿರುವನು
ಬಾಣಕ್ಕೆ ನನ್ನನ್ನು ಗುರಿಮಾಡಿಕೊಂಡಿರುವನು.
13ತನ್ನ ಬತ್ತಳಿಕೆಯ ಅಂಬುಗಳಿಂದ
ಇರಿದಿದ್ದಾನೆ ನನ್ನ ಅಂತರಂಗವನ್ನು.
14ಹಾಸ್ಯಾಸ್ಪದನಾದೆ ಸ್ವಜನರೆಲ್ಲರಿಗೆ
ಗುರಿಯಾದೆ ಅವರ ದಿನನಿತ್ಯದ ಗೇಲಿ ಲಾವಣಿಗಳಿಗೆ.
15ಆತ ನನಗೆ ಕಹಿ ಉಣ್ಣಿಸಿದ್ದಾನೆ ಹೊಟ್ಟೆತುಂಬ
ನನ್ನನ್ನು ತಣಿಸಿದ್ದಾನೆ ವಿಷಪದಾರ್ಥಗಳಿಂದ.
16ನನ್ನ ಹಲ್ಲು ಮುರಿದಿದ್ದಾನೆ ನುರುಜುಗಲ್ಲಿನಿಂದ
ನನ್ನನ್ನು ಮುಚ್ಚಿಬಿಟ್ಟಿದ್ದಾನೆ ಬೂದಿಯಿಂದ.
17ಶಾಂತಿಸಮಾಧಾನಕ್ಕೆ ನಾನು ದೂರವಾದೆ
ಸುಖಸಂತೋಷವನ್ನು ಮರೆತುಹೋದೆ.
18ನಾನು ಇಂತೆಂದುಕೊಂಡೆ:
ಅಯ್ಯೋ, ನನ್ನ ಶಕ್ತಿಯೆಲ್ಲಾ ಹಾಳಾಯಿತು
ಸರ್ವೇಶ್ವರನಲ್ಲಿ ನಾನಿತ್ತ ನಿರೀಕ್ಷೆ ವ್ಯರ್ಥವಾಯಿತು.”
19ನಾನು ಪಟ್ಟ ಕಷ್ಟದುಃಖವನ್ನು ಮನಸ್ಸಿಗೆ ತಂದುಕೊಂಡಾಗ
ಆಗುತ್ತಿದೆ ನನಗೆ ಕಹಿಯಾದ ಅನುಭವ.
20ಮನದಲ್ಲೆ ಇವುಗಳನ್ನು ನಿತ್ಯವೂ ನೆನೆದಾಗ
ನನ್ನೊಳಗೇ ಸೊರಗಿಹೋಗುತ್ತದೆ ನನ್ನ ಮನ.
21ಇಂತಿರಲು ನಿನ್ನ ಕರುಣೆಯನ್ನು ನೆನಪಿಗೆ ತಂದುಕೊಳ್ಳುತ್ತೇನೆ
ಅದರಿಂದಲೆ ನನಗೆ ನಂಬಿಕೆ-ನಿರೀಕ್ಷೆ ಮರುಕಳಿಸುತ್ತದೆ.
22ನಾವು ಉಳಿದಿರುವುದು ಸರ್ವೇಶ್ವರನ ಕರುಣೆಯಿಂದ
ಆತನ ಕೃಪಾವರಗಳಿಗೆ ಕೊನೆಯೇ ಇಲ್ಲ.
23ಹೊಸಹೊಸದಾಗಿ ಅವು ಒದಗುತ್ತವೆ ದಿನದಿನವು
ಮಹತ್ತರವಾದುದು ಆತನ ಸತ್ಯಸಂಧತೆಯು.
24“ನನ್ನ ಪಾಲಿನ ಸೊತ್ತು ಸರ್ವೇಶ್ವರನೇ,
ನಿರೀಕ್ಷಿಸುತ್ತಿರುವೆನು ನಾನು ಆತನನ್ನೇ”
ಇಂತೆಂದುಕೊಳ್ಳುತ್ತದೆ ನನ್ನ ಅಂತರಾತ್ಮ.
25ಸರ್ವೇಶ್ವರ ಒಳ್ಳೆಯವನು ಆತನನ್ನು ನಿರೀಕ್ಷಿಸುವವರಿಗೆ
ಆತನನ್ನು ಹರಸಿ ಹಂಬಲಿಸುವ ಜನರಿಗೆ.
26ಸರ್ವೇಶ್ವರನು ನಮ್ಮನ್ನು ಉದ್ಧರಿಸುವನೆಂದು
ಎದುರುನೋಡುತ್ತಾ ತಾಳ್ಮೆಯಿಂದಿರುವುದು ಒಳಿತು.
27ಯೌವನದಿಂದಲೆ ನೊಗ ಹೊತ್ತರೆ
ಮಾನವನಿಗೆ ಅದು ಹಿತಕರ.
28‘ನನ್ನ ಮೇಲೆ ಇದನ್ನು ಹೇರಿಸಿದನು ಸರ್ವೇಶ್ವರನು
ಎಂದು ಏಕಾಕಿಯಾಗಿ ಕುಳಿತು ಮೌನದಿಂದಿರು.
29ಮಣ್ಣು ಮುಕ್ಕಬೇಕಾಗಿ ಬಂದರೂ
30ಹೊಡೆಯುವವನಿಗೆ ಕೆನ್ನೆಕೊಡುವಾಗಲೂ
ನಿಂದೆ ಅವಮಾನದಿಂದ ತೃಪ್ತಿಪಡುವಾಗಲೂ.
ನಂಬಿಕೆಗೆ ಎಡೆಯಿರಲು ಸಾಧ್ಯ.
31ನರಮಾನವನನ್ನು ಸ್ವಾಮಿ ಸದಾಕಾಲಕ್ಕೂ
ತೊರೆದುಬಿಡುವವನಲ್ಲ.
32ಒಂದು ವೇಳೆ ದುಃಖಪಡಿಸಿದರೂ
ಕೃಪಾತಿಶಯದಿಂದ ಕನಿಕರಿಸಬಲ್ಲ.
33ನರಮಾನವರನ್ನು ಹಿಂಸಿಸಿ ದುಃಖಪಡಿಸುವುದು
ಆತನಿಗೆ ಎಷ್ಟುಮಾತ್ರಕ್ಕೂ ಇಷ್ಟವಿಲ್ಲ.
34ಇಳೆಯ ಸೆರೆಯಾಳುಗಳನ್ನು
ತುಳಿದುಬಿಡುವುದನ್ನೂ
35ಪರಾತ್ಪರನ ಸನ್ನಿಧಿಯಲ್ಲೇ ನ್ಯಾಯ
ತಪ್ಪಿಸುವುದನ್ನೂ
36ಅನ್ಯಾಯವಾಗಿ ವ್ಯಾಜ್ಯತೀರಿಸುವುದನ್ನೂ
ಸ್ವಾಮಿ ಲಕ್ಷ್ಯಕ್ಕೆ ತಂದುಕೊಳ್ಳದೆ ಇರುತ್ತಾನೆಯೇ?
37ಸ್ವಾಮಿಯ ಅಪ್ಪಣೆಯಿಲ್ಲದೆ
ಯಾರ ಮಾತೂ ಸಾರ್ಥಕವಾಗದು.
38ಒಳಿತು-ಕೇಡು ಸಂಭವಿಸುವುದು
ಪರಾತ್ಪರನ ಮಾತಿನಿಂದ ಅಲ್ಲವೆ?
39ಜೀವಾತ್ಮನಾದ ಮಾನವನು
ತನ್ನ ಪಾಪದ ಶಿಕ್ಷೆಗಾಗಿ ಗೊಣಗುಟ್ಟುವುದೆಂತು?
40ನಮ್ಮ ನಡತೆಯನ್ನು ಪರೀಕ್ಷಿಸಿ ಪರಿಶೋಧಿಸೋಣ
ಸರ್ವೇಶ್ವರನ ಕಡೆಗೆ ತಿರುಗಿಕೊಳ್ಳೋಣ;
41ಪರಲೋಕದಲ್ಲಿರುವ ದೇವರ ಕಡೆಗೆ ನಮ್ಮ
ಕರಗಳನ್ನೂ ಹೃನ್ಮನಗಳನ್ನೂ ಎತ್ತೋಣ;
42“ನಾವು ಅವಿಧೇಯರಾಗಿ ಪಾಪಮಾಡಿದೆವು
ನೀನು ಕ್ಷಮಿಸಲಿಲ್ಲ ನಮ್ಮನ್ನು.
43“ರೋಷಭರಿತನಾಗಿ ನೀನು ಬೆನ್ನಟ್ಟಿಬಂದೆ
ದಯೆದಾಕ್ಷಿಣ್ಯವಿಲ್ಲದೆ ನಮ್ಮನ್ನು ಹತಿಸಿದೆ.
44ನಮ್ಮ ಪ್ರಾರ್ಥನೆ ನಿನಗೆ ಮುಟ್ಟಬಾರದೆಂದೆ
ಮೋಡಗಳ ಹಿಂದೆ ಮರೆಮಾಡಿಕೊಂಡೆ.
45ಕಸವನ್ನಾಗಿಯೂ ಹೊಲಸನ್ನಾಗಿಯೂ
ನಮ್ಮನ್ನು ಎಸೆದುಬಿಟ್ಟೆ ರಾಷ್ಟ್ರಗಳ ನಡುವೆ.
46“ಶತ್ರುಗಳೆಲ್ಲರು ನಮ್ಮನ್ನು ನೋಡಿ
ಬಾಯಿ ಕಿಸಿದಿದ್ದಾರೆ ನಮಗೆ ವಿರುದ್ಧವಾಗಿ.
47ಹಳ್ಳಗುಂಡಿಗಳು, ಭಯಭೀತಿಗಳು, ನಾಶವಿನಾಶಗಳು
ನಮ್ಮ ಪಾಲಿಗೆ ಕಟ್ಟಿಟ್ಟ ಬುತ್ತಿಗಳು.
48ಸ್ವಜನರು ನಾಶವಾದ ಕಾರಣದಿಂದಾಗಿ
ಹರಿಯುತ್ತಿದೆ ನನ್ನ ಕಣ್ಣೀರು ತೊರೆಯಾಗಿ.
49“ಸರ್ವೇಶ್ವರನು ಪರಲೋಕದಿಂದ ಕಟಾಕ್ಷಿಸಿ
ನೋಡುವವರೆಗೂ
50ಹರಿಯುತ್ತಿರುವುದು ನಿರಂತರವಾಗಿ ನನ್ನ ಕಣ್ಣೀರು.
51ನಗರದ ಯುವತಿಯರ ದುರ್ಗತಿಯನ್ನು ನೋಡಿ
ಅಳುತ್ತಿರುವ ನನ್ನನ್ನು ಕಾಡುತ್ತಿದೆ ಕಣ್ಣುರಿ.
52“ಹಕ್ಕಿಯನ್ನು ಬೇಟೆಯಾಡುವವರೋ ಎಂಬಂತೆ
ನಿಷ್ಕಾರಣ ವೈರಿಗಳು ಬೆನ್ನಟ್ಟಿ ಓಡಿಬಂದರು ನನ್ನ ಹಿಂದೆ.
53ನನ್ನನ್ನು ಗುಳಿಯಲ್ಲಿಳಿಸಿ ಕಲ್ಲು ಮುಚ್ಚಿದರು
ನನ್ನ ಪ್ರಾಣ ತೆಗೆಯಲು ಪ್ರಯತ್ನಿಸಿದರು.
54ಪ್ರವಾಹವು ನನ್ನನ್ನು ಮುಳುಗಿಸಿತು;
ಆಗ ಸತ್ತೆ ಎಂದುಕೊಂಡೆ ನಾನು.
55“ಹೇ ಸರ್ವೇಶ್ವರಾ, ಆಳವಾದ ಗುಳಿಯಲ್ಲಿ ನಾ ಕುಳಿತೆ
ನಿನ್ನ ಹೆಸರೆತ್ತಿ ನಾನು ಪ್ರಾರ್ಥನೆಮಾಡಿದೆ.
56ನನ್ನ ನಿಟ್ಟುಸಿರಿಗೂ ಮೊರೆಗೂ ಕಿವಿಮುಚ್ಚಿಕೊಳ್ಳಬೇಡ ಎಂದೆ
ಆಗ ನೀನು ನನ್ನ ಧ್ವನಿಯನ್ನು ಕೇಳಿದೆ.
57ನಿನ್ನನ್ನು ಕೂಗಿಕೊಂಡಾಗ ಸಮೀಪಕ್ಕೆ ಬಂದೆ
“ಭಯಪಡಬೇಡ” ಎಂದು ಅಭಯನೀಡಿದೆ.
58“ಸ್ವಾಮೀ, ನೀನೇ ನನ್ನ ಪರವಾಗಿ ವಾದಿಸಿದೆ
ನನ್ನ ಪ್ರಾಣವನ್ನು ಉಳಿಸಿದೆ.
59ಸರ್ವೇಶ್ವರಾ, ನಿನಗೆ ತಿಳಿದಿದೆ ನನಗಾದ ಅನ್ಯಾಯ
ದೊರಕುವಂತೆ ಮಾಡು ನನಗೆ ನ್ಯಾಯ.
60ನೀನೇ ನೋಡಿರುವೆ ವೈರಿಗಳು ನನ್ನ ವಿರುದ್ಧ ಸಾಧಿಸಿದ ಹಗೆಯನ್ನು
ಅವರು ಕಲ್ಪಿಸಿಕೊಂಡ ಕುಯುಕ್ತಿಯನ್ನು.
61“ಸರ್ವೇಶ್ವರಾ, ನಿನ್ನ ಕಿವಿಗೆ ಬಿದ್ದಿದೆ
ನನ್ನ ವೈರಿ ಕಲ್ಪಿಸಿದ ಕುಯುಕ್ತಿ.
62ನನ್ನ ಹಾನಿಗಾಗಿ ನಿತ್ಯವೂ ಮಾಡುತ್ತಿರುವ
ನಿಂದೆ ಅವಮಾನ, ತಂತ್ರೋಪಾಯ.
63ಇಗೋ ನೋಡು, ಅವರು ಕುಳಿತಾಗಲೂ, ನಿಂತಾಗಲೂ
ಹಾಸ್ಯ, ಲಾವಣಿಗಳಿಗೆ ಗುರಿಯಾಗಿರುವೆ ನಾನು.
64“ಹೇ, ಸರ್ವೇಶ್ವರಾ, ಅವರ ದುಷ್ಕೃತ್ಯಗಳಿಗೆ
ತಕ್ಕ ಪ್ರತೀಕಾರ ನೀಡು ಅವರಿಗೆ.
65ಅವರ ಮನಸ್ಸನ್ನು ಮಂಕುಮಾಡು
ಅವರಿಗೆ ನಿನ್ನ ಶಾಪ ತಗಲುವಂತೆ ಮಾಡು.
66ಸಿಟ್ಟುಗೊಂಡು ಅವರನ್ನು ಹಿಂದಟ್ಟು
ನಿನ್ನ ಆಕಾಶದ ಕೆಳಗಿನಿಂದ ಅವರನ್ನು ಅಳಿಸಿಹಾಕು".
ಪ್ರಸ್ತುತ ಆಯ್ಕೆ ಮಾಡಲಾಗಿದೆ:
ಪ್ರಲಾಪಗಳು 3: KANCLBSI
Highlight
ಶೇರ್
ಕಾಪಿ
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.