ಯೆರೆಮೀಯ 41
41
1ಏಳನೆಯ ತಿಂಗಳಿನಲ್ಲಿ ಇಷ್ಮಯೇಲನು ಹತ್ತು ಮಂದಿಯೊಂದಿಗೆ ಅಹೀಕಾಮನ ಮಗ ಗೆದಲ್ಯನು ವಾಸವಾಗಿದ್ದ ಮಿಚ್ಪಕ್ಕೆ ಬಂದನು. ಈತನು ರಾಜವಂಶದವನು, ಎಲೀಷಾಮನ ಮೊಮ್ಮಗನು, ನೆತನ್ಯನ ಮಗನು ಹಾಗು ಅರಸನ ಪದಾಧಿಕಾರಿಗಳಲ್ಲಿ ಒಬ್ಬನು. ಅಲ್ಲಿ ಗೆದಲ್ಯನೊಂದಿಗೆ ಅವರೆಲ್ಲರು ಊಟಮಾಡುತ್ತಿದ್ದಾಗ, 2ನೆತಲ್ಯನ ಮಗ ಇಷ್ಮಾಯೇಲನು ಮತ್ತು ಅವನೊಂದಿಗಿದ್ದ ಹತ್ತು ಜನರು ಎದ್ದು ಅಹೀಕಾಮನ ಮಗ, ಶಾಫಾನನ ಮೊಮ್ಮಗ, ಹಾಗು ಬಾಬಿಲೋನಿಯದ ಅರಸನಿಂದ ನಾಡಿನ ರಾಜ್ಯಪಾಲನಾಗಿ ನೇಮಕಗೊಂಡಿದ್ದ ಆ ಗೆದಲ್ಯನನ್ನು ಕತ್ತಿಯಿಂದ ಹೊಡೆದು ಕೊಂದರು. 3ಇದಲ್ಲದೆ, ಆ ಇಷ್ಮಾಯೇಲನು ಗೆದಲ್ಯನ ಸಂಗಡ ಮಿಚ್ಪದಲ್ಲಿದ್ದ ಯೆಹೂದ್ಯರೆಲ್ಲರನ್ನು ಹಾಗು ಅಲ್ಲಿ ಸಿಕ್ಕಿದ ಬಾಬಿಲೋನಿಯದ ಸೈನಿಕರನ್ನು ಹತಿಸಿದನು.
4ಗೆದಲ್ಯನನ್ನು ಕೊಂದು ಎರಡು ದಿನಗಳಾಗಿದ್ದರೂ ಆ ಸಂಗತಿ ಇನ್ನು ಯಾರಿಗೂ ತಿಳಿದಿರಲಿಲ್ಲ. 5ಇಂತಿರಲು ಗಡ್ಡ ಬೋಳಿಸಿ, ಬಟ್ಟೆ ಹರಿದು, ಗಾಯಮಾಡಿಕೊಂಡಿದ್ದ ಎಂಬತ್ತು ಜನರು ಶೆಕೆಮ್, ಶಿಲೋ, ಸಮಾರಿಯ ಎಂಬ ಊರುಗಳಿಂದ ಬಂದು, ಕೈಯಲ್ಲಿ ಧೂಪನೈವೇದ್ಯದ್ರವ್ಯಗಳನ್ನು ತೆಗೆದುಕೊಂಡು ಸರ್ವೇಶ್ವರನ ಆಲಯಕ್ಕೆ ಹೋಗುತ್ತಿದ್ದರು. 6ಆಗ ನೆತನ್ಯನ ಮಗ ಇಷ್ಮಾಯೇಲನು ಮಿಚ್ಪದಿಂದ ಅವರ ಕಡೆಗೆ ಹೊರಟು ದಾರಿಯುದ್ದಕ್ಕೂ ಅಳುತ್ತಾ ನಡೆದುಬಂದನು. ಅವರನ್ನು ಎದುರುಗೊಂಡು, ‘ಅಹೀಕಾಮನ ಮಗ ಗೆದಲ್ಯನ ಬಳಿಗೆ ಬನ್ನಿ’ ಎಂದು ಹೇಳಿದನು. 7ಅವರು ಊರೊಳಕ್ಕೆ ಬಂದಮೇಲೆ ನೆತನ್ಯನ ಮಗ ಇಷ್ಮಾಯೇಲನೂ ಅವನ ಸಂಗಡಿಗರೂ ಅವರನ್ನು ಕೊಂದು ಬಾವಿಯಲ್ಲಿ ಹಾಕಿದರು.
ಇಷ್ಮಾಯೇಲನ ಪಲಾಯನ
8ಆದರೆ ಆ ಎಂಬತ್ತು ಮಂದಿಯಲ್ಲಿ ಹತ್ತು ಜನರು ಇಷ್ಮಾಯೇಲನಿಗೆ, “ನಮ್ಮನ್ನು ಕೊಲ್ಲಬೇಡಿ; ಗೋದಿ, ಜವೆಗೋದಿ, ಎಣ್ಣೆ, ಜೇನುತುಪ್ಪ ಇವುಗಳನ್ನು ಕಾಡಿನಲ್ಲಿ ರಾಶಿಯಾಗಿ ಬಚ್ಚಿಟ್ಟಿದ್ದೇವೆ,” ಎಂದು ಬಿನ್ನವಿಸಿದರು. ಈ ಕಾರಣ ಅವರನ್ನು ಅವರ ಜೊತೆಯವರಂತೆ ಕೊಲ್ಲದೆ ಬಿಟ್ಟನು. 9“ಇಷ್ಮಾಯೇಲನು ತಾನು ಕೊಂದವರ ಶವಗಳನ್ನು ಗೆದಲ್ಯನ ಶವದ ಮೇಲೆ ಹಾಕಿಸಿದನು. ಹೀಗೆ ಹಾಕಿಸಿದ ಆ ಬಾವಿಯು ಇಸ್ರಯೇಲಿನ ಅರಸನಾದ ಬಾಷನ ಭಯದಿಂದ ಅರಸನಾದ ಆಸನು ತೋಡಿಸಿದ್ದ ಬಾವಿಯೇ ಆಗಿತ್ತು. ಆ ಬಾವಿಯನ್ನು ನೆತನ್ಯನ ಮಗ ಇಷ್ಮಾಯೇಲನು ಹತರಾದವರ ಶವಗಳಿಂದ ತುಂಬಿಸಿಬಿಟ್ಟನು. 10ಬಳಿಕ ನೆತನ್ಯನ ಮಗ ಇಷ್ಮಾಯೇಲನು ರಾಜಕುವರಿಯರನ್ನು ಮತ್ತು ರಕ್ಷಾದಳದ ನಾಯಕನಾದ ನೆಬೂಜರದಾನನನ್ನು ಆಹೀಕಾಮನ ಮಗ ಗೆದಲ್ಯನಿಗೆ ಒಪ್ಪಿಸಿದ್ದ ಮಿಚ್ಪದ ಜನ ಶೇಷವನ್ನು, ಹೀಗೆ ಮಿಚ್ಪದಲ್ಲಿ ಅಳಿದುಳಿದಿದ್ದ ಎಲ್ಲರನ್ನು ಸೆರೆಹಿಡಿದು ಅಮ್ಮೋನ್ಯರ ನಾಡಿಗೆ ಹೊರಟನು.
11ಕಾರೇಹನ ಮಗ ಯೋಹಾನಾನನು ಹಾಗು, ಅವನೊಂದಿಗಿದ್ದ ಎಲ್ಲ ಸೇನಾಪತಿಗಳು ನೆತನ್ಯನ ಮಗ ಇಷ್ಮಾಯೇಲನು ಮಾಡಿದ ಎಲ್ಲ ಕೆಡುಕನ್ನು ಕೇಳಿದರು. 12ತಮ್ಮ ಸೈನಿಕರನ್ನೆಲ್ಲ ಕರೆದುಕೊಂಡು ನೆತನ್ಯನ ಮಗನಾದ ಇಷ್ಮಾಯೇಲನ ಮೇಲೆ ಯುದ್ಧಕ್ಕೆ ಹೊರಟು ಗಿಬ್ಯೋನಿನ ದೊಡ್ಡ ಕೆರೆಯ ಹತ್ತಿರ ಅವನನ್ನು ಹಿಡಿದರು. 13ಆಗ ಇಷ್ಮಾಯೇಲನ ಸಂಗಡವಿದ್ದ ಸೆರೆಯಾಳುಗಳೆಲ್ಲರು ಕಾರೇಹನ ಮಗ ಯೋಹಾನಾನನನ್ನು ಅವನೊಂದಿಗಿದ್ದ ಎಲ್ಲ ಸೇನಾಪತಿಗಳನ್ನೂ ನೋಡಿ ಸಂತೋಷಪಟ್ಟರು. 14ಇಷ್ಮಾಯೇಲನು ಮಿಚ್ಪದಿಂದ ಸೆರೆಯಾಗಿ ಒಯ್ದಿದ್ದ ಜನರೆಲ್ಲರು ಹಿಂದಿರುಗಿಹೋಗಿ ಕಾರೇಹನ ಮಗ ಯೋಹಾನಾನನನ್ನೂ ಸೇರಿಕೊಂಡರು. 15ನೆತನ್ಯನ ಮಗ ಇಷ್ಮಾಯೇಲನಾದರೋ ಎಂಟುಮಂದಿಯ ಸಂಗಡ ಯೋಹಾನಾನನಿಂದ ತಪ್ಪಿಸಿಕೊಂಡು ಅಮ್ಮೋನ್ಯರನ್ನು ಮರೆಹೊಕ್ಕನು.
16ಆಗ ಕಾರೇಹನ ಮಗ ಯೋಹಾನಾನನು ಮತ್ತು ಅವನೊಂದಿಗಿದ್ದ ಸೇನಾಪತಿಗಳೆಲ್ಲರು ತಾವು ನೆತನ್ಯನ ಮಗ ಇಷ್ಮಾಯೇಲನ ಕೈಯಿಂದ ತಪ್ಪಿಸಿ ಗಿಬ್ಯೋನಿನಿಂದ ತಂದಿದ್ದ ಜನರನ್ನು ಅಂದರೆ ಯೋಧರು, ಮಹಿಳೆಯರು, ಮಕ್ಕಳು, ಕಂಚುಕಿಗಳು, ಹೀಗೆ ಇಷ್ಮಾಯೇಲನು ಅಹೀಕಾಮನ ಮಗ ಗೆದಲ್ಯನನ್ನು ಕೊಂದ ಬಳಿಕ ಜನರನ್ನೆಲ್ಲರನ್ನು ಕರೆದುಕೊಂಡು ಹೊರಟರು. 17ಬಾಬಿಲೋನಿಯರ ಭಯದಿಂದ ಈಜಿಪ್ಟಿಗೆ ವಲಸೆಹೋಗಬೇಕೆಂದು ಬೆತ್ಲೆಹೇಮಿನ ಸಮೀಪದಲ್ಲಿರುವ ಗೇರುಥ್ ಕಿಮ್ಹಾಮಿನಲ್ಲಿ ಇಳಿದುಕೊಂಡರು. 18ಬಾಬಿಲೋನಿಯದ ಅರಸನಿಂದ ನಾಡಿನ ರಾಜ್ಯಪಾಲನಾಗಿ ನೇಮಕಗೊಂಡಿದ್ದ ಅಹೀಕಾಮನ ಮಗ ಗೆದಲ್ಯನನ್ನು ನೆತನ್ಯನ ಮಗ ಇಷ್ಮಾಯೇಲನು ಕೊಂದುಹಾಕಿದ್ದರಿಂದ ಬಾಬಿಲೋನಿಯರಿಗೆ ಆ ಜನರು ಅಂಜಿದ್ದರು.
ಪ್ರಸ್ತುತ ಆಯ್ಕೆ ಮಾಡಲಾಗಿದೆ:
ಯೆರೆಮೀಯ 41: KANCLBSI
Highlight
ಶೇರ್
ಕಾಪಿ
![None](/_next/image?url=https%3A%2F%2Fimageproxy.youversionapi.com%2F58%2Fhttps%3A%2F%2Fweb-assets.youversion.com%2Fapp-icons%2Fkn.png&w=128&q=75)
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.