ಯೆರೆಮೀಯ 39
39
ಜೆರುಸಲೇಮಿನ ಪತನ
1ಜುದೇಯದ ಅರಸ ಚಿದ್ಕೀಯನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಲ್ಲಿ ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನು ಸಕಲ ಸೈನ್ಯಸಮೇತ ಬಂದು ಜೆರುಸಲೇಮನ್ನು ಮುತ್ತಿದನು. 2ಚಿದ್ಕೀಯನ ಹನ್ನೊಂದನೆಯ ವರ್ಷದ ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿನದಲ್ಲಿ ನಗರದ ಪೌಳಿಗೋಡೆ ಒಡಕುಬಿದ್ದು ಜೆರುಸಲೇಮ್ ಶತ್ರುವಶವಾಯಿತು.
3ನೇರ್ಗಲ್‍ಸರೆಚರ್, ಸಮ್ಗರ್‍ನೆಬೊ, ಕಂಚುಕಿಯರ ಮುಖ್ಯಸ್ಥನಾದ ಸರ್ಸೆಕೀಮ್, ಜೋಯಿಸರ ಮುಖ್ಯಸ್ಥ ನೇರ್ಗಲ್‍ಸರೆಚರ್, ಹೀಗೆ ಬಾಬಿಲೋನಿಯದ ಅರಸನ ಎಲ್ಲ ಪದಾಧಿಕಾರಿಗಳು ಪುರಪ್ರವೇಶಮಾಡಿ ಮಧ್ಯಮದ್ವಾರದೊಳಗೆ ಕುಳಿತುಕೊಂಡರು
4ಇವರನ್ನು ನೋಡಿ, ಜುದೇಯದ ಅರಸ ಚಿದ್ಕೀಯನು ಮತ್ತು ಸಮಸ್ತ ಸೈನಿಕರು ಅದೇ ರಾತ್ರಿಯಲ್ಲಿ ಹೊರಟು, ಅರಸನ ಉದ್ಯಾನ ಮಾರ್ಗವಾಗಿ ಎರಡು ಗೋಡೆಗಳ ನಡುವಣ ಬಾಗಿಲಿನಿಂದ ನಗರವನ್ನು ಬಿಟ್ಟು, ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು. 5ಬಾಬಿಲೋನಿಯದ ಸೈನಿಕರು ಅವರನ್ನು ಹಿಂದಟ್ಟುತ್ತಾ ಜೆರಿಕೋವಿನ ಬೈಲಿನಲ್ಲಿ ಚಿದ್ಕೀಯನನ್ನು ಹಿಡಿದರು. ಹಮಾತ್ ನಾಡಿನ ರಿಬ್ಲದಲ್ಲಿದ್ದ ಬಾಬಿಲೋನಿಯದ ಅರಸ ನೆಬೂಕದ್ನೆಚ್ಚರನ ಬಳಿಗೆ ಅವನನ್ನು ತೆಗೆದುಕೊಂಡು ಬಂದರು. 6ಆ ಬಾಬಿಲೋನಿಯದ ಅರಸನು ಅಲ್ಲೆ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿದನು. ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಜುದೇಯದ ಸಮಸ್ತ ಶ್ರೀಮಂತರನ್ನೂ ಕೊಲ್ಲಿಸಿದನು. 7ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಬೇಡಿಹಾಕಿಸಿ, ಬಾಬಿಲೋನಿಗೆ ಸಾಗಿಸಿದನು. 8ಅರಮನೆಯನ್ನೂ ಪ್ರಜೆಗಳ ಮನೆಗಳನ್ನೂ ಬಾಬಿಲೋನಿಯದವರು ಬೆಂಕಿಯಿಂದ ಸುಟ್ಟು ಜೆರುಸಲೇಮಿನ ಸುತ್ತಣವಿದ್ದ ಗೋಡೆಗಳನ್ನು ಕೆಡವಿದರು. 9ರಕ್ಷಾದಳದ ನಾಯಕನಾದ ನೆಬೂಜರದಾನನು ನಗರದಲ್ಲಿ ಉಳಿದಿದ್ದವರನ್ನು ಹಾಗು ಮೊದಲೇ ತನ್ನನ್ನು ಮರೆಹೊಕ್ಕಿದವರನ್ನು ಮತ್ತಿತರ ಕೆಲಸಗಾರರನ್ನೆಲ್ಲಾ ಬಾಬಿಲೋನಿಗೆ ಸೆರೆ ಒಯ್ದನು. 10ಆದರೆ ಏನೂ ಇಲ್ಲದ ಬಡಜನರನ್ನು ಜುದೇಯದ ನಾಡಿನಲ್ಲೆ ಬಿಟ್ಟು ಅವರಿಗೆ ಹೊಲತೋಟಗಳನ್ನು ಕೊಟ್ಟನು.
ಯೆರೆಮೀಯನ ಬಿಡುಗಡೆ
11ಬಾಬಿಲೋನಿನ ಅರಸ ನೆಬೂಕದ್ನೆಚ್ಚರನು ಯೆರೆಮೀಯನ ವಿಷಯವಾಗಿ ರಕ್ಷಾದಳದ ನಾಯಕ ನೆಬೂಜರದಾನನಿಗೆ, 12“ಇವನನ್ನು ಕರೆದುಕೊಂಡುಹೋಗಿ ಚೆನ್ನಾಗಿ ನೋಡಿಕೊ. ಯಾವ ಹಾನಿಯನ್ನು ಮಾಡಕೂಡದು. ಬೇಡುವುದನ್ನೆಲ್ಲ ಕೊಡು,” ಎಂದು ಆಜ್ಞಾಪಿಸಿದನು. 13ಅಂತೆಯೇ ನೆಬೂಜರದಾನನು ಹಾಗು ಕಂಚುಕಿಯರ ಮುಖ್ಯಸ್ಥ ನೆಬೂಷಜ್ಬಾನ್, ಜೋಯಿಸರ ಮುಖ್ಯಸ್ಥ ನೇರ್ಗಲ್‍ಸರೆಚರ್ ಮತ್ತು ಬಾಬಿಲೋನಿಯರ ಅರಸನ ಎಲ್ಲ ಪದಾಧಿಕಾರಿಗಳು ಸೇರಿ ಯೆರೆಮೀಯನನ್ನು ಕಾರಾಗೃಹದಿಂದ ಕರೆತರಿಸಿದರು. 14ಅಹೀಕಾಮನ ಮಗನೂ ಶಾಫಾನನ ಮೊಮ್ಮಗನೂ ಆದ ಗೆದಲ್ಯನ ವಶಕ್ಕೆ ಅವನನ್ನು ಒಪ್ಪಿಸಿ ಮನೆಗೆ ಕರೆದುಕೊಂಡುಹೋಗುವಂತೆ ಹೇಳಿದರು. ಅಂದಿನಿಂದ ಯೆರೆಮೀಯನು ವಾಡಿಕೆಯ ಪ್ರಕಾರ ಜನರ ನಡುವೆ ವಾಸಮಾಡಿದನು.
ಎಬೆದ್ಮೆಲೆಕನಿಗೆ ಕೊಟ್ಟ ವಾಗ್ದಾನ
15ಯೆರೆಮೀಯನು ಇನ್ನೂ ಕಾರಾಗೃಹದ ಅಂಗಳದಲ್ಲಿ ಸೆರೆಯಾಗಿದ್ದಾಗ ಸರ್ವೇಶ್ವರನ ಈ ವಾಣಿ ಕೇಳಿಸಿತು: 16ನೀನು ಹೋಗಿ ಸುಡಾನಿನ ಎಬೆದ್ಮೆಲೆಕನಿಗೆ ಹೀಗೆ ತಿಳಿಸು: “ಈ ಇಸ್ರಯೇಲರ ದೇವರೂ ಸೇನಾಧೀಶ್ವರನೂ ಆದ ಸರ್ವೇಶ್ವರ ಹೀಗೆನ್ನುತ್ತಾರೆ - ನಾನು ನುಡಿದ ಮೇಲನ್ನು ಅಲ್ಲ, ಕೇಡನ್ನೇ ಈ ನಗರದ ಮೇಲೆ ಬರಮಾಡುವೆನು. ಅದು ನಿನ್ನ ಕಣ್ಣೆದುರಿಗೇ ಆ ದಿನದಂದು ನಡೆಯುವುದು. 17ಆದರೆ ಆ ದಿನದಲ್ಲಿ ನಿನ್ನನ್ನು ನಾನು ಉದ್ಧರಿಸುವೆನು. ಇದು ಸರ್ವೇಶ್ವರನಾದ ನನ್ನ ನುಡಿ. ನೀನು ಯಾರಿಗಾಗಿ ಭಯಪಡುತ್ತಿಯೋ ಅವರ ಕೈಗೆ ಸಿಕ್ಕುವುದಿಲ್ಲ. 18ನೀನು ನನ್ನಲ್ಲಿ ಭರವಸೆಯಿಟ್ಟ ಕಾರಣ ನಿನ್ನನ್ನು ರಕ್ಷಿಸಿಯೇ ರಕ್ಷಿಸುವೆನು. ನೀನು ಕತ್ತಿಗೆ ತುತ್ತಾಗಲಾರೆ. ಅದರ ಬಾಯಿಂದ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ. ಇದು ಸರ್ವೇಶ್ವರನಾದ ನನ್ನ ವಾಣಿ.”
ಪ್ರಸ್ತುತ ಆಯ್ಕೆ ಮಾಡಲಾಗಿದೆ:
ಯೆರೆಮೀಯ 39: KANCLBSI
Highlight
ಹಂಚಿಕೊಳ್ಳಿ
ಕಾಪಿ

Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.