ಯೋಹಾನ 16

16
1ನೀವು ಧೈರ್ಯಗೆಟ್ಟು ಹಿಂಜರಿಯಬಾರದೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. 2ನಿಮಗೆ ಬಹಿಷ್ಕಾರ ಹಾಕುವರು; ಅದಲ್ಲದೆ ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಯಜ್ಞವನ್ನು ಮಾಡಿದ್ದೇನೆಂದು ನೆನಸುವ ಕಾಲ ಬರುತ್ತದೆ. 3ಅವರು ತಂದೆಯನ್ನಾದರೂ ನನ್ನನ್ನಾದರೂ ತಿಳಿಯದವರಾಗಿರುವದರಿಂದ ಇಂಥದನ್ನು ನಿಮಗೆ ಮಾಡುವರು. 4ಆ ಕಾಲ ಬಂದಾಗ ಆತನು ನಮಗೆ ಇಂಥಿಂಥದನ್ನು ಹೇಳಿದನಲ್ಲಾ ಎಂದು ನೀವು ನೆನಪಿಗೆ ತರುವಂತೆ ನಿಮ್ಮ ಸಂಗಡ ಈ ಮಾತುಗಳನ್ನು ಆಡಿದ್ದೇನೆ.
ನಾನು ನಿಮ್ಮ ಸಂಗಡ ಇದ್ದದರಿಂದ ಮೊದಲು ಇವುಗಳನ್ನು ನಿಮಗೆ ಹೇಳಲಿಲ್ಲ. 5ಆದರೆ ಈಗ ನಾನು ನನ್ನನ್ನು ಕಳುಹಿಸಿಕೊಟ್ಟಾತನ ಬಳಿಗೆ ಹೋಗುತ್ತೇನೆ. ನೀನು ಎಲ್ಲಿಗೆ ಹೋಗುತ್ತೀ ಎಂದು ನಿಮ್ಮಲ್ಲಿ ಒಬ್ಬನಾದರೂ ನನ್ನನ್ನು ಕೇಳುವದಿಲ್ಲ; 6ಆದರೆ ನಾನು ಈ ಮಾತುಗಳನ್ನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖದಿಂದ ತುಂಬಿಯದೆ. 7ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಕೇಳಿರಿ; ನಾನು ಹೋಗುವದು ನಿಮಗೆ ಹಿತಕರವಾಗಿದೆ; ಹೇಗಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವದಿಲ್ಲ; ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿಕೊಡುತ್ತೇನೆ. 8ಆತನು ಬಂದು ಪಾಪ ನೀತಿ ನ್ಯಾಯತೀರ್ವಿಕೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು. 9ಅವರು ನನ್ನನ್ನು ನಂಬದೆ ಇರುವದರಿಂದ ಪಾಪದ ವಿಷಯದಲ್ಲಿಯೂ 10ನಾನು ತಂದೆಯ ಬಳಿಗೆ ಹೋಗಿ ಇನ್ನು ಮೇಲೆ ನಿಮಗೆ ಕಾಣಿಸದೆ ಇರುವದರಿಂದ ನೀತಿಯ ವಿಷಯದಲ್ಲಿಯೂ 11ಇಹಲೋಕಾಧಿಪತಿಗೆ ನ್ಯಾಯತೀರ್ವಿಕೆಯಾದದರಿಂದ ನ್ಯಾಯತೀರ್ವಿಕೆಯ ವಿಷಯದಲ್ಲಿಯೂ ಲೋಕಕ್ಕೆ ಅರುಹನ್ನು ಹುಟ್ಟಿಸುವನು.
12ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ. 13ಸತ್ಯದ ಆತ್ಮನು ಬಂದಾಗ ಆತನು ನಿಮ್ಮನ್ನು ನಡಿಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆ ಕೇಳಿದ ಮಾತುಗಳನ್ನೇ ಆಡುವನು; ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು. 14ಆತನು ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಸುತ್ತಾ ನನ್ನನ್ನೇ ಮಹಿಮೆಪಡಿಸುವನು. 15ತಂದೆಗೆ ಇರುವದೆಲ್ಲಾ ನನ್ನದು; ಆದದರಿಂದಲೇ ನನ್ನದರೊಳಗಿಂದ ತೆಗೆದುಕೊಂಡು ನಿಮಗೆ ತಿಳಿಸುವನೆಂದು ಹೇಳಿದೆನು. 16ಸ್ವಲ್ಪಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ; ಅನಂತರ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಅಂದನು.
17ಇದನ್ನು ಕೇಳಿ ಶಿಷ್ಯರಲ್ಲಿ ಕೆಲವರು - ಇದೇನು ಈತನು ಹೇಳುವ ಮಾತು? ಸ್ವಲ್ಪಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ, ಅನಂತರ ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಅನ್ನುತ್ತಾನೆ; ಮತ್ತು ನಾನು ತಂದೆಯ ಬಳಿಗೆ ಹೋಗುವದರಿಂದ ಅನ್ನುತ್ತಾನೆ ಎಂದು ತಮ್ಮತಮ್ಮೊಳಗೆ ಮಾತಾಡಿಕೊಂಡು - 18ಸ್ವಲ್ಪಕಾಲವೆಂದು ಈತನು ಹೇಳುವ ಈ ಮಾತೇನು? ಏನು ಮಾತಾಡುತ್ತಾನೋ ನಮಗೆ ತಿಳಿಯದು ಅಂದುಕೊಳ್ಳುತ್ತಿದ್ದರು. 19ಯೇಸು ತನ್ನನ್ನು ಕೇಳಬೇಕೆಂದಿದ್ದಾರೆಂದು ತಿಳಿದು ಅವರಿಗೆ - ಸ್ವಲ್ಪಕಾಲವಾದ ಮೇಲೆ ನಾನು ನಿಮಗೆ ಕಾಣುವದಿಲ್ಲ, ಇನ್ನು ಸ್ವಲ್ಪಕಾಲವಾದ ಮೇಲೆ ನನ್ನನ್ನು ನೋಡುವಿರಿ ಎಂದು ನಾನು ಹೇಳಿದ್ದಕ್ಕೆ ನೀವು ನಿಮ್ಮನಿಮ್ಮೊಳಗೆ ವಿಚಾರಿಸಿಕೊಳ್ಳುತ್ತೀರಾ? 20ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ಅಳುತ್ತಾ ಗೋಳಾಡುತ್ತಾ ಇರುವಿರಿ, ಆದರೆ ಲೋಕವು ಸಂತೋಷಿಸುವದು; ನಿಮಗೆ ದುಃಖವಾಗುವದು, ಆದರೆ ನಿಮ್ಮ ದುಃಖವು ಹೋಗಿ ಆನಂದ ಬರುವದು. 21ಒಬ್ಬ ಸ್ತ್ರೀ ಹೆರುವಾಗ ತನ್ನ ಬೇನೆಯ ಕಾಲ ಬಂತೆಂದು ಆಕೆಗೆ ದುಃಖವಾಗುತ್ತದೆ; ಆದರೆ ಕೂಸನ್ನು ಹೆತ್ತ ಮೇಲೆ ಲೋಕದಲ್ಲಿ ಒಬ್ಬ ಮನುಷ್ಯನು ಹುಟ್ಟಿದನೆಂಬ ಆನಂದದಿಂದ ಆ ಬೇನೆಯನ್ನು ನೆನಸುವದಿಲ್ಲ. 22ಹಾಗೆಯೇ ನಿಮಗೂ ಈಗ ದುಃಖವಿದ್ದರೂ ನಾನು ನಿಮ್ಮನ್ನು ತಿರಿಗಿ ನೋಡುವೆನು, ಆಗ ನಿಮ್ಮ ಹೃದಯಕ್ಕೆ ಆನಂದವಾಗುವದು, ಮತ್ತು ನಿಮ್ಮ ಆನಂದವನ್ನು ಯಾರೂ ನಿವ್ಮಿುಂದ ತೆಗೆಯುವದಿಲ್ಲ. 23ಆ ದಿನದಲ್ಲಿ ನೀವು ನನಗೆ ಯಾವ ಪ್ರಶ್ನೆಯನ್ನೂ ಮಾಡುವದಿಲ್ಲ.
ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನೀವು ತಂದೆಯನ್ನು ಏನಾದರೂ ಬೇಡಿಕೊಂಡರೆ ಅದನ್ನು ಆತನು ನನ್ನ ಹೆಸರಿನ ಮೇಲೆ ನಿಮಗೆ ಕೊಡುವನು. 24ನೀವು ಇದುವರೆಗೆ ನನ್ನ ಹೆಸರಿನ ಮೇಲೆ ಯಾವದೊಂದನ್ನೂ ಬೇಡಿಕೊಂಡಿಲ್ಲ; ಬೇಡಿಕೊಳ್ಳಿರಿ, ನಿಮಗೆ ಸಿಕ್ಕುವದು; ಆಗ ನಿಮ್ಮ ಆನಂದವು ಪರಿಪೂರ್ಣವಾಗುವದು.
25ಈ ಸಂಗತಿಗಳನ್ನು ಗೂಢಾರ್ಥವಾಗಿ ನಿಮಗೆ ಹೇಳಿದ್ದೇನೆ; ಆದರೆ ಇನ್ನು ಮೇಲೆ ಸಾಮ್ಯರೂಪವಾಗಿ ನಿಮ್ಮ ಸಂಗಡ ಮಾತಾಡದೆ ತಂದೆಯ ವಿಷಯದಲ್ಲಿ ಸ್ಪಷ್ಟವಾಗಿ ತಿಳಿಸುವ ಕಾಲ ಬರುತ್ತದೆ. 26ಆ ದಿನದಲ್ಲಿ ನನ್ನ ಹೆಸರಿನ ಮೇಲೆ ಬೇಡಿಕೊಳ್ಳುವಿರಿ. ನಾನು ತಂದೆಯನ್ನು ನಿಮಗೋಸ್ಕರ ಕೇಳಿಕೊಳ್ಳುವೆನೆಂತ ನಿಮಗೆ ಹೇಳುವದಿಲ್ಲ; 27ನೀವು ನನ್ನ ಮೇಲೆ ಮಮತೆಯಿಟ್ಟು ನನ್ನನ್ನು ತಂದೆಯ ಬಳಿಯಿಂದ ಹೊರಟುಬಂದವನೆಂದು ನಂಬಿದ್ದರಿಂದ ತಂದೆಯು ತಾನೇ ನಿಮ್ಮ ಮೇಲೆ ಮಮತೆ ಇಡುತ್ತಾನಲ್ಲವೇ. 28ತಂದೆಯ ಬಳಿಯಿಂದ ಹೊರಟು ಈ ಲೋಕಕ್ಕೆ ಬಂದಿದ್ದೇನೆ; ಇನ್ನು ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುತ್ತೇನೆ ಅಂದನು.
29ಅದಕ್ಕೆ ಶಿಷ್ಯರು - ನೀನು ಹೇಳುವ ಸಂಗತಿಯನ್ನು ಈಗ ಗೂಢಾರ್ಥವಾಗಿ ಹೇಳದೆ ಸ್ಪಷ್ಟವಾಗಿ ಮಾತಾಡುತ್ತೀಯಲ್ಲಾ; 30ನೀನು ಸಮಸ್ತವನ್ನು ತಿಳಿದವನೆಂದೂ ನಿನಗೆ ಪ್ರಶ್ನೆಮಾಡಬೇಕಾದ ಅವಶ್ಯವಿಲ್ಲವೆಂದೂ ಈಗ ತಿಳಿಯಿತು; ಇದರಿಂದ ನಿನ್ನನ್ನು ದೇವರ ಬಳಿಯಿಂದ ಬಂದವನೆಂದು ನಂಬುತ್ತೇವೆ ಅಂದದ್ದಕ್ಕೆ 31ಯೇಸು - ಈಗ ನಂಬುತ್ತೀರೋ? 32ನೋಡಿರಿ, ನಿಮ್ಮಲ್ಲಿ ಒಬ್ಬೊಬ್ಬನು ತನ್ನತನ್ನ ಸ್ಥಳಕ್ಕೆ ಚದರಿಹೋಗಿ ನನ್ನನ್ನು ಒಂಟಿಗನಾಗಿ ಬಿಡುವ ಕಾಲ ಬರುವದು, ಈಗ ಬಂದಿದೆ. ಆದರೆ ನಾನು ಒಂಟಿಗನಲ್ಲ, ತಂದೆಯು ನನ್ನ ಸಂಗಡ ಇದ್ದಾನೆ. 33ನೀವು ನನ್ನಲ್ಲಿದ್ದು ಮನಶ್ಶಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ ಎಂದು ಹೇಳಿದನು.

ទើបបានជ្រើសរើសហើយ៖

ಯೋಹಾನ 16: KANJV-BSI

គំនូស​ចំណាំ

ចែក​រំលែក

ចម្លង

None

ចង់ឱ្យគំនូសពណ៌ដែលបានរក្សាទុករបស់អ្នក មាននៅលើគ្រប់ឧបករណ៍ទាំងអស់មែនទេ? ចុះឈ្មោះប្រើ ឬចុះឈ្មោះចូល