ಯೊವಾನ್ನ 8

8
ವ್ಯಭಿಚಾರಿಣಿಗೂ ಕ್ಷಮಾಪಣೆ
1(ಯೇಸು ಸ್ವಾಮಿ ಓಲಿವ್ ಗುಡ್ಡಕ್ಕೆ ಹೋದರು. 2ಮರುದಿನ ಮುಂಜಾನೆ ಅವರು ಮತ್ತೆ ಮಹಾದೇವಾಲಯಕ್ಕೆ ಬಂದರು. ಜನರು ಸುತ್ತಲೂ ಬಂದು ನೆರೆಯಲು ಯೇಸು ಕುಳಿತುಕೊಂಡು ಬೋಧಿಸತೊಡಗಿದರು.
3ಆಗ ಧರ್ಮಶಾಸ್ತ್ರಿಗಳೂ ಫರಿಸಾಯರೂ ಒಬ್ಬ ಹೆಂಗಸನ್ನು ಅಲ್ಲಿಗೆ ಕರೆತಂದರು; ಅವಳು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದಳು. 4ಅವಳನ್ನು ಎಲ್ಲರ ಮುಂದೆ ನಿಲ್ಲಿಸಿ, “ಬೋಧಕರೇ, ಈ ಹೆಂಗಸು ವ್ಯಭಿಚಾರಮಾಡುತ್ತಿದ್ದಾಗಲೇ ಸಿಕ್ಕಿಬಿದ್ದಳು. 5ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದಾನೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?” ಎಂದು ಪ್ರಶ್ನಿಸಿದರು. 6ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ಅವರ ಮೇಲೆ ತಪ್ಪುಹೊರಿಸಬೇಕೆಂಬುದೇ ಅವರ ಉದ್ದೇಶವಾಗಿತ್ತು. ಯೇಸುವಾದರೋ ಬಗ್ಗಿಕೊಂಡು ಬೆರಳಿನಿಂದ ಮರಳ ಮೇಲೆ ಏನನ್ನೋ ಬರೆಯುತ್ತಾ ಕುಳಿತರು. ಬಂದವರಾದರೋ ಮೇಲಿಂದ ಮೇಲೆ ಪ್ರಶ್ನೆಹಾಕುತ್ತಲೇ ಇದ್ದರು. 7ಆಗ ಯೇಸು ನೆಟ್ಟಗೆ ಕುಳಿತು, “ನಿಮ್ಮಲ್ಲಿ ಪಾಪಮಾಡದವನು ಯಾವನೋ ಅಂಥವನು ಇವಳ ಮೇಲೆ ಮೊದಲನೆಯ ಕಲ್ಲು ಬೀರಲಿ,” ಎಂದು ಹೇಳಿ, 8ಪುನಃ ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. 9ಇದನ್ನು ಕೇಳಿದ್ದೇ ಹಿರಿಯರಿಂದ ಹಿಡಿದು ಅವರೆಲ್ಲರೂ ಒಬ್ಬೊಬ್ಬರಾಗಿ ಅಲ್ಲಿಂದ ಕಾಲುಕಿತ್ತರು. ಕೊನೆಗೆ ಅಲ್ಲಿ ಉಳಿದವರೆಂದರೆ, ಯೇಸು ಮತ್ತು ನಿಂತುಕೊಂಡಿದ್ದ ಆ ಹೆಂಗಸು. 10ಆಗ ಯೇಸು ತಲೆಯೆತ್ತಿ, “ತಾಯೀ, ಅವರೆಲ್ಲಾ ಎಲ್ಲಿ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೆ?” ಎಂದು ಕೇಳಿದರು. 11ಅವಳು, “ಇಲ್ಲ, ಸ್ವಾಮೀ,” ಎಂದಳು. ಯೇಸು ಅವಳಿಗೆ, “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪಮಾಡಬೇಡ,” ಎಂದರು).
ಲೋಕಕ್ಕೆ ಬೆಳಕು
12ಬಳಿಕ ಯೇಸು ಸ್ವಾಮಿ ಜನರನ್ನು ಮತ್ತೊಮ್ಮೆ ಕಂಡು ಹೀಗೆಂದರು: “ನಾನೇ ಜಗಜ್ಯೋತಿ, ನನ್ನನ್ನು ಹಿಂಬಾಲಿಸುವವನು ಕತ್ತಲಲ್ಲಿ ನಡೆಯುವುದಿಲ್ಲ. ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.” 13ಅದಕ್ಕೆ ಫರಿಸಾಯರು, “ಈಗ ನೀನು ನಿನ್ನ ಪರವಾಗಿಯೇ ಸಾಕ್ಷಿ ನೀಡುತ್ತಿರುವೆ. ಅಂಥ ಸಾಕ್ಷಿಗೆ ಬೆಲೆಯಿಲ್ಲ,” ಎಂದರು. 14ಅದಕ್ಕೆ ಯೇಸು, ‘ನಾನೇ ನನ್ನ ಪರವಾಗಿ ಸಾಕ್ಷಿ ನೀಡಿದರೂ ನನ್ನ ಸಾಕ್ಷಿಗೆ ಬೆಲೆಯುಂಟು. ಏಕೆಂದರೆ, ನಾನು ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತಿರುವೆ, ಎಂದು ನನಗೆ ತಿಳಿದಿದೆ. ನಿಮಗಾದರೋ ನಾನು ‘ಬಂದುದು ಎಲ್ಲಿಂದ, ಹೋಗುವುದು ಎಲ್ಲಿಗೆ’ ಎಂದು ತಿಳಿಯದು. 15ನೀವು ತೀರ್ಪುಕೊಡುವುದು ಲೋಕದ ದೃಷ್ಟಿಯಿಂದ, ನಾನಾದರೋ ಯಾರ ಬಗ್ಗೆಯೂ ತೀರ್ಪುಕೊಡಲು ಹೋಗುವುದಿಲ್ಲ. 16ನಾನು ತೀರ್ಪುಕೊಟ್ಟರೂ ಅದು ಯಥಾರ್ಥವಾದುದು. ಕಾರಣ, ತೀರ್ಪುಕೊಡುವವನು ನಾನೊಬ್ಬನೇ ಅಲ್ಲ; ನನ್ನನ್ನು ಕಳುಹಿಸಿದ ಪಿತ ಸಹ ನನ್ನೊಡನೆ ಇದ್ದಾರೆ. 17ಇಬ್ಬರ ಸಾಕ್ಷ್ಯ ಒಂದೇ ಆಗಿದ್ದರೆ ಅದು ಸತ್ಯವೆಂದು ನಿಮ್ಮ ಧರ್ಮಶಾಸ್ತ್ರದಲ್ಲಿಯೇ ಬರೆದಿದೆ. 18ನಾನು ನನ್ನ ಪರವಾಗಿ ಸಾಕ್ಷಿ ಹೇಳುತ್ತೇನೆ; ನನ್ನನ್ನು ಕಳುಹಿಸಿದ ಪಿತ ಸಹ ನನ್ನ ಪರವಾಗಿ ಸಾಕ್ಷಿ ಹೇಳುತ್ತಾರೆ,” ಎಂದು ನುಡಿದರು. 19ಅದಕ್ಕೆ ಅವರು, “ನಿನ್ನ ಪಿತನೆಲ್ಲಿ?” ಎಂದು ಕೇಳಿದರು. ಯೇಸು, “ನೀವು ನನ್ನನ್ನು ಅರಿತಿಲ್ಲ, ನನ್ನ ಪಿತನನ್ನೂ ಅರಿತಿಲ್ಲ. ನೀವು ನನ್ನನ್ನು ಅರಿತಿದ್ದರೆ, ನನ್ನ ಪಿತನನ್ನೂ ಅರಿಯುತ್ತಿದ್ದಿರಿ,” ಎಂದರು.
20ಮಹಾದೇವಾಲಯದೊಳಗೆ ಕಾಣಿಕೆ ಪೆಟ್ಟಿಗೆಗಳನ್ನಿಟ್ಟ ಕೋಣೆಯಲ್ಲಿ ಯೇಸು ಮಾತನಾಡುತ್ತಾ ಹೇಳಿದ ಮಾತುಗಳಿವು. ಅವರ ಗಳಿಗೆ ಇನ್ನೂ ಬಾರದಿದ್ದ ಕಾರಣ ಯಾರೂ ಅವರನ್ನು ಬಂಧಿಸಲಿಲ್ಲ.
ನಾನು ಹೋಗುವಲ್ಲಿಗೆ ನೀವು ಬರಲಾರಿರಿ
21ಯೇಸು ಸ್ವಾಮಿ ಪುನಃ ಅವರಿಗೆ, “ನಾನು ಹೊರಟುಹೋಗುತ್ತೇನೆ, ನೀವು ನನ್ನನ್ನು ಹುಡುಕುವಿರಿ. ಆದರೆ ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ,” ಎಂದರು. 22ಅದಕ್ಕೆ ಯೆಹೂದ್ಯರು, ‘ತಾನು ಹೋಗುವಲ್ಲಿಗೆ ನಮ್ಮಿಂದ ಬರಲಾಗದಂತೆ! ಹಾಗೆಂದರೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬುದು ಇವನ ಇಂಗಿತವೆ?’ ಎಂದು ಮಾತನಾಡಿಕೊಂಡರು. 23“ನೀವು ನರಲೋಕದವರು, ನಾನು ಪರಲೋಕದವನು. ನಿಮ್ಮಂತೆ ನಾನು ಇಹಲೋಕದವನಲ್ಲ. 24ನಿಮ್ಮ ಪಾಪಗಳಲ್ಲೇ ನೀವು ಸಾಯುವಿರೆಂದು ನಾನು ಹೇಳಿದುದು ಇದಕ್ಕಾಗಿಯೇ. ‘ಇರುವಾತನೇ ನಾನು’ ಎಂಬುದನ್ನು ನೀವು ವಿಶ್ವಾಸಿಸದೆಹೋದರೆ ನಿಮ್ಮ ಪಾಪಗಳಲ್ಲೇ ಸಾಯುವಿರಿ,” ಎಂದು ಯೇಸು ಅವರಿಗೆ ಹೇಳಿದರು. 25ಅವರು, “ನೀನು ಯಾರು?” ಎಂದು ಪ್ರಶ್ನಿಸಿದರು. 26ಯೇಸು, “ನಾನು ಯಾರೆಂದು ನಿಮಗೆ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇನೆ. ನಿಮ್ಮನ್ನು ಕುರಿತು ನಾನು ಎಷ್ಟೋ ಹೇಳಿಯೇನು; ಎಷ್ಟೋ ಖಂಡಿಸಿಯೇನು. ಆದರೆ ನನ್ನನ್ನು ಕಳುಹಿಸಿದಾತನು ಹೇಳಿದ್ದನ್ನೇ ಲೋಕಕ್ಕೆ ಸಾರುತ್ತೇನೆ. ಆತನು ಸತ್ಯಸ್ವರೂಪಿ,” ಎಂದು ಹೇಳಿದರು.
27ಯೇಸು ಸ್ವಾಮಿ ತಮ್ಮ ಪಿತನನ್ನು ಕುರಿತು ಹೀಗೆನ್ನುತ್ತಿದ್ದಾರೆಂದು ಅವರು ಅರಿತುಕೊಳ್ಳಲಿಲ್ಲ. 28ಎಂದೇ ಯೇಸು ಮತ್ತೆ ಇಂತೆಂದರು: “ನರಪುತ್ರನನ್ನು ನೀವು ಮೇಲಕ್ಕೇರಿಸಿದಾಗ, ‘ಇರುವಾತನೇ ನಾನು’ ಎಂದು ನಿಮಗೆ ತಿಳಿಯುವುದು. ನಾನಾಗಿಯೇ ಏನನ್ನೂ ಮಾಡುವುದಿಲ್ಲವೆಂದೂ ಪಿತನು ನನಗೆ ಬೋಧಿಸಿದಂತೆ ನಾನು ಮಾತನಾಡುತ್ತೇನೆಂದೂ ನಿಮಗೆ ಆಗ ಅರಿವಾಗುವುದು. 29ನನ್ನನ್ನು ಕಳುಹಿಸಿದಾತನು ನನ್ನೊಡನಿದ್ದಾನೆ. ಆತನು ಮೆಚ್ಚುವುದನ್ನೇ ನಾನು ಸತತವೂ ಮಾಡುವುದರಿಂದ ಆತನು ನನ್ನನ್ನು ಏಕಾಕಿಯಾಗಿ ಬಿಟ್ಟಿಲ್ಲ.” 30ಯೇಸು ಸ್ವಾಮಿ ಹೀಗೆ ಹೇಳಿದ್ದನ್ನು ಕೇಳಿ ಹಲವರಿಗೆ ಅವರಲ್ಲಿ ನಂಬಿಕೆ ಹುಟ್ಟಿತು.
ದಾಸ್ಯ ಮತ್ತು ಸ್ವಾತಂತ್ರ್ಯ
31ಯೇಸು ಸ್ವಾಮಿ ತಮ್ಮಲ್ಲಿ ನಂಬಿಕೆ ಇಟ್ಟಿದ್ದ ಯೆಹೂದ್ಯರಿಗೆ ಹೀಗೆಂದರು: “ನನ್ನ ಮಾತಿಗೆ ನೀವು ಶರಣಾದರೆ ನಿಜವಾಗಿಯೂ ನೀವು ನನ್ನ ಶಿಷ್ಯರು. 32ನೀವು ಸತ್ಯವನ್ನು ಅರಿತುಕೊಳ್ಳುವಿರಿ, ಸತ್ಯವು ನಿಮಗೆ ಸ್ವಾತಂತ್ರ್ಯ ನೀಡುವುದು. 33ಅದಕ್ಕೆ ಯೆಹೂದ್ಯರು, “ನಾವು ಅಬ್ರಹಾಮನ ವಂಶಜರು; ಯಾರಿಗೂ ಎಂದೂ ನಾವು ದಾಸರಾಗಿಲ್ಲ. ಅಂದಮೇಲೆ ನಾವು ಸ್ವತಂತ್ರರಾಗುತ್ತೇವೆ, ಎಂದು ನೀನು ಹೇಳುವುದಾದರೂ ಹೇಗೆ?” ಎಂದು ಪ್ರಶ್ನಿಸಿದರು. 34ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ ಕೇಳಿ: ಪಾಪವನ್ನು ಮಾಡುವವನು ಪಾಪಕ್ಕೆ ದಾಸನೇ. 35ದಾಸನಾದವನು ಶಾಶ್ವತವಾಗಿ ಮನೆಯಲ್ಲಿ ಇರುವಂತಿಲ್ಲ. ಶಾಶ್ವತವಾಗಿ ಇರುವವನು ಪುತ್ರನೇ. 36ಪುತ್ರನು ನಿಮಗೆ ಸ್ವಾತಂತ್ರ್ಯ ನೀಡಿದರೆ, ನೀವು ನಿಜವಾಗಿಯೂ ಸ್ವತಂತ್ರರು. 37ನೀವು ಅಬ್ರಹಾಮನ ವಂಶಜರೆಂದು ನಾನು ಬಲ್ಲೆ. ಆದರೆ ನನ್ನ ಮಾತು ಹಿಡಿಸದ ಕಾರಣ ನನ್ನನ್ನು ಕೊಲ್ಲಲು ಹವಣಿಸುತ್ತೀರಿ. 38ನಾನಾಡುವ ಮಾತುಗಳು ಪಿತನ ಸನ್ನಿಧಿಯಲ್ಲಿ ನಾನು ಕಂಡದ್ದನ್ನೇ ನಿರೂಪಿಸುತ್ತವೆ. ನೀವು ಮಾಡುವ ಕಾರ್ಯಗಳೋ ನಿಮ್ಮ ತಂದೆಯಿಂದ ನೀವು ಕಲಿತದ್ದನ್ನೇ ವ್ಯಕ್ತಪಡಿಸುತ್ತವೆ,” ಎಂದರು. 39ಆಗ ಆ ಯೆಹೂದ್ಯರು, ಅಬ್ರಹಾಮನೇ ನಮ್ಮ ತಂದೆ,” ಎಂದು ಮರುನುಡಿದರು. ಯೇಸು, “ಅಬ್ರಹಾಮನ ಮಕ್ಕಳು ನೀವಾಗಿದ್ದರೆ ಅಬ್ರಹಾಮನು ಮಾಡಿದಂತೆ ನೀವು ಮಾಡುತ್ತಿದ್ದಿರಿ. 40ಅದಕ್ಕೆ ಬದಲಾಗಿ ದೇವರಿಂದಲೇ ತಿಳಿದ ಸತ್ಯವನ್ನು ನಿಮಗೆ ಹೇಳುತ್ತಿರುವ ನನ್ನನ್ನು ಕೊಲ್ಲಲು ಹವಣಿಸುತ್ತಿದ್ದೀರಿ. ಅಬ್ರಹಾಮನು ಹಾಗೇನೂ ಮಾಡಲಿಲ್ಲ. 41ನೀವಾದರೋ ನಿಮಗೆ ತಂದೆಯಾದವನು ಮಾಡಿದಂತೆ ಮಾಡುತ್ತೀರಿ,” ಎಂದರು. ಅದಕ್ಕೆ ಅವರು, “ನಾವೇನು ಹಾದರಕ್ಕೆ ಹುಟ್ಟಿದವರಲ್ಲ, ದೇವರೇ ನಮ್ಮ ತಂದೆ,” ಎಂದು ಪ್ರತಿಭಟಿಸಿದರು. 42ಯೇಸು, ಅವರಿಗೆ, “ದೇವರೇ ನಿಮ್ಮ ತಂದೆಯಾಗಿದ್ದರೆ, ನನ್ನ ಮೇಲೆ ನಿಮಗೆ ಪ್ರೀತಿಯಿರುತ್ತಿತ್ತು. ಕಾರಣ, ನಾನು ದೇವರಿಂದಲೇ ಹೊರಟು ಇಲ್ಲಿಗೆ ಬಂದವನು. ನನ್ನಷ್ಟಕ್ಕೆ ನಾನೇ ಬರಲಿಲ್ಲ. ನನ್ನನ್ನು ಕಳುಹಿಸಿದ್ದು ದೇವರೇ. 43ನಾನು ಹೇಳುವುದು ನಿಮಗೆ ಅರ್ಥವಾಗುವುದಿಲ್ಲ, ಏಕೆ? ನನ್ನ ಸಂದೇಶಕ್ಕೆ ಕಿವಿಗೊಡಲು ನಿಮ್ಮಿಂದಾಗದಿರುವುದೇ ಇದಕ್ಕೆ ಕಾರಣ. 44ಸೈತಾನನೇ ನಿಮಗೆ ತಂದೆ; ಆ ನಿಮ್ಮ ತಂದೆ ಮಾಡಬಯಸುವುದನ್ನು ನೀವು ಮಾಡಬಯಸುತ್ತೀರಿ; ಮೊತ್ತ ಮೊದಲಿನಿಂದಲೂ ಅವನು ಕೊಲೆಪಾತಕ. ಸತ್ಯವೆಂಬುದೇ ಅವನಲ್ಲಿ ಇಲ್ಲದ ಕಾರಣ ಅವನು ಸತ್ಯಪರನಲ್ಲ. ಸುಳ್ಳಾಡುವಾಗ ಅವನು ತನಗೆ ಸಹಜವಾದುದನ್ನೇ ಆಡುತ್ತಾನೆ. ಅವನು ಸುಳ್ಳುಗಾರ. ಸುಳ್ಳಿನ ಮೂಲಪುರುಷನೇ ಅವನು. 45ನಾನು ನುಡಿಯುವುದಾದರೋ ಸತ್ಯವನ್ನೇ. ಆದುದರಿಂದಲೇ ನಿಮಗೆ ನನ್ನಲ್ಲಿ ನಂಬಿಕೆ ಇಲ್ಲ. 46ನನ್ನಲ್ಲಿ ತಪ್ಪಿದೆಯೆಂದು ಸಮರ್ಥಿಸಬಲ್ಲವರು ನಿಮ್ಮಲ್ಲಿ ಯಾರಿದ್ದಾರೆ? ನಾನು ಸತ್ಯವನ್ನೇ ಆಡುವುದಾದರೆ ನನ್ನನ್ನು ನೀವು ನಂಬುವುದಿಲ್ಲವೇಕೆ? 47ದೇವರ ಮಕ್ಕಳು ದೇವರ ಮಾತಿಗೆ ಕಿವಿಗೊಡುತ್ತಾರೆ. ನೀವೋ ದೇವರ ಮಕ್ಕಳಲ್ಲ, ಆದುದರಿಂದಲೇ ಕಿವಿಗೊಡುವುದಿಲ್ಲ,” ಎಂದು ನುಡಿದರು.
ಯೇಸು ಮತ್ತು ಅಬ್ರಹಾಮ
48ಆಗ ಯೆಹೂದ್ಯರಲ್ಲಿ ಕೆಲವರು ಯೇಸು ಸ್ವಾಮಿಗೆ, “ನೀನು ಸಮಾರಿಯದವನು. ದೆವ್ವಹಿಡಿದವನು, ಎಂದು ನಾವು ಹೇಳಿದ್ದು ಸರಿಯಾಗಿದೆ ಅಲ್ಲವೆ?” ಎಂದರು. 49ಅದಕ್ಕೆ ಯೇಸು, “ನಾನು ದೆವ್ವಹಿಡಿದವನಲ್ಲ, ನನ್ನ ಪಿತನನ್ನು ನಾನು ಗೌರವಿಸುತ್ತೇನೆ. ನೀವಾದರೋ ನನ್ನನ್ನು ಅವಮಾನಪಡಿಸುತ್ತೀರಿ. 50ನನ್ನ ಘನತೆಗೌರವವನ್ನು ನಾನು ಅಪೇಕ್ಷಿಸುವುದಿಲ್ಲ. ಅದನ್ನು ಅಪೇಕ್ಷಿಸುವವರು ಬೇರೊಬ್ಬರಿದ್ದಾರೆ. ನನ್ನ ಪರವಾಗಿ ತೀರ್ಮಾನ ಮಾಡುವುದೂ ಅವರೇ. 51ನನ್ನ ಮಾತಿಗೆ ಶರಣಾಗಿ ನಡೆಯುವವನು ನಿತ್ಯಮರಣಕ್ಕೆ ತುತ್ತಾಗನು, ಎಂದು ಸತ್ಯವಾಗಿ ನಿಮಗೆ ಹೇಳುತ್ತೇನೆ,” ಎಂದರು. 52“ನೀನು ದೆವ್ವಹಿಡಿದವನೆಂದು ಈಗ ನಮಗೆ ಸ್ಪಷ್ಟವಾಯಿತು. ಅಬ್ರಹಾಮನು ಸತ್ತುಹೋದನು; ಪ್ರವಾದಿಗಳೂ ಸತ್ತುಹೋದರು. ಆದರೂ ನೀನು, ‘ನನ್ನ ಮಾತಿಗೆ ಶರಣಾಗಿ ನಡೆಯುವವನು ಎಂದೆಂದಿಗೂ ಸಾವಿಗೆ ತುತ್ತಾಗನು,’ ಎಂದು ಹೇಳುತ್ತಿರುವೆ; 53ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ಶ್ರೇಷ್ಠನೋ? ಆತನೂ ಸಾವಿಗೀಡಾದನು. ಪ್ರವಾದಿಗಳೂ ಸಾವಿಗೆ ಈಡಾಗಿರುವರು; ನೀನು ಯಾರೆಂದು ನಿನ್ನ ಎಣಿಕೆ?” ಎಂದು ಆ ಯೆಹೂದ್ಯ ಅಧಿಕಾರಿಗಳು ಕೇಳಿದರು. 54ಯೇಸು ಪ್ರತ್ಯುತ್ತರವಾಗಿ, “ನನ್ನ ಘನತೆಗೌರವವನ್ನು ನಾನೇ ಸಾರ ಹೊರಟರೆ ಅದಕ್ಕೆ ಬೆಲೆಯಿರದು. ನನ್ನ ಘನತೆಗೌರವವನ್ನು ಸಾರುವವರಾದರೋ ನನ್ನ ಪಿತನು. ಆ ಪಿತನನ್ನು ಕುರಿತೇ ‘ಅವರು ನಮ್ಮ ದೇವರು’ ಎಂದು ನೀವು ಹೇಳಿಕೊಳ್ಳುತ್ತೀರಿ. 55ಆದರೆ ಅವರ ಅರಿವು ನಿಮಗಿಲ್ಲ; ನನಗಿದೆ. ಅವರ ಅರಿವು ನನಗಿಲ್ಲವೆಂದು ನಾನು ಹೇಳಿದೆಯಾದರೆ ನಿಮ್ಮಂತೆ ನಾನೂ ಸುಳ್ಳುಗಾರನಾಗುತ್ತೇನೆ. ಅವರ ಅರಿವು ನನಗಿದೆ. ಅವರ ಮಾತನ್ನು ನಾನು ಪಾಲಿಸುತ್ತೇನೆ. 56ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ತಾನು ಕಾಣುವನೆಂದು ಹಿಗ್ಗಿದನು. ಆತನು ಅದನ್ನು ಕಂಡೂ ಆಯಿತು; ಹಿಗ್ಗಿಯೂ ಆಯಿತು,” ಎಂದು ಉತ್ತರಕೊಟ್ಟರು. 57ಯೆಹೂದ್ಯರು, “ನಿನಗಿನ್ನೂ ಐವತ್ತು ವರ್ಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯಾ?” ಎಂದರು. 58ಯೇಸು ಅವರಿಗೆ, “ಅಬ್ರಹಾಮನು ಹುಟ್ಟುವುದಕ್ಕೆ ಮೊದಲಿನಿಂದಲೂ ನಾನಿದ್ದೇನೆ,” ಎಂದು ಮರುನುಡಿದರು. 59ಇದನ್ನು ಕೇಳಿದ್ದೇ ಆ ಯೆಹೂದ್ಯರು ಯೇಸುವಿನತ್ತ ಬೀರಲು ಕಲ್ಲುಗಳನ್ನು ಎತ್ತಿಕೊಂಡರು. ಯೇಸುವಾದರೋ ಮರೆಯಾಗಿ ಮಹಾದೇವಾಲಯದಿಂದ ಹೊರಟುಹೋದರು.

ハイライト

シェア

コピー

None

すべてのデバイスで、ハイライト箇所を保存したいですか? サインアップまたはサインインしてください。