ಯೋಹಾನನ ಸುವಾರ್ತೆ 17
17
ಶಿಷ್ಯರಿಗೋಸ್ಕರ ಯೇಸುವಿನ ಪ್ರಾರ್ಥನೆ
1ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಪರಲೋಕದ ಕಡೆಗೆ ನೋಡಿ ಹೀಗೆ ಪ್ರಾರ್ಥಿಸಿದನು: “ತಂದೆಯೇ, ಸಮಯವು ಬಂದಿದೆ. ನಿನ್ನ ಮಗನನ್ನು ಮಹಿಮೆಪಡಿಸು. ಆಗ ಮಗನು ನಿನ್ನನ್ನು ಮಹಿಮೆಪಡಿಸಬಲ್ಲನು. 2ನೀನು ಮಗನಿಗೆ ಯಾರ್ಯಾರನ್ನು ಕೊಟ್ಟೆಯೋ ಅವರೆಲ್ಲರಿಗೂ ಮಗನು ನಿತ್ಯಜೀವವನ್ನು ಕೊಡಬೇಕೆಂದು ನೀನು ಮಗನಿಗೆ ಅಧಿಕಾರವನ್ನು ಕೊಟ್ಟಿರುವೆ. 3ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನು ಮತ್ತು ನೀನು ಕಳುಹಿಸಿದ ಯೇಸು ಕ್ರಿಸ್ತನನ್ನು ತಿಳಿದುಕೊಳ್ಳುವುದೇ ನಿತ್ಯಜೀವ. 4ನೀನು ನನಗೆ ಕೊಟ್ಟ ಕೆಲಸವನ್ನು ನಾನು ಮಾಡಿ ಪೂರೈಸಿದ್ದೇನೆ. ನಾನು ಭೂಲೋಕದಲ್ಲಿ ನಿನ್ನನ್ನು ಮಹಿಮೆ ಪಡಿಸಿದೆನು. 5ಈಗ, ತಂದೆಯೇ, ನೀನು ನಿನ್ನ ಸನ್ನಿಧಿಯಲ್ಲಿ ನನ್ನನ್ನು ಮಹಿಮೆಪಡಿಸು. ಈ ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲು ನಾನು ನಿನ್ನೊಂದಿಗೆ ಹೊಂದಿದ್ದ ಮಹಿಮೆಯನ್ನು ನನಗೆ ಕೊಡು.
6“ನೀನು ಈ ಲೋಕದೊಳಗಿಂದ ಕೆಲವು ಜನರನ್ನು ನನಗೆ ಕೊಟ್ಟೆ. ನಿನ್ನ ಸ್ವರೂಪವನ್ನು ನಾನು ಇವರಿಗೆ ತೋರಿಸಿದೆನು. ಇವರು ನಿನ್ನವರಾಗಿದ್ದಾರೆ ಮತ್ತು ನೀನೇ ಇವರನ್ನು ನನಗೆ ಕೊಟ್ಟೆ. ಇವರು ನಿನ್ನ ಆಜ್ಞೆಗಳಿಗೆ ವಿಧೇಯರಾದರು. 7ನೀನು ನನಗೆ ಕೊಟ್ಟ ಪ್ರತಿಯೊಂದೂ ನಿನ್ನಿಂದಲೇ ಬಂದಿದೆ ಎಂಬುದು ಇವರಿಗೆ ಈಗ ತಿಳಿದಿದೆ. 8ನೀನು ನನಗೆ ಕೊಟ್ಟ ಮಾತುಗಳನ್ನು ನಾನು ಇವರಿಗೆ ಕೊಟ್ಟಿದ್ದೇನೆ. ಇವರು ಆ ಮಾತುಗಳನ್ನು ಸ್ವೀಕರಿಸಿಕೊಂಡಿದ್ದಾರೆ. ನಾನು ನಿಜವಾಗಿಯೂ ನಿನ್ನ ಬಳಿಯಿಂದ ಬಂದಿರುವುದಾಗಿಯೂ ನೀನೇ ನನ್ನನ್ನು ಕಳುಹಿಸಿರುವುದಾಗಿಯೂ ಇವರು ನಂಬಿದ್ದಾರೆ. 9ಈಗ ನಾನು ಇವರಿಗಾಗಿ ಪ್ರಾರ್ಥಿಸುವೆನು. ಈ ಲೋಕದಲ್ಲಿರುವ ಜನರಿಗೋಸ್ಕರ ನಾನು ಪ್ರಾರ್ಥಿಸುತ್ತಿಲ್ಲ. ಆದರೆ ನೀನು ನನಗೆ ಕೊಟ್ಟ ಇವರಿಗಾಗಿ ಪ್ರಾರ್ಥಿಸುತ್ತಿದ್ದೇನೆ, ಏಕೆಂದರೆ ಇವರು ನಿನ್ನವರಾಗಿದ್ದಾರೆ. 10ನನ್ನಲ್ಲಿರುವುದೆಲ್ಲಾ ನಿನ್ನದೇ ಮತ್ತು ನಿನ್ನಲ್ಲಿರುವುದೆಲ್ಲಾ ನನ್ನದೇ. ಇವರಿಂದ ನನಗೆ ಮಹಿಮೆ ಉಂಟಾಗಿದೆ.
11“ಈಗ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಇನ್ನು ನಾನು ಈ ಲೋಕದಲ್ಲಿರುವುದಿಲ್ಲ. ಆದರೆ ಇವರು ಇನ್ನೂ ಈ ಲೋಕದಲ್ಲಿರುತ್ತಾರೆ. ಪವಿತ್ರನಾದ ತಂದೆಯೇ, (ನೀನು ನನಗೆ ಕೊಟ್ಟ) ನಿನ್ನ ಹೆಸರಿನ ಶಕ್ತಿಯಿಂದ ಇವರನ್ನು ಕಾಯ್ದು ಕಾಪಾಡು. ನೀನೂ ನಾನೂ ಒಂದಾಗಿರುವಂತೆ ಇವರೂ ಒಂದಾಗಿರಲು ಆಗ ಸಾಧ್ಯವಾಗುವುದು. 12ನಾನು ಇವರೊಂದಿಗೆ ಇದ್ದಾಗ, ನಿನ್ನ ಹೆಸರಿನ ಶಕ್ತಿಯಿಂದ ಇವರನ್ನು ಕಾಯ್ದು ಕಾಪಾಡಿದೆನು. ಪವಿತ್ರ ಗ್ರಂಥದ ಹೇಳಿಕೆಯು ನೆರವೇರುವಂತೆ ಕಳೆದುಹೋಗುವುದಕ್ಕಾಗಿಯೇ ಆರಿಸಲ್ಪಟ್ಟಿದ್ದ (ಯೂದನೆಂಬ) ಒಬ್ಬನೇ ಒಬ್ಬನು ಇವರಲ್ಲಿ ನಾಶವಾದನು.
13“ಈಗ ನಾನು ನಿನ್ನ ಬಳಿಗೆ ಬರುತ್ತಿದ್ದೇನೆ. ಆದರೆ ನಾನು ಈ ಲೋಕದಲ್ಲಿ ಇನ್ನೂ ಇರುವಾಗಲೇ ಈ ಸಂಗತಿಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ. ಈ ಜನರು ನನ್ನ ಆನಂದವನ್ನು ಹೊಂದಿದವರಾಗಿರಬೇಕೆಂದು ಮತ್ತು ನನ್ನ ಆನಂದವು ಇವರಲ್ಲಿ ಪರಿಪೂರ್ಣವಾಗಿರಬೇಕೆಂದು ಈ ಸಂಗತಿಗಳನ್ನು ಹೇಳುತ್ತಿದ್ದೇನೆ. 14ನಾನು ಇವರಿಗೆ ನಿನ್ನ ವಾಕ್ಯಗಳನ್ನು ಕೊಟ್ಟಿದ್ದೇನೆ. ಈ ಲೋಕವು ಇವರನ್ನು ದ್ವೇಷಿಸುತ್ತದೆ. ನಾನು ಈ ಲೋಕಕ್ಕೆ ಯಾವ ರೀತಿ ಸೇರಿದವನಾಗಿಲ್ಲವೋ ಅದೇ ರೀತಿ ಇವರೂ ಈ ಲೋಕಕ್ಕೆ ಸೇರಿದವರಾಗಿಲ್ಲ. ಆದ್ದರಿಂದ ಈ ಲೋಕವು ಇವರನ್ನು ದ್ವೇಷಿಸಿದೆ.
15“ನೀನು ಇವರನ್ನು ಈ ಲೋಕದಿಂದ ತೆಗೆದುಕೊಳ್ಳಬೇಕೆಂದು ನಾನು ಕೇಳುತ್ತಿಲ್ಲ. ಆದರೆ ಇವರನ್ನು ಕೆಡುಕನಿಂದ (ಸೈತಾನನಿಂದ) ತಪ್ಪಿಸಿ ಸುರಕ್ಷಿತವಾಗಿರಿಸಬೇಕೆಂದು ನಾನು ಕೇಳಿಕೊಳ್ಳುತ್ತಿದ್ದೇನೆ. 16ನಾನು ಈ ಲೋಕಕ್ಕೆ ಯಾವ ರೀತಿ ಸೇರಿದವನಾಗಿಲ್ಲವೋ ಅದೇ ರೀತಿ ಇವರೂ ಈ ಲೋಕಕ್ಕೆ ಸೇರಿದವರಾಗಿಲ್ಲ. 17ನಿನ್ನ ಸತ್ಯದ ಮೂಲಕ ನೀನು ಇವರನ್ನು ನಿನ್ನ ಸೇವೆಗೆ ಸಿದ್ಧಪಡಿಸು. ನಿನ್ನ ವಾಕ್ಯವು ಸತ್ಯವಾದದ್ದು. 18ನೀನು ನನ್ನನ್ನು ಈ ಲೋಕಕ್ಕೆ ಕಳುಹಿಸಿದಂತೆ ನಾನೂ ಇವರನ್ನು ಈ ಲೋಕಕ್ಕೆ ಕಳುಹಿಸಿದ್ದೇನೆ. 19ಇವರು ನಿಜವಾಗಿ ನಿನ್ನ ಸೇವೆಗೆ ಪ್ರತಿಷ್ಠಿತರಾಗಬೇಕೆಂದು ನಾನು ನನ್ನನ್ನೇ ಪ್ರತಿಷ್ಠಿಸಿಕೊಂಡಿದ್ದೇನೆ.
20“ನಾನು ಇವರಿಗಾಗಿಯೂ ಇವರ ವಾಕ್ಯದಿಂದ ನನ್ನಲ್ಲಿ ನಂಬಿಕೆ ಇಡುವ ಎಲ್ಲರಿಗಾಗಿಯೂ ಪ್ರಾರ್ಥಿಸುತ್ತಿದ್ದೇನೆ. 21ತಂದೆಯೇ, ನನ್ನಲ್ಲಿ ನಂಬಿಕೆ ಇಡುವ ಎಲ್ಲಾ ಜನರು ಒಂದಾಗಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನೀನು ನನ್ನಲ್ಲಿ ನೆಲೆಸಿರುವೆ ಮತ್ತು ನಾನು ನಿನ್ನಲ್ಲಿ ನೆಲೆಸಿರುವೆ. ನೀನು ನನ್ನನ್ನು ಕಳುಹಿಸಿರುವೆಯೆಂದು ಈ ಲೋಕವು ನಂಬಿಕೊಳ್ಳುವುದಕ್ಕಾಗಿ ಈ ಜನರು ಸಹ ನಮ್ಮೊಂದಿಗೆ ಒಂದಾಗಿರಬೇಕೆಂದು ನಾನು ಪ್ರಾರ್ಥಿಸುತ್ತೇನೆ. 22ನೀನು ನನಗೆ ಕೊಟ್ಟ ಮಹಿಮೆಯನ್ನು ನಾನು ಈ ಜನರಿಗೆ ಕೊಟ್ಟಿದ್ದೇನೆ. ನೀನು ಮತ್ತು ನಾನು ಒಂದಾಗಿರುವಂತೆ ಇವರೂ ಒಂದಾಗಿರಬೇಕೆಂದು ನಾನು ಇವರಿಗೆ ಈ ಮಹಿಮೆಯನ್ನು ಕೊಟ್ಟೆನು. 23ನಾನು ಅವರಲ್ಲಿ ಇರುವೆನು ಮತ್ತು ನೀನು ನನ್ನಲ್ಲಿರುವೆ. ಆದ್ದರಿಂದ ಅವರು ಸಂಪೂರ್ಣವಾಗಿ ಒಂದಾಗಿರುವರು. ನೀನೇ ನನ್ನನ್ನು ಕಳುಹಿಸಿರುವುದಾಗಿ ಮತ್ತು ನೀನು ನನ್ನನ್ನು ಪ್ರೀತಿಸಿದಂತೆಯೇ ಈ ಜನರನ್ನೂ ಪ್ರೀತಿಸಿರುವುದಾಗಿ ಈ ಲೋಕವು ಆಗ ತಿಳಿದುಕೊಳ್ಳುವುದು.
24“ತಂದೆಯೇ, ನೀನು ನನಗೆ ಕೊಟ್ಟಿರುವ ಇವರು, ನಾನು ಇರುವಲ್ಲೆಲ್ಲಾ ನನ್ನೊಂದಿಗೆ ಇರಬೇಕೆಂದು ಮತ್ತು ನನ್ನ ಮಹಿಮೆಯನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ. ಈ ಲೋಕವು ಸೃಷ್ಟಿಯಾಗುವುದಕ್ಕಿಂತ ಮೊದಲೇ ನೀನು ನನ್ನನ್ನು ಪ್ರೀತಿಸಿದ್ದರಿಂದ ನೀನೇ ನನಗೆ ಈ ಮಹಿಮೆಯನ್ನು ಕೊಟ್ಟೆ. 25ನೀತಿಯುಳ್ಳ ತಂದೆಯೇ, ಈ ಲೋಕವು ನಿನ್ನನ್ನು ತಿಳಿದಿಲ್ಲ. ಆದರೆ ನಾನು ನಿನ್ನನ್ನು ತಿಳಿದಿರುವೆ ಮತ್ತು ನೀನೇ ನನ್ನನ್ನು ಕಳುಹಿಸಿರುವೆ ಎಂಬುದು ಈ ಜನರಿಗೆ ತಿಳಿದಿದೆ. 26ನಾನು ನಿನ್ನ ನಿಜಸ್ವಭಾವವನ್ನು ಇವರಿಗೆ ಗೊತ್ತುಪಡಿಸಿದೆನು. ನಾನು ನಿನ್ನ ಸ್ವರೂಪವನ್ನು ಇವರಿಗೆ ಮತ್ತೆ ತೋರಿಸುವೆನು. ಆಗ ನನ್ನ ಮೇಲೆ ನಿನಗೆ ಯಾವ ಪ್ರೀತಿಯಿದೆಯೋ, ಅದೇ ಪ್ರೀತಿಯು ಇವರಲ್ಲಿಯೂ ಇರುವುದು ಮತ್ತು ನಾನು ಇವರಲ್ಲಿ ಇರುವೆನು.”
Valið núna:
ಯೋಹಾನನ ಸುವಾರ್ತೆ 17: KERV
Áherslumerki
Deildu
Afrita
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International