ಯೋಹಾನನ ಸುವಾರ್ತೆ 13

13
ಯೇಸು ತನ್ನ ಶಿಷ್ಯರ ಪಾದಗಳನ್ನು ತೊಳೆಯುವನು
1ಯೆಹೂದ್ಯರ ಪಸ್ಕಹಬ್ಬವು ಬಹು ಸಮೀಪವಾಗಿತ್ತು. ತಾನು ಈ ಲೋಕವನ್ನು ಬಿಟ್ಟು ತಂದೆಯ ಬಳಿಗೆ ಹೋಗುವ ಸಮಯ ಬಂದಿರುವುದಾಗಿ ಯೇಸುವಿಗೆ ತಿಳಿದಿತ್ತು. ಈ ಲೋಕದಲ್ಲಿದ್ದ ತನ್ನವರನ್ನು ಆತನು ಯಾವಾಗಲೂ ಪ್ರೀತಿಸುತ್ತಿದ್ದನು. ಈಗಲಾದರೋ ಅವರ ಮೇಲೆ ತನಗಿರುವ ಅಪಾರ ಪ್ರೀತಿಯನ್ನು ತೋರಿಸುವ ಕಾಲ ಆತನಿಗೆ ಬಂದಿತ್ತು.
2ಯೇಸು ಮತ್ತು ಆತನ ಶಿಷ್ಯರು ರಾತ್ರಿಯ ಊಟಕ್ಕಾಗಿ ಕುಳಿತುಕೊಂಡಿದ್ದರು. ಯೇಸುವಿಗೆ ದ್ರೋಹ ಮಾಡುವಂತೆ ಸೈತಾನನು ಇಸ್ಕರಿಯೋತ ಯೂದನನ್ನು ಈಗಾಗಲೇ ಪ್ರೇರೇಪಿಸಿದ್ದನು. (ಯೂದನು ಸಿಮೋನನ ಮಗ.) 3ತಂದೆಯು ಪ್ರತಿಯೊಂದರ ಮೇಲೆ ತನಗೆ ಅಧಿಕಾರವನ್ನು ಕೊಟ್ಟಿದ್ದಾನೆಂಬುದು ಯೇಸುವಿಗೆ ತಿಳಿದಿತ್ತು. ಅಲ್ಲದೆ ತಾನು ದೇವರ ಬಳಿಯಿಂದ ಬಂದಿರುವುದಾಗಿಯೂ ಮತ್ತು ಈಗ ದೇವರ ಬಳಿಗೆ ಮರಳಿಹೋಗುತ್ತಿರುವುದಾಗಿಯೂ ಆತನಿಗೆ ಗೊತ್ತಿತ್ತು. 4ಅವರು ಊಟಮಾಡುತ್ತಿದ್ದಾಗ ಯೇಸು ಎದ್ದು ತನ್ನ ಮೇಲಂಗಿಯನ್ನು ತೆಗೆದಿಟ್ಟನು; ಅಂಗವಸ್ತ್ರವನ್ನು ಸೊಂಟಕ್ಕೆ ಕಟ್ಟಿಕೊಂಡನು. 5ಅನಂತರ ಒಂದು ಬೋಗುಣಿಗೆ ನೀರು ಸುರಿದುಕೊಂಡು ಶಿಷ್ಯರ ಕಾಲುಗಳನ್ನು ತೊಳೆದು ತಾನು ಕಟ್ಟಿಕೊಂಡಿದ್ದ ಅಂಗವಸ್ತ್ರದಿಂದ ಅವರ ಪಾದಗಳನ್ನು ಒರಸಿದನು.
6ಯೇಸು ಸೀಮೋನ್ ಪೇತ್ರನ ಬಳಿಗೆ ಬಂದಾಗ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ನೀನು ತೊಳೆಯಕೂಡದು” ಎಂದನು.
7ಯೇಸು, “ಈಗ ನಾನು ಏನು ಮಾಡುತ್ತಿರುವೆನೆಂದು ನಿನಗೆ ಗೊತ್ತಿಲ್ಲ. ಆದರೆ ಮುಂದೆ ನೀನು ಅರ್ಥಮಾಡಿಕೊಳ್ಳುವೆ” ಎಂದು ಉತ್ತರಕೊಟ್ಟನು.
8ಪೇತ್ರನು, “ಇಲ್ಲ! ನನ್ನ ಪಾದಗಳನ್ನು ನೀನು ಎಂದಿಗೂ ತೊಳೆಯಕೂಡದು” ಎಂದು ಪ್ರತಿಭಟಿಸಿದನು.
ಯೇಸು, “ನಿನ್ನ ಪಾದಗಳನ್ನು ನಾನು ತೊಳೆಯದಿದ್ದರೆ, ನನ್ನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿದನು.
9ಆಗ ಸೀಮೋನ್ ಪೇತ್ರನು, “ಪ್ರಭುವೇ, ನನ್ನ ಪಾದಗಳನ್ನು ಮಾತ್ರವಲ್ಲದೆ ನನ್ನ ಕೈಗಳನ್ನು ಮತ್ತು ತಲೆಯನ್ನೂ ತೊಳೆ!” ಎಂದು ಕೇಳಿಕೊಂಡನು.
10ಯೇಸು, “ಸ್ನಾನಮಾಡಿಕೊಂಡವನ ದೇಹವೆಲ್ಲಾ ಶುದ್ಧವಾಗಿರುತ್ತದೆ. ಅವನು ತನ್ನ ಪಾದಗಳನ್ನು ತೊಳೆದುಕೊಂಡರೆ ಸಾಕು. ನೀವು ಸಹ ಶುದ್ಧರಾಗಿದ್ದೀರಿ, ಆದರೆ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು. 11ತನಗೆ ದ್ರೋಹ ಮಾಡುವ ವ್ಯಕ್ತಿ ಯಾರೆಂದು ಯೇಸುವಿಗೆ ತಿಳಿದಿತ್ತು. ಆದಕಾರಣ ಆತನು, “ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧನಲ್ಲ” ಎಂದು ಹೇಳಿದನು.
12ಯೇಸು ಅವರ ಪಾದಗಳನ್ನು ತೊಳೆದ ಮೇಲೆ ತನ್ನ ಮೇಲಂಗಿಯನ್ನು ಧರಿಸಿಕೊಂಡು ಮತ್ತೆ ಕುಳಿತುಕೊಂಡು ಹೀಗೆಂದನು: “ನಾನು ನಿಮಗೆ ಮಾಡಿದ್ದು ಏನೆಂದು ಅರ್ಥವಾಯಿತೇ? 13ನೀವು ನನ್ನನ್ನು, ‘ಗುರುವೇ, ಪ್ರಭುವೇ’ ಎಂದು ಕರೆಯುತ್ತೀರಿ. ನೀವು ಹಾಗೆ ಕರೆಯುವುದು ಸರಿ. ಏಕೆಂದರೆ ನಾನು ಗುರುವೂ ಹೌದು, ಪ್ರಭುವೂ ಹೌದು. 14ನಿಮ್ಮ ಪ್ರಭುವೂ ಗುರುವೂ ಆಗಿರುವ ನಾನು ನಿಮ್ಮ ಪಾದಗಳನ್ನು ಸೇವಕನಂತೆ ತೊಳೆದೆನು. ಆದ್ದರಿಂದ ನೀವು ಸಹ ಒಬ್ಬರ ಪಾದಗಳನ್ನು ಇನ್ನೊಬ್ಬರು ತೊಳೆಯಬೇಕು. 15ಈ ಕಾರ್ಯಕ್ಕೆ ನಾನೇ ನಿಮಗೆ ಮಾದರಿಯಾಗಿದ್ದೇನೆ. ನಾನು ನಿಮಗೆ ಮಾಡಿದಂತೆ ನೀವೂ ಒಬ್ಬರಿಗೊಬ್ಬರು ಮಾಡಬೇಕು. 16ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ಸೇವಕನು ಒಡೆಯನಿಗಿಂತ ದೊಡ್ಡವನಲ್ಲ. ಆದ್ದರಿಂದ ಕೆಲಸಕ್ಕಾಗಿ ಕಳುಹಿಸಲ್ಪಟ್ಟವನು ಕಳುಹಿಸಿದವನಿಗಿಂತ ದೊಡ್ಡವನಲ್ಲ. 17ನೀವು ಈ ಸಂಗತಿಗಳನ್ನು ತಿಳಿದುಕೊಂಡು ಇವುಗಳನ್ನು ಕೈಕೊಂಡು ನಡೆದರೆ ಸಂತೋಷದಿಂದಿರುವಿರಿ.
18“ನಾನು ನಿಮ್ಮೆಲ್ಲರ ಬಗ್ಗೆ ಮಾತಾಡುತ್ತಿಲ್ಲ. ನಾನು ಆರಿಸಿಕೊಂಡಿರುವ ಜನರ ಬಗ್ಗೆ ನನಗೆ ಗೊತ್ತಿದೆ. ಆದರೆ ‘ನನ್ನೊಂದಿಗೆ ಊಟ ಮಾಡುವವನೇ ನನಗೆ ದ್ರೋಹ ಬಗೆದನು.’#13:18 ನನಗೆ ದ್ರೋಹ ಬಗೆದನು ಉಲ್ಲೇಖನ: ಕೀರ್ತನೆ 41:9. ಎಂಬ ಪವಿತ್ರ ಗ್ರಂಥದ ಮಾತು ನೆರವೇರಬೇಕು. 19ಅದು ನೆರವೇರುವಾಗ ನಾನೇ ಕ್ರಿಸ್ತನೆಂದು ನೀವು ನಂಬಬೇಕೆಂದು, ಅದು ನೆರವೇರವುದಕ್ಕಿಂತ ಮೊದಲೇ ಅದನ್ನು ನಿಮಗೆ ತಿಳಿಸುತ್ತಿದ್ದೇನೆ. 20ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಾನು ಕಳುಹಿಸುವ ಯಾರನ್ನಾದರೂ ಸ್ವೀಕರಿಸಿಕೊಳ್ಳುವವನು ನನ್ನನ್ನೇ ಸ್ವೀಕರಿಸಿಕೊಳ್ಳುವವನಾಗಿದ್ದಾನೆ. ನನ್ನನ್ನು ಸ್ವೀಕರಿಸಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೇ ಸ್ವೀಕರಿಸಿಕೊಳ್ಳುವವನಾಗಿದ್ದಾನೆ.”
ಯೇಸುವಿನ ಶಿಷ್ಯನ ದ್ರೋಹ
(ಮತ್ತಾಯ 26:20-25; ಮಾರ್ಕ 14:17-21; ಲೂಕ 22:21-23)
21ಯೇಸು ಈ ಸಂಗತಿಗಳನ್ನು ಹೇಳಿದ ಮೇಲೆ ಆತ್ಮದಲ್ಲಿ ತತ್ತರಗೊಂಡು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು” ಎಂದು ಬಹಿರಂಗವಾಗಿ ಹೇಳಿದನು.
22ಯೇಸುವಿನ ಶಿಷ್ಯರೆಲ್ಲಾ ಒಬ್ಬರನ್ನೊಬ್ಬರು ನೋಡತೊಡಗಿದರು. ಆತನು ಯಾರ ಬಗ್ಗೆ ಮಾತಾಡುತ್ತಿದ್ದಾನೆಂದು ಅವರಿಗೆ ಅರ್ಥವಾಗಲಿಲ್ಲ. 23ಶಿಷ್ಯರಲ್ಲಿ ಒಬ್ಬನು ಯೇಸುವಿನ ಸಮೀಪದಲ್ಲಿ ಒರಗಿಕೊಂಡಿದ್ದನು. ಯೇಸು ಪ್ರೀತಿಸುತ್ತಿದ್ದ ಶಿಷ್ಯನೇ ಅವನು. 24ಸೀಮೋನ್ ಪೇತ್ರನು ಈ ಶಿಷ್ಯನಿಗೆ, ಯಾರನ್ನು ಕುರಿತು ಯೇಸು ಹೇಳುತ್ತಿದ್ದಾನೆಂದು ಕೇಳಿ ತಿಳಿದುಕೊಳ್ಳಲು ಸನ್ನೆ ಮಾಡಿದನು.
25ಆ ಶಿಷ್ಯನು ಯೇಸುವಿನ ಸಮೀಪಕ್ಕೆ ಬಾಗಿಕೊಂಡು, “ಪ್ರಭುವೇ, ಅವನು ಯಾರು?” ಎಂದು ಕೇಳಿದನು.
26ಯೇಸು, “ನಾನು ಈ ರೊಟ್ಟಿಯನ್ನು ಬಟ್ಟಲಲ್ಲಿ ಅದ್ದಿ ಅದನ್ನು ಯಾರಿಗೆ ಕೊಡುತ್ತೇನೋ ಅವನೇ ನನಗೆ ದ್ರೋಹ ಮಾಡುವನು” ಎಂದು ಹೇಳಿ ರೊಟ್ಟಿಯ ತುಂಡೊಂದನ್ನು ತೆಗೆದುಕೊಂಡು ಅದನ್ನು ಬಟ್ಟಲಲ್ಲಿ ಅದ್ದಿ ಸಿಮೋನನ ಮಗನಾದ ಇಸ್ಕರಿಯೋತ ಯೂದನಿಗೆ ಕೊಟ್ಟನು. 27ಯೂದನು ಆ ರೊಟ್ಟಿಯನ್ನು ತೆಗೆದುಕೊಂಡಾಗ ಸೈತಾನನು ಅವನೊಳಗೆ ಪ್ರವೇಶಿಸಿದನು. ಯೇಸು ಯೂದನಿಗೆ, “ನೀನು ಮಾಡುವ ಕೆಲಸವನ್ನು ಬೇಗನೆ ಮಾಡು!” ಎಂದು ಹೇಳಿದನು. 28ಯೇಸು ಯೂದನಿಗೆ ಏಕೆ ಹಾಗೆ ಹೇಳಿದನೆಂದು ಊಟಕ್ಕೆ ಕುಳಿತಿದ್ದವರಲ್ಲಿ ಯಾರಿಗೂ ಅರ್ಥವಾಗಲಿಲ್ಲ. 29ಶಿಷ್ಯಸಮುದಾಯದ ಹಣದ ಪೆಟ್ಟಿಗೆಯು ಯೂದನ ವಶದಲ್ಲಿತ್ತು. ಆದ್ದರಿಂದ ಹಬ್ಬಕ್ಕೆ ಅಗತ್ಯವಾದ ಕೆಲವು ವಸ್ತುಗಳನ್ನು ತೆಗೆದುಕೊಂಡು ಬರುವುದಕ್ಕಾಗಲಿ ಬಡಜನರಿಗೆ ಏನಾದರೂ ಕೊಡುವುದಕ್ಕಾಗಲಿ ಯೇಸು ಅವನಿಗೆ ಹೇಳಿರಬೇಕೆಂದು ಕೆಲವು ಶಿಷ್ಯರು ಭಾವಿಸಿಕೊಂಡರು.
30ಯೇಸು ಕೊಟ್ಟ ರೊಟ್ಟಿಯನ್ನು ತೆಗೆದುಕೊಂಡ ನಂತರ ಯೂದನು ಅಲ್ಲಿಂದ ಹೊರಟುಹೋದನು. ಆಗ ರಾತ್ರಿಯಾಗಿತ್ತು.
ತನ್ನ ಮರಣದ ಬಗ್ಗೆ ಯೇಸುವಿನ ಪ್ರಕಟನೆ
31ಯೂದನು ಹೊರಟುಹೋದ ಮೇಲೆ ಯೇಸು, “ಈಗ ಮನುಷ್ಯಕುಮಾರನಿಗೆ ಮಹಿಮೆಯಾಗುವುದು. ಅಲ್ಲದೆ, ಮನುಷ್ಯಕುಮಾರನ ಮೂಲಕ ದೇವರಿಗೂ ಮಹಿಮೆಯಾಗುವುದು. 32ಆತನ ಮೂಲಕವಾಗಿ ದೇವರಿಗೆ ಮಹಿಮೆಯಾಗುವುದರಿಂದ ತಕ್ಷಣವೇ ದೇವರ ಮೂಲಕವಾಗಿಯೂ ಆತನಿಗೆ ಮಹಿಮೆಯಾಗುವುದು” ಎಂದನು.
33ಯೇಸು, “ನನ್ನ ಮಕ್ಕಳೇ, ಇನ್ನು ಸ್ವಲ್ಪ ಸಮಯ ಮಾತ್ರ ನಾನು ನಿಮ್ಮೊಂದಿಗೆ ಇರುತ್ತೇನೆ. ನೀವು ನನಗಾಗಿ ಹುಡುಕುವಿರಿ. ನಾನು ಯೆಹೂದ್ಯರಿಗೆ ಹೇಳಿದ್ದನ್ನು ನಿಮಗೂ ಹೇಳುತ್ತೇನೆ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ.
34“ನಾನು ನಿಮಗೆ ಹೊಸ ಆಜ್ಞೆಯನ್ನು ಕೊಡುತ್ತೇನೆ. ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. 35ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕು. ನೀವು ಒಬ್ಬರನ್ನೊಬ್ಬರು ಪ್ರೀತಿಸಿದರೆ, ನೀವೂ ನನ್ನ ಶಿಷ್ಯರೆಂಬುದನ್ನು ಎಲ್ಲಾ ಜನರು ತಿಳಿದುಕೊಳ್ಳುವರು” ಎಂದು ಹೇಳಿದನು.
ಪೇತ್ರನ ವಿಶ್ವಾಸದ್ರೋಹದ ಮುನ್ಸೂಚನೆ
(ಮತ್ತಾಯ 26:31-35; ಮಾರ್ಕ 14:27-31; ಲೂಕ 22:31-34)
36ಸೀಮೋನ್ ಪೇತ್ರನು ಯೇಸುವಿಗೆ, “ಪ್ರಭುವೇ, ನೀನು ಎಲ್ಲಿಗೆ ಹೋಗುತ್ತಿರುವೆ?” ಎಂದು ಕೇಳಿದನು.
ಯೇಸು, “ನಾನು ಹೋಗುವಲ್ಲಿಗೆ ಈಗ ನೀನು ಹಿಂಬಾಲಿಸಿಕೊಂಡು ಬರಲಾರೆ. ಆದರೆ ಮುಂದೆ ನೀನು ಹಿಂಬಾಲಿಸಿಕೊಂಡು ಬರುವೆ” ಎಂದು ಉತ್ತರಕೊಟ್ಟನು.
37ಪೇತ್ರನು, “ಪ್ರಭುವೇ, ಈಗ ನಾನು ನಿನ್ನನ್ನು ಹಿಂಬಾಲಿಸಲು ಏಕಾಗದು? ನಿನಗೋಸ್ಕರ ಸಾಯುವುದಕ್ಕೂ ನನಗೆ ಮನಸ್ಸಿದೆ!” ಎಂದು ಹೇಳಿದನು.
38ಯೇಸು, “ನೀನು ನನಗೋಸ್ಕರ ನಿನ್ನ ಪ್ರಾಣವನ್ನು ನಿಜವಾಗಿಯೂ ಕೊಡುವೆಯಾ? ನಾನು ನಿನಗೆ ಸತ್ಯವನ್ನು ಹೇಳುತ್ತೇನೆ, ನಾಳೆ ಮುಂಜಾನೆ ಕೋಳಿ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ತಿಳಿದಿಲ್ಲವೆಂದು ಮೂರುಸಾರಿ ಹೇಳುವೆ” ಎಂದು ಉತ್ತರಕೊಟ್ಟನು.

Áherslumerki

Deildu

Afrita

None

Want to have your highlights saved across all your devices? Sign up or sign in