ಆದಿಕಾಂಡ 33

33
ಯಾಕೋಬನು ತೋರಿದ ಧೈರ್ಯ
1ಯಾಕೋಬನು ಕಣ್ಣೆತ್ತಿ ನೋಡಿದಾಗ ಏಸಾವನು ನಾನೂರು ಜನರೊಂದಿಗೆ ಬರುವುದನ್ನು ಕಂಡನು. ಯಾಕೋಬನು ತನ್ನ ಕುಟುಂಬವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿದನು. ಲೇಯಾ ಮತ್ತು ಅವಳ ಮಕ್ಕಳು ಒಂದು ಗುಂಪಿನಲ್ಲಿದ್ದರು. ರಾಹೇಲಳು ಮತ್ತು ಯೋಸೇಫನು ಇನ್ನೊಂದು ಗುಂಪಿನಲ್ಲಿದ್ದರು. ಇಬ್ಬರು ದಾಸಿಯರು ಮತ್ತು ಅವರ ಮಕ್ಕಳು ಎರಡು ಗುಂಪುಗಳಲ್ಲಿದ್ದರು. 2ಯಾಕೋಬನು ದಾಸಿಯರನ್ನು ಮತ್ತು ಅವರ ಮಕ್ಕಳನ್ನು ಮುಂಭಾಗದಲ್ಲಿಯೂ ಲೇಯಳನ್ನು ಮತ್ತು ಅವಳ ಮಕ್ಕಳನ್ನು ಅವರ ಹಿಂಭಾಗದಲ್ಲಿಯೂ, ರಾಹೇಲಳನ್ನು ಮತ್ತು ಯೋಸೇಫನನ್ನು ಕೊನೆಯ ಸ್ಥಳದಲ್ಲೂ ಇರಿಸಿದನು.
3ಯಾಕೋಬನು ತಾನೇ ಮುಂದಾಗಿ ಏಸಾವನ ಬಳಿಗೆ ನಡೆದುಹೋಗುತ್ತಾ ಏಳು ಸಲ ನೆಲದ ತನಕ ಬಗ್ಗಿ ನಮಸ್ಕರಿಸಿದನು.
4ಏಸಾವನು ಯಾಕೋಬನನ್ನು ಕಂಡಾಗ, ಓಡಿಬಂದು ತನ್ನ ಕೈಗಳಿಂದ ತಬ್ಬಿಕೊಂಡು ಅವನ ಕೊರಳಿನ ಮೇಲೆ ಮುದ್ದಿಟ್ಟನು; ಅವರಿಬ್ಬರೂ ಕಣ್ಣೀರು ಸುರಿಸಿದರು. 5ಏಸಾವನು ಸ್ತ್ರೀಯರನ್ನು ಮತ್ತು ಮಕ್ಕಳನ್ನು ಕಣ್ಣೆತ್ತಿ ನೋಡಿ, “ನಿನ್ನೊಡನೆ ಇರುವ ಈ ಜನರು ಯಾರು?” ಎಂದು ಕೇಳಿದನು.
ಯಾಕೋಬನು, “ದೇವರು ನನಗೆ ಕೊಟ್ಟ ಮಕ್ಕಳೇ ಇವರು. ದೇವರು ನನಗೆ ಒಳ್ಳೆಯವನಾಗಿದ್ದನು” ಎಂದು ಹೇಳಿದನು.
6ಆಮೇಲೆ ಇಬ್ಬರು ದಾಸಿಯರು ಮತ್ತು ಅವರೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. 7ಆಮೇಲೆ ಲೇಯಾ ಮತ್ತು ಅವಳೊಂದಿಗೆ ಇದ್ದ ಮಕ್ಕಳು ಏಸಾವನ ಬಳಿಗೆ ಹೋಗಿ ಅವನಿಗೆ ತಲೆಬಾಗಿ ನಮಸ್ಕರಿಸಿದರು. ತರುವಾಯ, ರಾಹೇಲಳು ಮತ್ತು ಯೋಸೇಫನು ಏಸಾವನ ಬಳಿಗೆ ಹೋಗಿ ತಲೆಬಾಗಿ ನಮಸ್ಕರಿಸಿದರು.
8ಏಸಾವನು, “ನಾನು ಬರುತ್ತಿರುವಾಗ ಕಂಡ ಆ ಜನರೆಲ್ಲಾ ಯಾರು? ಆ ಪಶುಗಳೆಲ್ಲಾ ಯಾತಕ್ಕೆ?” ಎಂದು ಕೇಳಿದನು.
ಯಾಕೋಬನು, “ನೀನು ನನ್ನನ್ನು ಸ್ವೀಕರಿಸಿಕೊಳ್ಳಲಿ ಎಂದು ಅವುಗಳನ್ನು ಉಡುಗೊರೆಗಳನ್ನಾಗಿ ಕಳುಹಿಸಿಕೊಟ್ಟೆನು” ಎಂದು ಹೇಳಿದನು.
9ಆದರೆ ಏಸಾವನು, “ತಮ್ಮನೇ, ನೀನು ನನಗೆ ಉಡುಗೊರೆಗಳನ್ನು ಕೊಡಬೇಕಾಗಿಲ್ಲ, ನನಗೆ ಬೇಕಾದಷ್ಟಿದೆ” ಎಂದು ಹೇಳಿದನು.
10ಯಾಕೋಬನು, “ಇಲ್ಲ! ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ; ನೀನು ನನ್ನನ್ನು ನಿಜವಾಗಿಯೂ ಸ್ವೀಕರಿಸಿಕೊಳ್ಳುವುದಾದರೆ, ನಾನು ಕೊಡುವ ಉಡುಗೊರೆಗಳನ್ನು ದಯವಿಟ್ಟು ಸ್ವೀಕರಿಸಬೇಕು. ನಿನ್ನ ಮುಖವನ್ನು ಮತ್ತೆ ನೋಡಿ ನನಗೆ ತುಂಬ ಸಂತೋಷವಾಗಿದೆ. ದೇವರ ಮುಖವನ್ನೇ ನೋಡಿದಂತಾಯಿತು. ನೀನು ನನ್ನನ್ನು ಸ್ವೀಕರಿಸಿಕೊಂಡದ್ದರಿಂದ ನನಗೆ ತುಂಬ ಸಂತೋಷವಾಗಿದೆ. 11ಆದ್ದರಿಂದ ನಾನು ಕೊಡುವ ಈ ಉಡುಗೊರೆಗಳನ್ನು ಸ್ವೀಕರಿಸಿಕೊಳ್ಳಬೇಕೆಂದು ಬೇಡಿಕೊಳ್ಳುತ್ತಿರುವೆ. ದೇವರು ನನಗೆ ತುಂಬ ಒಳ್ಳೆಯವನಾಗಿದ್ದನು. ನನಗೆ ಬೇಕಾದದ್ದಕ್ಕಿಂತಲೂ ಹೆಚ್ಚಾಗಿ ನನ್ನಲ್ಲಿದೆ” ಎಂದು ಹೇಳಿದನು. ಹೀಗೆ ಯಾಕೋಬನು ಉಡುಗೊರೆಗಳನ್ನು ತೆಗೆದುಕೊಳ್ಳುವಂತೆ ಏಸಾವನನ್ನು ಬೇಡಿಕೊಂಡನು. ಆದ್ದರಿಂದ ಏಸಾವನು ಉಡುಗೊರೆಗಳನ್ನು ಸ್ವೀಕರಿಸಿದನು.
12ಆಮೇಲೆ ಏಸಾವನು, “ಈಗ ನೀನು ನಿನ್ನ ಪ್ರಯಾಣವನ್ನು ಮುಂದುವರಿಸಬಹುದು. ನಾನು ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಹೇಳಿದನು.
13ಆದರೆ ಯಾಕೋಬನು ಅವನಿಗೆ, “ನನ್ನ ಮಕ್ಕಳು ಬಲಹೀನರೆಂದು ನಿನಗೆ ಗೊತ್ತಿದೆ. ನಾನು ನನ್ನ ದನಕುರಿಗಳನ್ನೂ ಅವುಗಳ ಮರಿಗಳನ್ನೂ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು. ಒಂದೇ ದಿನದಲ್ಲಿ ಬಹುದೂರದವರೆಗೆ ಎಡಬಿಡದೆ ನಡೆಸಿಕೊಂಡು ಹೋದರೆ, ಎಲ್ಲಾ ಪಶುಗಳು ಸತ್ತುಹೋಗುತ್ತವೆ. 14ಆದ್ದರಿಂದ ನೀನು ಮುಂದಾಗಿ ಹೋಗು. ನಾನು ನಿನ್ನನ್ನು ನಿಧಾನವಾಗಿ ಹಿಂಬಾಲಿಸುವೆನು. ದನಕುರಿಗಳು ಮತ್ತು ಇತರ ಪಶುಗಳು ಸುರಕ್ಷಿತವಾಗಿರುವಂತೆಯೂ ನನ್ನ ಮಕ್ಕಳು ತುಂಬ ಆಯಾಸಗೊಳ್ಳದಂತೆಯೂ ನಾನು ಸಾಕಷ್ಟು ನಿಧಾನವಾಗಿ ಬಂದು ನಿನ್ನನ್ನು ಸೇಯೀರ್‌ನಲ್ಲಿ ಭೇಟಿಯಾಗುವೆನು” ಎಂದು ಹೇಳಿದನು.
15ಅದಕ್ಕೆ ಏಸಾವನು, “ಹಾಗಾದರೆ ನನ್ನ ಜನರಲ್ಲಿ ಕೆಲವರನ್ನು ನಿನ್ನ ಸಹಾಯಕ್ಕಾಗಿ ಬಿಟ್ಟುಹೋಗುವೆನು” ಎಂದು ಹೇಳಿದನು.
ಆದರೆ ಯಾಕೋಬನು, “ಅದು ನಿನ್ನ ದಯೆ. ಆದರೆ ಅಂಥ ಅಗತ್ಯವೇನೂ ಇಲ್ಲ” ಎಂದು ಹೇಳಿದನು. 16ಆದ್ದರಿಂದ ಆ ದಿನ ಏಸಾವನು ಸೇಯೀರಿಗೆ ಮರಳಿ ಪ್ರಯಾಣ ಮಾಡಿದನು. 17ಆದರೆ ಯಾಕೋಬನು ಸುಕ್ಕೋತಿಗೆ ಹೋದನು. ಆ ಸ್ಥಳದಲ್ಲಿ ಅವನು ತನಗಾಗಿ ಒಂದು ಮನೆಯನ್ನೂ ತನ್ನ ದನಕುರಿಗಳಿಗಾಗಿ ಚಿಕ್ಕ ಕೊಟ್ಟಿಗೆಗಳನ್ನೂ ಕಟ್ಟಿಸಿದನು. ಆದ್ದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು.
18ಆಮೇಲೆ ಯಾಕೋಬನು ಕಾನಾನ್ ದೇಶದ ಶೆಕೆಮ್ ಪಟ್ಟಣಕ್ಕೆ ಬಂದು ತನ್ನ ಪಾಳೆಯನ್ನು ಪಟ್ಟಣದ ಸಮೀಪದಲ್ಲಿದ್ದ ಒಂದು ಹೊಲದಲ್ಲಿ ಹಾಕಿಸಿದನು. 19ಯಾಕೋಬನು ನೂರು ಬೆಳ್ಳಿನಾಣ್ಯಗಳನ್ನು ಕೊಟ್ಟು ಶೆಕೆಮನ ತಂದೆಯಾದ ಹಮೋರನ ಕುಟುಂಬದಿಂದ ಆ ಹೊಲವನ್ನು ಕೊಂಡುಕೊಂಡನು. 20ದೇವರನ್ನು ಆರಾಧಿಸುವುದಕ್ಕಾಗಿ ಒಂದು ಯಜ್ಞವೇದಿಕೆಯನ್ನು ಕಟ್ಟಸಿ ಆ ಸ್ಥಳಕ್ಕೆ “ಇಸ್ರೇಲರ ದೇವರಾದ ಏಲೆಲೋಹೇ” ಎಂದು ಹೆಸರಿಟ್ಟನು.

Áherslumerki

Deildu

Afrita

None

Want to have your highlights saved across all your devices? Sign up or sign in