ಆದಿಕಾಂಡ 26
26
ಇಸಾಕನು ಅಬೀಮೆಲೆಕನಿಗೆ ಸುಳ್ಳು ಹೇಳಿದ್ದು
1ಅಬ್ರಹಾಮನ ಕಾಲದಲ್ಲಿ ಬಂದಿದ್ದ ಕ್ಷಾಮದಂತೆ ಮತ್ತೊಂದು ಕ್ಷಾಮವು ಕಾನಾನ್ ದೇಶಕ್ಕೆ ಬಂದಿತು. ಆದ್ದರಿಂದ ಇಸಾಕನು ಫಿಲಿಷ್ಟಿಯರ ರಾಜನಾದ ಅಬೀಮೆಲೆಕನ ಬಳಿಗೆ ಹೋದನು. ಅಬೀಮೆಲೆಕನು ಗೆರಾರ್ ನಗರದಲ್ಲಿದ್ದನು. 2ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನೀನು ಈಜಿಪ್ಟಿಗೆ ಹೋಗಬೇಡ. ನೀನು ಯಾವ ಪ್ರದೇಶದಲ್ಲಿರಬೇಕೆಂದು ನಾನು ಆಜ್ಞಾಪಿಸಿದೆನೋ ಆ ಪ್ರದೇಶದಲ್ಲಿ ವಾಸಿಸು. 3ನಾನು ನಿನ್ನ ಸಂಗಡವಿದ್ದು ನಿನ್ನನ್ನು ಆಶೀರ್ವದಿಸಿ ನಿನಗೂ ನಿನ್ನ ಕುಟುಂಬಕ್ಕೂ ಈ ಪ್ರದೇಶಗಳನ್ನೆಲ್ಲ ಕೊಡುವೆನು. ನಾನು ನಿನ್ನ ತಂದೆಯಾದ ಅಬ್ರಹಾಮನಿಗೆ ಪ್ರಮಾಣ ಮಾಡಿದ್ದನ್ನು ನೆರವೇರಿಸುವೆನು. 4ನಾನು ನಿನ್ನ ಸಂತಾನವನ್ನು ಆಕಾಶದಲ್ಲಿನ ನಕ್ಷತ್ರಗಳಷ್ಟು ಹೆಚ್ಚಿಸಿ ಅವರಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳವರು ನಿನ್ನ ಸಂತತಿಯಿಂದ ಆಶೀರ್ವಾದ ಹೊಂದುವರು. 5ನಾನೇ ಇದನ್ನು ನೆರವೇರಿಸುವೆನು; ಯಾಕೆಂದರೆ ನಿನ್ನ ತಂದೆಯಾದ ಅಬ್ರಹಾಮನು ನನ್ನ ಮಾತುಗಳಿಗೆ ವಿಧೇಯನಾಗಿ ನಾನು ಹೇಳಿದಂತೆ ಮಾಡಿ ನನ್ನ ಆಜ್ಞೆಗಳನ್ನು, ಕಟ್ಟಳೆಗಳನ್ನು, ನಿಯಮಗಳನ್ನು ಕೈಕೊಂಡು ನಡೆದನು” ಎಂದು ಹೇಳಿದನು.
6ಆದ್ದರಿಂದ ಇಸಾಕನು ಗೆರಾರಿನಲ್ಲಿ ಇಳಿದುಕೊಂಡು ವಾಸಿಸಿದನು. 7ಇಸಾಕನ ಹೆಂಡತಿಯಾದ ರೆಬೆಕ್ಕಳು ತುಂಬ ಸೌಂದರ್ಯವತಿಯಾಗಿದ್ದಳು. ಆ ಸ್ಥಳದ ಗಂಡಸರು ರೆಬೆಕ್ಕಳ ಬಗ್ಗೆ ಇಸಾಕನನ್ನು ಕೇಳಿದರು. ಇಸಾಕನು ಅವರಿಗೆ, “ಆಕೆ ನನ್ನ ತಂಗಿ” ಎಂದು ಹೇಳಿದನು. ರೆಬೆಕ್ಕಳು ತನಗೆ ಹೆಂಡತಿಯಾಗಬೇಕೆಂದು ಅವರಿಗೆ ತಿಳಿದರೆ ಆಕೆಯನ್ನು ತೆಗೆದುಕೊಳ್ಳಲು ಅವರು ತನ್ನನ್ನು ಕೊಲ್ಲಬಹುದೆಂಬ ಹೆದರಿಕೆಯಿಂದ ಇಸಾಕನು ಹಾಗೆ ಹೇಳಿದನು.
8ಅಲ್ಲಿ ಇಸಾಕನು ಇದ್ದು ಬಹುಕಾಲವಾಗಿತ್ತು. ಒಮ್ಮೆ ಫಿಲಿಷ್ಟಿಯರ ರಾಜನಾದ ಅಬೀಮೆಲೆಕನು ತನ್ನ ಕಿಟಕಿಯಿಂದ ನೋಡಿದಾಗ, ಇಸಾಕನು ಮತ್ತು ಅವನ ಹೆಂಡತಿ ಸರಸವಾಡುತ್ತಿರುವುದನ್ನು ಕಂಡನು. 9ಅಬೀಮೆಲೆಕನು ಇಸಾಕನನ್ನು ಕರೆದು, “ಈ ಸ್ತ್ರೀಯು ನಿನ್ನ ಹೆಂಡತಿ. ಅವಳು ನಿನ್ನ ತಂಗಿಯೆಂದು ಯಾಕೆ ನಮಗೆ ಹೇಳಿದೆ?” ಎಂದು ಕೇಳಿದನು.
ಇಸಾಕನು ಅವನಿಗೆ, “ನೀನು ಆಕೆಯನ್ನು ತೆಗೆದುಕೊಳ್ಳಲು ನನ್ನನ್ನು ಕೊಲ್ಲಬಹುದೆಂಬ ಭಯದಿಂದ ಹಾಗೆ ಹೇಳಿದೆ” ಅಂದನು.
10ಅಬೀಮೆಲೆಕನು ಅವನಿಗೆ, “ನೀನು ನಮಗೆ ಕೆಟ್ಟದ್ದನ್ನು ಮಾಡಿದೆ. ನಮ್ಮಲ್ಲಿರುವ ಯಾವ ಗಂಡಸಾದರೂ ನಿನ್ನ ಹೆಂಡತಿಯೊಡನೆ ಮಲಗಿಕೊಳ್ಳಲು ನೀನೇ ಆಸ್ಪದ ಮಾಡಿಕೊಟ್ಟಿದ್ದೆ. ಅಂಥದ್ದೇನಾದರೂ ನಡೆದಿದ್ದರೆ ಮಹಾ ಅಪರಾಧವಾಗುತ್ತಿತ್ತು” ಎಂದು ಹೇಳಿದನು.
11ಬಳಿಕ ಅಬೀಮೆಲೆಕನು ತನ್ನ ಪ್ರಜೆಗಳಿಗೆ, “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಯಾರೂ ಕೇಡುಮಾಡಕೂಡದು. ಇವರಿಗೆ ಕೇಡುಮಾಡುವವನನ್ನು ಕೊಲ್ಲಲಾಗುವುದು” ಎಂದು ಆಜ್ಞಾಪಿಸಿದನು.
ಇಸಾಕನು ಐಶ್ವರ್ಯವಂತನಾದದ್ದು
12ಇಸಾಕನು ಆ ಪ್ರದೇಶದಲ್ಲಿ ಬೀಜ ಬಿತ್ತಿದನು; ಅವನಿಗೆ ಅದೇ ವರ್ಷದಲ್ಲಿ ಮಹಾ ಸುಗ್ಗಿಯಾಯಿತು. ಯೆಹೋವನು ಅವನನ್ನು ಹೆಚ್ಚಾಗಿ ಆಶೀರ್ವದಿಸಿದನು. 13ಅವನ ಐಶ್ವರ್ಯವು ಹೆಚ್ಚುತ್ತಾ ಬಂದದ್ದರಿಂದ ಅವನು ಬಹು ಐಶ್ವರ್ಯವಂತನಾದನು. 14ಅವನಿಗೆ ಅನೇಕ ದನಕುರಿಗಳ ಮಂದೆಗಳೂ ಪ್ರಾಣಿಗಳ ಹಿಂಡೂಗಳೂ ಇದ್ದವು. ಇದಲ್ಲದೆ ಅವನಿಗೆ ಅನೇಕ ಸೇವಕರು ಇದ್ದರು. ಇದನ್ನು ಕಂಡು ಫಿಲಿಷ್ಟಿಯರು ಅವನ ಬಗ್ಗೆ ಅಸೂಯೆಪಡುತ್ತಿದ್ದರು. 15ಆದ್ದರಿಂದ ಅನೇಕ ವರ್ಷಗಳ ಹಿಂದೆ ಅಬ್ರಹಾಮ ಮತ್ತು ಅವನ ಸೇವಕರು ತೋಡಿದ್ದ ಬಾವಿಗಳಿಗೆ ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದ್ದರು. 16ಅಬೀಮೆಲೆಕನು ಇಸಾಕನಿಗೆ, “ನಮ್ಮ ದೇಶವನ್ನು ಬಿಟ್ಟುಹೋಗು. ನೀನು ನಮಗಿಂತಲೂ ತುಂಬ ಬಲಿಷ್ಠನಾದೆ” ಎಂದು ಹೇಳಿದನು.
17ಆದ್ದರಿಂದ ಇಸಾಕನು ಆ ಸ್ಥಳದಿಂದ ಹೊರಟು ಗೆರಾರಿನ ಚಿಕ್ಕಹೊಳೆಯ ಸಮೀಪದಲ್ಲಿ ಪಾಳೆಯ ಮಾಡಿಕೊಂಡನು. ಇಸಾಕನು ಅಲ್ಲಿ ಇಳಿದುಕೊಂಡು ವಾಸಿಸಿದನು. 18ಇದಕ್ಕೂ ಬಹುಕಾಲದ ಹಿಂದೆ, ಅಬ್ರಹಾಮನು ಅನೇಕ ಬಾವಿಗಳನ್ನು ತೋಡಿಸಿದ್ದನು. ಅಬ್ರಹಾಮನು ಸತ್ತುಹೋದ ಮೇಲೆ, ಫಿಲಿಷ್ಟಿಯರು ಆ ಬಾವಿಗಳಿಗೆ ಮಣ್ಣುಹಾಕಿ ಮುಚ್ಚಿದ್ದರು. ಇಸಾಕನು ಆ ಬಾವಿಗಳನ್ನು ಮತ್ತೆ ತೋಡಿಸಿ, ತನ್ನ ತಂದೆ ಕೊಟ್ಟಿದ್ದ ಹೆಸರುಗಳನ್ನೇ ಅವುಗಳಿಗೆ ಕೊಟ್ಟನು. 19ಇಸಾಕನ ಸೇವಕರು ಚಿಕ್ಕ ಹೊಳೆಯ ಸಮೀಪದಲ್ಲಿ ಒಂದು ಬಾವಿಯನ್ನು ತೋಡಿದರು. ಆ ಬಾವಿಯಲ್ಲಿ ನೀರಿನ ಸೆಲೆ ಸಿಕ್ಕಿತು. 20ಆದರೆ ಗೆರಾರಿನ ಕಣಿವೆಯಲ್ಲಿ ಕುರಿಕಾಯುತ್ತಿದ್ದ ಜನರು ಇಸಾಕನ ಸೇವಕರೊಡನೆ ವಾದಮಾಡಿ, “ಈ ನೀರು ನಮ್ಮದು” ಎಂದು ಹೇಳಿದರು. ಆದ್ದರಿಂದ ಇಸಾಕನು ಆ ಬಾವಿಗೆ “ಏಸೆಕ್” ಎಂದು ಹೆಸರಿಟ್ಟನು.
21ಆಮೇಲೆ ಇಸಾಕನ ಸೇವಕರು ಮತ್ತೊಂದು ಬಾವಿಯನ್ನು ತೋಡಿದರು. ಅಲ್ಲಿಯ ಜನರೂ ಆ ಬಾವಿಗಾಗಿ ವಾದಮಾಡಿದರು. ಆದ್ದರಿಂದ ಇಸಾಕನು ಆ ಬಾವಿಗೆ “ಸಿಟ್ನಾ” ಎಂದು ಹೆಸರಿಟ್ಟನು.
22ಇಸಾಕನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ತೋಡಿಸಿದನು. ಆ ಬಾವಿಯ ಕುರಿತು ವಾದಮಾಡಲು ಯಾರೂ ಬರಲಿಲ್ಲ. ಆದ್ದರಿಂದ ಇಸಾಕನು, “ಈಗ ಯೆಹೋವನು ನಮಗೋಸ್ಕರ ಒಂದು ಸ್ಥಳವನ್ನು ತೋರಿಸಿದ್ದಾನೆ. ನಾವು ಈ ಸ್ಥಳದಲ್ಲಿ ಅಭಿವೃದ್ಧಿಯಾಗೋಣ” ಎಂದು ಹೇಳಿ ಆ ಬಾವಿಗೆ “ರೆಹೋಬೋತ್” ಎಂದು ಹೆಸರಿಟ್ಟನು.
23ಇಸಾಕನು ಆ ಸ್ಥಳದಿಂದ ಬೇರ್ಷೆಬಕ್ಕೆ ಹೋದನು. 24ಆ ರಾತ್ರಿ ಯೆಹೋವನು ಇಸಾಕನಿಗೆ ಪ್ರತ್ಯಕ್ಷನಾಗಿ, “ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು. ಭಯಪಡಬೇಡ, ನಾನು ನಿನ್ನ ಸಂಗಡವಿದ್ದೇನೆ. ನಾನು ನಿನ್ನನ್ನು ಆಶೀರ್ವದಿಸುವೆನು. ನಾನು ನಿನ್ನ ಕುಟುಂಬವನ್ನು ಉನ್ನತ ಸ್ಥಿತಿಗೆ ತರುವೆನು. ನನ್ನ ಸೇವಕನಾದ ಅಬ್ರಹಾಮನಿಗಾಗಿಯೇ ಇದನ್ನು ಮಾಡುತ್ತೇನೆ” ಎಂದು ಹೇಳಿದನು. 25ಆದ್ದರಿಂದ ಆ ಸ್ಥಳದಲ್ಲಿ ಇಸಾಕನು ಯಜ್ಞವೇದಿಕೆಯನ್ನು ಕಟ್ಟಿ ಯೆಹೋವನನ್ನು ಆರಾಧಿಸಿದನು. ಇಸಾಕನು ಆ ಸ್ಥಳದಲ್ಲಿ ಪಾಳೆಯಮಾಡಿಕೊಂಡನು; ಅವನ ಸೇವಕರು ಅಲ್ಲಿ ಒಂದು ಬಾವಿಯನ್ನು ತೋಡಿದರು.
26ಅಬೀಮೆಲೆಕನು ಇಸಾಕನನ್ನು ಕಾಣಲು ಗೆರಾರಿನಿಂದ ಬಂದನು. ಅಬೀಮೆಲೆಕನು ತನ್ನ ಸಲಹೆಗಾರನಾದ ಅಹುಜ್ಜತನನ್ನು ಮತ್ತು ಸೇನಾಪತಿಯಾದ ಫೀಕೋಲನನ್ನು ತನ್ನೊಡನೆ ಕರೆದುಕೊಂಡು ಬಂದಿದ್ದನು.
27ಇಸಾಕನು, “ನೀನು ನನ್ನನ್ನು ನೋಡಲು ಬಂದದ್ದೇಕೆ? ಮೊದಲು, ನೀನು ನನ್ನೊಡನೆ ಸ್ನೇಹದಿಂದ ಇರಲಿಲ್ಲ. ಅಲ್ಲದೆ ನಿನ್ನ ದೇಶವನ್ನು ಬಿಟ್ಟುಹೋಗುವಂತೆ ನೀನು ನನ್ನನ್ನು ಬಲವಂತ ಮಾಡಿದೆ” ಎಂದು ಹೇಳಿದನು.
28ಅವರು ಅವನಿಗೆ, “ನಿನ್ನ ಜೊತೆಯಲ್ಲಿ ಯೆಹೋವನು ಇದ್ದಾನೆಂಬುದು ಈಗ ನಮಗೆ ತಿಳಿಯಿತು. ನಾವು ಒಂದು ಒಪ್ಪಂದ ಮಾಡಿಕೊಳ್ಳಬೇಕೆಂಬುದು ನಮ್ಮ ಆಲೋಚನೆ. ನೀನು ನಮಗೆ ಒಂದು ಪ್ರಮಾಣ ಮಾಡಬೇಕಾಗಿದೆ. 29ನಾವು ನಿನಗೆ ಕೇಡುಮಾಡಲಿಲ್ಲ. ಅದೇ ರೀತಿಯಲ್ಲಿ ಈಗ ನೀನೂ ನಮಗೆ ಕೇಡುಮಾಡುವುದಿಲ್ಲವೆಂದು ಪ್ರಮಾಣಮಾಡಬೇಕು. ನಾವು ನಿನ್ನನ್ನು ದೂರ ಕಳುಹಿಸಿದರೂ ಸಮಾಧಾನದಿಂದ ಕಳುಹಿಸಿಕೊಟ್ಟೆವು. ಯೆಹೋವನು ನಿನ್ನನ್ನು ಆಶೀರ್ವದಿಸಿದ್ದಾನೆ ಎಂಬುದು ಈಗ ಸ್ಪಷ್ಟವಾಗಿದೆ” ಎಂದು ಹೇಳಿದರು.
30ಆದ್ದರಿಂದ ಇಸಾಕನು ಅವರಿಗಾಗಿ ಒಂದು ಔತಣವನ್ನು ಮಾಡಿಸಿದನು. ಅವರೆಲ್ಲರೂ ಸಮೃದ್ಧಿಯಾಗಿ ಊಟಮಾಡಿದರು. 31ಮರುದಿನ ಮುಂಜಾನೆ, ಅವರು ಒಬ್ಬರಿಗೊಬ್ಬರು ಪ್ರಮಾಣ ಮಾಡಿಕೊಂಡು, ಸಮಾಧಾನದಿಂದ ಹೊರಟುಹೋದರು.
32ಆ ದಿನ, ಇಸಾಕನ ಸೇವಕರು ಬಂದು, ತಾವು ತೋಡಿದ್ದ ಬಾವಿಯ ಬಗ್ಗೆ ಹೇಳುತ್ತಾ, “ಬಾವಿಯಲ್ಲಿ ನಮಗೆ ನೀರಿನ ಸೆಲೆ ಸಿಕ್ಕಿತು” ಎಂದು ಹೇಳಿದರು. 33ಆದ್ದರಿಂದ ಇಸಾಕನು ಆ ಬಾವಿಗೆ ಷಿಬಾ ಎಂದು ಹೆಸರಿಟ್ಟನು. ಇಂದಿಗೂ ಆ ನಗರಕ್ಕೆ ಬೇರ್ಷೆಬ ಎಂದು ಕರೆಯುತ್ತಾರೆ.
ಏಸಾವನ ಹೆಂಡತಿಯರು
34ಏಸಾವನಿಗೆ ನಲವತ್ತು ವರ್ಷಗಳಾಗಿದ್ದಾಗ ಅವನು ಹಿತ್ತಿಯರ ಇಬ್ಬರು ಸ್ತ್ರೀಯರನ್ನು ಮದುವೆ ಮಾಡಿಕೊಂಡನು. ಒಬ್ಬಳು ಬೇರಿಯನ ಮಗಳಾದ ಯೆಹೂದೀತಳು, ಮತ್ತೊಬ್ಬಳು ಏಲೋನನ ಮಗಳಾದ ಬಾಸೆಮತಳು. 35ಈ ಮದುವೆಗಳಿಂದ ಇಸಾಕ ಮತ್ತು ರೆಬೆಕ್ಕಳಿಗೆ ತುಂಬ ದುಃಖವಾಯಿತು.
Valið núna:
ಆದಿಕಾಂಡ 26: KERV
Áherslumerki
Deildu
Afrita
Want to have your highlights saved across all your devices? Sign up or sign in
Kannada Holy Bible: Easy-to-Read Version
All rights reserved.
© 1997 Bible League International